






ರಾಮಕುಂಜ: ಇಲ್ಲಿನ ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲೆಯ ಕಾರ್ಯದರ್ಶಿ, ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಕೋಶಾಧಿಕಾರಿಯೂ ಆಗಿರುವ ರಾಮಕುಂಜ ಗ್ರಾಮದ ಬಾಂತೊಟ್ಟು ನಿವಾಸಿ ಕೆ.ಸೇಸಪ್ಪ ರೈ ಹಾಗೂ ಪುಷ್ಪಾ ಎಸ್.ರೈ ದಂಪತಿಯ ಸುವರ್ಣ ವಿವಾಹ ಸಂಭ್ರಮ ಜು.15ರಂದು ರಾಮಕುಂಜ ಶ್ರೀ ರಾಮಕುಂಜೇಶ್ವರ ವಸತಿ ಶಾಲೆಯಲ್ಲಿ ನಡೆಯಲಿದೆ ಎಂದು ಕೆ.ಸೇಸಪ್ಪ ರೈ ಹಾಗೂ ಪುಷ್ಪಾ ಎಸ್.ರೈ ದಂಪತಿಯ ಕಿರಿಯ ಪುತ್ರಿ ಡಾ.ಸುಪ್ರಿತಾ ನಿರಂಜನ್ ರೈ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.



ಸೇಸಪ್ಪ ರೈ ಹಾಗೂ ಪುಷ್ಪಾ ಎಸ್.ರೈ ಅವರ ವಿವಾಹ ಜುಲೈ 14, 1976ರಂದು ನಡೆದಿತ್ತು. ವಿವಾಹದ ಮರುದಿನ ಅಂದರೆ ಜುಲೈ 15ರಂದು ಶ್ರೀ ರಾಮಕುಂಜೇಶ್ವರ ಶಾಲೆಯಲ್ಲಿ ಅತಿಥಿ ಸತ್ಕಾರ ನಡೆದಿತ್ತು. ಹಾಗಾಗಿ ವಿವಾಹದ ಸುವರ್ಣ ಮಹೋತ್ಸವವನ್ನು ಜು.15ರಂದು ಅದೇ ಜಾಗದಲ್ಲಿ ಮಕ್ಕಳು, ಕುಟುಂಬಸ್ಥರು, ಹಿತೈಷಿಗಳು ಆಯೋಜಿಸಿದ್ದೇವೆ. ಆ ದಿನ ಬೆಳಗ್ಗೆ 9 ಗಂಟೆಯಿಂದ ಸಂಜೆ 5ರ ತನಕ ಕಾರ್ಯಕ್ರಮಗಳು ನಡೆಯಲಿದ್ದು, ಎಲ್ಲರೂ ಕುಟುಂಬ ಸಮೇತರಾಗಿ ಆಗಮಿಸಿ ಹಾರೈಸುವಂತೆ ಡಾ.ಸುಪ್ರೀತಾನಿರಂಜನ್ ರೈ ಹೇಳಿದರು.



ಕೆ.ಸೇಸಪ್ಪ ರೈ-ಪುಷ್ಪಾ ಎಸ್.ರೈ ಅವರ ಅಳಿಯ, ಉಪ್ಪಿನಂಗಡಿ ಧನ್ವಂತರಿ ಆಸ್ಪತ್ರೆಯ ವೈದ್ಯ ಡಾ.ನಿರಂಜನ್ ರೈ ಅವರು ಮಾತನಾಡಿ, ಸೇಸಪ್ಪ ರೈ-ಪುಷ್ಪಾ ಎಸ್.ರೈ ಅವರ ಸುವರ್ಣ ವಿವಾಹ ಸಂಭ್ರಮವನ್ನು ರಾಮಕುಂಜದಲ್ಲಿ ಸಣ್ಣಮಟ್ಟಿಗೆ ಆಯೋಜಿಸಲು ಆರಂಭದಲ್ಲಿ ನಿರ್ಧರಿಸಿದ್ದೇವು. ಈ ಸಂದರ್ಭದಲ್ಲಿ ನಮ್ಮೊಂದಿಗೆ ಕೇಶವ ಅಮೈ ಅವರೂ ಸೇರಿಕೊಂಡು, ಅವರ ಸ್ಪೂರ್ತಿ ಹಾಗೂ ಹುಮ್ಮಸ್ಸಿನಿಂದ ಸುವರ್ಣ ವಿವಾಹ ಸಂಭ್ರಮದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕೆಂಬ ನಿಟ್ಟಿನಲ್ಲಿ ದೊಡ್ಡಮಟ್ಟದಲ್ಲಿ ಕಾರ್ಯಕ್ರಮ ಆಯೋಜಿಸಿದ್ದೇವೆ ಎಂದು ಹೇಳಿದರು.
ಸಾಂಸ್ಕೃತಿಕ ಕಾರ್ಯಕ್ರಮ;
ಸೇಸಪ್ಪ ರೈಗಳ ಹಿತೈಷಿಯಾದ ಎಸ್ಆರ್ಕೆ ಲ್ಯಾಡರ್ಸ್ನ ಮಾಲಕ ಕೇಶವ ಅಮೈ ಅವರು ಸುವರ್ಣ ವಿವಾಹ ಸಂಭ್ರಮ ಕಾರ್ಯಕ್ರಮದ ಕುರಿತು ಮಾತನಾಡಿ, ಸೇಸಪ್ಪ ರೈ ಅವರು 38ವರ್ಷ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆ ಸಲ್ಲಿಸಿ 2005ರಲ್ಲಿ ಸೇವಾನಿವೃತ್ತಿಯಾದರೂ ಈಗಲೂ ಶಿಕ್ಷಣಕ್ಕೆ ತಮ್ಮ ಜೀವನ ಮುಡಿಪಾಗಿಟ್ಟಿದ್ದಾರೆ. 80ರ ಹರೆಯದಲ್ಲೂ ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿದ್ದಾರೆ. ಗ್ರಾಮೀಣ ಪ್ರದೇಶದ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ನೀಡಬೇಕೆಂಬ ಹಂಬಲದೊಂದಿಗೆ ಕೆ.ಸೇಸಪ್ಪ ರೈ ಅವರ ನೇತೃತ್ವದಲ್ಲಿ 9 ಮಕ್ಕಳೊಂದಿಗೆ ಆರಂಭಗೊಂಡ ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲೆಯಲ್ಲಿ ಈಗ 1300ಕ್ಕೂ ಹೆಚ್ಚು ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಇದರ ಜೊತೆಗೆ ಕನ್ನಡ ಸಾಹಿತ್ಯ ಪರಿಷತ್ನ ಕಡಬ ತಾಲೂಕು ಘಟಕದ ಅಧ್ಯಕ್ಷರಾಗಿ, ಕಡಬ ತಾಲೂಕು ಕಡೀರ ತುಳು ಸಮ್ಮೇಳನದ ಸಮ್ಮೇಳನಾಧ್ಯಕ್ಷರೂ ಆಗಿದ್ದಾರೆ. ಅವರೊಬ್ಬ ಅದ್ಬುತ ಶಕ್ತಿ. ಅವರ ವಿವಾಹ ಸುವರ್ಣ ಮಹೋತ್ಸವವನ್ನು ಅದ್ದೂರಿಯಾಗಿ ಆಯೋಜಿಸುವ ನಿಟ್ಟಿನಲ್ಲಿ ಅವರ ಮನೆಯವರ ಜೊತೆ ಹಿತೈಷಿ ಬಳಗವೂ ಕೈಜೋಡಿಸಿದೆ ಎಂದರು.
ಜು.15ರಂದು ನಡೆಯುವ ಸುವರ್ಣ ವಿವಾಹ ಸಂಭ್ರಮ ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದರು ಹಾಗೂ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ. ಬೆಳಗ್ಗೆ 9ರಿಂದ ಸಂಜೆ 5ರ ತನಕ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹಾಸ್ಯ, ನೃತ್ಯ, ಸಂಗೀತ ಚುರುಮುರಿ, ಶೋಭಾನೆ ಹಾಡುಗಳು, ಜಾನಪದ ಗೀತೆಗಳು, ಆಳ್ವಾಸ್ ಕನ್ನಡ ಗಾನಗುಚ್ಚ, ಕೇರಳ ಹಾಗೂ ಕರ್ನಾಟಕದ ಪ್ರಸಿದ್ಧ ಗಾಯಕರಿಂದ ಕನ್ನಡ, ಹಿಂದಿ, ತುಳು ಗೀತೆಗಳು ವೈವಿಧ್ಯಮಯ ಸಂಗೀತ ರಸದೌತಣ ಹಾಗೂ ಖ್ಯಾತ ತಾರೆಗಳ ಸಮಾಗಮ, ರಾಷ್ಟ್ರೀಯ ಮತ್ತು ಅಂತರ್ರಾಷ್ಟ್ರೀಯ ವೇದಿಕೆಗಳಲ್ಲಿ ಪ್ರದರ್ಶನ ನೀಡಿರುವ ಟೀಂ ಕ್ಲಾನ್ ಮಂಗಳೂರು ತಂಡ, ಜ್ಞಾನ ಐತಾಳ್ ಮತ್ತು ತಂಡದವರಿಂದ ನೃತ್ಯ ಸಂಭ್ರಮ, ಸೌಮ್ಯ ಬೆಂಗಳೂರು ಮತ್ತು ತಂಡದಿಂದ ಕಥಕ್ ಮತ್ತು ತೈಯ್ಯಂ ನೃತ್ಯ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಕೇಶವ ಅಮೈ ಹೇಳಿದರು.
ಪ್ರಶಾಂತ್ ರೈ ಜಿ.ಮನವಳಿಕೆ, ಚೆನ್ನಕೇಶವ ರೈ ಗುತ್ತುಪಾಲು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಮಕ್ಕಳೊಂದಿಗೆ ಬೆರೆಯುವ ಯೋಗ ಸಿಕ್ಕಿದೆ; ಕೆ.ಸೇಸಪ್ಪ ರೈ
ಕೆ.ಸೇಸಪ್ಪ ರೈ ಅವರು ಮಾತನಾಡಿ, ನನಗೆ 1967ನೇ ಇಸವಿಯಿಂದ ಮಕ್ಕಳೊಂದಿಗೆ ಬೆರೆಯುವ ಯೋಗ ಸಿಕ್ಕಿದೆ. ಶಿಕ್ಷಣ ಇಲಾಖೆಯಲ್ಲಿನ ಸೇವೆಯಿಂದ ಒಳ್ಳೆಯ ಗುಣಗಳು ಬಂದಿವೆ. ಈಗ 80 ವರ್ಷವಾದರೂ ಈಗಲೂ ಶಾಲೆಯಲ್ಲಿ ಪ್ರತಿದಿನವೂ ಮಕ್ಕಳೊಂದಿಗೆ ಬೆರೆಯುತ್ತಿದ್ದೇನೆ. ಇಬ್ಬರು ಪುತ್ರಿಯರು, ಅಳಿಯಂದಿರು, ಮೊಮ್ಮಕ್ಕಳೊಂದಿಗೆ ಸುಖಿಸಂಸಾರ ಮಾಡುತ್ತಿದ್ದೇನೆ. ಒಡಹುಟ್ಟಿದ ಆರು ಮಂದಿ ಸಹೋದರಿಯರು, ಓರ್ವ ಸಹೋದರನ ಯೋಗಕ್ಷೇಮವನ್ನೂ ನೋಡಿದ್ದು ಈಗ ಅವರೆಲ್ಲರೂ ದೇವರ ದಯೆಯಿಂದ ಅತ್ಯುತ್ತಮ ಸ್ಥಿತಿಯಲ್ಲಿ, ಆರೋಗ್ಯವಂತರಾಗಿ ಬದುಕುತ್ತಿದ್ದಾರೆ. ನನ್ನ ಸುವರ್ಣ ವಿವಾಹ ಸಂಭ್ರಮವನ್ನು ಶಾಲೆಯಲ್ಲಿ ಮಕ್ಕಳು, ಸಿಬ್ಬಂದಿಗಳು, ಕುಟುಂಬಸ್ಥರೊಂದಿಗೆ ಸಣ್ಣಮಟ್ಟಿನಲ್ಲಿ ಆಯೋಜಿಸಲು ನಿರ್ಧರಿಸಿದ್ದೆ. ಆದರೆ ಮಕ್ಕಳು, ಅಳಿಯಂದಿರು ದೊಡ್ಡ ಮಟ್ಟದಲ್ಲಿ ಆಯೋಜಿಸಲು ಮುಂದಾಗಿದ್ದರು. ಇದಕ್ಕೆ ಕೇಶವ ಅಮೈ ಅವರು ಕೈಜೋಡಿಸಿ, ಚಿತ್ರಣವನ್ನೇ ಬದಲಾಯಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಸುಮಾರು 5 ಸಾವಿರ ಜನ ಬಂದು ಅನ್ನಪ್ರಸಾದ ಸ್ವೀಕರಿಸಿ, ಕಾರ್ಯಕ್ರಮ ವೀಕ್ಷಿಸಿದಲ್ಲಿ ನನ್ನ 80 ವರ್ಷದ ಜೀವನ ಸಾರ್ಥಕವಾಗುತ್ತದೆ ಎಂದು ಸೇಸಪ್ಪ ರೈ ಹೇಳಿದರು.
ಜು.13: ಸಹಸ್ರಚಂದ್ರ ದರ್ಶನ ಶಾಂತಿ ಹೋಮ;
ಸೇಸಪ್ಪ ರೈ ಅವರಿಗೆ 80ವರ್ಷ ತುಂಬಿದ ಸಲುವಾಗಿ ಸಹಸ್ರಚಂದ್ರ ದರ್ಶನ ಶಾಂತಿ ಹೋಮ ಹಾಗೂ ಪುಷ್ಪಾ ಎಸ್.ರೈ ಅವರಿಗೆ 70ವರ್ಷ ತುಂಬಿದ ಧ್ಯೋತಕವಾಗಿ ಭೀಮರಥ ಶಾಂತಿ ಹೋಮ ಜು.13ರಂದು
ಶ್ರೀ ರಾಮಕುಂಜೇಶ್ವರ ದೇವಸ್ಥಾನದಲ್ಲಿ ನಡೆಯಲಿದೆ. ಈ ದಿನ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಭಾಗವಹಿಸಿ ಆಶೀರ್ವಾದ ನೀಡಲಿದ್ದಾರೆ ಎಂದು ಡಾ.ಸುಪ್ರೀತಾನಿರಂಜನ್ ರೈ ಹೇಳಿದರು.










