






ಪುತ್ತೂರು: ಶ್ರೀ ಕ್ಷೇತ್ರ ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಲೋಕ ಕಲ್ಯಾಣಾರ್ಥವಾಗಿ ವಿಶೇಷ ಪೂಜಾ ಕಾರ್ಯಕ್ರಮ ನಡೆಯಲಿದೆ.


ಜು.26ರಂದು ಪೂರ್ವಾಹ್ನ 9.00 ಗಂಟೆಯಿಂದ ಮೃತ್ಯುಂಜಯ ಹೋಮ ಹಾಗೂ ಭಕ್ತರಿಂದ ಲಕ್ಷ ಶಿವ ಪಂಚಾಕ್ಷರಿ ಮಂತ್ರ ಪಠನ ಯಜ್ಞ ನಡೆಯಲಿದೆ.



ಮೃತ್ಯುಂಜಯ ಹೋಮ :
ಮೃತ್ಯುಂಜಯ ಹೋಮವು ಪರಮಶಿವನಿಗೆ ಅತ್ಯಂತ ಪ್ರಿಯವಾದ, ವೇದೋಕ್ತ ಮತ್ತು ಪವಿತ್ರ ಯಜ್ಞವಾಗಿದೆ.”ಮೃತ್ಯುಂಜಯ” ಎಂದರೆ ಮೃತ್ಯುವನ್ನು ಜಯಿಸುವವನು. ಈ ಹೋಮವು ಮನುಷ್ಯನಲ್ಲಿ ಧೈರ್ಯ, ಭಕ್ತಿ ಮತ್ತು ಆತ್ಮವಿಶ್ವಾಸವನ್ನುಬೆಳೆಸುವ ಮಹಾನ್ ಆಧ್ಯಾತ್ಮಿಕ ಸಾಧನೆಯಾಗಿದೆ. ಮೃತ್ಯುಂಜಯ ಹೋಮವು ಕೇವಲ ವೈಯಕ್ತಿಕ ಕ್ಷೇಮಕ್ಕಾಗಿ ಮಾತ್ರವಲ್ಲ. ಕುಟು೦ಬದಸುಖ-ಶಾಂತಿ, ಸಮಾಜದ ಐಕ್ಯತೆ, ದೇಶದ ಸಮೃದ್ಧಿ ಹಾಗೂ ಲೋಕಕಲ್ಯಾಣಕ್ಕಾಗಿ ಸಲ್ಲಿಸುವ ಸಾಮೂಹಿಕ ಪ್ರಾರ್ಥನೆಯಾಗಿದೆ.ಆರೋಗ್ಯವಂತ ದೇಹ, ಸ್ಥಿರ ಮನಸ್ಸು, ಉತ್ತಮ ಚಿಂತನೆ ಹಾಗೂ ದೈವಭಕ್ತಿ-ಇವುಗಳೇ ನಿಜವಾದ ಸಂಪತ್ತು. ಅಂತಹ ಸಂಪತ್ತನ್ನು ಜೀವನದಲ್ಲಿ ಬೆಳೆಸಿಕೊಳ್ಳಲು ಈ ಮೃತ್ಯುಂಜಯ ಹೋಮವು ನಮಗೆ ಪ್ರೇರಣೆ ನೀಡುತ್ತದೆ.
ಲಕ್ಷ ಶಿವ ಪಂಚಾಕ್ಷರಿ ಪಠನ ಯಜ್ಞ:
‘ಓಂ ನಮಃ ಶಿವಾಯ’ ಎಂಬ ಪಂಚಾಕ್ಷರಿ ಮಂತ್ರವು ಪರಮಶಿವನ ಹೃದಯ ಮಂತ್ರ. ಶಿವ ಪಂಚಾಕ್ಷರಿ ಪಠನಯಜ್ಞದಲ್ಲಿ ಭಾಗವಹಿಸಿರುವುದು ನಮ್ಮೆಲ್ಲರ ಪುಣ್ಯ. ಈ ಐದು ಅಕ್ಷರಗಳು – ನ, ಮ, ಶಿ, ವಾ, ಯ – ಪಂಚಭೂತಗಳಾದ ಭೂಮಿ, ಜಲ,ಅಗ್ನಿ, ವಾಯು ಮತ್ತು ಆಕಾಶದ ಸಂಕೇತಗಳಾಗಿವೆ. ಶಿವ ಪಂಚಾಕ್ಷರಿ ಪಠನ ಯಜ್ಞವು ಕೇವಲ ಮಂತ್ರೋಚ್ಚಾರಣೆಯಲ್ಲ. ಇದು
ಮನಸ್ಸನ್ನು ಪರಿಶುದ್ಧಗೊಳಿಸುವ, ಅಹಂಕಾರವನ್ನು ಕರಗಿಸುವ, ಭಕ್ತಿಯನ್ನು ಬೆಳಗಿಸುವ ಹಾಗೂ ಶಿವತತ್ವದೊಂದಿಗೆ ನಮ್ಮನ್ನು ಬೆಸೆಯುವ ಆಧ್ಯಾತ್ಮಿಕ ಯಜ್ಞವಾಗಿದೆ. ನೂರಾರು ಭಕ್ತರು ಒಂದಾಗಿ ‘ಓಂ ನಮಃ ಶಿವಾಯ” ಎಂದು ಜಪಿಸಿದಾಗ, ಆ ದಿವ್ಯ ನಾದವು ಪರಿಸರವನ್ನು ಪವಿತ್ರಗೊಳಿಸಿ ಶಾಂತಿ ಮತ್ತು ಸಾತ್ವಿಕತೆಯನ್ನು ಹರಡುತ್ತದೆ. ಈ ಪಠನ ಯಜ್ಞದ ಪ್ರಮುಖ ಉಪಯೋಗವೆಂದರೆ ಮನಸ್ಸಿಗೆ ನೆಮ್ಮದಿ, ಏಕಾಗ್ರತೆ ಮತ್ತು ಆತ್ಮವಿಶ್ವಾಸವನ್ನು ನೀಡುವುದು. ಕುಟುಂಬದಲ್ಲಿ ಪ್ರೀತಿ, ಸೌಹಾರ್ದ ಮತ್ತು ಐಕ್ಯತೆಯನ್ನು ಬೆಳೆಸುವುದು.ಸಮಾಜದಲ್ಲಿ ಧರ್ಮ, ಸಂಸ್ಕೃತಿ ಮತ್ತು ಮಾನವೀಯ ಮೌಲ್ಯಗಳನ್ನು ಗಟ್ಟಿಗೊಳಿಸುವುದು. ವೈಯಕ್ತಿಕ ಕ್ಷೇಮದ ಜೊತೆಗೆ ಲೋಕಕಲ್ಯಾಣಕ್ಕಾಗಿ ಪ್ರಾರ್ಥಿಸುವ ಅಪೂರ್ವ ಅವಕಾಶವನ್ನು ಈ ಯಜ್ಞ ನಮಗೆ ನೀಡುತ್ತದೆ.










