ಆಯುಷ್ ಇಲಾಖೆಗೆ 5 ಎಕರೆ ಜಾಗದ ಆರ್‌ಟಿಸಿ ಹಸ್ತಾಂತರ

0

‘ಬನ್ನೂರಿನಲ್ಲಿ ಹಾಸ್ಪಿಟಲ್ ಝೋನ್ ಮಾಡುವ ನಮ್ಮ ಕನಸು ನನಸಾಗುತ್ತಿದೆ’ – ಶಾಸಕ ಅಶೋಕ್ ರೈ

ಪುತ್ತೂರು: ಸರಕಾರಿ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಬನ್ನೂರಿನಲ್ಲಿ ಈಗಾಗಲೇ ಜಾಗ ಮಂಜೂರುಗೊಂಡಿದೆ. ಇದೀಗ ಆ ಜಾಗಕ್ಕೆ ತಾಗಿಕೊಂಡಂತೆ ಆಯುರ್ವೇದಿಕ್ ಆಸ್ಪತ್ರೆ ಮತ್ತು ಕಾಲೇಜು ನಿರ್ಮಾಣಕ್ಕೆ 5 ಎಕರೆ ಜಾಗ ಮಂಜೂರುಗೊಂಡಿದ್ದು ಬನ್ನೂರಿನಲ್ಲಿ ಹಾಸ್ಪಿಟಲ್ ಝೋನ್ ಮಾಡುವ ನಮ್ಮ ಕನಸು ಈಡೇರುತ್ತಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.


ಬನ್ನೂರಿನಲ್ಲಿ ನಿರ್ಮಾಣವಾಗಲಿರುವ ಸರಕಾರಿ ಮೆಡಿಕಲ್ ಕಾಲೇಜು ಬಳಿಯಲ್ಲಿ ಆಯುರ್ವೇದಿಕ್ ಕಾಲೇಜು ಮತ್ತು ಆಸ್ಪತ್ರೆ ನಿರ್ಮಾಣಕ್ಕೆ ಮಂಜೂರುಗೊಂಡಿರುವ 5 ಎಕರೆ ಜಾಗದ ಪಹಣಿ ಪತ್ರವನ್ನು ಜು.13ರಂದು ಶಾಸಕರ ಕಚೇರಿಯಲ್ಲಿ ಆಯುಷ್ ಇಲಾಖೆಯ ಅಧಿಕಾರಿಗಳಿಗೆ ಹಸ್ತಾಂತರಿಸಿ, ಅವರು ಮಾತನಾಡಿದರು.

‘ಆಯುರ್ವೇದಿಕ್ ಕಾಲೇಜು ಮತ್ತು ಆಸ್ಪತ್ರೆ ನಿರ್ಮಾಣಕ್ಕೆ ಈ ಹಿಂದೆ ವಿವೇಕಾನಂದ ಕಾಲೇಜು ಬಳಿ 1.50 ಎಕರೆ ನಿಗಧಿಪಡಿಸಿ, ಸರಕಾರಕ್ಕೆ ಪ್ರಸ್ತಾವಣೆ ಕಳುಹಿಸಲಾಗಿತ್ತು. ಆದರೆ ಸರಕಾರದ ನಿಬಂಧನೆಯಂತೆ ಆಸ್ಪತ್ರೆ ಮತ್ತು ಕಾಲೇಜು ಮಂಜೂರು ಮಾಡಲು 5 ಎಕರೆ ಜಾಗದ ಆವಶ್ಯಕತೆಯಿದೆ. ಹೀಗಾಗಿ ಬನ್ನೂರಿನಲ್ಲಿ ಸರಕಾರಿ ಮೆಡಿಕಲ್ ಕಾಲೇಜಿಗೆ ಮಂಜೂರುಗೊಳಿಸಿದ ಜಾಗದ ಪಕ್ಕದಲ್ಲಿ 5 ಎಕರೆ ಜಾಗವನ್ನು ಮಂಜೂರುಗೊಳಿಸಲಾಗಿದೆ. ಇಲ್ಲಿ ಹಾಸ್ಪಿಟಲ್ ಝೋನ್ ಮಾಡುವ ಕನಸಿನಂತೆ ಮೆಡಿಕಲ್ ಕಾಲೇಜು, ಆಸ್ಪತ್ರೆಯ ಜೊತೆಗೆ ಆಯುಷ್ ಆಸ್ಪತ್ರೆ ಮತ್ತು ಕಾಲೇಜು ನಿರ್ಮಾಣಗೊಳ್ಳಲಿದೆ. ಇದಕ್ಕಾಗಿ ಜಾಗ ಮಂಜೂರುಗೊಳಿಸಿ ಜಾಗದ ಪಹಣಿ ಪತ್ರವನ್ನು ಇಲಾಖೆಯ ಹೆಸರಿನಲ್ಲಿ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ. ಮುಂದಿನ ಎರಡು ದಿನಗಳಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ರೂ.30ಕೋಟಿ ಪ್ರಸ್ತಾವಣೆಯನ್ನು ಸರಕಾರಕ್ಕೆ ಸಲ್ಲಿಸಲಾಗುವುದು. ನಂತರ ಕಾಲೇಜು ನಿರ್ಮಾಣಕ್ಕೂ ಅನುದಾನ ಪ್ರಸ್ತಾವನೆ ಸಲ್ಲಿಸಲಾಗುವುದುʼ ಎಂದು ಹೇಳಿದರು.


ಜಿಲ್ಲಾ ಆಯುಷ್ ಅಧಿಕಾರಿ ಡಾ.ಕೆ.ಎ ಮಣಿಕರ್ಣಿಕ, ವೆನ್ಲಾಕ್ ಆಯುಷ್ ಆಧಿಕಾರಿ ಡಾ.ಪ್ರಕಾಶ್ ಎ.ಜೆ., ಜಿಲ್ಲಾ ಆಯುಷ್ ಇಲಾಖೆ ಕಚೇರಿ ಅಧೀಕ್ಷಕ ದಯಾನಂದ ಹಾಗೂ ಬೆಳ್ತಂಗಡಿ ಪ್ರಸನ್ನ ಆಯುರ್ವೆದ ಕಾಲೇಜಿನ ಪ್ರೊಪೆಸರ್ ಡಾ.ನವೀನ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here