ಅಭಿವೃದ್ಧಿ ಕಾಣದ ಕೂಟೇಲು ಕುಕ್ಕುಪುಣಿ ರಸ್ತೆ

0

ವಾಹನ ಸವಾರರಿಗೆ ನರಕಯಾತನೆ,ತಕ್ಷಣ ಅಭಿವೃದ್ಧಿಗೊಳಿಸಲು ಸಾರ್ವಜನಿಕರ ಒತ್ತಾಯ

ನಿಡ್ಪಳ್ಳಿ; ಇತ್ತೀಚಿನ ದಿನಗಳಲ್ಲಿ ಅದೆಷ್ಟೋ ರಸ್ತೆಗಳು ದುರಸ್ತಿ, ಅಭಿವೃದ್ಧಿ ಆಗುತ್ತಿರುವುದನ್ನು ನಾವು ಕಾಣುತ್ತಿದ್ದೇವೆ.ಆದರೆ ಕೆಲವು ಗ್ರಾಮೀಣ ಪ್ರದೇಶದಲ್ಲಿ ಹಾದು ಹೋಗುವ ಲೋಕೋಪಯೋಗಿ ರಸ್ತೆಗಳು  ಅಭಿವೃದ್ಧಿ ಆಗದೆ ಸಾರ್ವಜನಿಕರು ಸಂಚರಿಸಲು ನರಕ ಯಾತನೆ ಪಡುವುದು ನಿಂತಿಲ್ಲ. ಅಂತಹ ನರಕ ಯಾತನೆ ಪಡುವ ರಸ್ತೆ ನಿಡ್ಪಳ್ಳಿ ಗ್ರಾಮದಲ್ಲಿ ಇದೆ. 

 ರೆಂಜದಿಂದ ನಿಡ್ಪಳ್ಳಿ ಮೂಲಕ ಸುಳ್ಯಪದವು ಹೋಗುವ ಲೋಕೋಪಯೋಗಿ ಇಲಾಖೆಯ ರಸ್ತೆಯ ಕೂಟೇಲಿನಿಂದ ಕುಕ್ಕುಪುಣಿವರೆಗಿನ ಸುಮಾರು ಒಂದು ಕಿ.ಲೋ ಮೀಟರ್ ರಸ್ತೆ ಅಭಿವೃದ್ಧಿ ಯಾಗದೆ ಉಳಿದಿದ್ದು ವಾಹನ ಸವಾರರು ದಿನ ನಿತ್ಯ ನರಕಯಾತನೆ ಪಡುತ್ತಿದ್ದಾರೆ.ಒಂದು ಕಿ.ಲೋ ಮೀಟರ್ ಉದ್ದ ರಸ್ತೆಯ ಬದಿ ಒಂದು ವರ್ಷದ ಹಿಂದೆ  ಸ್ವಲ್ಪ ಅಗಲಗೊಳಿಸಿದ್ದು ಬಿಟ್ಟರೆ ಡಾಮರ್ ಮಾತ್ರ ಆಗಿಲ್ಲ.ನೀರು ಹೋಗಲು ಸರಿಯಾದ ಚರಂಡಿಗಳು ಇಲ್ಲದೆ ನೀರು ರಸ್ತೆಯಲ್ಲೇ ಹರಿಯುತ್ತಿದೆ.ಕೆಲವು ಜಾಗದಲ್ಲಿ ರಸ್ತೆ ಬದಿ ಮರ ಇದ್ದುದರಿಂದ ಅಲ್ಲಿ ಸಂಚರಿಸಲು ಕಷ್ಟವಾಗುತ್ತಿದೆ.

ಅಪಾಯಕಾರಿ ತಿರುವಿನಲ್ಲಿ ಬಾಕಿಯಾಗುತ್ತಿರುವ ಘನ ವಾಹನಗಳು;
 ರಸ್ತೆಯಲ್ಲಿ ಚಡವು ಮತ್ತು ತಿರುವುಗಳು ಇರುವುದರಿಂದ ಘನ ಗಾತ್ರದ ವಾಹನಗಳು ಚಲಿಸಲಾಗದೆ ಬಾಕಿಯಾಗುವುದು ಮಾಮೂಲಿಯಾಗಿದೆ.ರಸ್ತೆಯಲ್ಲಿ ಎರಡು ತಿರುವುಗಳು ಮಾತ್ರ ಅಪಾಯಕಾರಿಯಾದ ಸ್ಥಿತಿಯಲ್ಲಿ ಇದೆ.ಈ ತಿರುವಿನಲ್ಲಿ ಪ್ರತಿ ದಿನ ಕೆ.ಎಸ್.ಅರ್.ಟಿ.ಸಿ ಬಸ್ಸು ಹತ್ತದೆ ಕುಕ್ಕುಪುಣಿ ಎಂಬಲ್ಲಿ ಬಾಕಿಯಾಗುವುದು ಮಾಮೂಲಿಯಾಗಿದೆ. ಶಾಲಾ ವಿದ್ಯಾರ್ಥಿಗಳು ಜಾಸ್ತಿ ಇರುವ ಬಸ್ಸು ಹೆಚ್ಚಾಗಿ ಇಲ್ಲಿ ಬಾಕಿಯಾಗುತ್ತಿದ್ದು ಪ್ರಯಾಣಿಕರು ಅಲ್ಲಿ ಇಳಿದು ನಡೆದುಕೊಂಡು ಹೋಗುವುದು ನರಕ ಯಾತನೆ ಪಡುವಂತಾಗಿದೆ.ಅಲ್ಲದೆ ಇತರ ಘನ ಗಾತ್ರದ ವಾಹನಗಳೂ ಕೂಡ ಇಲ್ಲಿ ಹತ್ತದೆ ಬಾಕಿಯಾಗಿ ಪಲ್ಟಿಯಾದ ಘಟನೆಯೂ ನಡೆದಿದೆ. ರಸ್ತೆ ಅಭಿವೃದ್ಧಿ ಗೊಳಿಸುವಾಗ  ಈ ತಿರುವುಗಳನ್ನು ಆದಷ್ಟೂ ನೇರ ರಸ್ತೆಯಾಗಿ ಪರಿವರ್ತಿಸಿದರೆ ಮಾತ್ರ ಅಲ್ಲಿ ಆಗುತ್ತಿರುವ ಸಮಸ್ಯೆ ಪರಿಹಾರವಾಗಬಹುದು.

ಒಂದು ಕಿ.ಲೋ ಮೀಟರ್ ಉದ್ದ ಕಿರಿದಾದ ರಸ್ತೆ;
ಕೂಟೇಲಿನಿಂದ ಕುಕ್ಕುಪುಣಿವರೆಗಿನ ರಸ್ತೆ ಬಹಳ ಕಿರಿದಾಗಿದೆ. ಇದರಿಂದ ಎರಡು ಘನ ವಾಹನಗಳು ಎದುರಾದರೆ ಸೈಡ್ ಕೊಡಲು ಬಹಳ ಸಮಸ್ಯೆಯಾಗಿದೆ. ಡಾಮರಿನಿಂದ ಇಳಿಸಿದರೆ ಹೂತು ಹೋಗುವ ಪರಿಸ್ಥಿತಿ ಹೆಚ್ಚಾಗಿದೆ. ಈ ರಸ್ತೆ ಬಹಳ ಕ್ಲಿಷ್ಟಕರವಾದ ಪರಿಸ್ಥಿತಿಯಲ್ಲಿ ಇದ್ದು ಅಗಲಗೊಳಿಸಿ ಅಭಿವೃದ್ಧಿಗೊಳಿಸಿದರೆ ಮಾತ್ರ ವಾಹನ ಸವಾರರಿಗೆ ಸಲೀಸಾಗಿ ಸಂಚರಿಸ ಬಹುದು. ಇಲ್ಲದಿದ್ದರೆ ಇಲ್ಲಿ ಅಪಾಯ ಕಟ್ಟಿಟ ಬುತ್ತಿ.

ತಕ್ಷಣ ಅಭಿವೃದ್ಧಿಗೊಳಿಸಲಿ;
ಎಲ್ಲಾ ಕಡೆ ರಸ್ತೆ ಅಭಿವೃದ್ಧಿ ಆಗುತ್ತಿದೆ. ಆದರೆ ಈ ಒಂದು ಕಿ.ಲೋ.ಮೀಟರ್ ಉದ್ದ ರಸ್ತೆ ಅಭಿವೃದ್ಧಿಗೆ ಯಾಕೆ ಮೀನಾಮೇಷ ಎಣಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ. ಒಂದು ವರ್ಷದ ಹಿಂದೆ ಈ ರಸ್ತೆಗೆ ರೂಪಾಯಿ ಒಂದು ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದು ಶಾಸಕರು ಹೇಳಿದ್ದರು. ಆದರೆ ರಸ್ತೆ ಮಾತ್ರ ಹಾಗೆಯೇ ಇದೆ. ಇನ್ನಾದರೂ ಇದರ ಬಗ್ಗೆ ಸಂಬಂಧ ಪಟ್ಟವರು ಕ್ರಮ ಕೈಗೊಂಡು ಅಭಿವೃದ್ಧಿ ಗೊಳಿಸಲಿ ಎಂಬುದೆ ನಮ್ಮ ಒತ್ತಾಯ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.

ಈ ರಸ್ತೆಯ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಲು ಪ್ರಸ್ತಾವನೆ ಕಳುಹಿಸಲಾಗಿದೆ. ಆದರೆ ಅದಕ್ಕೆ ಅನುಮೋದನೆ ಮಾತ್ರ ಇನ್ನು ಸಿಗಬೇಕಾಗಿದೆ.ಅನುಮೋದನೆ ಸಿಕ್ಕಿದ ಕೂಡಲೇ ಮುಂದಿನ ಕ್ರಮ ಕೈಗೊಳ್ಳಲಾಗುವುದು.
ರಾಜೇಶ್, ಇಂಜಿನಿಯರ್ ಲೋಕೋಪಯೋಗಿ ಇಲಾಖೆ

LEAVE A REPLY

Please enter your comment!
Please enter your name here