ಸಂತ ಫಿಲೋಮಿನಾ ಅನುದಾನಿತ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿಗಳ ವಾರ್ಷಿಕ ಸಮ್ಮಿಲನ

0

ಫಿಲೋಮಿನಾ ವಿದ್ಯಾಸಂಸ್ಥೆ ಎಲ್ಲವನ್ನು ಕಳಿಸಿಕೊಟ್ಟಿದೆ- ನಾರಾಯಣ ಕೆ
ಮೌಲ್ಯಧಾರಿತ ಜೀವನಕ್ಕೆ ಪಂಚಾಗ ಹಾಕಿದ ಜಾಗ ಪ್ರೌಢಶಾಲೆ- ವಂ|ಡಾ|ಜೆ.ಬಿ. ಸಲ್ಡಾನ್ಹಾ
ಸಂಘದ ಮೂಲಕ ಶಾಲೆಯ ಋಣ ತೀರಿಸುವ ಕೆಲಸ- ಜಯಕುಮಾರ್ ರೈ ಎಂ.ಆರ್.

ಪುತ್ತೂರು: ಮಾಯ್ ದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿರುವ ಸಂತ ಫಿಲೋಮಿನಾ ಅನುದಾನಿತ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿಗಳ ವಾರ್ಷಿಕ ಸಮ್ಮಿಲನ ಕಾರ್ಯಕ್ರಮ ಜೂ.27ರಂದು ಶಾಲಾ ಸಭಾಂಗಣದಲ್ಲಿ ನಡೆಯಿತು.


ಮುಖ್ಯ ಅತಿಥಿ, ನಿವೃತ್ತ ಮುಖ್ಯಶಿಕ್ಷಕ ಹಾಗೂ ಹಿರಿಯ ವಿದ್ಯಾರ್ಥಿ ನಾರಾಯಣ ಕೆ. ಮಾತನಾಡಿ ಫಿಲೋಮಿನಾ ನಮ್ಮ ವಿದ್ಯಾಸಂಸ್ಥೆ ಎಂಬ ಹೆಮ್ಮೆ ನನಗೆ ಇದೆ. ನಾನು ಶಿಕ್ಷಕನಾಗಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಲು ಪ್ರೇರಣೆಯಾಗಿದ್ದು ಫಿಲೋಮಿನಾ ವಿದ್ಯಾಸಂಸ್ಥೆ. ನಾವು ಗುರುಗಳನ್ನು ದೇವರೆಂದು ಭಾವಿಸಿ ಗೌರವಿಸಬೇಕು. ವಿದ್ಯೆ ಕಳಿಸಿದ ಗುರುಗಳನ್ನು ಯಾವಾಗಲೂ ಮರೆಯಬಾರದು. ನಮಗೆ ಎಲ್ಲವನ್ನು ಕಲಿಸಿಕೊಡುವುದು ನಾವು ಕಲಿತ ವಿದ್ಯಾಸಂಸ್ಥೆಗಳು. ನನಗೂ ಫಿಲೋಮಿನಾ ವಿದ್ಯಾಸಂಸ್ಥೆ ಎಲ್ಲವನ್ನು ಕಳಿಸಿಕೊಟ್ಟಿದೆ. ಈ ಸಂಸ್ಥೆಯನ್ನು ಯಾವತ್ತೂ ಮರೆಯುವುದಿಲ್ಲ. ಉದ್ಯೋಗ ಪಡೆದು ಜೀವನದಲ್ಲಿ ಸಾಧನೆ ಮಾಡಲು ಇಲ್ಲಿನ ವಿದ್ಯಾಸಂಸ್ಥೆ ಕಾರಣವಾಗಿದೆ ಎಂದ ಅವರು ವಿದ್ಯಾರ್ಥಿಗಳು ಎಲ್ಲಾ ವಿಷಯಗಳನ್ನು ಇಷ್ಟ ಪಟ್ಟು ಓದಬೇಕು. ಕಷ್ಟಪಟ್ಟು ಓದಬಾರದು. ನಿಮ್ಮ ಕಲಿಕೆ ಸುಲಲಿತವಾಗಲಿ. ಮುಂದಿನ ಜೀವನ ಒಳ್ಳೆಯದಾಗಲಿ ಎಂದು ಹಾರೈಸಿದರು.

ಮೌಲ್ಯಧಾರಿತ ಜೀವನಕ್ಕೆ ಪಂಚಾಗ ಹಾಕಿದ ಜಾಗ ಪ್ರೌಢಶಾಲೆ- ವಂ|ಡಾ|ಜೆ.ಬಿ. ಸಲ್ಡಾನ್ಹಾ:
ಶಾಲಾ ಸಂಚಾಲಕರಾದ ವಂ|ಡಾ|ಜೆ.ಬಿ. ಸಲ್ಡಾನ್ಹಾರವರು ಮಾತನಾಡಿ ಮೌಲ್ಯಧಾರಿತ ಜೀವನ ಮಾಡಲು ಪಂಚಾಗ ಹಾಕಿದ ಜಾಗ ಪ್ರೌಢಶಾಲೆ. ನಮಗೆ ಕಳಿಸಿದ ಗುರುಗಳು ನಮಗೆ ಆದರ್ಶರಾಗಿರುತ್ತಾರೆ. ನಿಮ್ಮ ಕಾಲದ ಕಥೆಗಳು, ಉದಾಹರಣೆ, ಘಟನೆಗಳ ಸವಿನೆನಪುಗಳನ್ನು ಇಂದಿನ ನಿಮ್ಮ ಮಕ್ಕಳಿಗೆ ತಿಳಿಸಿಕೊಡಬೇಕು. ನೀವು ಈ ಶಾಲೆಯಿಂದ ಏನು ಪಡೆದಿದ್ದಿರೋ ಅದನ್ನು ಮತ್ತೆ ಶಾಲೆಗೆ ಹಿಂತಿರುಗಿಸಬೇಕು. ಇಂದು ಆಂಗ್ಲ ಮಾಧ್ಯಮಗಳ ಹಾವಳಿಯಲ್ಲಿ ಕನ್ನಡವನ್ನು ಉಳಿಸುವ ಕೆಲಸ ಆಗಬೇಕು ಎಂದು ಹೇಳಿ ಸಂಘದ ಚಟುವಟಿಕೆಗಳು ಸಾಂಗವಾಗಿ ನೆರವೇರಲಿ ಎಂದು ಹಾರೈಸಿದರು.

ಸಂಘದ ಮೂಲಕ ಶಾಲೆಯ ಋಣ ತೀರಿಸುವ ಕೆಲಸ- ಜಯಕುಮಾರ್ ರೈ ಎಂ.ಆರ್.:
ಅಧ್ಯಕ್ಷತೆ ವಹಿಸಿದ್ದ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಯಕುಮಾರ್ ರೈ ಎಂ.ಆರ್. ಮಾತನಾಡಿ 40 ವರ್ಷಗಳ ಹಿಂದೆ ಪುತ್ತೂರಿನಲ್ಲಿ ಹೈಸ್ಕೂಲ್ ಇದ್ದದ್ದು ಫಿಲೋಮಿನಾ. ಆಗ ಹಳ್ಳಿಯಿಂದ ಬರುವ ಮಕ್ಕಳಿಗೆ ಫಿಲೋಮಿನಾದಲ್ಲಿ ಸೀಟು ಸಿಗೋದೇ ಕಷ್ಟ. ಅಂತಹ ಕಾಲದಲ್ಲಿ ಫಿಲೋಮಿನಾದಲ್ಲಿ ಸೀಟು ಸಿಕ್ಕಿತೆಂದರೆ ಅದು ವಿಶೇಷವಾಗುತ್ತಿತ್ತು. ಇವತ್ತು ನಾನು ಜೀವನದಲ್ಲಿ ಸಾಧನೆ ಮಾಡಲು ಫಿಲೋಮೀನ ವಿದ್ಯಾಸಂಸ್ಥೆಯೂ ಕಾರಣ ಎಂದರು. ಹಿರಿಯ ವಿದ್ಯಾರ್ಥಿ ಸಂಘದ ಮೂಲಕ ಶಾಲೆಯ ಋಣ ತೀರಿಸುವ ಕೆಲಸ ಆಗುತ್ತದೆ. ನಾವೆಲ್ಲರೂ ಶಾಲೆಯ ಅಭಿವೃದ್ಧಿಯಲ್ಲಿ ಕೈಜೋಡಿಸಿಸೋಣ. ಈಗಿನ ವಿದ್ಯಾರ್ಥಿಗಳು ಕೂಡ ಮುಂದೆ ಈ ಶಾಲೆಯನ್ನು ಮರೆಯಬಾರದು ಎಂದು ಹೇಳಿ ಶುಭ ಹಾರೈಸಿದರು.

ಹಿರಿಯ ವಿದ್ಯಾರ್ಥಿ, ಮುಖ್ಯ ಅತಿಥಿಯಾಗಿದ್ದ ನಿವೃತ್ತ ಶಿಕ್ಷಕರಾದ ನಾರಾಯಣ ಕೆ.ರವರನ್ನು ಶಾಲು ಫಲಪುಷ್ಪ ನೀಡಿ ಸನ್ಮಾನಿಸಲಾಯಿತು. ಸಂಘದ ಉಪಾಧ್ಯಕ್ಷ ಜಾನ್ ಕುಟಿನ್ಹ ಸನ್ಮಾನಿತರ ಪರಿಚಯ ಮಾಡಿದರು. ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಬೆನೆಟ್ ಮೊಂತೆರೊ ಎ. ಸಂಘದ 2025-26ನೇ ಸಾಲಿನ ವಾರ್ಷಿಕ ವರದಿ ವಾಚಿಸಿದರು. ಮುಖ್ಯಶಿಕ್ಷಕ ವಂ| ಮ್ಯಾಕ್ಸಿಮ್ ಎಂ. ಡಿಸೋಜ ಸ್ವಾಗತಿಸಿ ದೈಹಿಕ ಶಿ.ಶಿಕ್ಷಕ ಪೀಟರ್ ನರೇಶ್ ಲೋಬೋ ವಂದಿಸಿದರು. ಶಿಕ್ಷಕ ರೋಷನ್ ಸಿಕ್ವೆರಾ ಕಾರ್ಯಕ್ರಮ ನಿರೂಪಿಸಿದರು. ಹಿರಿಯ ವಿದ್ಯಾರ್ಥಿ ಸಂಘದ ಸದಸ್ಯರು ಉಪಸ್ಥಿತರಿದ್ದರು.

ಸಂಘದ ಅಧ್ಯಕ್ಷರಿಂದ 1 ಲಕ್ಷ ರೂ. ದತ್ತಿನಿಧಿ
ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಯಕುಮಾರ್ ರೈ ಎಂ.ಆರ್.ರವರು ಶಾಲೆಗೆ ದತ್ತಿನಿಧಿಯಾಗಿ 1 ಲಕ್ಷ ರೂ. ದೇಣಿಗೆ ನೀಡಿದರು. ಇದರ ಚೆಕ್‌ನ್ನು ಶಾಲಾ ಸಂಚಾಲಕರಾದ ವಂ|ಡಾ|ಜೆ.ಬಿ. ಸಲ್ಡಾನ್ಹಾರವರಿಗೆ ಹಸ್ತಾಂತರಿಸಿದರು.

ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನೆ
2024-25 ಹಾಗೂ 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸಂಘದ ವತಿಯಿಂದ ಅಭಿನಂದಿಸಲಾಯಿತು.

LEAVE A REPLY

Please enter your comment!
Please enter your name here