







ಮೌಲ್ಯಧಾರಿತ ಶಿಕ್ಷಣದಿಂದ ಬಾಂಧವ್ಯದ ಬೆಸುಗೆ: ಡಾ. ರಾಜಾರಾಮ್


ಉಪ್ಪಿನಂಗಡಿ: ನೂರಕ್ಕೆ ನೂರು ಅಂಕ ಗಳಿಸುವುದು ಶಿಕ್ಷಣವಲ್ಲ. ಬದುಕು ಕಟ್ಟುವುದನ್ನು ಕಲಿಸುವ ಶಿಕ್ಷಣವೇ ನಿಜವಾದ ಶಿಕ್ಷಣ. ಮೌಲ್ಯಧಾರಿತ ಶಿಕ್ಷಣದಿಂದ ಮಾತ್ರ ಬಾಂಧವ್ಯದ ಬೆಸುಗೆ ಸಾಧ್ಯ ಎಂದು ಹಿರಿಯ ದಂತ ವೈದ್ಯ ಡಾ. ರಾಜಾರಾಮ್ ಕೆ.ಬಿ. ತಿಳಿಸಿದರು.



ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ದಾನಿಗಳು ನೀಡಿದ ಕೊಡುಗೆಗಳ ಉದ್ಘಾಟನೆ, ಉಪನ್ಯಾಸಕರಿಗೆ ಹಾಗೂ ದಾನಿಗಳಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.
ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಮೀರಿಸುವಂತೆ ಈ ಸರಕಾರಿ ಕಾಲೇಜು ಬೆಳೆದು ನಿಂತಿದೆ. ಗುಣಮಟ್ಟದ ಶಿಕ್ಷಣದಿಂದಾಗಿ ಈ ಕಾಲೇಜು ಹೆಸರುವಾಸಿಯಾಗಿದೆ. ಸಮಸ್ಯೆಯಿಲ್ಲದ ಮನುಷ್ಯನಿಲ್ಲ. ಪರಿಹಾರವಿಲ್ಲದ ಸಮಸ್ಯೆಗಳಿಲ್ಲ. ಆದ್ದರಿಂದ ವಿದ್ಯಾರ್ಥಿಗಳು ಅದನ್ನೆಲ್ಲಾ ಎದುರಿಸಿ ಸಮಾಜದಲ್ಲಿ ಅನೋನ್ಯವಾಗಿ ಬದುಕಬೇಕು ಎಂದರು.
ದ.ಕ. ಜಿಲ್ಲಾ ಅಟೋಮೊಬೈಲ್ಸ್ ಮತ್ತು ಟೈಯರ್ ಅಸೋಸಿಯೇಶನ್‌ನ ಅಧ್ಯಕ್ಷ ವಿಲಾಸ್ ಕುಮಾರ್ ಮಾತನಾಡಿ, ನಮ್ಮ ಸಂಘದ ವತಿಯಿಂದ ಮಂಗಳೂರು ನಗರದಾದ್ಯಂತ ಹಲವು ಶುದ್ಧ ಕುಡಿಯುವ ನೀರಿನ ಘಟಕ ನೀಡಿದ್ದೆವು. ಆದರೆ ಈ ಬಾರಿ ಈ ಕಾಲೇಜಿನಿಂದ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಇಲ್ಲಿಗೂ ಶುದ್ಧ ಕುಡಿಯುವ ನೀರಿನ ಘಟಕವನ್ನು ನೀಡಿದ್ದು, ಇದಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ. ಇನ್ನು ಕೆಲವು ಕಾಲೇಜುಗಳು ನಮ್ಮ ಮುಂದೆ ಬೇಡಿಕೆಯನ್ನು ಮುಂದಿಟ್ಟಿವೆ. ಇಂತಹ ಸರಕಾರಿ ವಿದ್ಯಾಸಂಸ್ಥೆ ಸಿಕ್ಕಿರುವುದು ವಿದ್ಯಾರ್ಥಿಗಳ ಪುಣ್ಯ. ವಿದ್ಯಾರ್ಥಿಗಳು ಇದನ್ನು ಸದುಪಯೋಗಪಡಿಸಿಕೊಂಡು ಸಾಧಕರಾಗಬೇಕು ಎಂದರು.

ಪ್ರೌಢಶಾಲಾ ವಿಭಾಗದ ಎಸ್‌ಡಿಎಂಸಿ ಅಧ್ಯಕ್ಷೆ ಗುಣವತಿ ಮಾತನಾಡಿ, ಸರಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಇಂತಹ ಶಿಕ್ಷಣ ದೊರೆತರೆ ಯಾವುದೇ ಸರಕಾರಿ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳ ಕೊರತೆಯಿಂದ ಬಾಗಿಲು ಹಾಕಲು ಸಾಧ್ಯವಿಲ್ಲ. ಬದಲಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಬಾಗಿಲು ಹಾಕುವ ಸ್ಥಿತಿ ನಿರ್ಮಾಣವಾಗಬಹುದು ಎಂದರು.
ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯ ವೆಂಕಪ್ಪ ಪೂಜಾರಿ ಮಾತನಾಡಿ, ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ನಮ್ಮ ಕಾಲೇಜು ದ.ಕ. ಜಿಲ್ಲೆಯಲ್ಲಿಯೇ ಪ್ರಥಮ ಸ್ಥಾನ ಪಡೆದಿದೆ. ರಾಜ್ಯಕ್ಕೆ ಇದು ಪ್ರಥಮ ಸ್ಥಾನ ಬರಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜು ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಅಝೀಝ್ ಬಸ್ತಿಕ್ಕಾರ್ ಮಾತನಾಡಿ, ಅವರವರ ಜವಾಬ್ದಾರಿ ಸರಿಯಾಗಿ ನಿರ್ವಹಿಸಿದಾಗ ಸಂಸ್ಥೆಯೊಂದು ಉನ್ನತಿಗೇರಲು ಸಾಧ್ಯ ಎನ್ನುವುದಕ್ಕೆ ಉಪ್ಪಿನಂಗಡಿಯ ಸರಕಾರಿ ಪದವಿ ಪೂರ್ವ ಕಾಲೇಜೇ ಸಾಕ್ಷಿ. ಇಲ್ಲಿನ ಉಪನ್ಯಾಸಕ ವೃಂದದ ಶ್ರಮದಿಂದಾಗಿ ಕಾಲೇಜು ಉತ್ತಮ ಹೆಸರನ್ನು ಪಡೆಯುತ್ತಿದೆ. ಆದ್ದರಿಂದ ಉಪನ್ಯಾಸಕರು ಈ ಅಭಿನಂದನೆಗೆ ಅರ್ಹರು. ಕಾಲೇಜಿಗೆ ದಾನ ನೀಡಿದವರನ್ನು ಅಭಿನಂದಿಸಿ ಗೌರವಿಸುವುದು ನಮ್ಮ ಜವಾಬ್ದಾರಿಯಾಗಿದೆ. ನಮ್ಮ ಈ ಕಾಲೇಜಿನಲ್ಲಿ ಕಂಪ್ಯೂಟರ್‌ಗಳ ಕೊರತೆಯಿದೆ. ಕಂಪ್ಯೂಟರ್‌ಗಳನ್ನು ಯಾರಾದರೂ ದಾನಿಗಳು ನೀಡುವುದಿದ್ದಲ್ಲಿ ನೀಡಬಹುದು. ಹೊಸದೇ ಆಗಬೇಕೆಂದಿಲ್ಲ. ಉತ್ತಮವಾಗಿರುವ ಹಳೆಯ ಕಂಪ್ಯೂಟರ್‌ಗಳಾದರೂ ತೊಂದರೆಯಿಲ್ಲ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಇಬ್ರಾಹೀಂ, ಈ ಬಾರಿ ವಿದ್ಯಾರ್ಥಿಗಳ ದಾಖಲಾತಿಯಲ್ಲಿ ನಮ್ಮ ಕಾಲೇಜು ದ.ಕ. ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದೆ. ಇಲ್ಲೀಗ 977 ವಿದ್ಯಾರ್ಥಿಗಳು ಇದ್ದಾರೆ. 2025-26ನೇ ಶೈಕ್ಷಣಿಕ ಸಾಲಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ನಮ್ಮ ಕಾಲೇಜು ಶೇ.96 ಫಲಿತಾಂಶ ದಾಖಲಿಸಿದೆ. ಇಲ್ಲಿ ಕೇವಲ ಪಠ್ಯ ವಿಷಯಕ್ಕೆ ಮಾತ್ರ ಒತ್ತು ನೀಡದೇ ಕ್ರೀಡೆ, ಸಾಹಿತ್ಯ ಸೇರಿದಂತೆ ಹತ್ತು ಹಲವು ಪಠ್ಯೇತರ ಚಟುವಟಿಕೆಗಳಿಗೂ ಒತ್ತು ನೀಡುತ್ತಿದೆ. ಶಾಸಕ ಅಶೋಕ್ ಕುಮಾರ್ ರೈಯವರ ಅನುದಾನದಿಂದ ಸುಸಜ್ಜಿತ ಕಟ್ಟಡವೂ ನಿರ್ಮಾಣಗೊಂಡು ತರಗತಿ ಕೊಠಡಿಗಳ ಕೊರತೆಯನ್ನು ನೀಗಿಸಿದೆ. ನಮ್ಮ ಪ್ರತಿಯೊಂದು ಕಾರ್ಯಕ್ಕೂ ಬೆನ್ನೆಲುಬಾಗಿ ಕಾಲೇಜು ಅಭಿವೃದ್ಧಿ ಸಮಿತಿ ನಿಲ್ಲುತ್ತಿದೆ. ಉತ್ತಮ ಉಪನ್ಯಾಸಕ ವೃಂದವೂ ಇದ್ದು, ಎಲ್ಲರ ಒಗ್ಗಟ್ಟಿನ ಪರಿಶ್ರಮದಿಂದಾಗಿ ನಮ್ಮ ಕಾಲೇಜು ಉತ್ತಮ ಹೆಸರನ್ನು ಪಡೆಯುವಂತಾಗಿದೆ. ದಾನಿಗಳ ನೆರವಿನಿಂದ ‘ಆಸರೆ’ ಯೋಜನೆಯಡಿ ತಂದೆ- ತಾಯಿಯಿಲ್ಲದ ಎಂಟು ಮಕ್ಕಳನ್ನು ದತ್ತು ಪಡೆದು ಅವರ ಪುಸ್ತಕ, ಸಮವಸ್ತ್ರ ಸೇರಿದಂತೆ ಎರಡು ವರ್ಷ ಅವರ ಸಂಪೂರ್ಣ ಶಿಕ್ಷಣದ ಜವಾಬ್ದಾರಿಯನ್ನು ಕಾಲೇಜು ವತಿಯಿಂದಲೇ ನೋಡಿಕೊಳ್ಳಲಾಗುತ್ತದೆ ಎಂದರು.
ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ – ಮಹಾಕಾಳಿ ದೇವಾಲಯದ ವತಿಯಿಂದ ನೀಡಲಾದ ಸಿಸಿ ಕ್ಯಾಮರಾಗಳನ್ನು ಹಾಗೂ ಕಾಲೇಜಿನಲ್ಲಿ ಆರಂಭಿಸಲಾದ ಜಿಮ್ ಕೇಂದ್ರವನ್ನು ಮತ್ತು ದ.ಕ. ಜಿಲ್ಲಾ ಅಟೋಮೊಬೈಲ್ಸ್ ಮತ್ತು ಟೈಯರ್ ಅಸೋಸಿಯೇಶನ್ ನ ವತಿಯಿಂದ ನೀಡಲಾದ ಶುದ್ಧ ಕುಡಿಯುವ ನೀರಿನ ಘಟಕವನ್ನು ಹಸ್ತಾಂತರಿಸಲಾಯಿತು.
ವೇದಿಕೆಯಲ್ಲಿ ದ.ಕ. ಜಿಲ್ಲಾ ಅಟೋಮೊಬೈಲ್ಸ್ ಮತ್ತು ಟೈಯರ್ ಅಸೋಸಿಯೇಶನ್‌ನ , ಸಲಹೆಗಾರ ರತ್ನಾಕರ ಪೈ, ಖಜಾಂಚಿ ಲಕ್ಷ್ಮೀನಾರಾಯಣ ನಾಯಕ್, ವ್ಯವಸ್ಥಾಪಕ ರಾಮದಾಸ್, ಸದಸ್ಯ ಕೇಶವ, ಉಪ್ಪಿನಂಗಡಿ ಗ್ರಾ.ಪಂ. ಮಾಜಿ ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು, ಸದಸ್ಯ ತೌಸೀಫ್ ಯು.ಟಿ., ಉಪ್ಪಿನಂಗಡಿ ಮಾಲೀಕುದ್ದೀನಾರ್ ಜುಮಾ ಮಸೀದಿಯ ಅಧ್ಯಕ್ಷ ಯೂಸುಫ್ ಹಾಜಿ, ಪ್ರೌಢಶಾಲಾ ವಿಭಾಗದ ಮುಖ್ಯಗುರು ದೇವಕಿ, ನಿವೃತ ಯೋಧ ಜಯಕುಮಾರ್ ಪೂಜಾರಿ, ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಅನಿ ಮಿನೇಜಸ್, ನಾಗೇಶ್ ಪ್ರಭು, ಆದಂ ಕೊಪ್ಪಳ, ಮಜೀದ್ ಮಠ, ಡಾ. ನಿರಂಜನ್ ರೈ, ಜಾನ್ ಕೆನ್ಯೂಟ್ ಉಪಸ್ಥಿತರಿದ್ದರು.










