







ಉಪ್ಪಿನಂಗಡಿ: ಇಲ್ಲಿನ ಗ್ರಾಮ ಪಂಚಾಯತ್ ಸ್ವಾಮ್ಯದ ವಾಣಿಜ್ಯ ಮಳಿಗೆಗಳ ಪೈಕಿ ಏಲಂ ಮೊತ್ತ ಪಾವತಿಸದ ಐದು ಅಂಗಡಿಗಳಿಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು ಆದಿತ್ಯವಾರದಂದು ಮುಂಜಾನೆ ಕಾರ್ಯಾಚರಣೆ ನಡೆಸಿ ಬೀಗ ಜಡಿದಿದ್ದಾರೆ.


ಅಂಗಡಿ ಕೊಠಡಿಗಳನ್ನು ಅನುಭೋಗಕ್ಕಾಗಿ ಪಡೆದು ಅದಕ್ಕೆ ಪಾವತಿಸಬೇಕಾಗಿದ್ದ ಏಲಂ ಬಿಡ್ ಮೊತ್ತದ ಬಾಕಿ ಕಂತನ್ನು ಪಾವತಿಸದೆ ಪಂಚಾಯತ್ ಆಡಳಿತಕ್ಕೆ ಸುಮಾರು 10 ಲಕ್ಷದಷ್ಟು ಬಾಕಿ ಇರಿಸಲಾಗಿದ್ದ 5 ಅಂಗಡಿಗಳು ಬೀಗ ಮುದ್ರೆಗೆ ಒಳಗಾಗಿದೆ. ಈ ಹಿಂದೆ ಇದೇ ಕಾರಣಕ್ಕಾಗಿ ಹಲವು ಅಂಗಡಿಗಳು ಬೀಗ ಮುದ್ರೆಗೆ ಒಳಗಾಗಿದ್ದು, ಬಳಿಕ ಬಹುತೇಕ ಅಂಗಡಿಗಳ ಅನುಭೋಗದಾರರು ಬಾಕಿ ಮೊತ್ತವನ್ನು ಪಾವತಿಸಿ ಬೀಗ ತೆರೆಯಿಸಿಕೊಂಡಿದ್ದರು. ಅವುಗಳ ಪೈಕಿ ಸಮಯಾವಕಾಶ ಬಯಸಿ ಬೀಗ ತೆರೆಯಿಸಿಕೊಂಡಿದ್ದ 5 ಅಂಗಡಿಗಳ ಅನುಭೋಗದಾರರು, ನೀಡಲಾದ ಸಮಯಾವಕಾಶವನ್ನು ದುರುಪಯೋಗಪಡಿಸಿಕೊಂಡಿದ್ದು, ಬಾಕಿ ಮೊತ್ತವನ್ನು ಪಾವತಿಸಿರಲಿಲ್ಲ. ಅನಿವಾರ್ಯವಾಗಿ ಆ ಅಂಗಡಿ ಕೊಠಡಿಗಳಿಗೆ ಬೀಗ ಜಡಿಯುವ ಕಾರ್ಯಾಚರಣೆ ಮಾಡಬೇಕಾಯಿತು ಎಂದು ಪಂಚಾಯತ್ ಪಿಡಿಒ ವಿಲ್ಪ್ರೆಡ್ ಲಾರೆನ್ಸ್ ರೋಡ್ರಿಗಸ್ ತಿಳಿಸಿದ್ದಾರೆ.













