ಅಧ್ಯಯನ ಪ್ರವಾಸದ ಮೂಲಕ ಮಹಿಳೆಯರಲ್ಲಿ ಅರಿವು ಮೂಡಿಸಿದ ಜ್ಞಾನವಿಕಾಸ ಕೇಂದ್ರ – ಅರಿಯಡ್ಕ ವಲಯದ ಕರ್ನೂರು ಜ್ಞಾನವಿಕಾಸ ಕೇಂದ್ರದ ಸದಸ್ಯರಿಂದ ಅಧ್ಯಯನ ಪ್ರವಾಸ

0

ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್ ಪುತ್ತೂರು ತಾಲೂಕು ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿ ಅರಿಯಡ್ಕ ವಲಯದ ಕರ್ನೂರು ಕಾರ್ಯಕ್ಷೇತ್ರದ ದಾರಿದೀಪ ಜ್ಞಾನವಿಕಾಸ ಕೇಂದ್ರದ ಸದಸ್ಯರಿಗಾಗಿ ಜು.13ರಂದು ತಾಲೂಕು ಮಟ್ಟದ ಅಧ್ಯಯನ ಪ್ರವಾಸವನ್ನು ಹಮ್ಮಿಕೊಳ್ಳಲಾಯಿತು. ಪ್ರವಾಸದ ಅಂಗವಾಗಿ ಮೊದಲಿಗೆ ಪುತ್ತೂರು ಅಗ್ನಿಶಾಮಕ ಇಲಾಖೆಗೆ ಭೇಟಿ ನೀಡಲಾಯಿತು.

ಈ ಸಂದರ್ಭದಲ್ಲಿ ಠಾಣಾಧಿಕಾರಿ ಶಂಕರ್ ಹಾಗೂ ಅಗ್ನಿಶಾಮಕ ಇಲಾಖೆಯ ಪ್ರಮುಖ ರುಕ್ಮಯ್ಯ ಗೌಡ ಅವರು ಇಲಾಖೆಯ ಕಾರ್ಯವೈಖರಿ, ಅಗ್ನಿ ಅವಘಡಗಳ ಸಂದರ್ಭಗಳಲ್ಲಿ ಕೈಗೊಳ್ಳುವ ತುರ್ತು ಕ್ರಮಗಳು, ಗೃಹಬಳಕೆಯ ಅನಿಲ (ಗ್ಯಾಸ್) ಬಳಕೆಯಲ್ಲಿ ಮಹಿಳೆಯರು ವಹಿಸಬೇಕಾದ ಮುನ್ನೆಚ್ಚರಿಕೆಗಳು, ಎ ಹಾಗೂ ಬಿ ವಿಧದ ಬೆಂಕಿಗಳ ವರ್ಗೀಕರಣ ಮತ್ತು ಅವುಗಳನ್ನು ನಿಯಂತ್ರಿಸುವ ವಿಧಾನಗಳ ಕುರಿತು ಪ್ರಾತ್ಯಕ್ಷಿಕೆ ಸಹಿತ ಮಾಹಿತಿ ನೀಡಿದರು. ಬಳಿಕ ಪುತ್ತೂರಿನ ನೂತನ ನ್ಯಾಯಾಲಯಕ್ಕೆ ಭೇಟಿ ನೀಡಿದ ಸದಸ್ಯರಿಗೆ ವಕೀಲ ಕೃಷ್ಣಪ್ರಸಾದ್ ಅವರು ಮಾನವ ಕಳ್ಳಸಾಗಣೆ ಕುರಿತು ಉಪಯುಕ್ತ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ನ್ಯಾಯಾಧೀಶರು ಉಪಸ್ಥಿತರಿದ್ದರು. ವಕೀಲರಾದ ಹರಿಣಾಕ್ಷಿ ಜೆ. ಶೆಟ್ಟಿ ಅವರು ಮಕ್ಕಳ ಕಳ್ಳಸಾಗಣೆ ಕುರಿತ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಆಯೋಜಿಸಿದ್ದು, ನ್ಯಾಯಾಲಯದ ಕಲಾಪ ವೀಕ್ಷಿಸಲು ಸದಸ್ಯರಿಗೆ ಅವಕಾಶ ಕಲ್ಪಿಸಲಾಯಿತು. ನಂತರ ಸಂಪ್ಯ ಪೊಲೀಸ್ ಠಾಣೆಗೆ ಭೇಟಿ ನೀಡಲಾಯಿತು. ಪೊಲೀಸ್ ಉಪನಿರೀಕ್ಷಕ ದೇವರಾಜ್ ಅವರು ಮಹಿಳೆಯರ ಮೇಲಿನ ದೌರ್ಜನ್ಯ, ಬಾಲಕಾರ್ಮಿಕ ನಿಷೇಧ ಕಾಯ್ದೆ, ಪೋಕ್ಸೋ ಕಾಯ್ದೆ, ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಹಕ್ಕು, ಸಂಸ್ಕಾರಯುತ ಶಿಕ್ಷಣದ ಅಗತ್ಯತೆ ಹಾಗೂ ಮೊಬೈಲ್ ಬಳಕೆಯಿಂದ ಹೆಚ್ಚುತ್ತಿರುವ ಅಪರಾಧಗಳ ಕುರಿತು ಮಾಹಿತಿ ನೀಡಿದರು. ಪೊಲೀಸ್ ಇಲಾಖೆಯ ಕಾರ್ಯವೈಖರಿ ಹಾಗೂ ವಿವಿಧ ವಿಭಾಗಗಳ ಪರಿಚಯ ಮಾಡಿಕೊಟ್ಟು, ಠಾಣೆಯ ಬಂದಿಖಾನೆಯನ್ನೂ ವೀಕ್ಷಿಸಲು ಅವಕಾಶ ಕಲ್ಪಿಸಿದರು.


ಅನಂತರ ಬೆಳ್ಳಾರೆಯ ಉದ್ಯಮಿ ಇಂದಿರಾ ಅವರ ಸ್ವಉದ್ಯೋಗ ಘಟಕಗಳಾದ ರೈಸ್ ಮಿಲ್, ಆಯಿಲ್ ಮಿಲ್, ಹಿಟ್ಟಿನ ಗಿರಣಿ, ಮಸಾಲೆ ಉತ್ಪಾದನಾ ಘಟಕ ಹಾಗೂ ಹೈನುಗಾರಿಕೆ ಕೇಂದ್ರಕ್ಕೆ ಭೇಟಿ ನೀಡಲಾಯಿತು. ಮಹಿಳೆಯರು ಸ್ವಉದ್ಯೋಗದ ಮೂಲಕ ಆರ್ಥಿಕವಾಗಿ ಸ್ವಾವಲಂಬಿಗಳಾಗುವ ಮಾರ್ಗಗಳು, ಹೈನುಗಾರಿಕೆಯಿಂದ ಆದಾಯ ಗಳಿಸುವ ವಿಧಾನಗಳು ಹಾಗೂ ವಿವಿಧ ಉದ್ಯಮಾವಕಾಶಗಳ ಕುರಿತು ಅವರು ಮಾಹಿತಿ ಹಂಚಿಕೊಂಡರು.ಪ್ರವಾಸದ ಕೊನೆಯಲ್ಲಿ ವಾತ್ಸಲ್ಯ ಯೋಜನೆಯ ಫಲಾನುಭವಿ ಬೇಬಿ ಅವರ ವಾತ್ಸಲ್ಯ ಮನೆಗೆ ಭೇಟಿ ನೀಡಿ ಯೋಜನೆಯಿಂದ ಆಗಿರುವ ಸಾಮಾಜಿಕ ಹಾಗೂ ಆರ್ಥಿಕ ಬದಲಾವಣೆಗಳನ್ನು ಸದಸ್ಯರು ಅವಲೋಕಿಸಿದರು. ಈ ಅಧ್ಯಯನ ಪ್ರವಾಸದಲ್ಲಿ ಜ್ಞಾನವಿಕಾಸ ಕೇಂದ್ರದ ಸದಸ್ಯರು ಉತ್ಸಾಹದಿಂದ ಭಾಗವಹಿಸಿದ್ದು, ವಿವಿಧ ಇಲಾಖೆಗಳ ಕಾರ್ಯವೈಖರಿ, ಕಾನೂನು ಅರಿವು, ಮಹಿಳಾ ಸಬಲೀಕರಣ ಹಾಗೂ ಸ್ವಉದ್ಯೋಗ ಅವಕಾಶಗಳ ಕುರಿತು ಮಹತ್ವದ ಮಾಹಿತಿಯನ್ನು ಪಡೆದುಕೊಂಡರು. ಜ್ಞಾನ ವಿಕಾಸ ತಾಲೂಕು ಸಮನ್ವಯಾಧಿಕಾರಿ ಕಾವ್ಯಶ್ರೀಯವರು ಮಾರ್ಗದರ್ಶನ ನೀಡಿದ್ದರು.

LEAVE A REPLY

Please enter your comment!
Please enter your name here