ನೆಲ್ಯಾಡಿ ಸಂತಜಾರ್ಜ್ ಪಿಯು ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಚಟುವಟಿಕೆಗಳ ಉದ್ಘಾಟನೆ

0

ನೆಲ್ಯಾಡಿ: ಇಲ್ಲಿನ ಸಂತಜಾರ್ಜ್ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ 2026-27ನೇ ಸಾಲಿನ ಕಾರ್ಯಚಟುವಟಿಕೆಗಳ ಉದ್ಘಾಟನಾ ಸಮಾರಂಭ ಜು.22ರಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.


ಉದ್ಘಾಟಿಸಿ, ಎನ್‌ಎಸ್‌ಎಸ್ ಸ್ವಯಂ ಸೇವಕರಿಗೆ ಬ್ಯಾಡ್ಜ್ ವಿತರಿಸಿ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿ ಅಬ್ರಹಾಂ ವರ್ಗೀಸ್ ಅವರು, ಯೌವ್ವನ ಎಂಬುದು ಪ್ರಕೃತಿ ಕೊಟ್ಟ ಅಮೂಲ್ಯ ದಾನ. ಅದನ್ನು ಸದುಪಯೋಗಪಡಿಸಿಕೊಂಡು ಜೀವನವನ್ನು ಅರ್ಥಪೂರ್ಣವಾಗಿ ರೂಪಿಸಿಕೊಳ್ಳಬೇಕು. ಸೋಲು ಬಂದಾಗ ಕುಗ್ಗದೇ ಅದನ್ನು ಸವಾಲಾಗಿ ಸ್ವೀಕರಿಸಿ ಮುನ್ನಡೆಯಬೇಕು ಎಂದು ವಿದ್ಯಾಸಂಸ್ಥೆಗಳ ಕಾರ್ಯದರ್ಶಿ ಅಬ್ರಹಾಂ ವರ್ಗೀಸ್ ಹೇಳಿದರು. ಮುಖ್ಯ ಅತಿಥಿಯಾಗಿದ್ದ ಮಂಗಳೂರು ವಿ.ವಿ.ನೆಲ್ಯಾಡಿ ಘಟಕ ಕಾಲೇಜಿನ ಉಪನ್ಯಾಸಕಿ ಶ್ರುತಿ ಮಾತನಾಡಿ ಎನ್‌ಎಸ್‌ಎಸ್ ಸಮಾಜ ಸೇವೆಯತ್ತ ವಿದ್ಯಾರ್ಥಿಗಳನ್ನು ಪ್ರೇರೇಪಿಸುವುದರ ಜೊತೆಗೆ ವ್ಯಕ್ತಿತ್ವ ವಿಕಸನಕ್ಕೂ ದಾರಿಯಾಗುತ್ತದೆ. ವಾರ್ಷಿಕ ಶಿಬಿರಗಳಲ್ಲಿ ಭಾಗವಹಿಸುವುದರಿಂದ ಐಕ್ಯತೆ, ಸಹಕಾರ ಮತ್ತು ಸೇವಾಮನೋಭಾವ ಬೆಳೆಯುತ್ತದೆ ಎಂದು ಹೇಳಿದರು.


ಸಂಸ್ಥೆಯ ಸಂಚಾಲಕ ರೆ.ಫಾ.ನೋಮಿಸ್ ಕುರಿಯಾಕೋಸ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಪಿಯುಸಿ ವಿಭಾಗದ ಸಂಯೋಜಕ ಕಿರಣ್ ರೈ, ಎನ್‌ಎಸ್‌ಎಸ್ ಘಟಕ ನಾಯಕರಾದ ರಕ್ಷಿತ್ ಹಾಗೂ ಅಶ್ವಿನಿ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಚಾರ್ಯ ಹಾಗೂ ಎನ್‌ಎಸ್‌ಎಸ್ ನಿರ್ದೇಶಕ ಏಲಿಯಾಸ್ ಎಂ.ಕೆ. ರಾಷ್ಟ್ರೀಯ ಸೇವಾ ಯೋಜನೆಯ ಪ್ರತಿಜ್ಞಾವಿಧಿಯನ್ನು ಸ್ವಯಂಸೇವಕರಿಗೆ ಬೋಧಿಸಿದರು. ಕನ್ನಡ ಉಪನ್ಯಾಸಕಿ ಸವಿತಾ ಸ್ವಾಗತಿಸಿದರು. ಸ್ವಯಂಸೇವಕಿ ಅಶ್ವಿನಿ ವಂದಿಸಿದರು. ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಹಾಗೂ ಉಪನ್ಯಾಸಕ ವಿಶ್ವನಾಥ ಶೆಟ್ಟಿ ಕೆ. ಕಾರ್ಯಕ್ರಮ ನಿರೂಪಿಸಿದರು. ಎನ್‌ಎಸ್‌ಎಸ್ ಸ್ವಯಂಸೇವಕ ವಿದ್ಯಾರ್ಥಿಗಳ ಧ್ಯೇಯ ಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಕಾಲೇಜಿನ ಉಪನ್ಯಾಸಕರು, ಶಿಕ್ಷಕರು ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here