







ನೆಲ್ಯಾಡಿ: ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸುವ ಕೌಕ್ರಾಡಿ ಗ್ರಾಮದ ಗೌಡಸಾಗು-ಬರೆಗುಡ್ಡೆ ರಸ್ತೆಯನ್ನು ಸಮರ್ಪಕವಾಗಿ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕಿಸುವ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ ಬರೆಗುಡ್ಡೆ ನಿವಾಸಿಗಳು ಕೌಕ್ರಾಡಿ ಗ್ರಾ.ಪಂ.ಗೆ ಮನವಿ ಸಲ್ಲಿಸಿದ್ದಾರೆ.



ಕೌಕ್ರಾಡಿ ಗ್ರಾ.ಪಂ.ವ್ಯಾಪ್ತಿಗೆ ಒಳಪಟ್ಟಿರುವ ಗೌಡಸಾಗು-ಬರೆಗುಡ್ಡೆ ರಸ್ತೆಯು ಈ ಭಾಗದ ಸಾರ್ವಜನಿಕರ ಪ್ರಮುಖ ಸಂಪರ್ಕ ರಸ್ತೆಯಾಗಿದ್ದು ಪ್ರತಿದಿನ ನೂರಾರು ಜನರು ಹಾಗೂ ವಾಹನ ಸವಾರರು ಈ ರಸ್ತೆಯ ಮೂಲಕ ರಾಷ್ಟ್ರೀಯ ಹೆದ್ದಾರಿ 75ನ್ನು ಸಂಪರ್ಕಿಸುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿ ನಡೆದ ನಂತರ ಹೆದ್ದಾರಿಯ ಮಟ್ಟವು ಗೌಡಸಾಗು-ಬರೆಗುಡ್ಡೆ ರಸ್ತೆಯ ಹೆದ್ದಾರಿ ಮಟ್ಟಕ್ಕಿಂತ ತಗ್ಗು ಪ್ರದೇಶದಲ್ಲಿರುವುದರಿಂದ ವಾಹನ ಸವಾರರು ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸಲು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಇದರಿಂದ ವಾಹನ ಸಂಚಾರಕ್ಕೆ ಅಡಚಣೆಯಾಗುವುದರ ಜೊತೆಗೆ ಅಪಘಾತ ಸಂಭವಿಸುವ ಸಾಧ್ಯತೆಯೂ ಹೆಚ್ಚಾಗಿದೆ. ರಾಷ್ಟ್ರೀಯ ಹೆದ್ದಾರಿ ೭೫ರ ಅಗಲೀಕರಣದ ಸಂದರ್ಭದಲ್ಲಿ ಅದನ್ನು ಸಂಪರ್ಕಿಸುವ ಜಿಲ್ಲಾ ರಸ್ತೆ ಹಾಗೂ ಗ್ರಾಮ ಪಂಚಾಯತ್ ವ್ಯಾಪ್ತಿಯ ರಸ್ತೆಗಳನ್ನು ವೈಜ್ಞಾನಿಕವಾಗಿ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕಿಸುವ ವ್ಯವಸ್ಥೆಯನ್ನು ಹೆದ್ದಾರಿ ಪ್ರಾಧಿಕಾರವು ಕಲ್ಪಿಸಿದೆ. ಅದೇ ರೀತಿಯಲ್ಲಿ ಕೌಕ್ರಾಡಿ ಗ್ರಾ.ಪಂ.ವ್ಯಾಪ್ತಿಯ ಗೌಡಸಾಗು-ಬರೆಗುಡ್ಡೆ ರಸ್ತೆಯನ್ನು ಸಹ ಸಪಮರ್ಪಕವಾಗಿ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕಿಸುವ ವ್ಯವಸ್ಥೆಯನ್ನು ಕಲ್ಪಿಸಿ ಈ ಭಾಗದ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವಂತೆ ಗೌಡಸಾಗು-ಬರೆಗುಡ್ಡೆ ಪ್ರದೇಶದ ನಾಗರಿಕರು ಗ್ರಾ.ಪಂ.ಗೆ ಸಲ್ಲಿಸಿರುವ ಮನವಿಯಲ್ಲಿ ಒತ್ತಾಯಿಸಿದ್ದಾರೆ.



ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರಿಗೆ, ಪ್ರದೇಶ ಕಲ್ಯಾಣಾಧಿಕಾರಿಗಳಿಗೂ ಮನವಿಯ ಪತ್ರ ರವಾನಿಸಿದ್ದಾರೆ. ಕೌಕ್ರಾಡಿ ಗ್ರಾ.ಪಂ.ನಲ್ಲಿ ಮನವಿ ಸಲ್ಲಿಕೆ ವೇಳೆ ಗ್ರಾಮಸ್ಥರಾದ ಸಿದ್ದೀಕ್ ಎಂ., ಸಮದ್, ಆಶ್ರಫ್, ಹೈದರ್, ಆದಂ, ಅಯ್ಯೂಬ್ ಮತ್ತಿತರರು ಉಪಸ್ಥಿತರಿದ್ದರು. ಗ್ರಾ.ಪಂ.ಪಿಡಿಒ ಮೋಹನ್ಕುಮಾರ್, ಕಾರ್ಯದರ್ಶಿ ದೇವಿಕಾ ಮನವಿ ಸ್ವೀಕರಿಸಿದರು.
ಗ್ರಾ.ಪಂ.ನಿಂದ ಯೋಜನಾ ನಿರ್ದೇಶಕರಿಗೆ ಪತ್ರ
ಸಾರ್ವಜನಿಕರ ಬೇಡಿಕೆಯಂತೆ ಕೌಕ್ರಾಡಿ ಗ್ರಾ.ಪಂ.ವ್ಯಾಪ್ತಿಯಲ್ಲಿ ಬರುವ ರಾಷ್ಟ್ರೀಯ ಹೆದ್ದಾರಿ 75ಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಿಗೆ ಕಾಂಕ್ರೀಟ್ ಹಾಕಿ ಕೊಡುವಂತೆ ಕೌಕ್ರಾಡಿ ಗ್ರಾ.ಪಂ.ಪಿಡಿಒ ಅವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ಕೌಕ್ರಾಡಿ ಗ್ರಾ.ಪಂ.ವ್ಯಾಪ್ತಿಯ ಶಾಂತಿಬೆಟ್ಟು-ಗೌಡ್ಸಾಗು, ಗೌಡ್ಸಾಗ್-ಬರೆಗುಡ್ಡೆ, ಹೊಸಮಜಲು ಕಾಲೋನಿ ರಸ್ತೆ ಬಳಕೆದಾರರಿಗೆ ಹೈವೇ ಸಂಪರ್ಕಿಸಲು ಸರಿಯಾದ ರಸ್ತೆ ಇಲ್ಲದೆ ಇರುವುದರಿಂದ ತುಂಬಾ ಸಮಸ್ಯೆಯಾಗುತ್ತಿದೆ. ಅನೇಕ ಮಂದಿ ದಿನ ನಿತ್ಯದ ಕೆಲಸಗಳಿಗೆ ಸದ್ರಿ ರಸ್ತೆಯಲ್ಲಿ ಓಡಾಡುತ್ತಿದ್ದಾರೆ. ಸದ್ರಿ ರಸ್ತೆಗಳು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಜಂಕ್ಷನ್ ರಸ್ತೆ ಲಿಸ್ಟ್ನಲ್ಲಿ ಬಿಟ್ಟು ಹೋಗಿವೆ. ಆದ್ದರಿಂದ ಸದ್ರಿ ರಸ್ತೆಗೆ ಕಾಂಕ್ರಿಟ್ ಹಾಕಿಸಿ ಕೊಡುವಂತೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.










