ಜು.23:ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ: ಇಬ್ಬರು ಅಂತಿಮ ಕಣದಲ್ಲಿ

0

ಉಪಾಧ್ಯಕ್ಷ,ಕಾರ್ಯದರ್ಶಿ,ಕೋಶಾಧಿಕಾರಿ, ಜತೆ ಕಾರ್ಯದರ್ಶಿ ಅವಿರೋಧ ಆಯ್ಕೆ-ಅಧಿಕೃತ ಘೋಷಣೆ ಬಾಕಿ

ಪುತ್ತೂರು:ಪುತ್ತೂರು ವಕೀಲರ ಸಂಘದ 2026-27ರಿಂದ 2027-28ರ ಸಾಲಿನ 2 ವರ್ಷಗಳ ಅವಽಗೆ ನೂತನ ಅಧ್ಯಕ್ಷರ ಆಯ್ಕೆಗೆ ಜು.23ರಂದು ಚುನಾವಣೆ ನಡೆಯಲಿದೆ.ಉಳಿದೆಲ್ಲ ಸ್ಥಾನಗಳಿಗೂ ಅವಿರೋಧ ಆಯ್ಕೆ ನಡೆದಿದ್ದು ಅಧಿಕೃತ ಘೋಷಣೆ ಮಾತ್ರ ಬಾಕಿಯಿದೆ.


ಅಧ್ಯಕ್ಷ ಸ್ಥಾನಕ್ಕೆ ಸಂತೋಷ್ ಕುಮಾರ್ ಕೆ.,ಶ್ರೀಗಿರೀಶ್ ಮಳಿ ಮತ್ತು ನೂರುದ್ದೀನ್ ಸಾಲ್ಮರ, ಉಪಾಧ್ಯಕ್ಷ ಸ್ಥಾನಕ್ಕೆ ಮಹಾಬಲ ಶೆಟ್ಟಿ ಕೊಮ್ಮಂಡ, ಕಾರ್ಯದರ್ಶಿ ಸ್ಥಾನಕ್ಕೆ ಸ್ವಾತಿ ಜಗನ್ನಾಥ ರೈ, ಕೋಶಾಧಿಕಾರಿ ಸ್ಥಾನಕ್ಕೆ ಭಾರತಿ ಎ ಮತ್ತು ಮಮತ ಸುವರ್ಣ ಹಾಗೂ ಜತೆ ಕಾರ್ಯದರ್ಶಿ ಸ್ಥಾನಕ್ಕೆ ಉದಯಚಂದ್ರ ಕರಂಬಾರುರವರು ನಾಮಪತ್ರ ಸಲ್ಲಿಸಿದ್ದರು.5 ಸ್ಥಾನಗಳಿಗೆ ಒಟ್ಟು 8 ನಾಮಪತ್ರಗಳು ಸಲ್ಲಿಕೆಯಾಗಿತ್ತು.


2 ನಾಮಪತ್ರ ಹಿಂತೆಗೆತ:
ನಾಮಪತ್ರ ಹಿಂತೆಗೆಯಲು ಕೊನೆಯ ದಿನವಾದ ಜು.18ರಂದು, ಕೋಶಾಧಿಕಾರಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಮಮತ ಸುವರ್ಣ ಹಾಗೂ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ನೂರುದ್ದೀನ್ ಸಾಲ್ಮರರವರು ನಾಮಪತ್ರ ಹಿಂತೆಗೆದುಕೊಂಡಿದ್ದಾರೆ.ಕೋಶಾಧಿಕಾರಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಮಮತ ಸುವರ್ಣರವರು ನಾಮಪತ್ರ ಹಿಂತೆಗೆದುಕೊಂಡ ಕಾರಣ ಭಾರತಿ ಎ ಅವರು ಮಾತ್ರ ಕಣದಲ್ಲಿರುವುದರಿಂದ ಈ ಸ್ಥಾನಕ್ಕೆ ಅವರು ಅವಿರೋಧ ಆಯ್ಕೆಯಾಗಲಿದ್ದಾರೆ.

ಉಳಿದಂತೆ ಉಪಾಧ್ಯಕ್ಷ, ಕಾರ್ಯದರ್ಶಿ ಹಾಗೂ ಜತೆ ಕಾರ್ಯದರ್ಶಿ ಸ್ಥಾನಕ್ಕೆ ತಲಾ ಒಂದೊಂದೇ ನಾಮಪತ್ರ ಸಲ್ಲಿಕೆಯಾಗಿದ್ದ ಕಾರಣ ಉಪಾಧ್ಯಕ್ಷ ಸ್ಥಾನಕ್ಕೆ ಮಹಾಬಲ ಶೆಟ್ಟಿ ಕೊಮ್ಮಂಡ, ಕಾರ್ಯದರ್ಶಿ ಸ್ಥಾನಕ್ಕೆ ಸ್ವಾತಿ ಜಗನ್ನಾಥ ರೈ ಹಾಗೂ ಜತೆ ಕಾರ್ಯದರ್ಶಿ ಸ್ಥಾನಕ್ಕೆ ಉದಯಚಂದ್ರ ಕರಂಬಾರು ರವರು ಅವಿರೋಧ ಆಯ್ಕೆಯಾಗಿದ್ದು ಜು.23ರಂದು ನಡೆಯುವ ಚುನಾವಣೆಯಂದೇ ಅಧಿಕೃತ ಘೋಷಣೆ ನಡೆಯಲಿದೆ.ಇದರಿಂದಾಗಿ ಅಧ್ಯಕ್ಷ ಸ್ಥಾನಕ್ಕೆ ಮಾತ್ರ ಚುನಾವಣೆ ನಡೆಯಲಿದ್ದು ಸಂತೋಷ್ ಕುಮಾರ್ ಕೆ. ಹಾಗೂ ಶ್ರೀಗಿರೀಶ್ ಮಳಿರವರ ನಡುವೆ ಸ್ಪರ್ಧೆ ನಡೆಯಲಿದೆ.ಚುನಾವಣಾಧಿಕಾರಿಗಳಾಗಿ ಎಸ್.ಪ್ರವೀಣ್ ಕುಮಾರ್, ಜಯಾನಂದ ಕೆ. ಹಾಗೂ ಮನೋಹರ್ ಎ.ರವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಜು.23ರಂದು ಬೆಳಿಗ್ಗೆ 10 ರಿಂದ ಸಂಜೆ 4ರವರೆಗೆ ಬನ್ನೂರು ಆನೆಮಜಲಿನಲ್ಲಿರುವ ನೂತನ ವಕೀಲರ ಭವನದಲ್ಲಿ ಚುನಾವಣೆ ನಡೆಯಲಿದ್ದು ಅದೇ ದಿನ ಸಂಜೆ 4ರಿಂದ ಮತ ಎಣಿಕೆ ನಡೆದು ನೂತನ ಅಧ್ಯಕ್ಷರ ಘೋಷಣೆಯಾಗಲಿದೆ.ಇತರ ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆಯಾದವರ ಘೋಷಣೆಯೂ ಇದೇ ಸಂದರ್ಭ ನಡೆಯಲಿದೆ.

LEAVE A REPLY

Please enter your comment!
Please enter your name here