ನೆಲ್ಯಾಡಿ: ಬೆಥನಿ-ಪಡ್ಡಡ್ಕ ರಸ್ತೆ ವಿವಾದ ವಿಚಾರ : ಏಕಾಏಕಿ ರಸ್ತೆ ಬಂದ್ ಮಾಡಿಲ್ಲ; ಪಟ್ಟಾ ಜಾಗದ ಮಾಲಕರ ಸ್ಪಷ್ಟನೆ

0

ನೆಲ್ಯಾಡಿ: ಗ್ರಾ.ಪಂ.ವ್ಯಾಪ್ತಿಯ ಬೆಥನಿ-ಪಡ್ಡಡ್ಕ-ಪಿಜಿನಡ್ಕ ಮೂಲಕ ಕೊಕ್ಕಡಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯು ಪಾಲೆತ್ತಡಿ ಎಂಬಲ್ಲಿ ನಮ್ಮ ಪಟ್ಟಾ ಜಾಗವಾದ ಸರ್ವೆ ನಂಬರ್ 9/24ರ ಮೂಲಕ ಹಾದು ಹೋಗಿದೆ. ಸದ್ರಿ ರಸ್ತೆಯು ಪಂಚಾಯತ್ ಅಥವಾ ಖಾಸಗಿ ರಸ್ತೆಯೇ ಎಂಬುದರ ಬಗ್ಗೆ ಗ್ರಾ.ಪಂ.ನಲ್ಲಿ ಯಾವುದೇ ದಾಖಲೆ ಇಲ್ಲ. ಸದ್ರಿ ರಸ್ತೆಯು ಹಾದುಹೋಗಿರುವ ಜಾಗ ಅತಿಕ್ರಮಣ ಆಗಿರುವ ಬಗ್ಗೆ ಗ್ರಾ.ಪಂ.ಪಿಡಿಒ, ಗ್ರಾಮ ಆಡಳಿತಾಧಿಕಾರಿ ಹಾಗೂ ಭೂಮಾಪಕರು ಜಂಟಿ ತನಿಖೆ ನಡೆಸಿ ತಹಶೀಲ್ದಾರ್‌ಗೆ ವರದಿ ನೀಡಿದ್ದಾರೆ. ನಮ್ಮ ಪಟ್ಟಾ ಜಾಗದಲ್ಲಿ ಹಾದುಹೋಗಿದ್ದ ಈ ರಸ್ತೆಯನ್ನು ನಾವು ಏಕಾಏಕಿ ಬಂದ್ ಮಾಡಿಲ್ಲ ಎಂದು ಜಮೀನಿನ ಮಾಲಕರೂ ಆದ ಭಾರತೀಯ ಭೂ ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಆಗಿರುವ ವಿನೋಜ್ ಪಿ.ಜೆ.ಅವರು ಸ್ಪಷ್ಟಪಡಿಸಿದ್ದಾರೆ.

ನಮ್ಮ ಖಾಸಗಿ ಜಮೀನಿನ ಮೂಲಕ ಹಾದುಹೋಗಿರುವ ಈ ರಸ್ತೆಯು ನಮ್ಮ ಜಾಗದ ಕಂಪೌಂಡ್ ಹೊರಭಾಗದಲ್ಲಿದೆ. ಪಕ್ಕದ ಜಮೀನಿನ ಮಾಲಕರು ಸದ್ರಿ ರಸ್ತೆಯ ಅಂಚಿನವರೆಗೆ ತಂತಿ ಬೇಲಿ ಹಾಕಿ ಸಾರ್ವಜನಿಕ ರಸ್ತೆಯನ್ನು ಕಿರಿದು ಮಾಡಿರುವುದು ಮೇ.9ರಂದು ಭೂಮಾಪನಾ ಇಲಾಖೆ ನಡೆಸಿದ ಸರ್ವೆಯಲ್ಲಿ ಕಂಡುಬಂದಿದೆ. ಅತಿಕ್ರಮಣ ಆಗಿರುವ 0.03 ಎಕ್ರೆ ಜಮೀನನ್ನು ನಕ್ಷೆಯಲ್ಲಿ ಗುರುತಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಕ್ಷೆಯಲ್ಲಿ ತೋರಿಸಿದ ರಸ್ತೆಯನ್ನು ಊರ್ಜಿತಗೊಳಿಸಬೇಕೆಂದು ಗ್ರಾ.ಪಂ.ಗೆ ತಿಳಿಸಲಾಗಿದೆ. ಅಲ್ಲದೇ ಪಕ್ಕದ ಜಮೀನಿನ ಮಾಲಕರು ಅತಿಕ್ರಮಿಸಿಕೊಂಡಿರುವ ನನ್ನ ಖಾಸಗಿ ಜಮೀನಿನ 6 ಮೀಟರ್ ಅಗಲದ ಜಮೀನಿನ ಪೈಕಿ 5 ಅಡಿ ಜಾಗವನ್ನು ಸಾರ್ವಜನಿಕ ರಸ್ತೆಗೆ ನೀಡಿದಲ್ಲಿ ಸದ್ರಿ ರಸ್ತೆಯನ್ನು ಊರ್ಜಿತದಲ್ಲಿಡಲಾಗುವುದು. ತಪ್ಪಿದಲ್ಲಿ ಭೂ ಮಾಪನಾ ಇಲಾಖೆ ಈ ಹಿಂದೆ ಗಡಿಗುರುತು ಮಾಡಿಕೊಟ್ಟ ಜಾಗವನ್ನು ನ್ಯಾಯಯುತವಾಗಿ ಹಿಂಪಡೆದು ತನ್ನ ಖಾಸಗಿ ಜಮೀನಿನಲ್ಲಿ ಹಾದು ಹೋಗುವ ರಸ್ತೆಯನ್ನು ಮುಚ್ಚುವುದಾಗಿ ತಿಳಿಸಿದ್ದೇನೆ. ಆದುದರಿಂದ ಬೇಲಿಯನ್ನು 5 ಅಡಿ ಹಿಂದಕ್ಕೆ ಹಾಕಿ ನಕ್ಷೆಯಲ್ಲಿ ಕಾಣಿಸಿದ ಸಾರ್ವಜನಿಕ ರಸ್ತೆಯನ್ನು ಊರ್ಜಿತ ಇಡಲು ಪಕ್ಕದ ಜಮೀನಿನ ಮಾಲಕರಿಗೆ ಗ್ರಾ.ಪಂ.ನಿಂದ ಸೂಚಿಸಲಾಗಿತ್ತು. ಈ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ಚರ್ಚಿಸಲು ಮೇ.26ರಂದು ಅಪರಾಹ್ನ ನೆಲ್ಯಾಡಿ ಗ್ರಾ.ಪಂ.ಕಚೇರಿಯಲ್ಲಿ ಸಭೆ ಕರೆದಿದ್ದು ಸೂಕ್ತ ದಾಖಲೆಗಳೊಂದಿಗೆ ಹಾಜರಾಗಲು ಎರಡೂ ಕಡೆಯವರಿಗೆ ಸೂಚಿಸಲಾಗಿತ್ತು. ಆದರೆ ಈ ಸಭೆಗೆ ಪಕ್ಕದ ಜಮೀನಿನ ಮಾಲಕರು ಗೈರು ಹಾಜರಿಯಾಗಿದ್ದರು. ಸಭೆಯಲ್ಲಿ ಹಾಜರಿದ್ದ ರಸ್ತೆ ಬಳಕೆದಾರರು ರಸ್ತೆಯ ಗೊಂದಲದ ಬಗ್ಗೆ ವಿವರಣೆ ನೀಡಿದ್ದು, ಪಕ್ಕದ ಜಮೀನಿನ ಮಾಲಕರು ಒತ್ತುವರಿ ಆಗಿರುವ ಜಮೀನನ್ನು ರಸ್ತೆಗಾಗಿ ಬಿಟ್ಟುಕೊಡಬೇಕೆಂಬ ನಿರ್ಣಯ ಸಭೆಯಲ್ಲಿ ಕೈಗೊಳ್ಳಲಾಗಿತ್ತು. ಆದರೂ ಯಾವುದೇ ಕ್ರಮ ಜರುಗಿಸಲಿಲ್ಲ. ನಾವು ಏಕಾಏಕಿಯಾಗಿ ರಸ್ತೆ ಬಂದ್ ಮಾಡಿಲ್ಲ ಎಂದು ವಿನೋಜ್ ಪಿ.ಜೆ.ಅವರು ಸ್ಪಷ್ಟಪಡಿಸಿದ್ದಾರೆ.

ಸದ್ರಿ ರಸ್ತೆಗೆ ನನ್ನ ಪಟ್ಟಾ ಜಾಗದಲ್ಲಿ ನಾಲ್ಕೂವರೇ ಮೀಟರ್ ಜಾಗ ಬಿಟ್ಟಿದ್ದರೂ ನನ್ನ ಪಟ್ಟಾ ಜಾಗದಲ್ಲಿದ್ದ ಕಂಪೌಂಡ್ ತೆರವುಗೊಳಿಸಬೇಕೆಂದು ರಸ್ತೆ ಬಳಕೆದಾರರು ಗ್ರಾ.ಪಂ.ಗೆ ದೂರು ನೀಡಿದ್ದಾರೆ. ಇದರಿಂದ ಬೇಸತ್ತು ನಕ್ಷೆಯಲ್ಲಿ ತೋರಿಸುವಂತೆ ಅತಿಕ್ರಮಣ ಆಗಿರುವ ಜಾಗದಲ್ಲಿ ಇದ್ದ ರಸ್ತೆ ಊರ್ಜಿತದಲ್ಲಿಡುವಂತೆ ಗ್ರಾ.ಪಂ. ಪಿಡಿಒ ಅವರಿಗೆ ಕೇಳಿಕೊಂಡಿದ್ದೆ. ಅದರಂತೆ ಅವರು ತನಿಖೆ ನಡೆಸಿ ಗ್ರಾಮಸ್ಥರಿಗೆ ತಿಳುವಳಿಕೆ ಸಹ ನೀಡಿರುತ್ತಾರೆ ಎಂದು ವಿನೋಜ್ ಪಿ.ಜೆ. ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here