






ವಿಟ್ಲ: ವಿಟ್ಲ-ಸಾಲೆತ್ತೂರು ರಸ್ತೆಯ ಕೊಡಂಗಾಯಿ ಕಾಪುಮಜಲು ಎಂಬಲ್ಲಿ ಜೂ.28ರಂದು ಬೆಳಿಗ್ಗೆ ಎರ್ಟಿಗಾ ಕಾರು ಹಾಗೂ ಹೋಂಡಾ ಡಿಯೋ ಸ್ಕೂಟರ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಸ್ಕೂಟರ್ ಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ.



ಸಾಲೆತ್ತೂರು ಕಡೆಗೆ ಚಲಿಸುತ್ತಿದ್ದ ಎರ್ಟಿಗಾ ಕಾರು ಹಾಗೂ ಎದುರಿನಿಂದ ಬರುತ್ತಿದ್ದ ಹೋಂಡಾ ಡಿಯೋ ಸ್ಕೂಟರ್‌ಗೆ ಮಧ್ಯೆ ಈ ಅಪಘಾತ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಕಾರು ರಸ್ತೆ ಬದಿಯ ಚರಂಡಿಗೆ ಇಳಿದು ನಿಂತಿದೆ.
ಅಪಘಾತದ ತೀವ್ರತೆಗೆ ಹೋಂಡಾ ಡಿಯೋ ಸ್ಕೂಟರ್ ಸಂಪೂರ್ಣವಾಗಿ ಜಖಂಗೊಂಡಿದ್ದು, ಸವಾರನಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಅಪಘಾತ ನಡೆದ ತಕ್ಷಣ ಸ್ಥಳೀಯರು ಧಾವಿಸಿ ಬಂದು, ಗಾಯಾಳುವನ್ನು ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸಿದ್ದಾರೆ. ಗಾಯಗೊಂಡ ಸವಾರ ಮುಡಿಪು ಕಡೆಯವರೆಂದು ತಿಳಿದುಬಂದಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದುಬರಬೇಕಿದೆ.












