






ಕೌಟುಂಬಿಕ ಕಲಹದಿಂದಲೇ ಘಟನೆ


ಆಲಂಕಾರು: ಪತ್ನಿಯನ್ನು ಕೊಲೆಗೈದು ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಡಬ ತಾಲೂಕು ಆಲಂಕಾರು ಗ್ರಾಮದ ಕಜೆ ಎಂಬಲ್ಲಿ ನಡೆದಿದ್ದು ಜೂ.20ರಂದು ಮಧ್ಯಾಹ್ನದ ವೇಳೆಗೆ ಬೆಳಕಿಗೆ ಬಂದಿದೆ.



ಮೂಲತ: ಕಾರ್ಕಳ ತಾಲೂಕಿನ ಬಜಗೋಳಿ ಗ್ರಾಮದ ಮಹಾಬಲ ಪೂಜಾರಿಯವರ ಪುತ್ರ ದಿನೇಶ್ (45ವ.) ಹಾಗೂ ಅವರ ಪತ್ನಿ ಸಂಗೀತಾ(39ವ.)ಮೃತಪಟ್ಟವರಾಗಿದ್ದಾರೆ. ಇವರು ಕಳೆದ 1 ವರ್ಷಗಳಿಂದ ಆಲಂಕಾರು ಪೇಟೆಯಲ್ಲಿ ಹೋಟೆಲ್ ನಡೆಸುತ್ತಿದ್ದು ಆಲಂಕಾರು ಗ್ರಾಮದ ಕಜೆ ಎಂಬಲ್ಲಿ ಜನಾರ್ದನ ಗೌಡ ನಾಡ್ತಿಲ ಎಂಬವರ ಬಾಡಿಗೆ ಮನೆಯಲ್ಲಿ ವಾಸ್ತವ್ಯವಿದ್ದರು. ಕೌಟುಂಬಿಕ ಕಲಹದಿಂದ ಪತಿ ದಿನೇಶ್ ಬಾಡಿಗೆ ಮನೆಯಲ್ಲಿ ಯಾವುದೋ ಆಯುಧದಿಂದ ಪತ್ನಿಯ ಹತ್ಯೆಗೈದು ಬಳಿಕ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ಮೃತ ದಂಪತಿಗೆ ಎರಡೂವರೇ ವರ್ಷದ ಹೆಣ್ಣು ಮಗುವಿದ್ದು ಇವರ ಸಾವಿನಿಂದ ಮಗು ಈಗ ಅನಾಥವಾಗಿದೆ.

ಘಟನೆ ಬೆಳಕಿಗೆ ಬಂದಿದ್ದು ಹೀಗೆ;
ಕೊಲೆಯಾದ ಸಂಗೀತಾ ಅವರ ದೊಡ್ಡಮ್ಮನ ಮಗಳು ಸುಮಲತಾ ಆಲಂಕಾರು ಗ್ರಾಮದ ಪಜ್ಜಾಪು ಎಂಬಲ್ಲಿ ವಾಸ್ತವ್ಯವಿದ್ದು ಜೂ.20ರಂದು ಬೆಳಿಗ್ಗೆ 10 ಗಂಟೆಯಿಂದ ಪದೇ ಪದೇ ಮೂರು ಸಲ ಸಂಗೀತಾ ಅವರ ಪತಿಯ ಮೊಬೈಲ್ಗೆ ಕರೆ ಮಾಡಿದ್ದರೂ ಸ್ವೀಕರಿಸಲಿಲ್ಲ. ಈ ಮಧ್ಯೆ ಸಂಗೀತಾ ಅವರ ತಾಯಿ ತುಂಗಮ್ಮ ಅವರು ಸಹ ಸಂಗೀತಾಳ ಪತಿಯ ಮೊಬೈಲ್ಗೆ ಕರೆ ಮಾಡಿದ್ದರೂ ಸ್ವೀಕರಿಸುತ್ತಿರಲಿಲ್ಲ. ಆ ಬಳಿಕ ಸುಮಲತಾ ಅವರು ಬಾಡಿಗೆ ಮನೆಯ ಮಾಲಕ ಜನಾರ್ದನ ಅವರ ಪತ್ನಿಗೆ ಫೋನ್ ಮಾಡಿ ಸಂಗೀತಾಳ ಮನೆಯಲ್ಲಿ ಯಾರೂ ಮೊಬೈಲ್ ಕರೆ ಸ್ವೀಕರಿಸುತ್ತಿಲ್ಲ. ನೀವು ಒಮ್ಮೆ ಬಾಡಿಗೆ ಮನೆ ಕಡೆಗೆ ಹೋಗಿ ನೋಡುವಂತೆ ಕೇಳಿಕೊಂಡಿದ್ದಾರೆ. ಅದರಂತೆ ಅವರು ಹೋಗಿ ನೋಡಿದಾಗ ಮನೆಯ ಒಳಗಿನಿಂದ ಚಿಲಕ ಹಾಕಿರುವುದು ಕಂಡು ಬಂದಿದೆ. ಮಧ್ಯಾಹ್ನ 12.30ರ ವೇಳೆಗೆ ಸಂಗೀತಾ ಅವರ ತಾಯಿ ತುಂಗಮ್ಮ ಅವರು ಸಂಗೀತಾ ವಾಸವಿದ್ದ ಬಾಡಿಗೆ ಮನೆಯ ಪಕ್ಕದ ಮನೆಯವರಿಗೆ ಫೋನ್ ಮಾಡಿ ವಿಚಾರಿಸಿದ್ದು, ಈ ವೇಳೆ ಅವರು ಬಂದು ಮನೆಯ ಬಾಗಿಲು ಬಡಿದು ಕರೆದರೂ ಯಾವುದೇ ಪ್ರತಿಕ್ರಿಯೆ ಇರಲಿಲ್ಲ. ಮನೆಯೊಳಗಿಂದ ಮಗು ಅಳುತ್ತಿರುವುದು ಕೇಳಿಬರುತಿತ್ತು. ಈ ಎಲ್ಲಾ ಬೆಳವಣಿಗೆ ಹಿನ್ನೆಲೆಯಲ್ಲಿ ಸುಮಲತಾ ಅವರು ತನ್ನ ಪತಿ ರಾಮಚಂದ್ರರಿಗೆ ವಿಚಾರ ತಿಳಿಸಿದ್ದು ಅವರು ಸಂಗೀತಾ ವಾಸವಿದ್ದ ಮನೆಗೆ ಹೋಗಿ ಕರೆದರೂ ಬಾಗಿಲು ತೆರೆಯಲಿಲ್ಲ. ಈ ವೇಳೆಯೂ ಮಗು ಮನೆಯೊಳಗಿಂದ ಅಳುತ್ತಿರುವುದು ಕೇಳಿಬರುತ್ತಿತ್ತು. ಮತ್ತೆ ರಾಮಚಂದ್ರ ಅವರು ಮನೆಗೆ ಬಂದು ಸುಮಲತಾ ಅವರನ್ನು ಕರೆದುಕೊಂಡು ಸಂಗೀತಾ ವಾಸವಿದ್ದ ಮನೆಗೆ ಹೋಗಿದ್ದು, ಇದೇ ವೇಳೆ ಬಾಡಿಗೆ ಮನೆಯ ಮಾಲಕ ಜನಾರ್ದನ ಅವರು ಸಹ ಸ್ಥಳಕ್ಕೆ ಬಂದು ಸ್ಥಳೀಯರ ಸಹಕಾರದಿಂದ ಬಾಗಿಲು ತೆರೆದು ನೋಡಿದಾಗ ದಿನೇಶ್ ಫ್ಯಾನ್ಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲೂ, ಸಂಗೀತಾ ರಕ್ತದ ಮಡುವಿನಲ್ಲಿ ನೆಲದಲ್ಲಿ ಬಿದ್ದುಕೊಂಡಿರುವುದು ಹಾಗೂ ಇದರ ಅರಿವೇ ಇಲ್ಲದ ದಂಪತಿಯ ಎರಡೂವರೇ ವರ್ಷದ ಹೆಣ್ಣು ಮಗು ಧ್ರುವಿ ಅಳುತ್ತಿರುವುದು ಕಂಡುಬಂದಿದೆ. ಬಳಿಕ ಈ ವಿಚಾರವನ್ನು ಕಡಬ ಪೊಲೀಸರಿಗೆ ತಿಳಿಸಲಾಯಿತು. ಸಂಗೀತಾರಲ್ಲಿ ಮೊಬೈಲ್ ಫೋನ್ ಇರಲಿಲ್ಲ. ಆಕೆಯ ಮನೆಯವರು ಯಾವುದೇ ವಿಚಾರವಿದ್ದರೂ ಸಂಗೀತಾರ ಪತಿ ದಿನೇಶ್ರವರ ಮೊಬೈಲ್ಗೆ ಕರೆ ಮಾಡುತ್ತಿದ್ದರು. ಅದರಂತೆ ಈ ದಿನವೂ ಮನೆಯವರು ದಿನೇಶ್ರವರ ಫೋನ್ಗೆ ಕರೆ ಮಾಡಿದ್ದಾರೆ.
ಕತ್ತಿಯಿಂದ ಕಡಿದು ಕೊಲೆ;
ದಿನೇಶ್ ಹಾಗೂ ಸಂಗೀತಾ ನಡುವೆ ಗಲಾಟೆ ನಡೆದಿದ್ದು ಈ ವೇಳೆ ದಿನೇಶ್ ಕತ್ತಿಯಿಂದ ಸಂಗೀತಾಳ ಕುತ್ತಿಗೆ ಭಾಗಕ್ಕೆ ಕತ್ತಿಯಿಂದ ಕಡಿದು ಕೊಲೆ ಮಾಡಿರುವುದಾಗಿ ಶಂಕಿಸಲಾಗಿದೆ. ದಿನೇಶ್ಗೆ ಮದ್ಯ ಸೇವನೆ ಚಟವಿದ್ದು ದಂಪತಿ ಮಧ್ಯೆ ಪದೇ ಪದೇ ಜಗಳ ನಡೆಯುತ್ತಿತ್ತು. ಜೂ.20ರಂದು ಬೆಳಿಗ್ಗೆ ದಂಪತಿ ಮಧ್ಯೆ ಜಗಳ ನಡೆದು ಪತ್ನಿ ಸಂಗೀತಾಳನ್ನು ಕತ್ತಿಯಿಂದ ಕಡಿದು ಕೊಲೆ ನಡೆಸಿದ ಬಳಿಕ ದಿನೇಶ್ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ದೂರು ದಾಖಲಾಗಿದೆ. ಪತಿ ಹಿಂಸೆ ನೀಡಿದರೂ 13 ವರ್ಷದಿಂದ ಸಹಿಸಿಕೊಂಡು ಮಗಳು ಆತನ ಜೊತೆಗೆ ಸಂಸಾರ ನಡೆಸುತ್ತಿದ್ದಳು. ಈಗ ಆತನೇ ಅವಳನ್ನು ಕೊಲೆ ನಡೆಸಿದ್ದಾನೆ ಎಂದು ಸಂಗೀತಾಳ ತಾಯಿ ತುಂಗಮ್ಮ ಆರೋಪಿಸಿದ್ದಾರೆ.
ಮದುವೆ ಆಗಿ 13 ವರ್ಷ:
ಕಾರ್ಕಳ ತಾಲೂಕಿನ ಮುಡಾರು ಗ್ರಾಮದ ಮಹಾಬಲ ಪೂಜಾರಿಯವರ ಪುತ್ರರಾಗಿರುವ ದಿನೇಶ್ ಹಾಗೂ ಸಿದ್ದಕಟ್ಟೆ ಸಮೀಪ ಬೆಳ್ತಂಗಡಿ ತಾಲೂಕು ಆರಂಬೋಡಿ ಗ್ರಾಮದ ಸೂರಂಟೆ ನಿವಾಸಿಯಾಗಿರುವ ಶೀನಪ್ಪ ಪೂಜಾರಿ ಮತ್ತು ತುಂಗಮ್ಮ ದಂಪತಿ ಪುತ್ರಿಯಾಗಿರುವ ಸಂಗೀತಾ ಅವರ ಮದುವೆ 13 ವರ್ಷದ ಹಿಂದೆ ನಡೆದಿತ್ತು. ಮದುವೆಗೆ ಮೊದಲೇ ಬೆಳಗಾವಿಯಲ್ಲಿ ಹೋಟೆಲ್ನಲ್ಲಿ ಕೆಲಸ ಮಾಡಿಕೊಂಡಿದ್ದ ದಿನೇಶ್ ಮದುವೆ ಬಳಿಕ ಪತ್ನಿ ಜೊತೆಗೆ ಬೆಳಗಾವಿಗೆ ತೆರಳಿ ಹೋಟೆಲ್ನಲ್ಲಿ ಕೆಲಸ ಮಾಡಿಕೊಂಡಿದ್ದರು. ಕೆಲ ವರ್ಷದ ಬಳಿಕ ಊರಿಗೆ ಬಂದು ಜೋಡುಕಟ್ಟೆ, ಪಡ್ಯಾರಬೆಟ್ಟು ಮತ್ತಿತರರ ಕಡೆಗಳಲ್ಲಿ ಹೋಟೆಲ್ ನಡೆಸುತ್ತಿದ್ದರು. 1 ವರ್ಷದ ಹಿಂದೆ ಆಲಂಕಾರಿಗೆ ಬಂದು ಆಲಂಕಾರು ಪೇಟೆಯಲ್ಲಿ ಹೋಟೆಲ್ ನಡೆಸುತ್ತಿದ್ದು ಕಜೆ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಒಂದೂವರೇ ತಿಂಗಳ ಹಿಂದೆ ಹೋಟೆಲ್ ಬಂದ್ ಮಾಡಿ ಪತ್ನಿ, ಮಗುವಿನ ಜೊತೆಗೆ ಸಿದ್ದಕಟ್ಟೆಯಲ್ಲಿರುವ ಪತ್ನಿಯ ಮನೆಗೆ ತೆರಳಿದ್ದರು. ಅಲ್ಲಿಂದ ಜೂ.೧೯ರಂದು ಆಲಂಕಾರು ಕಜೆ ಬಾಡಿಗೆ ಮನೆಗೆ ಬಂದಿದ್ದು ಜೂ.20ರಂದು ಈ ದುರ್ಘಟನೆ ನಡೆದಿದೆ. ಸಿದ್ದಕಟ್ಟೆಯ ಪತ್ನಿ ಮನೆಗೆ ಹೋಗಿದ್ದ ವೇಳೆ ದಿನೇಶ್ರ ಕುಡಿತದ ಚಟ ಬಿಡಿಸಲು ಪತ್ನಿ ಮನೆಯವರು ಮಂಗಳೂರಿನ ಫಾದರ್ ಮುಲ್ಲಾರ್ಸ್ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದರು. ದಿನೇಶ್ ತಂದೆ ಮನೆಯಲ್ಲೂ ಜಗಳ ಮಾಡಿಕೊಂಡಿದ್ದು ಅವರೂ ಆತನನ್ನು ಮನೆಯಿಂದ ಹೊರಗಿಟ್ಟಿದ್ದರು ಎಂದು ಹೇಳಲಾಗಿದೆ. ಮೃತ ಸಂಗೀತ ತಂದೆ, ತಾಯಿ, ಇಬ್ಬರು ಸಹೋದರಿಯರು ಹಾಗೂ ಎರಡೂವರೇ ವರ್ಷದ ಹೆಣ್ಣು ಮಗು ದ್ರುವಿಯನ್ನು ಅಗಲಿದ್ದಾರೆ. ದಿನೇಶ್ ತಂದೆ, ಇಬ್ಬರು ಸಹೋದರರು ಹಾಗೂ ಮೂವರು ಸಹೋದರಿಯರನ್ನು ಅಗಲಿದ್ದಾರೆ.
ಕಡಬ ಠಾಣೆಯಲ್ಲಿ ಕೇಸು ದಾಖಲು;
ದಿನೇಶನು ಕೌಟುಂಬಿಕ ಕಲಹದಿಂದ ಪತ್ನಿ ಸಂಗೀತಾರವರನ್ನು ಯಾವುದೋ ಆಯುಧದಿಂದ ಕೊಲೆ ಮಾಡಿರುವುದಾಗಿ ಸುಮಲತಾ ಅವರು ನೀಡಿದ ದೂರಿನ ಮೇರೆಗೆ ಕಡಬ ಪೊಲೀಸ್ ಠಾಣೆಯಲ್ಲಿ ಅ.ಕ್ರ: 77/2026 ಕಲಂ: 103(1)BNS ರಂತೆ ಪ್ರಕರಣ ಹಾಗೂ ದಿನೇಶ್ರವರ ಆತ್ಮಹತ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಯು.ಡಿ.ಆರ್ ಸಂಖ್ಯೆ:26/2026, ಕಲಂ194 BNSS ರಂತೆ ಪ್ರಕರಣ ದಾಖಲಾಗಿದೆ. ತನಿಖೆ ನಡೆಸಿ ಮುಂದಿನ ಕಾನೂನುಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಭೂಮ್ರೆಡ್ಡಿ, ಡಿವೈಎಸ್ಪಿ ರೋಹಿಣಿ, ಸರ್ಕಲ್ ಇನ್ಸ್ಪೆಕ್ಟರ್ ಹೆಚ್.ಇ.ನಾಗರಾಜ್, ಕಡಬ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಜಂಬೂರಾಜ್ ಮಹಾಜನ್ ಹಾಗೂ ಸಿಬ್ಬಂದಿಗಳು ಆಗಮಿಸಿ ತನಿಖೆ ನಡೆಸಿದ್ದಾರೆ. ಸಂಜೆ ವೇಳೆ ಬೆರಳಚ್ಚು ತಜ್ಞರು ಆಗಮಿಸಿ ತಡರಾತ್ರಿ ತನಕವೂ ಮಾಹಿತಿ ಸಂಗ್ರಹಿಸಿದ್ದಾರೆ.
ಆತ್ಮಹತ್ಯೆ ಮಾಡಿಕೊಳ್ಳುವವಳ್ಳ;
ಸಂಗೀತಾ 13 ವರ್ಷಗಳಿಂದ ಪತಿ ನೀಡುತ್ತಿದ್ದ ಹಿಂಸೆ ಸಹಿಸಿಕೊಂಡು ಜೀವನ ಸಾಗಿಸಿದ್ದಾಳೆ. ಆತ್ಮಹತ್ಯೆ ಮಾಡಿಕೊಳ್ಳುವಂತಹ ಮಹಿಳೆ ಅಲ್ಲ. ಗಟ್ಟಿ ಮನಸ್ಸಿನ ಮಹಿಳೆ. ಎಷ್ಟೇ ಕಷ್ಟಬಂದರೂ ಗಂಡನ ಜೊತೆಗೆ ಇರುತ್ತೇನೆ. ನಮ್ಮ ಫ್ಯಾಮಿಲಿಯಲ್ಲಿ ಯಾರೂ ಗಂಡನನ್ನು ಬಿಟ್ಟವರಿಲ್ಲ ಎಂದು ಹೇಳುತ್ತಿದ್ದಳು. ದಿನೇಶನೇ ಕೊಲೆ ಮಾಡಿದ್ದಾನೆ. ಅವಳಿಗೆ ಆತನಿಂದ ತಪ್ಪಿಸಿಕೊಳ್ಳಲೂ ಆಗಿಲ್ಲ. ನನ್ನ ಮೇಲೆ ನಂಬಿಕೆ ಇಟ್ಟೇ ಈ ಊರಿಗೆ ಬಂದಿದ್ದಳು ಎಂದು ಸುಮಲತಾ ಅವರು ಕಣ್ಣೀರು ಸುರಿಸುತ್ತ ’ಸುದ್ದಿ’ಯೊಂದಿಗೆ ಮಾಹಿತಿ ಹಂಚಿಕೊಂಡರು.
ಅನಾಥವಾದ ಎರಡೂವರೇ ವರ್ಷದ ದ್ರುವಿ;
ದಿನೇಶ್-ಸಂಗೀತಾ ದಂಪತಿ ಮದುವೆ ಆಗಿ 10ವರ್ಷ ಕಳೆದರೂ ಮಗು ಆಗಿರಲಿಲ್ಲ. ಎರಡೂವರೇ ವರ್ಷದ ಹಿಂದೆ ಸಂಗೀತಾ ಹೆಣ್ಣುಮಗುವಿಗೆ ಜನ್ಮ ನೀಡಿದ್ದರು. ಇದೀಗ ಮಗುವಿಗೆ ಎರಡೂವರೇ ವರ್ಷ ತುಂಬಿದ್ದು ಈಗ ತಂದೆ ತಾಯಿಯನ್ನು ಕಳೆದುಕೊಂಡು ಮಗು ಅನಾಥವಾಗಿದೆ. ತಂದೆ, ತಾಯಿಯ ಸಾವಿನ ಅರಿವೇ ಇಲ್ಲದ ಮಗು ಪಕ್ಕದ ಮನೆಯ ಮಕ್ಕಳ ಜೊತೆ ಆಟವಾಡುತ್ತಿದ್ದು ಸಂಜೆಯಾಗುತ್ತಲೇ ತಾಯಿಯ ಬಳಿ ಹೋಗುವುದಾಗಿ ಅಳುತ್ತಿದ್ದ ದೃಶ್ಯ ನೆರೆದ ಸಾರ್ವಜನಿಕರ ಮನಸ್ಸು ಕರಗುವಂತಿತ್ತು.

ಮಗುವಿನ ಚೈನ್ ಕಾಣದೇ ಇರುವುದೇ ಸಾವಿಗೆ ಕಾರಣವಾಯಿತೇ ?
ದಿನೇಶ್-ಸಂಗೀತಾ ದಂಪತಿಯ ಪುತ್ರಿ ದ್ರುವಿಯ ಅಂದಾಜು 90 ಸಾವಿರ ರೂ.ಮೌಲ್ಯದ ಚಿನ್ನದ ಚೈನ್ ಕೆಲ ದಿನಗಳಿಂದ ಕಾಣದೇ ಇದ್ದು ಈ ವಿಚಾರದಲ್ಲಿ ದಂಪತಿ ನಡುವೆ ಜಗಳ ನಡೆಯುತಿತ್ತು ಎಂದು ಸಂಗೀತಾಳ ತಾಯಿ ತುಂಗಮ್ಮ ಮಾಹಿತಿ ನೀಡಿದ್ದಾರೆ. ತಮ್ಮ ಬಾಡಿಗೆ ಮನೆಯಲ್ಲೇ ಈ ಚಿನ್ನದ ಚೈನ್ ಬಾಕಿಯಾಗಿದೆ. ಹುಡುಕಿ ತರುವ ಎಂದು ಜೂ.19ರಂದು ದಂಪತಿ ಆಲಂಕಾರಿನ ತಮ್ಮ ಬಾಡಿಗೆ ಮನೆಗೆ ಬಂದಿರಬಹುದು. ಈ ಚಿನ್ನದ ಚೈನ್ ವಿಚಾರದಲ್ಲೇ ಚರ್ಚೆ ನಡೆದು ತನ್ನ ಮಗಳನ್ನು ಕೊಲೆ ಮಾಡಲಾಗಿದೆ. ಈ ಹಿಂದೆಯೂ ಮಗಳ ಕುತ್ತಿಗೆಗೆ ಬಟ್ಟೆ ಸುತ್ತಿ ಈತ ಕೊಲೆಗೆ ಪ್ರಯತ್ನಿಸಿದ್ದ ಎಂದು ಮೃತಳ ತಾಯಿ ತುಂಗಮ್ಮ ಆರೋಪಿಸಿದ್ದಾರೆ. ಆದರೂ ಪೋಲಿಸ್ ತನಿಖೆಯ ನಂತರವೇ ನಿಜಾಂಶ ಬೆಳಕಿಗೆ ಬರಬೇಕಾಗಿದೆ
ತನಿಖೆ ನಡೆಸುತ್ತೇವೆ; ಭೂಮ್ರೆಡ್ಡಿ
ಘಟನೆಗೆ ಸಂಬಂಧಿಸಿದಂತೆ ಮೃತ ಸಂಗೀತಾಳ ದೊಡ್ಡಮ್ಮನ ಮಗಳು ಸುಮಲತಾ ಹಾಗೂ ಬಾಡಿಗೆ ಮನೆಯ ಮಾಲಕ ಜನಾರ್ದನ ಅವರು ಪ್ರತ್ಯೇಕ ದೂರು ನೀಡಿದ್ದಾರೆ. ಪತ್ನಿ ಸಂಗೀತಾಳನ್ನು ಹತ್ಯೆ ಮಾಡಿ ದಿನೇಶ್ ಆತ್ಮಹತ್ಯೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತೇವೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಭೂಮ್ರೆಡ್ಡಿ ಅವರು ’ಸುದ್ದಿ’ಗೆ ತಿಳಿಸಿದ್ದಾರೆ.










