ಇತಿಹಾಸದ ಪುಟ ಸೇರಿದ ಪುತ್ತೂರಿನ ನಟರಾಜ ವೇದಿಕೆ

0

ಪುತ್ತೂರು:ಕಳೆದ 24 ವರ್ಷಗಳಿಂದ ಸಾಂಸ್ಕೃತಿಕ ರಂಗಗಳಿಗೆ ವೇದಿಕೆಯಾಗಿ ಕಲಾವಿದರಿಗೆ ಪ್ರೋತ್ಸಾಹ ಮತ್ತು ಪ್ರೇಕ್ಷಕರಿಗೆ ಮನೋರಂಜನೆ,ಸಂಸ್ಕಾರ ಸಂಸ್ಕೃತಿಯ ಪಾಠ ಹೇಳಿಕೊಡುವ ವೇದಿಕೆಯಾಗಿ ಬಳಕೆಯಾಗುತ್ತಿದ್ದ ಪುತ್ತೂರಿನ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆ ಸಂಪೂರ್ಣ ನೆಲಸಮಗೊಳ್ಳುವ ಮೂಲಕ ಇತಿಹಾಸದ ಪುಟ ಸೇರಿದೆ.


ದೇವಳದ ಪಕ್ಕದಲ್ಲಿರುವ ತೋಡಿನ ಬಳಿಯಿಂದ 30 ಮೀಟರ್ ಅಗಲದ ರಸ್ತೆಯ ಮತ್ತು ನೂತನ ಸಭಾಭವನದೊಂದಿಗೆ ರಂಗಮಂದಿರ ನಿರ್ಮಾಣ ಮಾಡುವ ಉದ್ದೇಶವಿಟ್ಟುಕೊಂಡು ಈ ಐತಿಹಾಸಿಕ ವೇದಿಕೆಯನ್ನು ತೆರವು ಮಾಡಲಾಗಿದೆ.1994ರಲ್ಲಿ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನಕ್ಕೆ ಶಿಲಾನ್ಯಾಸ ನೆರವೇರಿಸಿ 1996ಕ್ಕೆ ಉದ್ಘಾಟನೆಯ ಸಂದರ್ಭ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ವೇದಿಕೆಯ ಬೇಡಿಕೆ ವ್ಯಕ್ತವಾದ ಹಿನ್ನೆಲೆಯಲ್ಲಿ 2002ರ ಮಾರ್ಚ್ ತಿಂಗಳಲ್ಲಿ ನಟರಾಜ ವೇದಿಕೆಯನ್ನು ನಿರ್ಮಾಣ ಮಾಡಲಾಯಿತು.

ಈ ವೇದಿಕೆಯು ಯಕ್ಷಗಾನ, ಭರತನಾಟ್ಯ, ದಸರಾ ನಾಡಹಬ್ಬ ಸಹಿತ ಸಾಂಸ್ಕೃತಿಕ ಲೋಕದ ಜೊತೆಗೆ ಹಲವಾರು ಪೂಜೆ, ಪುನಸ್ಕಾರಗಳಿಗೆ ಸಾಕ್ಷಿಯಾಗಿತ್ತು.ಇದೀಗ ದೇವಳದ ಬಳಿಯ ತೋಡಿನ ಪಕ್ಕದಲ್ಲೇ ರಸ್ತೆ ನಿರ್ಮಾಣದ ಹಿನ್ನೆಲೆಯಲ್ಲಿ ಸಭಾಭವನದ ಪಾಕಾಶಾಲೆ ಮತ್ತು ಅದಕ್ಕೆ ತಾಗಿಕೊಂಡಿರುವ ನಟರಾಜ ವೇದಿಕೆಯನ್ನು ತೆರವು ಮಾಡಲಾಗಿದೆ.

ಪುತ್ತೂರಿನಲ್ಲಿ ಸಂಸ್ಕಾರಯುತ ಸಾಂಸ್ಕೃತಿಕ ಲೋಕಕ್ಕೆ ಯಾವುದೇ ಚ್ಯುತಿ ಬಾರದ ರೀತಿಯಲ್ಲಿ ನೂತನ ರಂಗ ಮಂದಿರ ನಿರ್ಮಾಣ ಆಗಲಿದೆ.ಶಾಸಕ ಅಶೋಕ್ ಕುಮಾರ್ ರೈ ಅವರ ಮಾರ್ಗದರ್ಶನದಲ್ಲಿ ದೇವಳದ ಅಭಿವೃದ್ದಿ ಕಾರ್ಯವನ್ನು ಮುಂದಿಟ್ಟುಕೊಂಡು ಈಗಾಗಲೇ ದೇವಳದ ಗೋ ಶಾಲೆಯ ಬಳಿ ರೂ.15 ಕೋಟಿ ವೆಚ್ಚದಲ್ಲಿ ನೂತನ ಸಭಾಭವನ, ರಂಗಮಂದಿರ ನಿರ್ಮಾಣ ಆಗಲಿದೆ.ಈಗಾಗಲೇ ದೇವಳದ ತೋಡಿನ ಪಕ್ಕದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಾಗಿ ನಟರಾಜ ವೇದಿಕೆ ಮತ್ತು ಪಕ್ಕದ ಕಟ್ಟಡ ತೆರವು ಮಾಡಲಾಗುತ್ತಿದೆ
-ಈಶ್ವರ ಭಟ್ ಪಂಜಿಗುಡ್ಡೆ, ಅಧ್ಯಕ್ಷರು ವ್ಯವಸ್ಥಾಪನಾ ಸಮಿತಿ,ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು

LEAVE A REPLY

Please enter your comment!
Please enter your name here