






ಪುತ್ತೂರು: ಸರ್ಕಾರಿ ಪ್ರೌಢಶಾಲೆ ಮಣಿಕರ, ಕೊಳ್ತಿಗೆ ಗ್ರಾಮದಲ್ಲಿ 2026-27ನೇ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವವು ಜೂನ್ 1ರಂದು ಶಾಲಾ ಸಭಾಂಗಣದಲ್ಲಿ ಸಂಭ್ರಮ, ಸಡಗರದಿಂದ ನಡೆಯಿತು.


“ಉತ್ತಮ ಕಲಿಕೆ – ಉಜ್ವಲ ಭವಿಷ್ಯ” ಎಂಬ ಧ್ಯೇಯ ವಾಕ್ಯದಡಿ ನೂತನ ಶೈಕ್ಷಣಿಕ ವರ್ಷಕ್ಕೆ ಚಾಲನೆ ನೀಡಲಾಯಿತು.



ಕಾರ್ಯಕ್ರಮವು ವಿದ್ಯಾರ್ಥಿಗಳಾದ ಪವನ್ ಹಾಗೂ ದೀಕ್ಷಿತ್ ಅವರ ದೇವತಾ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಶಾಲೆಗೆ ಹೊಸದಾಗಿ ಸೇರ್ಪಡೆಯಾದ 8ನೇ ತರಗತಿಯ ವಿದ್ಯಾರ್ಥಿಗಳನ್ನು ಮುಖ್ಯಗುರುಗಳು ಹಾಗೂ ಎಸ್‌ಡಿಎಂಸಿ ಸದಸ್ಯರು ಪುಸ್ತಕ ಮತ್ತು ಪೆನ್ನು ನೀಡಿ ಆತ್ಮೀಯವಾಗಿ ಸ್ವಾಗತಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುನಿಲ್ ರೈ ಪಾಲ್ತಾಡು ವಹಿಸಿದ್ದರು. ಶಾಲೆಯ ಮುಖ್ಯಗುರುಗಳಾದ ಸುನೀತಾ ಅವರು ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕಗಳು ಹಾಗೂ ಸಮವಸ್ತ್ರಗಳನ್ನು ವಿತರಿಸಿದರು.
ಹೊಸ ಶೈಕ್ಷಣಿಕ ವರ್ಷದ ಗುರಿ, ಉದ್ದೇಶಗಳು ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಕುರಿತು ಮಾತನಾಡಿದ ಅವರು, ಶಿಸ್ತು, ಪರಿಶ್ರಮ ಮತ್ತು ಉತ್ತಮ ಕಲಿಕೆಯ ಮೂಲಕ ವಿದ್ಯಾರ್ಥಿಗಳು ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮವನ್ನು ಕರುಣಾಕರ ಮಣಿಯಾಣಿ ಅಚ್ಚುಕಟ್ಟಾಗಿ ನಿರೂಪಿಸಿದರು. ಶ್ರೀಮತಿ ಗೀತಾ ಬಿ.ವಿ. ಸ್ವಾಗತಿಸಿದರು. ಕಾರ್ಯಕ್ರಮದ ಯಶಸ್ಸಿಗೆ ಶಿಕ್ಷಕಿಯರಾದ ಸುಗುಣ, ಉಷಾ ಹಾಗೂ ವಸಂತಿ ಸಹಕರಿಸಿದರು.ಕಾರ್ಯಕ್ರಮದಲ್ಲಿ ಪೋಷಕರು, ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದು, ಶಾಲೆಯ ಅಭಿವೃದ್ಧಿ ಮತ್ತು ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ಶುಭ ಹಾರೈಸಿದರು. ಕೊನೆಯಲ್ಲಿ ಸೌಮ್ಯ ಪಿ. ವಂದನಾರ್ಪಣೆ ಸಲ್ಲಿಸಿದರು.










