ಉಪ್ಪಿನಂಗಡಿ: ಕುಖ್ಯಾತ ಅಂತರಾಜ್ಯ ಖದೀಮನ ಬಂಧನ

0

ಉಪ್ಪಿನಂಗಡಿ: ಬೆಂಗಳೂರು, ದ.ಕ. ಜಿಲ್ಲೆ ಹಾಗೂ ಕೇರಳ ಸೇರಿದಂತೆ ಒಟ್ಟು 11 ಕಳ್ಳತನ ಪ್ರಕರಣದಲ್ಲಿ ಭಾಗಿಯಾದ ಕುಖ್ಯಾತ ಅಂತರಾಜ್ಯ ಖದೀಮನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.


ತಮಿಳುನಾಡುವಿನ ಕೊಯಮುತ್ತೂರು ನಿವಾಸಿ ಜಯಕುಮಾರ್ (55) ಬಂಧಿತ ಆರೋಪಿ. ಜು.8ರಂದು ಈತನನ್ನು ಬಂಧಿಸಿದ ಪೊಲೀಸ್ ತಂಡ ಆರೋಪಿಯ ಬಳಿಯಿಂದ ಕಬ್ಬಿಣದ ಸಲಾಕೆ, ಸ್ಕ್ರೂ ಡ್ರೈವರ್, ಬ್ಯಾಗ್ ಹಾಗೂ 2 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದೆ. ಕಳೆದ ಮೇ ತಿಂಗಳಿನಲ್ಲಿ ಉಪ್ಪಿನಂಗಡಿ ಹಾಗೂ ಬೆಳ್ತಂಗಡಿಯಲ್ಲಿ ನಡೆದ ಸರಣಿ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಈತನ ವಿರುದ್ಧ ಈಗಾಗಲೇ ಬೆಳ್ತಂಗಡಿ ಠಾಣೆಯಲ್ಲಿ ಅ.ಕ್ರ 58/2026, ಅ.ಕ್ರ 59/2026 ಹಾಗೂ ಅ.ಕ್ರ 64/2026, ಹಾಗೂ ಉಪ್ಪಿನಂಗಡಿ ಠಾಣೆಯಲ್ಲಿ ಅಕ್ರ:78/2026 ಹಾಗೂ ಅಕ್ರ:79/2026 ರಂತೆ ಪ್ರಕರಣಗಳು ದಾಖಲಾಗಿರುತ್ತದೆ. ಈತನ ಮೇಲೆ ದ.ಕ ಜಿಲ್ಲಾ ಪೊಲೀಸ್ ವ್ಯಾಪಿಯಲ್ಲಿ 05 ಪ್ರಕರಣಗಳು, ಮಂಗಳೂರಿನ ಸುರತ್ಕಲ್ ಠಾಣಾ ವ್ಯಾಪ್ತಿಯಲ್ಲಿ 01 ಪ್ರಕರಣ, ಕೇರಳ ರಾಜ್ಯದ 04 ಪೊಲೀಸ್ ಠಾಣೆಗಳಲ್ಲಿ ತಲಾ 1 ಪ್ರಕರಣಗಳು ಹಾಗೂ ಬೆಂಗಳೂರಿನಲ್ಲಿ 1 ಪ್ರಕರಣ ದಾಖಲಾಗಿರುವುದಾಗಿ ಈತ ವಿಚಾರಣೆಯ ವೇಳೆ ಬಾಯ್ಬಿಟ್ಟಿದ್ದಾನೆ.

ಈತ ಕಳೆದ ಮೇ 15ರಂದು ಉಪ್ಪಿನಂಗಡಿಯಲ್ಲಿ ನಡೆದ ಸರಣಿ ಕಳ್ಳತನ ಪ್ರಕರಣದ ಆರೋಪಿಯಾಗಿದ್ದು, ಅಂದು ಪೇಟೆಯ ಹೃದಯ ಭಾಗದಲ್ಲಿರುವ ಖ್ಯಾತ ಮಕ್ಕಳ ತಜ್ಞ ಡಾ. ಎಂ.ಎನ್. ಭಟ್ ಅವರ ಕ್ಲಿನಿಕ್‌ನ ಬೀಗ ಮುರಿದು 55 ಸಾವಿರ ರೂ., ಇದರ ಎದುರುಭಾಗದಲ್ಲಿರುವ ನೋಟರಿ ವಕೀಲ ಅರವಿಂದ ಭಂಡಾರಿ ಅವರ ಕಚೇರಿಯ ಬೀಗ ಮುರಿದು 16,5೦೦ ರೂ. ಹಣವನ್ನು ಕಳವು ಗೈದ ಪ್ರಕರಣದಲ್ಲಿ ಈತ ಆರೋಪಿಯಾಗಿದ್ದಾನೆ. ಅಂದು ಅದೇ ಕಟ್ಟಡದಲ್ಲಿರುವ ಡಾ. ರಾಜಾರಾಮ ಕೆ.ಬಿ. ಅವರ ದಂತ ಚಿಕಿತ್ಸಾಲಯಕ್ಕೂ ನುಗ್ಗಿ ವೈದ್ಯರ ಟೇಬಲ್‌ನ ಡ್ರಾಯರ್ ಅನ್ನು ಮುರಿದು ದಾಖಲೆಗಳನ್ನು ಚೆಲ್ಲಾಪಿಲ್ಲಿಗೊಳಿಸಿದ್ದ. ಅಲ್ಲದೇ, ಅಲ್ಲೇ ಸಮೀಪದಲ್ಲಿರುವ ಡಾ. ಗೋವಿಂದ ಪ್ರಸಾದ್ ಕಜೆಯವರ ಕ್ಲಿನಿಕ್‌ನ ಒಂದು ಬೀಗವನ್ನು ಮುರಿದು ಇನ್ನೊಂದು ಬೀಗವನ್ನು ತೆಗೆಯಲು ಸಾಧ್ಯವಾಗದೆ ಅಲ್ಲಿಂದ ತೆರಳಿದ್ದ. ಬೆಳ್ತಂಗಡಿ ಹಾಗೂ ಕಡಬ ತಾಲೂಕಿನಲ್ಲಿ ನಡೆದ ಸರಣಿ ಕಳ್ಳತನ ಪ್ರಕರಣದಲ್ಲೂ ಈತ ಭಾಗಿಯಾಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.


ಆರೋಪಿಯ ಪತ್ತೆ ಕಾರ್ಯದ ತಂಡದಲ್ಲಿ ಬೆಳ್ತಂಗಡಿ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ರವಿ ಬಿ.ಎಸ್, ಉಪ್ಪಿನಂಗಡಿ ಠಾಣಾ ಪೊಲೀಸ್ ಉಪನಿರೀಕ್ಷಕ ನಾಗರಾಜ್ ಅವರ ನೇತೃತ್ವದಲ್ಲಿ ನಡೆದ ಆರೋಪಿಯ ಪತ್ತೆ ಕಾರ್ಯದಲ್ಲಿ ಪೊಲೀಸ್ ಉಪನಿರೀಕ್ಷಕರಾದ ಆನಂದ ಎಂ, ಸಿಖಂದರ್ ಪಾಷಾ, ಸುತೇಶ್ ಕೆ.ಪಿ, ಬೆಳ್ತಂಗಡಿ ಪೊಲೀಸ್ ಠಾಣಾ ಅಪರಾಧ ಪತ್ತೆ ದಳದ ಸಿಬ್ಬಂದಿಗಳಾದ ಪಂಪಾಪತಿ, ಗಿರೀಶ್, ಹೇಮರಾಜ್ ಹೆಚ್. ಪಿ, ಕಡಬ ಪೊಲೀಸ್ ಠಾಣಾ ಹರ್ಷಿತ್, ಪ್ರಕಾಶ್, ಸಿಡಿಆರ್ ವಿಭಾಗದ ಸಂಪತ್, ದಿವಾಕರ್ ಇದ್ದರು.

LEAVE A REPLY

Please enter your comment!
Please enter your name here