ವಾಣಿಯನ್/ಗಾಣಿಗ ಸಮುದಾಯ ಸೇವಾ ಸಂಘದ ಪದಗ್ರಹಣ

0

ಪುತ್ತೂರು: ವಾಣಿಯನ್/ಗಾಣಿಗ ಸಮುದಾಯ ಸೇವಾ ಸಂಘ ಪುತ್ತೂರು ಇದರ 2026-28ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಸಂಘದ ಪೂರ್ವಾಧ್ಯಕ್ಷರುಗಳಿಗೆ ಗೌರವಾರ್ಪಣೆ ಕಾರ್ಯಕ್ರಮಗಳು ಕೋರ್ಟ್‌ರಸ್ತೆಯ ಜೇಸಿ ಮುಳಿಯ ಸಭಾಂಗಣದಲ್ಲಿ ನಡೆಯಿತು.


ಬಣ್ಣದ ಮಹಾಲಿಂಗ ಯಕ್ಷ ಪ್ರತಿಷ್ಠಾನದ ಅಧ್ಯಕ್ಷ ಗೋಪಾಲಕೃಷ್ಣ ಮಾಸ್ತರ್ ಪಂಜತ್ತೊಟ್ಟಿ, ಪುತ್ತೂರಿನ ಬಿರುಮಲೆ ಹಿಲ್ಸ್ ರೋಟರಿ ಕ್ಲಬ್‌ನ ಅಧ್ಯಕ್ಷ ಡಾ| ಗೋಪಾಲಕೃಷ್ಣ ಎಂ.ಎ., ವಿಶ್ವಹಿಂದೂ ಪರಿಷತ್ ಪುತ್ತೂರು ನಗರ ಪ್ರಖಂಡದ ಅಧ್ಯಕ್ಷ ಎಸ್.ದಾಮೋದರ ಪಾಟಾಳಿ ಪುತ್ತೂರು ಮುಖ್ಯ ಅತಿಥಿಗಳಾಗಿ ಆಗಮಿಸಿ ಶುಭ ಹಾರೈಸಿದರು.


ಕಳೆದ ಮೂರು ವರ್ಷಗಳಿಂದ ಸಂಘವನ್ನು ಮುನ್ನಡೆಸಿದ್ದ ನಿಕಟಪೂರ್ವಾಧ್ಯಕ್ಷ ಪ್ರಸಾದ್ ಕಲ್ಲರ್ಪೆ ಹಾಗೂ ನಿಕಟಪೂರ್ವ ಕಾರ್ಯದರ್ಶಿ ಜಯಲಕ್ಷ್ಮಿ ಡಿ.ಎಸ್ ಮಾತನಾಡಿ ತಮ್ಮ ಅವಧಿಯಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿದರು.


ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ವಿನಯ ಕುಮಾರ್ ಕಡಮಜಲು ಮಾತನಾಡಿ, ಸಂಘದ ವತಿಯಿಂದ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಲು ಸಮುದಾಯ ಬಾಂಧವರು ಒಗ್ಗಟ್ಟಿನಿಂದ ಕೆಲಸ ಮಾಡುವ ಮೂಲಕ ಸಹಕರಿಸುವಂತೆ ವಿನಂತಿಸಿದರು.


ಗೌರವಾರ್ಪಣೆ:
ಸಂಘದ ಪೂರ್ವಾಧ್ಯಕ್ಷರುಗಳಾದ ತಿಮ್ಮಪ್ಪ ಪಾಟಾಳಿ, ಶಂಕರ ಪಾಟಾಳಿ, ಶಂಕರಿ ಟೀಚರ್, ನಾರಾಯಣ ಕುಕ್ಕುಪುಣಿ, ಗೋಪಾಲಕೃಷ್ಣ ಎಂ.ಎ., ದಾಮೋದರ ಪಾಟಾಳಿ, ಶಾರದಾ ಕೃಷ್ಣ, ಸುಬ್ಬಪ್ಪ ಪಾಟಾಳಿ ಹಾಗೂ ಪ್ರಸಾದ್ ಕಲ್ಲರ್ಪೆ ಇವರನ್ನ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಯುವ ಸಂಘದ ಅಧ್ಯಕ್ಷ ಶ್ರೀಶ ಪುತ್ತೂರು ಹಾಗೂ ಕಾರ್ಯದರ್ಶಿ ಕ್ಷಿತಿಜ್ ಇವರನ್ನು ಅಭಿನಂದಿಸಲಾಯಿತು.


ಸಂಘದ ಪೂರ್ವಾಧ್ಯಕ್ಷ ಸುಬ್ಬಪ್ಪ ಪಟ್ಟೆ ಸ್ವಾಗತಿಸಿ, ನೂತನ ಕಾರ್ಯದರ್ಶಿ ಧನುಷಾ ಎನ್.ಎಸ್. ವಂದಿಸಿದರು. ಮಹೇಶ್ ಆಲಂಕಾರು ಹಾಗೂ ಸೌಮ್ಯ ವಿನಯ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here