ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ವಿವೇಕ ಜಾಗೃತಿ ಉಪನ್ಯಾಸ

0

ನಾನು ಭಾರತೀಯ ಎಂಬ ಹೆಮ್ಮೆ ನಮಗಿರಲಿ: ಸ್ವಾಮಿ ಮಂಗಳನಾಥಾನಂದಜಿ

ಪುತ್ತೂರು: ನಗರದಲ್ಲಿರುವ ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ಮಂಗಳೂರಿನ ರಾಮಕೃಷ್ಣ ಮಿಷನ್ ನ ಸಹಯೋಗದಲ್ಲಿ ‘ವಿವೇಕ ಜಾಗೃತಿ ಉಪನ್ಯಾಸ’ ನಡೆಯಿತು. ಕಾರ್ಯಕ್ರಮವನ್ನು ಪುತ್ತೂರಿನ ಹಿರಿಯ ವಕೀಲರಾದ ಎನ್. ಕೆ. ಜಗನ್ನಿವಾಸ ರಾವ್ ದೀಪ ಬೆಳಗುವ ಮೂಲಕ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಸಮಾಜದಲ್ಲಿ ನಾಶವಾಗುತ್ತಿರುವ ಮೌಲ್ಯಗಳ ಪುನರ್ ಸ್ಥಾಪನೆಗಾಗಿ ಯುವಜನರಿಗೆ ಮಾರ್ಗದರ್ಶನ ನೀಡಬೇಕಾದ ಅಗತ್ಯವಿದೆ. ಇಂದು ಸಮಾಜದಲ್ಲಿ ಅನ್ಯಾಯ ಎನ್ನುವುದು ತಾಂಡವವಾಡುತ್ತಿದೆ. ಯಾವುದೇ ವ್ಯಕ್ತಿ ನ್ಯಾಯ ಮಾರ್ಗದಲ್ಲಿ ಸಂಪತ್ತು ಸಂಪಾದಿಸುವುದು ತಪ್ಪಲ್ಲ. ಆದರೆ ಅನ್ಯರಿಗೆ ಅನ್ಯಾಯವೆಸಗಿ ಸಂಪಾದನೆ ಮಾಡುವುದು ಸರಿಯಲ್ಲ. ಅಂಥ ತಪ್ಪುಗಳಿಂದಾಗಿ ಸಮಾಜದಲ್ಲಿನ ಮೌಲ್ಯ ಮತ್ತು ಮಾನವೀಯತೆ ನಾಶವಾಗುತ್ತಿದೆ. ಅದರ ಮರುಸ್ಥಾಪನೆಗಾಗಿ ಯುವಜನರಿಗೆ ಮಾನವೀಯ ಮೌಲ್ಯಗಳನ್ನು ಅರಿವು ಮೂಡಿಸಿ ಮಾರ್ಗದರ್ಶನ ನೀಡುವುದು ಅತ್ಯಗತ್ಯವಾಗಿದೆ. ಅಂತಹ ಕೆಲಸಗಳನ್ನು ವಿವೇಕಾನಂದ ಕಾನೂನು ಮಹಾವಿದ್ಯಾಲಯ ನಡೆಸುತ್ತ ಇರುವುದು ಅತ್ಯಂತ ಸಂತೋಷದ ವಿಷಯವಾಗಿದೆ ಎಂದರು.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬಳ್ಳಾರಿಯ ರಾಮಕೃಷ್ಣ ಮಿಷನ್ ನ ಮುಖ್ಯಸ್ಥರಾದ ಸ್ವಾಮಿ ಮಂಗಳನಾಥಾನಂದಜಿ ‘ಕಾನೂನು ವಿದ್ಯಾರ್ಥಿಗಳಿಗೆ ಸ್ವಾಮಿ ವಿವೇಕಾನಂದರ ಸಂದೇಶ’ ಎಂಬ ವಿವೇಕ ಜಾಗೃತಿ ಉಪನ್ಯಾಸ ನೀಡಿ, ಶಿಕ್ಷಣ ಕೇವಲ ಔಪಚಾರಿಕ ಜ್ಞಾನದ ಮಾಧ್ಯಮವಾಗಿರದೆ, ಅದು ಜೀವನ ದರ್ಶನ, ಚಾರಿತ್ರ್ಯ ನಿರ್ಮಾಣ ಹಾಗೂ ಸಾಮಾಜಿಕ ಪರಿವರ್ತನೆಯ ಸಶಕ್ತ ಸಾಧನವಾಗಿದೆ. ಆದರೆ ಒಬ್ಬ ಮನುಷ್ಯನಿಗೆ ವಿದ್ಯೆ, ಬುದ್ಧಿ ಮತ್ತು ಸಂಪತ್ತಿಗಿಂತ ಉತ್ತಮ ಚಾರಿತ್ರ್ಯ ಅತ್ಯಂತ ಪ್ರಮುಖವಾದದ್ದು. ಇದು ಸಮಾಜದಲ್ಲಿ ವ್ಯಕ್ತಿಗೆ ಗೌರವ, ವಿಶ್ವಾಸ ಮತ್ತು ನೆಮ್ಮದಿಯನ್ನು ತಂದುಕೊಡುತ್ತದೆ ಎಂದರು. ಜೊತೆಗೆ ಕಾನೂನು ವಿದ್ಯಾರ್ಥಿಗಳು ತಮ್ಮ ವೃತ್ತಿ ಜೀವನದಲ್ಲಿ ತನ್ನದೇ ಆದಂತಹ ಶಿಸ್ತು, ಸಾಚ್ಚರಿತ್ರ್ಯ ರೂಪಿಸಿಕೊಂಡರೆ, ಅಂತಹ ನ್ಯಾಯವಾದಿಗಳಿಗೆ ಅತ್ಯುತ್ತಮವಾದ ಗೌರವವನ್ನು ಈ ಸಮಾಜ ನೀಡುತ್ತದೆ. ಅಂತಹ ಉತ್ತಮ ಮೌಲ್ಯಗಳನ್ನು ನೀವು ರೂಪಿಸಿಕೊಳ್ಳಿ ಎಂದರು.

ಭಾರತ ಬೌದ್ಧಿಕವಾಗಿ ಶ್ರೀಮಂತ ರಾಷ್ಟ್ರ. ಈ ನಮ್ಮ ಭಾರತ ಜಗತ್ತಿಗೆ ಸರಿಯಾದ ಬದುಕುವ ರೀತಿಯನ್ನು ಹೇಳಿಕೊಟ್ಟ ಕರ್ಮಭೂಮಿ. ಇಲ್ಲಿ ಒಬ್ಬ ಮನುಷ್ಯ ಉತ್ತಮ ಜೀವನ ನಡೆಸಲು ಎಲ್ಲವು ಇದೆ. ಭಾರತೀಯರು ಆತ್ಮಬಲ ಕಳೆದುಕೊಳ್ಳಬಾರದು. ಅದನ್ನು ಉಳಸಿಕೊಂಡು ಮೌಲ್ಯವಂತರಾಗಿ ಬದುಕುವ ಜೊತೆಗೆ ನಾನು ಭಾರತೀಯ ಎಂಬ ಹೆಮ್ಮೆ ನಮಗಿರಲಿ. ಅದು ನಮ್ಮ ದೇಶಕ್ಕೆ ನಾವು ಕೊಡುವ ಒಂದು ದೊಡ್ಡ ಗೌರವ ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಭಾರತೀಯ ಸೇನೆಯ ನಿವೃತ್ತ ಯೋಧರು ಹಾಗೂ ಮಂಗಳೂರಿನ ರಾಮಕೃಷ್ಣ ಮಿಷನ್ ನ ಸ್ವಯಂಸೇವಕರಾದ ಬೆಳ್ಳಾಲ ಗೋಪಿನಾಥ್ ರಾವ್ ಮಾತನಾಡಿ, ಯುವಪೀಳಿಗೆಗೆ ವಿಶೇಷ ಸಾಮರ್ಥ್ಯ‌ವಿದೆ. ಕಠಿಣವಾದ ಕಾರ್ಯಗಳನ್ನು ಸಾಧಿಸುವ ಶಕ್ತಿಯಿದೆ. ಆದರೆ, ಈ ಸಾಮರ್ಥ್ಯ‌ವನ್ನು ಸೂಕ್ತ ರೀತಿಯಲ್ಲಿ ಬಳಸಲು ಮಾರ್ಗದರ್ಶನ ನೀಡುವ ಅಗತ್ಯವಿದೆ. ಸ್ಪರ್ಧಾತ್ಮಕ ಯುಗದಲ್ಲಿ ಸರಿಯಾದ ಮಾಹಿತಿ ಹಾಗೂ ಮಾರ್ಗದರ್ಶನವು ಯುವಜನತೆಯ ಯಶಸ್ಸಿನ ಮೂಲಸ್ತಂಭವಾಗಿದೆ. ಇದು ವಿದ್ಯಾರ್ಥಿಗಳಿಗೂ ಪೂರಕವಾಗಿದ್ದು, ಅಂತಹ ಮಾರ್ಗದರ್ಶನವನ್ನು ರಾಮಕೃಷ್ಣ ಮಿಷನ್ ನೀಡುತ್ತದೆ. ಸ್ವಾಮಿ ವಿವೇಕಾನಂದರ ಆದರ್ಶಗಳಡಿ ರಾಮಕೃಷ್ಣ ಮಿಷನ್ ಯುವಜನರಿಗೆ ವ್ಯಕ್ತಿತ್ವ ವಿಕಸನ, ನಾಯಕತ್ವ ಗುಣ ಮತ್ತು ಆಧ್ಯಾತ್ಮಿಕ ಜಾಗೃತಿ ಮೂಡಿಸಲು ಪ್ರತ್ಯೇಕ ಮಾರ್ಗದರ್ಶನ ಹಾಗೂ ತರಬೇತಿಗಳನ್ನು ಆಯೋಜಿಸುತ್ತದೆ. ಇದರಲ್ಲಿ ಭಾಗವಹಿಸುವಂತೆ ಕರೆ ನೀಡಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಆಡಳಿತ ಮಂಡಳಿ ಸಂಚಾಲಕರಾದ ವಿಜಯನಾರಾಯಣ ಕೆ. ಎಂ. ಮಾತನಾಡಿ, ವಿವೇಕಾನಂದರ ಹೆಸರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ನಮ್ಮ ಸಂಸ್ಥೆ ವಿವೇಕಾನಂದರ ವಿಚಾರದಾರೆ ಹಾಗೂ ಆಶಯಗಳನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಸದಾ ಕಾರ್ಯನಿರತವಾಗಿದೆ. ವಿವೇಕಾನಂದ ಕಾನೂನು ಮಹಾವಿದ್ಯಾಲಯ ಉತ್ತಮ ಮೌಲ್ಯಯುತ ಕಾನೂನು ತಜ್ಞರನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಬೇಕು ಎನ್ನುವ ಆಶಯವನ್ನು ಇಟ್ಟುಕೊಂಡು ಸದಾ ಇಂತಹ ರಾಷ್ಟ್ರ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಸಮಾಜವನ್ನು ಬದಲಾಯಿಸುವ ಹುಮ್ಮಸ್ಸು ಹೊಂದಿರುವ ಕಾನೂನು ವಿದ್ಯಾರ್ಥಿಗಳು ಮುಂದೆ ಮೌಲ್ಯವನ್ನು ಉಳಿಸಿಕೊಂಡು ತಮ್ಮ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಾಗ ಅವರ ಮೂಲಕ ಪ್ರಜ್ಞಾವಂತ ಸಮಾಜದ ನಿರ್ಮಾಣವಾಗುತ್ತದೆ ಎಂದರು.

ವಿವೇಕಾನಂದ ಕಾನೂನು ಮಹಾವಿದ್ಯಾಲಯದ ರಾಜ್ಯಶಾಸ್ತ್ರದ ಸಹಾಯಕ ಪ್ರಾಧ್ಯಾಪಕ ಹಾಗೂ ಎನ್. ಎಸ್. ಎಸ್. ಕಾರ್ಯಕ್ರಮಾಧಿಕಾರಿ ಲಕ್ಷ್ಮೀಕಾಂತ ಎ. ಕಾರ್ಯಕ್ರಮದ ಕುರಿತು ಪ್ರಾಸ್ತವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಕಾನೂನು ಅಧ್ಯಯನ ವಿಭಾಗದ ನಿರ್ದೇಶಕರಾದ ಡಾ. ಬಿ.ಕೆ. ರವೀಂದ್ರ, ಪ್ರಾಂಶುಪಾಲರಾದ ಡಾ. ಅಕ್ಷತಾ ಎ.ಪಿ. ಉಪಸ್ಥಿತರಿದ್ದರು. ವಿದ್ಯಾರ್ಥಿ ಶ್ರೇಯಸ್ ರೈ ಸ್ವಾಗತಿಸಿ, ವಿದ್ಯಾರ್ಥಿನಿ ಮೌಲ್ಯ ವಂದಿಸಿದರು. ವಿದ್ಯಾರ್ಥಿ ದಿಲೀಪ್ ಬಿ. ಎಸ್. ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಆಡಳಿತ ಮಂಡಳಿ ಸದಸ್ಯರು, ವಕೀಲರ ಸಂಘದ ಸದಸ್ಯರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here