ಪಾಣಾಜೆ ಹಾಲು ಉತ್ಪಾದಕರ ಸಹಕಾರ ಸಂಘದ ಸಾಮಾನ್ಯ ಸಭೆ

0

ನಿವ್ವಳ ಲಾಭ 5,51,876 ರೂ, ಪ್ರತಿ ಲೀಟರ್ ಹಾಲಿಗೆ 1.92 ರೂ ಬೋನಸ್ ಘೋಷಣೆ

ನಿಡ್ಪಳ್ಳಿ; ಪಾಣಾಜೆ ಹಾಲು ಉತ್ಪಾದಕರ ಸಹಕಾರ ಸಂಘದ ಸರ್ವ ಸದಸ್ಯರ 2025-26 ನೇ ಸಾಲಿನ ಸಾಮಾನ್ಯ ಸಭೆ ಜು.22 ರಂದು ಸಂಘದ ಅಧ್ಯಕ್ಷ ನಾರಾಯಣ ಪ್ರಕಾಶ್ ನೆಲ್ಲಿತ್ತಿಮಾರು ಇವರ ಅಧ್ಯಕ್ಷತೆಯಲ್ಲಿ ಸಂಘದ ರಜತಾಮೃತ ಸಭಾಭವನದಲ್ಲಿ ನಡೆಯಿತು.

 ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಧ್ಯಕ್ಷರು ವರದಿ ಸಾಲಿನಲ್ಲಿ ಸಂಘವು ಆಡಿಟ್ ವರ್ಗೀಕರಣದಲ್ಲಿ ‘ಎ’ ಶ್ರೇಣಿ ಪಡೆದಿದ್ದು ಸಂಘವು ರೂ.5,51,876.91 ನಿವ್ವಳ ಲಾಭ ಗಳಿಸಿದ್ದು ಸದಸ್ಯರಿಗೆ ಪ್ರತಿ ಲೀಟರ್ ಹಾಲಿಗೆ ರೂ.1.92 ಪೈಸೆ ಬೋನಸ್ ನೀಡಲಾಗುವುದು ಎಂದು ಅಧ್ಯಕ್ಷರು ಹೇಳಿದರು.

ವರದಿ ಸಾಲಿನಲ್ಲಿ ಸಂಘವು ಸರಾಸರಿ ದಿನಂಪ್ರತಿ 360.9 ಲೀಟರ್ ಹಾಲು ಶೇಖರಣೆ ಮಾಡಿದ್ದು ಗರಿಷ್ಠ 575 ಲೀಟರ್ ಶೇಖರಣೆ ಮಾಡಿದ್ದು 95 ಸದಸ್ಯರು ಹಾಲನ್ನು ಸಂಘಕ್ಕೆ ಸರಬರಾಜು ಮಾಡಿರುತ್ತಾರೆ.ಸಂಘವು 53,41,269  ರೂಪಾಯಿಯ 131721.1 ಲೀಟರ್ ಹಾಲನ್ನು ಶೇಖರಣೆ ಮಾಡಿರುತ್ತದೆ.ಅದರಲ್ಲಿ 15,88,624.80 ರೂಪಾಯಿಯ 28363.3 ಲೀಟರ್ ಹಾಲನ್ನು ಸ್ಥಳೀಯವಾಗಿ ಮಾರಾಟ ಮಾಡಿರುತ್ತದೆ.ಹಾಲು ಒಕ್ಕೂಟಕ್ಕೆ 45,98,763.20. ರೂಪಾಯಿಯ 108820 ಕೆ.ಜಿ ಹಾಲನ್ನು ಮಾರಾಟ ಮಾಡಿರುತ್ತದೆ.ವರದಿ ಸಾಲಿನಲ್ಲಿ 12,28,330 ರೂಪಾಯಿಯ 971 ಚೀಲ ನಂದಿನಿ ಪಶು ಆಹಾರ, ರೂ.1,01, 292 ರ ಲವಣ ಮಿಶ್ರಣ 1858 ಕೆ.ಜಿ ಯನ್ನು ಮಾರಾಟ ಮಾಡಲಾಗಿದೆ.ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ  ಮಾರಾಟದಿಂದ ರೂ.3,14,944.44 ವ್ಯಾಪಾರ ಲಾಭ ಬಂದಿರುತ್ತದೆ ಎಂದು ಅಧ್ಯಕ್ಷರು ತಿಳಿಸಿದರು.694 ಜಾನುವಾರುಗಳಿಗೆ ಕೃತಕ ಗರ್ಭಧಾರಣೆ ಮತ್ತು 536 ಜಾನುವಾರುಗಳಿಗೆ ಪ್ರಥಮ ಚಿಕಿತ್ಸೆ ನೀಡಲಾಗಿದೆ.ಸದಸ್ಯರ ಕಲ್ಯಾಣ ನಿಧಿಯಿಂದ 3  ರಾಸುಗಳಿಗೆ ಆಕಸ್ಮಿಕ ಮರಣ ಹೊಂದಿರುವುದಕ್ಕೆ ರೂ. 9,000 ನೀಡಲಾಗಿದೆ. ಹಾಲು ಒಕ್ಕೂಟದಿಂದ ಸ್ವಯಂಚಾಲಿತ ಹಾಲು ಸಂಗ್ರಹಣ ಘಟಕಕ್ಕೆ ಅನುದಾನವಾಗಿ ರೂ.90,000 ಬಂದಿರುತ್ತದೆ ಎಂದು ಅಧ್ಯಕ್ಷರು ತಿಳಿಸಿದರು.ಸಂಘವು ದ.ಕ ಕೇಂದ್ರ ಸಹಕಾರಿ ಬ್ಯಾಂಕ್, ಪಾಣಾಜೆ ಕೃ.ಪ ಸ.ಸಂಘ, ಕೆನರಾ ಬ್ಯಾಂಕ್ ಗಳಲ್ಲಿ ಒಟ್ಟು ರೂ. 59,41,393.98 ನ್ನು ನಿರಖು ಠೇವಣಿ ಇದೆ ಎಂದು ಎಂದು ಅಧ್ಯಕ್ಷರು ಹೇಳಿದರು.

ಅಭಿನಂದನೆ ಸಲ್ಲಿಕೆ;
ರಣಮಂಗಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಿಂದ ರಜತಾಮೃತ ಸಭಾಭವನಕ್ಕೆ ವೇದಿಕೆ ಹಾಗೂ ಕುರ್ಚಿ ತಯಾರಿಸಲು ಮರಗಳನ್ನು ದಾನವಾಗಿ ನೀಡಿದ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಶ್ರೀ ಕೃಷ್ಣ ಬೋಳಿಲ್ಲಾಯ ಕಡಮಾಜೆ ಇವರಿಗೆ ಅಧ್ಯಕ್ಷರು ಅಭಿನಂದನೆ ಸಲ್ಲಿಸಿದರು. ಅಲ್ಲದೇ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಪಾಣಾಜೆ ಒಕ್ಕೂಟದಿಂದ ಸಭಾಭವನಕ್ಕೆ ಧ್ವನಿವರ್ಧಕ ನೀಡಿದ್ದು ಅವರಿಗೂ ಅಭಿನಂದನೆ ಸಲ್ಲಿಸಿದರು. 

ಗೋದಾನ ಕಾರ್ಯಕ್ರಮ;
ಸಂಘದ ಹಾಲು ಶೇಖರಣೆ ಕುಂಠಿತವಾಗುತ್ತಿರುವುದನ್ನು ಗಮನಿಸಿ ಗ್ರಾಮದ ಬಡಜನರ ಆರ್ಥಿಕ ಸಬಲೀರಣ ಅಲ್ಲದೇ ಸಾವಯವ ಕೃಷಿಗೆ ಪ್ರೊತ್ಸಾಹ ನೀಡುವ ದೃಷ್ಟಿಯಿಂದ  ‘ಗೋದಾನ’ ಎಂಬ ಪರಿಕಲ್ಪನೆಯೊಂದಿಗೆ ಪ್ರತಿ ವರ್ಷ ಒಬ್ಬರಂತೆ ಫಲಾನುಭವಿಯನ್ನು ಆಯ್ಕೆ ಮಾಡಿ ರೈತನ ಮೂಲಧನವನ್ನೂ ಸೇರಿಸಿ ಉತ್ತಮ ಹಸುವನ್ನು ನೀಡಲಾಗಿದೆ ಎಂದು ಅಧ್ಯಕ್ಷರು ತಿಳಿಸಿದರು.ಸಂಘದ ಸರ್ವತೋಮುಖ ಅಭಿವೃದ್ಧಿಗೆ ಹಸಿರು ಮೇವು ತಾಕು ನಿರ್ಮಾಣ, ಹಲವು ಯೋಜನೆಯನ್ನು ರೂಪಿಸಿದ್ದುಸಂಘಕ್ಕೆ ಉತ್ತಮ ಗುಣಮಟ್ಟದ ಶುದ್ಧ ಹಾಲನ್ನು ಹೆಚ್ಚು ಸರಬರಾಜು ಮಾಡಿ ಸಹಕರಿಸುವಂತೆ ಅಧ್ಯಕ್ಷರು ವಿನಂತಿಸಿದರು.

ಶಿಸ್ತು ಬದ್ದವಾದ ಆರ್ಥಿಕ ಸ್ಥಿತಿ-ಉಪ ವ್ಯವಸ್ಥಾಪಕ ಡಾ.ಸತೀಶ್ ರಾವ್ ;
ಮುಖ್ಯ ಅತಿಥಿಯಾದ ದ.ಕ.ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಡಾ.ಸತೀಶ್ ರಾವ್ ಮಾತನಾಡಿ ಈ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮತ್ತು ಇತರ ಸಿಬ್ಬಂದಿಗಳ ಶಿಸ್ತುಬದ್ಧ ವ್ಯವಹಾರದಿಂದ ಅರ್ಥಿಕ ಪರಿಸ್ಥಿತಿಯನ್ನು ಉತ್ತಮ ರೀತಿಯಲ್ಲಿ ಇಟ್ಟುಕೊಂಡಿದ್ದಾರೆ. ಮೂವತ್ತ ನಾಲ್ಕು ವರ್ಷದ ಹಿಂದೆ ಒಂದು ಸಣ್ಣ ಕಟ್ಟಡದಲ್ಲಿ ಆರಂಭವಾದ ಈ ಸಂಘ ಇಂದು ಬಹಳ ಅಭಿವೃದ್ಧಿ ಹೊಂದಿದೆ.ಇದಕ್ಕೆ ಇಲ್ಲಿಯ ಆಡಳಿತ ಮಂಡಳಿಯ ಪ್ರೊತ್ಸಾಹ ಕೂಡ ಸಿಕ್ಕಿದ್ದು ಈ ಸಂಘ ಇಡೀ ಜಿಲ್ಲೆಯಲ್ಲೇ ಇಂದು ಗುರುತಿಸಿ ಕೊಂಡಿದೆ ಎಂದು ಹೇಳಿ ಒಕ್ಕೂಟದಿಂದ ಹೈನುಗಾರರಿಗೆ ಸಿಗುವ ಸವಲತ್ತುಗಳ ಬಗ್ಗೆ ವಿವರಿಸಿದರು.

ದಾಖಲೆಗಳ  ಅಚ್ಚುಕಟ್ಟಾದ ನಿರ್ವಹಣೆ;
ಒಕ್ಕೂಟದ ವಿಸ್ತರಣಾಧಿಕಾರಿ ವಿದ್ಯಾರವರು ಮಾತನಾಡಿ ಸಿಬ್ಬಂದಿಗಳು ಸಂಘದ ಎಲ್ಲಾ ದಾಖಲೆಗಳನ್ನು ನೀಟಾಗಿ ಜೋಡಿಸುವ ಮತ್ತು ಅಚ್ಚುಕಟ್ಟಾದ ನಿರ್ವಹಣೆಯನ್ನು ನೊಡುವಾಗ ಬಹಳ ಸಂತೋಷವಾಗುತ್ತದೆ. ನೇರ ನಡೆ ನುಡಿಯ ಅಧ್ಯಕ್ಷರು ಈ ಸಂಘವನ್ನು ಉತ್ತಮ ರೀತಿಯಲ್ಲಿ ನಡೆಸಿಕೊಂಡು ಹೋಗುತ್ತಿರುವುದನ್ನು ನೋಡಿದರೆ ಇಂತಹ ಅಧ್ಯಕ್ಷರು ಎಲ್ಲಾ ಸಂಘದಲ್ಲಿಯೂ ಇದ್ದರೆ ನಮ್ಮ ಅಧಿಕಾರಿಗಳ ಕೆಲಸ ಸ್ವಲ್ಪ ಕಡಿಮೆಯಾಗಬಹುದು ಎಂದು ಪ್ರಶಂಸಿದರು. ಹಾಲು ಒಕ್ಕೂಟದಲ್ಲಿ ರೈತರಿಗೆ ಇರುವ ಹಲವಾರು ಯೋಜನೆಯ ಬಗ್ಗೆ ಮಾಹಿತಿ ನೀಡಿ ಅದರ ಉಪಯೋಗ ಪಡೆದು ಕೊಳ್ಳುವಂತೆ ತಿಳಿಸಿದರು.ವೇದಿಕೆಯಲ್ಲಿ ಸಂಘದ ಎಲ್ಲಾ ನಿರ್ದೇಶಕರು ಉಪಸ್ಥಿತರಿದ್ದರು.

 ನಿರ್ದೇಶಕಿ ಗುಲಾಬಿ.ರೈ, ಸಿಬ್ಬಂದಿ ಪೂಜಾ ಪ್ರಾರ್ಥಿಸಿದರು.ಉಪಾಧ್ಯಕ್ಷ ಉಮೇಶ್ ಬಲ್ಯಾಯ.ಕೆ ಸ್ವಾಗತಿಸಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತ್ಯನಾರಾಯಣ ಅಡಿಗ.ಬಿ ವರದಿ ವಾಚಿಸಿ ವಂದಿಸಿದರು. ಸಿಬ್ಬಂದಿಗಳಾದ ಹರೀಶ್ ಬಲ್ಯಾಯ,ಶಾರದ ಮತ್ತೀತರರು ಸಹಕರಿಸಿದರು. ಸಂಘದ ಸದಸ್ಯರು ಪಾಲ್ಗೊಂಡರು.ಮಧ್ಯಾಹ್ನ  ಸಹಭೋಜನ ವ್ಯವಸ್ಥೆ ನಡೆಯಿತು.

ಬಹುಮಾನ ವಿತರಣೆ;
ವರದಿ ಸಾಲಿನಲ್ಲಿ ಅತೀ ಹೆಚ್ಚು ಹಾಲು ಹಾಕಿದ ಸಂಘದ ನಿರ್ದೇಶಕರುಗಳಾದ ವಿದ್ಯಾ ಮಣ್ಣಂಗಳ( 15,778 ಲೀ) ಪ್ರಥಮ,ಗುಲಾಬಿ.ರೈ ಬೊಳ್ಳಿಂಬಳ (6,543 ಲೀ)ದ್ವಿತೀಯ,ಯತೀಶ್ ಕುಮಾರ್ ರೈ ಪಡ್ಯಂಬೆಟ್ಟು(6070 ಲೀ) ತೃತೀಯ ಸ್ಥಾನ ಪಡೆದು ಕೊಂಡರು. ಇವರಿಗೆ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಅತೀ ಹೆಚ್ಚು ಹಾಲು ಖರೀದಿಸಿದ ಶ್ರೀ ದುರ್ಗಾ ಹೋಟೆಲ್,ಶ್ರೀ ಮಾತಾ ಹೋಟೆಲ್ ಹಾಗೂ ಶಿವನಂದಿನಿ ಮಿಲ್ಕ್ ಪಾರ್ಲರ್ ರವರಿಗೆ ಪ್ರೊತ್ಸಾಹ ಬಹುಮಾನ ನೀಡಲಾಯಿತು. ಅಲ್ಲದೆ 200 ಲೀಟರ್ ಗಿಂತ ಜಾಸ್ತಿ ಹಾಲು ಹಾಕಿದ ರೈತರಿಗೆ ಪ್ರೋತ್ಸಾಹ ಬಹುಮಾನ ನೀಡಲಾಯಿತು.

LEAVE A REPLY

Please enter your comment!
Please enter your name here