ಪರ್ಪುಂಜ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ

0

ನಿವ್ವಳ ಲಾಭ ರೂ.1.3 ಲಕ್ಷ, ಬೋನಸ್ ಲೀ.52 ಪೈಸೆ, ಶೇ.12 ಡಿವಿಡೆಂಡ್

ಪುತ್ತೂರು: ಪರ್ಪುಂಜ ಹಾಲು ಉತ್ಪಾದಕರ ಸಹಕಾರ ಸಂಘದ2025-26 ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯು ಸಂಘದ ಅಧ್ಯಕ್ಷ ಮಿತ್ರದಾಸ ರೈ ಡೆಕ್ಕಳರವರ ಅಧ್ಯಕ್ಷತೆಯಲ್ಲಿ ಜೂ.23 ರಂದು ಪರ್ಪುಂಜ ರಾಜ್ ಕಾಂಪ್ಲೆಕ್ಸ್ ವಠಾರದಲ್ಲಿ ಜರಗಿತು. ಸಂಘದ ವಾರ್ಷಿಕ ವರದಿ ವಾಚನ ಮಾಡಿದ ಸಂಘದ ಕಾರ್ಯದರ್ಶಿ ಸರೋಜ ಆರ್.ಶೆಟ್ಟಿಯವರು, ಸಂಘವು ವರದಿ ವರ್ಷದಲ್ಲಿ 129 ಮಂದಿ ಸದಸ್ಯರನ್ನು ಒಳಗೊಂಡಿದ್ದು ವರ್ಷಾಂತ್ಯಕ್ಕೆ ರೂ.3500 ಪಾಲು ಬಂಡವಾಳವನ್ನು ಹೊಂದಿರುತ್ತದೆ ಎಂದು ತಿಳಿಸಿದರು. ವರದಿ ವರ್ಷದಲ್ಲಿ ಹಾಲು ವ್ಯಾಪಾರ ಹಾಗೂ ಪಶು ಆಹಾರ ವ್ಯಾಪಾರದಲ್ಲಿ ಹಾಗೂ ಇತರ ಆದಾಯ ಸೇರಿ ರೂ.5,76,787 ಲಾಭ ಗಳಿಸಿ ಇದರಲ್ಲಿ ಆಡಳಿತ ವೆಚ್ಚ ಮತ್ತು ಇತರ ಖರ್ಚು ರೂ.4,73,784 ಕಳೆದು ನಿವ್ವಳ ಲಾಭ ರೂ.1,03,003.29 ಗಳಿಸಿರುತ್ತದೆ ಎಂದು ತಿಳಿಸಿದರು.ಸಂಘವು ಹಾಲು ಉತ್ಪಾದಕ ಸದಸ್ಯರಿಂದ ರೂ.38,73,503 ಮೌಲ್ಯದ 95235 ಲೀಟರ್ ಹಾಲನ್ನು ಖರೀದಿಸಿ ಅದರಲ್ಲಿ ರೂ.36,83,656 ಮೌಲ್ಯದ 88338 ಲೀಟರ್ ಹಾಲನ್ನು ದ.ಕ ಹಾಲು ಒಕ್ಕೂಟಕ್ಕೆ ಹಾಗೂ ರೂ.5,82,678 ಮೌಲ್ಯದ 70594 ಲೀಟರ್ ಹಾಲನ್ನು ಸ್ಥಳೀಯವಾಗಿ ಮಾರಾಟ ಮಾಡಿರುತ್ತದೆ. ಸಂಘವು ವರದಿ ಸಾಲಿನಲ್ಲಿ 562 ಚೀಲ ಪಶು ಆಹಾರ ಮಾರಾಟ, 790 ಕೆಜಿ ಲವಣ ಮಿಶ್ರಣ ಮಾರಾಟ, ಸಮೃದ್ಧಿ ಮಾರಾಟ ಹಾಗೂ ಕರುಗಳ ಹಿಂಡಿ ಮಾರಾಟ ಒಟ್ಟು ಲಾಭ ರೂ.19260 ಮಾಡಿರುತ್ತದೆ ಹಾಲು ಮಾರಾಟದಲ್ಲಿ ರೂ.4,69,792 ಲಾಭ ಮಾಡಿರುತ್ತದೆ ಎಂದು ತಿಳಿಸಿದರು.


ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ದ.ಕ ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಡಾ.ಡಿ.ಆರ್.ಸತೀಶ್ ರಾವ್‌ರವರು ಮಾತನಾಡಿ, ಹೈನುಗಾರ ರೈತರ ಸಹಕಾರದಿಂದ ಒಕ್ಕೂಟಕ್ಕೆ ಇದೀಗ ಹೆಚ್ಚು ಹಾಲು ಬರುತ್ತಿದ್ದು ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಸುಮಾರು 1 ಲಕ್ಷ ಲೀಟರ್ ಹಾಲು ಹೆಚ್ಚಾಗಿದೆ ಎಂದು ತಿಳಿಸಿದರು.ಹೈನುಗಾರಿಕೆ ಎಂದಿಗೂ ನಷ್ಟದ ವಿಷಯವಲ್ಲ ಸರಿಯಾದ ರೀತಿಯಲ್ಲಿ ಹೈನುಗಾರಿಕೆ ಮಾಡಿದರೆ ಹೆಚ್ಚು ಲಾಭ ಪಡೆಯಬಹುದಾಗಿದೆ ಮುಖ್ಯವಾಗಿ ದನಗಳಿಗೆ ಗರ್ಭ ನಿಲ್ಲದೇ ಇರುವುದು ಹೈನುಗಾರಿಕೆಯಲ್ಲಿ ದೊಡ್ಡ ಹೊಡೆತ ಆಗಿದೆ ಇದಕ್ಕೆ ಮುಖ್ಯ ಕಾರಣ ವಿಟಮಿನ್ ಎಡಿ3 ಕಾರಣವಾಗಿದೆ. ಈ ಬಗ್ಗೆ ರೈತರು ಗಮನಿಸಬೇಕಾಗಿದೆ ಎಂದರು. ಬೆಳ್ತಂಗಡಿಯಲ್ಲಿ ಒಬ್ಬ ರೈತ ದಿನಂಪ್ರತಿ 500 ಲೀಟರ್ ಹಾಲು ಪೂರೈಸುತ್ತಿದ್ದಾರೆ ಎಂಬ ಮಾತನ್ನು ಡಾ.ಸತೀಶ್ ರಾವ್‌ರವರು ತಿಳಿಸಿದರು. ದ.ಕ ಹಾಲು ಪಶು ವೈದ್ಯಾಧಿಕಾರಿ ಡಾ.ಅನುದೀಪ್‌ರವರು ಮಾತನಾಡಿ, ಈ ಹಿಂದೆ ಹೆಣ್ಣು ಕರು ಸಾಕಾಣೆಗೆ ಒಕ್ಕೂಟದಿಂದಲೇ ಪಶು ಆಹಾರಗಳನ್ನು ಉಚಿತವಾಗಿ ನೀಡಲಾಗುತ್ತಿತ್ತು ಆದರೆ ಈ ವರ್ಷದಿಂದ ಪ್ರತಿ ರೈತರ ಅಕೌಂಟ್‌ಗೆ ರೂ.3 ಸಾವಿರ ಹಾಕುವ ವ್ಯವಸ್ಥೆ ಮಾಡಲಾಗಿದೆ ಎಂದರು. ಎಲ್ಲಾ ದನಗಳಿಗೂ ಕಡ್ಡಾಯವಾಗಿ ವಿಮೆ ಮಾಡಿಸಬೇಕು ಹಾಗೇ ವಿಮೆ ಮಾಡಿದ ಮೇಲೆ ಕಿವಿಯಲ್ಲಿ ಟ್ಯಾಗ್ ಇರುವಂತೆ ನೋಡಿಕೊಳ್ಳುವುದು ಕೂಡ ಅತೀ ಮುಖ್ಯ ಎಂದರು ತಿಳಿಸಿದರು.


ಸಭಾಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಮಿತ್ರದಾಸ ರೈ ಡೆಕ್ಕಳರವರು ಮಾತನಾಡಿ, ಶ್ರಮಪಟ್ಟು ಕೆಲಸ ಮಾಡಿದರೆ ಹೈನುಗಾರಿಕೆಯಲ್ಲಿ ಲಾಭ ಇದ್ದೇ ಇದೆ. ಒಂದು ತಲೆಮಾರಿನ ಹೈನುಗಾರ ರೈತರೆಲ್ಲರಿಗೂ ಪ್ರಾಯವಾಗುತ್ತ ಬಂದಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಯುವಜನತೆ ಹೈನುಗಾರಿಕೆಗೆ ಮನಸ್ಸು ಮಾಡಬೇಕಾಗಿದೆ ಎಂದರು. ಪರ್ಪುಂಜ ಹಾಲು ಉತ್ಪಾದಕರ ಸಂಘವು ಉತ್ತಮ ರೀತಿಯಲ್ಲಿ ನಡೆಯುತ್ತಿದ್ದು ಇದಕ್ಕಾಗಿ ಎಲ್ಲಾ ರೈತ ಸದಸ್ಯರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು. ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಜಾಗದ ಅವಶ್ಯಕತೆ ಇದ್ದು ಈ ಬಗ್ಗೆ ಹುಡುಕಾಟದಲ್ಲಿದ್ದೇವೆ ಎಂದು ತಿಳಿಸಿದರು.


ಸನ್ಮಾನ ಸ್ವೀಕರಿಸಿದ ಸ್ಥಾಪಕ ಅಧ್ಯಕ್ಷ ಬಾರಿಕೆ ನಾರಾಯಣ ರೈಯವರು ಮಾತನಾಡಿ, ನನಗೆ ಒಂದು ಪಶು ವೈದ್ಯಾಕೀಯ ಆಸ್ಪತ್ರೆ ಮಾಡಬೇಕು ಎಂಬ ಕನಸು ಇತ್ತು ಆದರೆ ಕೊನೆ ಕ್ಷಣದಲ್ಲಿ ಅದು ಆಗಲಿಲ್ಲ ಅದರ ಬದಲಿಗೆ ಹಾಲು ಉತ್ಪಾದಕರ ಸಂಘವನ್ನು ಆರಂಭಿಸಿದೆ. ಇಂದು ಈ ಸಂಘದ ಎಲ್ಲರ ಸಹಕಾರದೊಂದಿಗೆ ಉತ್ತಮ ರೀತಿಯಲ್ಲಿ ನಡೆಯುತ್ತಿರುವುದು ಅತ್ಯಂತ ಖುಷಿ ಕೊಟ್ಟಿದೆ ಎಂದು ಹೇಳಿದರು. ನಿಕಟಪೂರ್ವ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ ಮಾತನಾಡಿ, ಎಲ್ಲರ ಸಹಕಾರದೊಂದಿಗೆ ಸಂಘವು ವರ್ಷದಿಂದ ವರ್ಷಕ್ಕೆ ಉತ್ತಮ ರೀತಿಯಲ್ಲಿ ವ್ಯವಹಾರ ಮಾಡಿಕೊಂಡು ಬರುತ್ತಿದ್ದು ಮುಂದಿನ ದಿನಗಳಲ್ಲೂ ಸಂಘವು ಒಳ್ಳೆಯ ಸಂಘವಾಗಿ ಮೂಡಿಬರಲಿ, ನಮ್ಮೆಲ್ಲರ ಸಹಕಾರ, ಪ್ರೋತ್ಸಾಹ ನಿತ್ಯನಿರಂತರ ಸಂಘಕ್ಕೆ ಇದೆ ಎಂದು ತಿಳಿಸಿದರು.


ವೇದಿಕೆಯಲ್ಲಿ ಉಪಾಧ್ಯಕ್ಷ ವಿನಯ ಕುಮಾರ್ ರೈ ನೀರ್ಪಾಡಿ, ನಿರ್ದೇಶಕರುಗಳಾದ ಶ್ಯಾಮ್‌ಸುಂದರ ರೈ ಕೊಪ್ಪಳ, ರಾಮಣ್ಣ ಗೌಡ ಪರನೀರು, ಸದಾಶಿವ ಗುಂಡಿಗದ್ದೆ, ಕಿಶೋರ್ ಕುಮಾರ್ ಮರಿಕೆ, ಕಸ್ತೂರಿ ಟಿ.ಶೆಟ್ಟಿ ಕೂರೇಲು ಉಪಸ್ಥಿತರಿದ್ದರು. ನಿರ್ದೇಶಕ ವಿಠಲ ರೈ ಪಂಜಿಗುಡ್ಡ ಸ್ವಾಗತಿಸಿದರು. ನಿರ್ದೇಶಕಿ ಹರಿಣಾಕ್ಷಿ ಆಳ್ವ ಕುರಿಯ ಪ್ರಾರ್ಥಿಸಿ, ವಂದಿಸಿದರು. ಹಾಲು ಪರೀಕ್ಷಕಿ ಶ್ರೀಮತಿ ಕೆ ಸಹಕರಿಸಿದ್ದರು.

ಅತೀ ಹೆಚ್ಚು ಹಾಲು ಹಾಕಿದವರಿಗೆ ಬಹುಮಾನ
ಸಂಘಕ್ಕೆ ಅತೀ ಹೆಚ್ಚು ಹಾಲು ಹಾಕಿದವರನ್ನು ಈ ಸಂದರ್ಭದಲ್ಲಿ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು. ಇದರಲ್ಲಿ ಪ್ರಥಮ ಬಹುಮಾನವನ್ನು 20 ಸಾವಿರ ಲೀಟರ್ ಹಾಲು ಹಾಕಿದ ವಿನಯ ಕುಮಾರ್ ರೈ ನೀರ್ಪಾಡಿ ಪಡೆದುಕೊಂಡರೆ, ದ್ವಿತೀಯ ಬಹುಮಾನವನ್ನು 5822 ಲೀಟರ್ ಹಾಲು ಹಾಕಿದ ವೀರಪ್ಪ ಮೂಲ್ಯ, ತೃತೀಯ ಬಹುಮಾನವನ್ನು 5792ಲೀಟರ್ ಹಾಲು ಹಾಕಿದ ಸದಾಶಿವ ಹಾಗೇ ಚತುರ್ಥ ಬಹುಮಾನವನ್ನು 5600 ಲೀಟರ್ ಹಾಲು ಹಾಕಿದ ರಾಮಣ್ಣ ಗೌಡ ಮತ್ತು ಐದನೇ ಬಹುಮಾನವನ್ನು 54೦೦ ಲೀಟರ್ ಹಾಲು ಹಾಕಿದ ನಾರಾಯಣ ಪೂಜಾರಿ ಪಡೆದುಕೊಂಡರು. ಉಳಿದಂತೆ ಹಾಲು ಹಾಕುತ್ತಿರುವ ಎಲ್ಲಾ ಸದಸ್ಯರಿಗೆ ಪ್ರೋತ್ಸಾಹಕ ಬಹುಮಾನ ನೀಡಿ ಗೌರವಿಸಲಾಯಿತು.

ಸ್ಥಾಪಕ ಅಧ್ಯಕ್ಷರು, ಮಾಜಿ ಅಧ್ಯಕ್ಷರಿಗೆ ಸನ್ಮಾನ
ಇದೇ ಸಂದರ್ಭದಲ್ಲಿ ಸಂಘವನ್ನು ಸ್ಥಾಪನೆ ಮಾಡುವ ಮೂಲಕ ಸಂಘದ ಸ್ಥಾಪನೆಗೆ ಕಾರಣೀಕರ್ತರಾಗಿ ಸಂಘದ ಸ್ಥಾಪಕ ಅಧ್ಯಕ್ಷರಾಗಿದ್ದುಕೊಂಡು ಸಂಘವನ್ನು ಮುನ್ನಡೆಸಿದ ಪ್ರಗತಿಪರ ಕೃಷಿಕ ಬಾರಿಕೆ ನಾರಾಯಣ ರೈ ಹಾಗೇ ಸಂಘದ ನಿಕಟಪೂರ್ವ ಅಧ್ಯಕ್ಷರಾಗಿದ್ದುಕೊಂಡು ಸಂಘದ ಬೆಳವಣಿಗೆಗೆ ಸಹಕರಿಸಿದ ಬೂಡಿಯಾರ್ ರಾಧಾಕೃಷ್ಣ ರೈಯವರನ್ನು ಈ ಸಂದರ್ಭದಲ್ಲಿ ಶಾಲು,ಫಲಪುಷ್ಪ, ಹಾರ, ಸ್ಮರಣಿಕೆ ಕೊಟ್ಟು ಗೌರವಿಸಲಾಯಿತು. ಎಸ್‌ಎಸ್‌ಎಲ್‌ಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿ ಸಂಘದ ಸದಸ್ಯ ಗುಂಡಿಗದ್ದೆಯ ಸದಾಶಿವ ಮತ್ತು ಸಂದ್ಯಾರವರ ಪುತ್ರಿ ಬಿಂದುಶ್ರೀ ಜಿ.ಎಸ್.ರವರ ಪರವಾಗಿ ಅವರ ತಂದೆ ಸದಾಶಿವರವರನ್ನು ಸನ್ಮಾನಿಸಿ ಗೌರವಿಸಲಾಯಿತು.

“ ಪರ್ಪುಂಜ ಹಾಲು ಉತ್ಪಾದಕರ ಸಂಘವು ಎಲ್ಲಾ ಸದಸ್ಯರ ಸಹಕಾರದೊಂದಿಗೆ ಉತ್ತಮವಾಗಿ ವ್ಯವಹಾರ ನಡೆಸುತ್ತಿದ್ದು ಸಂಘಕ್ಕೆ ಸ್ವಂತ ಕಟ್ಟಡ ನಿರ್ಮಿಸಲು ಜಾಗದ ಅವಶ್ಯಕತೆ ಇದೆ. ಈ ಬಗ್ಗೆ ಹುಡುಕಾಟದಲ್ಲಿದ್ದೇವೆ. ಜಾಗ ಇದ್ದರೆ ಸಂಘದ ಮಾಹಿತಿ ನೀಡಬಹುದು. ಸಹಕರಿಸುತ್ತಿರುವ ಸರ್ವ ಸದಸ್ಯರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇವೆ.”
ಮಿತ್ರದಾಸ ರೈ ಡೆಕ್ಕಳ,
ಅಧ್ಯಕ್ಷರು ಪರ್ಪುಂಜ ಹಾಲು ಉತ್ಪಾದಕರ ಸಹಕಾರ ಸಂಘ

LEAVE A REPLY

Please enter your comment!
Please enter your name here