






ಜನಜಾಗೃತಿ ವೇದಿಕೆಯಿಂದ ಸುಂದರ ಬದುಕು- ನಳಿನ್ ಕುಮಾರ್ ಕಟೀಲ್
ನಮ್ಮ ಬದುಕು ಹತ್ತು ಜನರಿಗೆ ಉಪಯುಕ್ತವಾಗಬೇಕು- ಸೀತಾರಾಮ ರೈ


ಪುತ್ತೂರು: ವ್ಯಕ್ತಿ ನಿರ್ಮಾಣದ ಮೂಲಕ ರಾಷ್ಟ್ರ ನಿಮಾಣದ ಕನಸು ಕಂಡಿರುವ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ವ್ಯಕ್ತಿಯ ಬದುಕನ್ನು ರೂಪಿಸಿ ಸ್ವಸ್ತ ಸಮಾಜ ನಿರ್ಮಾಣ ಮಾಡುವ ಧ್ಯೇಯದೊಂದಿಗೆ ಸಮಾಜಕ್ಕೆ ಮಹತ್ತರವಾದ ಕೊಡುಗೆಯನ್ನು ಜನಜಾಗೃತಿ ವೇದಿಕೆಯ ಮೂಲಕ ನೀಡುತ್ತಿದ್ದಾರೆ ಎಂದು ಮಾಜಿ ಸಂಸದ ನಳಿನ್ ಕುಮರ್ ಕಟೀಲ್ ಹೇಳಿದರು.
ಅವರು ಅ. 28 ರಂದು ಸವಣೂರು ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಕಡಬ ತಾಲೂಕು ಘಟಕದ ನೇತೃತ್ವದಲ್ಲಿ ಕೇಂದ್ರ ಸರಕಾರದ ನವಭಾರತ್ ಸಂಸ್ಥೆಯ ಸಹಯೋಗದಲ್ಲಿ ಒಂದು ತಿಂಗಳುಗಳ ಕಾಲ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗಾಗಿ ನಡೆಯುವ ತಾಲೂಕು ಮಟ್ಟದ ಸ್ವಾಸ್ಥ್ಯ ಸಂಕಲ್ಪ ಮಾಸಾಚರಣೆಗೆ ಚಾಲನೆ ನೀಡಿ, ಅಶ್ವಿನ್ ಎಲ್ ಶೆಟ್ಟಿಯವರು ರಚಿಸಿದ 4 ಇಂಗ್ಲೀಷ್ ಕೃತಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಹೆಗ್ಗಡೆಯವರು ಯೋಜನೆಯ ಮೂಲಕ ಶ್ರಮಿಕ ಜನರ ಜೀವನಮಟ್ಟವನ್ನು ಉತ್ತಮಗೊಳಿಸುವುದಲ್ಲದೆ, ದುಷ್ಚಟಮುಕ್ತ ಸಮಾಜ ನಿರ್ಮಾಣಕ್ಕೆ ಪ್ರೇರಣೆ ನೀಡಿ ಅದ್ಭುತ ಕಾರ್ಯ ಮಾಡುತ್ತಿದ್ದಾರೆ ಎಂದು ಕಟೀಲ್ ಹೇಳಿದರು.ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ರಾಜ್ಯ ಸಂಘಟನಾ ಅಧ್ಯಕ್ಷ ನಟರಾಜ್ ಬಾದಾಮಿ ಮಾತನಾಡಿ, ಮಹಾತ್ಮ ಗಾಂಧೀಜಿಯವರು ಸ್ವಾತಂತ್ರ್ಯ ಪೂರ್ವದಲ್ಲಿಯೇ ಮದ್ಯಮುಕ್ತ ಸಮಾಜ ನಿರ್ಮಾಣದ ಸಂಕಲ್ಪ ಹೊಂದಿದ್ದರು. ಅದೇ ಆಶಯದೊಂದಿಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ವ್ಯಸನಮುಕ್ತ ಸಮಾಜ ನಿರ್ಮಾಣಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ ಎಂದರು.



ನಮ್ಮ ಬದುಕು ಕೇವಲ ನಮಗಾಗಿ ಸೀಮಿತವಾಗದೆ, ಹತ್ತು ಜನರಿಗೆ ಉಪಯುಕ್ತವಾಗಬೇಕು- ಸೀತಾರಾಮ ರೈ
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಕೆ.ಸೀತಾರಾಮ ರೈ ಮಾತನಾಡಿ, ನಾವು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಜೊತೆಗೆ ಸಮಾಜದ ಸ್ವಾಸ್ಥ್ಯವನ್ನೂ ಕಾಪಾಡುವ ನಿಟ್ಟಿನಲ್ಲಿ ಸಮಾಜ ಮೆಚ್ಚುವಂತಹ ಕಾರ್ಯಗಳನ್ನು ಮಾಡಬೇಕು. ದುಶ್ಚಟಗಳ ವಿರುದ್ಧ ಸರ್ಕಾರ ವಿರುದ್ಧ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡರೂ ಅವುಗಳನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಸಮಾಜದಲ್ಲಿ ಪ್ರತಿಯೊಬ್ಬರೂ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ನಮ್ಮ ಬದುಕು ಕೇವಲ ನಮಗಾಗಿ ಸೀಮಿತವಾಗದೆ, ಇತರ ಹತ್ತು ಜನರಿಗೆ ಉಪಯುಕ್ತವಾಗುವಂತಿರಬೇಕು ಎಂದರು.
ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕ ಬಾಬು ನಾಯ್ಕ, ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಅಶ್ವಿನ್ ಎಲ್.ಶೆಟ್ಟಿ, ನ್ಯಾಯವಾದಿ ಸೂರ್ಯನಾರಾಯಣ ರಾವ್, ಕಡಬ ತಾಲೂಕು ಜನಜಾಗೃತಿ ವೇದಿಕೆಯ ಸ್ಥಾಪಕಾಧ್ಯಕ್ಷ ಮಹೇಶ್ ಕೆ.ಸವಣೂರು ಮಾತನಾಡಿದರು. ಜನಜಾಗೃತಿ ವೇದಿಕೆಯ ಉಡುಪಿ ಪ್ರಾದೇಶಿಕ ನಿರ್ದೇಶಕ ಗಣೇಶ್ ಆಚಾರ್ಯ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ನ್ಯಾಯವಾದಿ ಉದಯ ಶಂಕರ್ ಶೆಟ್ಟಿ, ಜನಜಾಗೃತಿ ವೇದಿಕೆಯ ಕಡಬ ತಾಲೂಕು ಅಧ್ಯಕ್ಷ ಇಂದು ಶೇಖರ ಶೆಟ್ಟಿ, ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು, ಎಸ್ಎನ್ಆರ್ ರೂರಲ್ ಎಜುಕೇಷನ್ ಟ್ರಸ್ಟ್ನ ಟ್ರಸ್ಟಿ ರಶ್ಮಿ ಎ. ಶೆಟ್ಟಿ, ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಪ್ರಿನ್ಸಿಪಾಲ್ ಡಾ.ರಾಜಲಕ್ಷ್ಮೀ ಎಸ್.ಶೆಟ್ಟಿ, ವಿದ್ಯಾರಶ್ಮಿ ವಿದ್ಯಾಲಯದ ಪ್ರಿನ್ಸಿಪಾಲ್ ಶಶಿಕಲಾ ಎಸ್.ಆಳ್ವ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕೃತಿಕಾರ ಅಶ್ವಿನ್ ಎಲ್ ಶೆಟ್ಟಿ ಹಾಗೂ ನಟರಾಜ್ ಬಾದಾಮಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಯೋಜನೆಯ ಕಡಬ ತಾಲುಕು ಯೋಜನಾಧಿಕಾರಿ ಪ್ರಕಾಶ್ ಕುಮಾರ್ ಸ್ವಾಗತಿಸಿದರು. ವಲಯ ಮೇಲ್ವಿಚಾರಕಿ ಹೇಮಾವತಿ ವಂದಿಸಿದರು. ಉಪನ್ಯಾಸಕ ಗಿರೀಶ್ ಭಟ್ ಕಾರ್ಯಕ್ರಮ ನಿರೂಪಿಸಿದರು.










