






ಪುತ್ತೂರು: “ಶ್ರಮ, ಸೇವೆ, ಸಹಾಯ” ಎಂಬ ಧ್ಯೇಯವಾಕ್ಯದೊಂದಿಗೆ ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಿರುವ ರಾಜ್ಯ ಪ್ರಶಸ್ತಿ ಪುರಸ್ಕೃತ ಸಂಸ್ಥೆ, ಮಜ್ಜಾರಡ್ಕದ ಶ್ರೀ ವಿಷ್ಣು ಯುವಶಕ್ತಿ ಬಳಗ ಇದರ ವತಿಯಿಂದ ಉಚಿತ ಪುಸ್ತಕ ವಿತರಣೆ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮವು ಮೇ.31 ರಂದು ಮಜ್ಜಾರಡ್ಕದಲ್ಲಿ ಜರುಗಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಉದ್ಯಮಿ ಅಜಿತ್ ರೈ ದೇರ್ಲ ಅವರು ಮಾತನಾಡಿ, ಸಂಘಟನೆಯ ಸಮಾಜಪರ ಕಾಳಜಿಯನ್ನು ಶ್ಲಾಘಿಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಬಿರುವೆರ್ ಕುಡ್ಲ ಸಂಘಟನೆಯ ಪುತ್ತೂರು ಘಟಕದ ಅಧ್ಯಕ್ಷರಾದ ಜನಾರ್ಧನ ಪೂಜಾರಿ ಪದಡ್ಕ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಶಿಕ್ಷಣದಲ್ಲಿ ನೆರವಾಗಲು ಸಂಘಟನೆ ನಡೆಸುತ್ತಿರುವ ಈ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


70 ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ:
ಕಾರ್ಯಕ್ರಮದಲ್ಲಿ ಅಂಗನವಾಡಿಯಿಂದ ಪ್ರಥಮ ದರ್ಜೆ ಕಾಲೇಜಿನವರೆಗಿನ ಮಜ್ಜಾರಡ್ಕ, ಗೋಳ್ತೀಲ, ಪಯಂದೂರ್, ಕೊಂಬರಡ್ಕ ಮತ್ತು ಸ್ವಾಮಿನಗರ ಪರಿಸರದ ಒಟ್ಟು 70 ವಿದ್ಯಾರ್ಥಿಗಳಿಗೆ ಉಚಿತವಾಗಿ ಪುಸ್ತಕಗಳನ್ನು ವಿತರಿಸಲಾಯಿತು. ಅಲ್ಲದೆ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ನಿಶ್ಮಿತಾ ಮಜ್ಜಾರ್, ಸಮೃದ್ಧಿ ರೈ ದೇರ್ಲ ಮತ್ತು ಭುವನ್ ಮಜ್ಜಾರ್ ಅವರನ್ನು ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು.ಸಂಘಟನೆಯ ಬೆಳವಣಿಗೆಗೆ ನಿರಂತರ ಪ್ರೋತ್ಸಾಹ ನೀಡುತ್ತಿರುವ ಅಜಿತ್ ರೈ ದೇರ್ಲ ಅವರನ್ನು ಇದೇ ವೇಳೆ ಸಂಘಟನೆಯ ಪರವಾಗಿ ವಿಶೇಷವಾಗಿ ಗೌರವಿಸಲಾಯಿತು.



ವೇದಿಕೆಯಲ್ಲಿ ಕೃಷಿಕ ಮತ್ತು ಹಿರಿಯರಾದ ಜತ್ತಪ್ಪ ರೈ ಓಲ್ತಾಜೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಮೇಲ್ವಿಚಾರಕರಾದ ಶ್ರೀಕಾಂತ್ ಪೂಜಾರಿ ಬಿರಾವು, ಸಂಘಟನೆಯ ಅಧ್ಯಕ್ಷ ಲೋಕೇಶ್ ಸ್ವಾಮಿನಗರ, ಗೌರವ ಸಲಹೆಗಾರ ಮೋಹನ್ ದಾಸ್ ರೈ ಕುಂಬ್ರ, ಕುಂಬ್ರ ಸುಶಾ ಡ್ರೆಸಸ್ಸ್ ಮಾಲಕ ಸುರೇಶ್ ಪೂಜಾರಿ ತಿಂಗಳಾಡಿ ಹಾಗೂ ರಾಜ್ಯ ಮಟ್ಟದ ಪ್ರತಿಭೆ ಅಸ್ಮಿತಾ ಸುಂಠಿಮಜಲು ಉಪಸ್ಥಿತರಿದ್ದರು. ಆದ್ಯ ಆರ್.ಜೆ. ಗೋಳ್ತೀಲ ಪ್ರಾರ್ಥಿಸಿದರು. ಸಂಘಟನಾ ಕಾರ್ಯದರ್ಶಿ ಹಾಗೂ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ರಾಜೇಶ್ ಕೆ. ಮಯೂರ ಸ್ವಾಗತಿಸಿದರು. ಜಯದೀಪ್ ಕೊರಂಗ ಕಾರ್ಯಕ್ರಮ ನಿರೂಪಿಸಿದರು. ರಮ್ಯ ಸತೀಶ್ ಮಜ್ಜಾರ್ ಅವರು ಲಘು ಉಪಹಾರದ ವ್ಯವಸ್ಥೆ ಮಾಡಿದ್ದರು.ಕಾರ್ಯಕ್ರಮದಲ್ಲಿ ಸಂಘಟನೆಯ ಪದಾಧಿಕಾರಿಗಳು, ಸದಸ್ಯರು, ವಿದ್ಯಾರ್ಥಿಗಳು, ಪೋಷಕರು ಭಾಗವಹಿಸಿದ್ದರು. ವಾಸುಕಿ ಶಾಮಿಯಾನದ ದಿನೇಶ್ ಕೆಯ್ಯೂರು, ರವಿ ಅಜಿಲಾ ಸ್ವಾಮಿನಗರ, ಉದಯ ಸ್ವಾಮಿನಗರ ಸೇರಿದಂತೆ ಸಹಕರಿಸಿದ ಎಲ್ಲರಿಗೂ ಸಂಘಟನೆಯು ಧನ್ಯವಾದ ಅರ್ಪಣೆ ಮಾಡಲಾಯಿತು.

“ ಸಂಘಟನೆಯ ವತಿಯಿಂದ ಮುಂದಿನ ವರ್ಷ ಇನ್ನಷ್ಟು ಮಕ್ಕಳಿಗೆ ಶೈಕ್ಷಣಿಕ ಕ್ಷೇತ್ರದಲ್ಲಿ ಉನ್ನತ ಶಿಕ್ಷಣ ಪಡೆಯಲು ಪುಸ್ತಕದ ಜೊತೆಗೆ ಬ್ಯಾಗ್ ಕೊಡುವ ಬಗ್ಗೆ ಚಿಂತನೆ ಮಾಡಲಾಗಿದ್ದು ಸಂಘಟನೆಯ ಸಮಾಜಮುಖಿ ಕಾರ್ಯಗಳಿಗೆ ಪ್ರೋತ್ಸಾಹ ನೀಡುತ್ತಿರುವ ದಾನಿಗಳಿಗೆ ಕೃತಜ್ಞತೆಗಳೊಂದಿಗೆ ಮುಂದೆಯೂ ತಮ್ಮೆಲ್ಲರ ಸಹಕಾರವನ್ನು ಬಯಸುತ್ತೇವೆ.”
ರಾಜೇಶ್ ಕೆ.ಮಯೂರ, ಸಂಘಟಕರು, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತರು










