ಕುಂಬ್ರ ಸಾರೆಪುಣಿಯ ಮಹಿಳೆ ಸಂಪಾಜೆಯ ಪತಿಯ ಮನೆಯಲ್ಲಿ ಅನುಮಾನಾಸ್ಪದ ಸಾವು – ಮಗಳನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿ ತಾಯಿಯಿಂದ ಪೊಲೀಸ್ ದೂರು

0

ಪುತ್ತೂರು: ಸುಳ್ಯ ತಾಲೂಕಿನ ಸಂಪಾಜೆ ಕಡೆಪಾಲದಲ್ಲಿ ವಿವಾಹಿತ ಮಹಿಳೆಯೋರ್ವರು ಜು.18ರಂದು ರಾತ್ರಿ ಮೃತಪಟ್ಟ ಘಟನೆ ನಡೆದಿದ್ದು ಸಾವಿನ ಬಗ್ಗೆ ಮಹಿಳೆಯ ಕುಟುಂಬಸ್ಥರು ಸಂಶಯ ವ್ಯಕ್ತಪಡಿಸಿ ಪೊಲೀಸ್ ದೂರು ನೀಡಿರುವ ಹಿನ್ನೆಲೆಯಲ್ಲಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಂಗಳೂರು ಆಸ್ಪತ್ರೆಗೆ ರವಾನಿಸಿದ ಘಟನೆ ನಡೆದಿದೆ.

ಕಡೆಪಾಲ ಅಲಿಗುಡ್ಡೆಯ ನಿವಾಸಿ ಅಲವಿಕುಟ್ಟಿ ಎಂಬವರ ಪುತ್ರ ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಅನ್ಸಾರ್ ಎಂಬವರ ಪತ್ನಿ ಫಾತಿಮತ್ ನಿಶಾನ(22ವ) ಮೃತಪಟ್ಟ ಮಹಿಳೆ. ಮೃತದೇಹವನ್ನು ಪ್ರಥಮವಾಗಿ ಕೆವಿಜಿ ಆಸ್ಪತ್ರೆಗೆ ಕರೆತರಲಾಗಿತ್ತು, ಬಳಿಕ ಮರಣೋತ್ತರ ಪರೀಕ್ಷೆಗಾಗಿ ಮಂಗಳೂರಿನ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಫಾತಿಮತ್ ನಿಶಾನ ಪುತ್ತೂರು ತಾಲೂಕು ಕುಂಬ್ರ ಸಮೀಪದ ಸಾರೆಪುಣಿ ನಿವಾಸಿ ಜುಬೈದಾ ಎಂಬವರ ಪುತ್ರಿಯಾಗಿದ್ದು ಅವರನ್ನು ನಾಲ್ಕು ವರ್ಷಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ಫಾತಿಮತ್ ನಿಶಾನ ಗಂಡನ ಕುಟುಂಬವು ಮೊದಲು ದೇವರಕೊಲ್ಲಿಯಲ್ಲಿ ವಾಸಿಸುತ್ತಿದ್ದು ಇದೀಗ ಕೆಲವು ವರ್ಷಗಳಿಂದ ಸಂಪಾಜೆಯಲ್ಲಿ ನೆಲೆಸಿದ್ದಾರೆ ಎಂದು ತಿಳಿದು ಬಂದಿದೆ.


ನನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ತಾಯಿಗೆ ಕರೆ ಮಾಡಿದ್ದ ನಿಶಾನ!!:
ಜು.18ರಂದು ರಾತ್ರಿ ಫಾತಿಮತ್ ನಿಶಾನ ತನ್ನ ತಾಯಿಗೆ ಕರೆ ಮಾಡಿ ತನಗೆ ಗಂಡನ ಮನೆಯವರು ಕಿರುಕುಳ ನೀಡುತ್ತಿದ್ದಾರೆ ಎಂದು ತಿಳಿಸಿದ್ದು ಕೂಡಲೇ ತಾಯಿ ಜುಬೈದಾ ಅವರು ಕುಂಬ್ರದ ರಿಕ್ಷಾವೊಂದರಲ್ಲಿ ಮಗಳ ಮನೆಗೆ ತೆರಳಿದ್ದರು. ಜುಬೈದಾ ಮಗಳ ಮನೆಗೆ ತಲುಪಿದಾಗ ಮಗಳು ಮೃತಪಟ್ಟ ಸ್ಥಿತಿಯಲ್ಲಿದ್ದರು ಎಂದು ತಿಳಿದು ಬಂದಿದೆ. ಫಾತಿಮತ್ ನಿಶಾನ ಅವರು ಸ್ನಾನಗೃಹದ ಶವರ್ ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಗಂಡನ ಮನೆಯವರು ಹೇಳಿದ್ದಾರೆ. ಆದರೆ ಅದನ್ನು ಮೃತ ಮಹಿಳೆಯ ಕುಟುಂಬಸ್ಥರು ನಿರಾಕರಿಸಿದ್ದು ಇದೊಂದು ವ್ಯವಸ್ಥಿತ ಕೊಲೆ ಎಂದು ಆರೋಪಿಸಿದ್ದಾರೆ. ಮೃತ ಫಾತಿಮತ್ ನಿಶಾನ ಅವರು ತಾಯಿ, ಪತಿ, ಎರಡೂವರೆ ವರ್ಷದ ಪುತ್ರ ಹಾಗೂ ಸಹೋದರರಾದ ನಿಝಾಮ್ ಹಾಗೂ ನವಾಝ್ ಅವರನ್ನು ಅಗಲಿದ್ದಾರೆ.


ಮಗಳನ್ನು ಕೊಲೆ ಮಾಡಲಾಗಿದೆ-ತಾಯಿಯಿಂದ ದೂರು:
ನನ್ನ ಮಗಳಾದ ಫಾತಿಮತ್ ನಿಶಾನಳನ್ನು ಕಲ್ಲುಗುಂಡಿ ಕಡಪ್ಪಾಲ ಎಂಬಲ್ಲಿನ ಅನ್ಸಾರ್ ಎಂಬವನಿಗೆ 4 ವರ್ಷದ ಮೊದಲು ಮದುವೆ ಮಾಡಿ ಕೊಟ್ಟಿದ್ದು ಒಂದು ಗಂಡು ಮಗು ಇದೆ. ಜು.18ರಂದು ರಾತ್ರಿ ಗಂಟೆ 8.53 ರ ಸುಮಾರಿಗೆ ಮಗಳು ನಿಶಾನ ಕರೆ ಮಾಡಿ ಮಾತಾಡಿದ್ದು ನನಗೆ ಮಾವ, ಅತ್ತೆ ಹಾಗೂ ನಾದಿನಿ ಕಿರುಕುಳ ನೀಡುತ್ತಿದ್ದಾರೆ ಎಂದು ತಿಳಿಸಿದ್ದಾಳೆ. ನನಗೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದಾರೆ ಎಂದು ತಿಳಿಸಿದ್ದು ನಾನು ಸುಳ್ಯದ ಅರಂಬೂರು ತಲುಪುವ ತನಕ ಮಗಳು ಮಾತನಾಡಿದ್ದಳು, ಇದರ ಮಧ್ಯೆ ಮಗಳ ಕೈಯಿಂದ ಫೋನ್ ಕಸಿದುಕೊಂಡ ಮಗಳ ಮಾವ ನನ್ನಲ್ಲಿ ಮಾತಾಡಿದ್ದು ’ನಿನ್ನ ಮಗಳನ್ನು ಕರೆದುಕೊಂಡು ಹೋಗು, ಇಲ್ಲವಾದರೆ ನಾನು ಅವಳನ್ನು ಕೊಂದು ಜೈಲಿಗೆ ಹೋಗುತ್ತೇನೆ’ ಎಂದರು. ನಾನು ಅಲ್ಲಿಂದ ಕಡೆಪ್ಪಾಲ ಮಗಳ ಮನೆಗೆ ತಲುಪಿದಾಗ ಮಗಳನ್ನು ಕೊಂದು ಮೃತದೇಹವನ್ನು ಮನೆಯ ಹೊರಾಂಗಣದಲ್ಲಿ ಮಲಗಿಸಿದ್ದರು ಎಂದು ಮೃತರ ತಾಯಿ ಜುಬೈದಾ ಅವರು ಸುಳ್ಯ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.


ಬೆಂಗಳೂರಿಗೆ ಕರೆದುಕೊಂಡು ಹೋಗಲೂ ಬಿಡಲಿಲ್ಲ:
ಮಗಳನ್ನು ಬೆಂಗಳೂರಿಗೆ ಕರೆದುಕೊಂಡು ಹೋಗುವುದಾಗಿ ಅವಳ ಗಂಡ ಅನ್ಸಾರ್ ಹೇಳಿದ ವೇಳೆ ’ನೀನು ಅವಳನ್ನು ಬೆಂಗಳೂರಿಗೆ ಕರೆದುಕೊಂಡು ಹೋದರೆ ಮತ್ತೆ ಮನೆಗೆ ಕರೆದುಕೊಂಡು ಬರಬಾರದು ಎಂದು ಬೆದರಿಸಿ ನನ್ನ ಮಗಳನ್ನು ಅವರು ಮನೆಯಲ್ಲಿರಿಸಿಕೊಂಡರು. ಆದುದರಿಂದ ಮಗಳನ್ನು ಅಲ್ಲೇ ಬಿಟ್ಟು ಅಳಿಯ ಅನ್ಸಾರ್ ಬೆಂಗಳೂರಿಗೆ ಕೆಲಸಕ್ಕೆ ಹೋಗಿರುತ್ತಾನೆ. ನನ್ನ ಮಗಳನ್ನು ಮಗಳ ಮಾವ, ಅತ್ತೆ ಆಯಿಷ ಹಾಗೂ ನಾದಿನಿ ಫಸೀಲ ಸೇರಿಕೊಂಡು ಕೊಂದಿದ್ದು ಇದರ ಬಗ್ಗೆ ಸೂಕ್ತ ತನಿಖೆ ಮಾಡಿ ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಜುಬೈದಾ ದೂರು ನೀಡಿದ್ದಾರೆ.

ಸೂಕ್ತ ತನಿಖೆಗೆ ಅಶ್ರಫ್ ಸಾರೆಪುಣಿ ಆಗ್ರಹ
ಸಾರೆಪುಣಿಯ ಫಾತಿಮತ್ ನಿಶಾನ ಅವರನ್ನು ನಾಲ್ಕು ವರ್ಷಗಳ ಹಿಂದೆ ಮದುವೆ ಮಾಡಿ ಕೊಟ್ಟಿದ್ದು ಇದೀಗ ಅವರ ಮರಣ ವಾರ್ತೆ ಕೇಳಿ ನಮಗೆಲ್ಲಾ ದಿಗ್ಭ್ರಮೆ ಆಗಿದೆ ಎಂದು ಸಾರೆಪುಣಿ ಜುಮಾ ಮಸೀದಿಯ ಅಧ್ಯಕ್ಷರು, ಸಾಮಾಜಿಕ ಕಾರ್ಯಕರ್ತರೂ ಆಗಿರುವ ಅಶ್ರಫ್ ಸಾರೆಪುಣಿ ತಿಳಿಸಿದ್ದಾರೆ. ಗಂಡನ ಮನೆಯವರ ಕಿರುಕುಳದಿಂದ ಘಟನೆ ನಡೆದಿದೆ ಎನ್ನುವ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎನ್ನುವ ಕುರಿತು ಸಮಗ್ರ ತನಿಖೆ ಆಗುವ ಮೂಲಕ ಸತ್ಯ ಹೊರಬರಬೇಕಿದೆ. ಪೊಲೀಸ್ ಇಲಾಖೆ ಸೂಕ್ತ ತನಿಖೆಯ ಮೂಲಕ ಮೃತ ಫಾತಿಮತ್ ನಿಶಾನ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕೆಂದು ಅವರು ಒತ್ತಾಯಿಸಿದ್ದಾರೆ.

ಸಾವಿನ ಸುತ್ತ…ಅನುಮಾನಗಳ ಹುತ್ತ!!
ಮೃತ ಫಾತಿಮತ್ ನಿಶಾನ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಫಾತಿಮತ್ ನಿಶಾನ ಅವರ ತಾಯಿ ಜುಬೈದಾ ಅವರು ಮಗಳ ಮನೆಗೆ ಹೋಗುತ್ತಿದ್ದ ವೇಳೆ ಮಗಳ ಜೊತೆ ಫೋನ್ ಮೂಲಕ ಮಾತನಾಡಿದ್ದು ಅಲ್ಲಿಗೆ ತಲುಪುವಷ್ಟರಲ್ಲಿ ಮಗಳು ಮೃತಪಟ್ಟ ಸ್ಥಿತಿಯಲ್ಲಿದ್ದದ್ದು ಹಾಗೂ ಸ್ನಾನಗೃಹದ ಶವರ್ ಗೆ ನೇಣು ಬಿಗಿದುಕೊಂಡಿದ್ದಾರೆ ಎಂದು ಹೇಳಿರುವುದು ಮತ್ತು ತರಾತುರಿಯಲ್ಲಿ ಮೃತದೇಹವನ್ನು ಮನೆಯ ಹೊರಾಂಗಣದಲ್ಲಿ ಮಲಗಿಸಿದ್ದು ಇವೆಲ್ಲವೂ ಹಲವು ಅನುಮಾನಗಳನ್ನು ಹುಟ್ಟುಹಾಕಿದ್ದು ಇದೊಂದು ಕೊಲೆ ಎಂದು ಮೃತ ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದಾರೆ.

LEAVE A REPLY

Please enter your comment!
Please enter your name here