ಬೆಥನಿ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ಕೌಶಲ್ಯ ತರಬೇತಿ ಸಮಾರೋಪ

0

ಕಡಬ: ಬೆಥನಿ ಪದವಿಪೂರ್ವ ಕಾಲೇಜು, ನೂಜಿಬಾಳ್ತಿಲ ವತಿಯಿಂದ ವಿದ್ಯಾರ್ಥಿನಿಯರಿಗಾಗಿ ಆಯೋಜಿಸಿದ್ದ ಕೌಶಲ್ಯ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಇತ್ತೀಚೆಗೆ ನಡೆಯಿತು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಜಾರ್ಜ್ ಟಿ.ಎಸ್. ಅವರು ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪಠ್ಯ ಶಿಕ್ಷಣದೊಂದಿಗೆ ವೃತ್ತಿಪರ ಕೌಶಲ್ಯಗಳೂ ಅತ್ಯಗತ್ಯವಾಗಿದ್ದು, ಇಂತಹ ತರಬೇತಿಗಳು ವಿದ್ಯಾರ್ಥಿನಿಯರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗುತ್ತವೆ ಎಂದು ಹೇಳಿದರು. ವಿರಾಮದ ವೇಳೆಯಲ್ಲಿ ಮನೆಯಲ್ಲಿಯೇ ಸಣ್ಣ ಪ್ರಮಾಣದ ಆದಾಯ ಗಳಿಸುವ ಮೂಲಕ ಕುಟುಂಬಕ್ಕೂ ಆಸರೆಯಾಗುವ ಉದ್ದೇಶದಿಂದ ಈ ತರಬೇತಿಯನ್ನು ಆಯೋಜಿಸಲಾಗಿದ್ದು, ಸುಮಾರು 70 ವಿದ್ಯಾರ್ಥಿನಿಯರು ಇದರ ಪ್ರಯೋಜನ ಪಡೆದಿದ್ದಾರೆ ಎಂದರು. ಶಿಬಿರದ ತರಬೇತುದಾರರಾದ ಶ್ರೀಮತಿ ಸುಮಾ ಕುದ್ವ ಅವರನ್ನು ಸಂಸ್ಥೆಯ ಪರವಾಗಿ ಅಭಿನಂದಿಸಿದರು.


ಮುಖ್ಯ ಅತಿಥಿಯಾಗಿ ಮಾತನಾಡಿದ ಶ್ರೀಮತಿ ಸುಮಾ ಕುದ್ವ, ಜೀವನದಲ್ಲಿ ಸ್ವಾವಲಂಬನೆ ಅತ್ಯಂತ ಮುಖ್ಯವಾಗಿದ್ದು, ಅದರಲ್ಲೂ ಆರ್ಥಿಕ ಸ್ವಾವಲಂಬನೆಗೆ ಇಂತಹ ಕೌಶಲ್ಯ ತರಬೇತಿಗಳು ಸಹಕಾರಿಯಾಗುತ್ತವೆ ಎಂದು ತಿಳಿಸಿದರು. “ನಾವು ಹುಟ್ಟುವಾಗ ಯಾವುದನ್ನೂ ಕಲಿತು ಬರುವುದಿಲ್ಲ. ಅಗತ್ಯಕ್ಕೆ ಅನುಗುಣವಾಗಿ ಹೊಸ ಕೌಶಲ್ಯಗಳನ್ನು ಕಲಿಯುವುದು ಜೀವನದಲ್ಲಿ ಯಶಸ್ಸಿಗೆ ದಾರಿಯಾಗುತ್ತದೆ. ಶಿಕ್ಷಣದ ಜೊತೆಗೆ ಜೀವನ ಮೌಲ್ಯಗಳು ಹಾಗೂ ಕೌಶಲ್ಯಗಳನ್ನು ಕಲಿಸಿಕೊಡುವ ಸಂಸ್ಥೆ ಸಿಕ್ಕಿರುವುದು ವಿದ್ಯಾರ್ಥಿಗಳ ಅದೃಷ್ಟ” ಎಂದು ಹೇಳಿ, ಅವಕಾಶ ಕಲ್ಪಿಸಿದ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದರು. ಸಂಸ್ಥೆಯ ವಿದ್ಯಾರ್ಥಿನಿಯರಾದ ಸಾನ್ವಿ, ಬೆಲ್ಸಿಟ ಹಾಗೂ ಸಿಂಚನ ಶಿಬಿರದ ಕುರಿತು ತಮ್ಮ ಅನುಭವ ಮತ್ತು ಅನಿಸಿಕೆಗಳನ್ನು ಹಂಚಿಕೊಂಡರು.


ಪ್ರಾಂಶುಪಾಲರಾದ ಜಾರ್ಜ್ ಟಿ.ಎಸ್. ಅವರು ಸ್ವಾಗತಿಸಿದರು. ಸಂಸ್ಥೆಯ ಪ್ರಭಾರ ಮುಖ್ಯಗುರುಗಳಾದ ಮಥಾಯಿ ಓ.ಜೆ. ಅವರು ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪನ್ಯಾಸಕರು, ಶಿಕ್ಷಕರು ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here