







ಅಧ್ಯಕ್ಷೆ: ನೀಲಾವತಿ ಶಿವರಾಮ್, ಕಾರ್ಯದರ್ಶಿ ಅಭಿಷೇಕ್


ಕಡಬ: ಇಲ್ಲಿನ ಲಯನ್ಸ್ ಕ್ಲಬ್ 2026-27ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ನೂತನವಾಗಿ ನಿರ್ಮಿಸಲಾದ ಲಯನ್ ಸೇವಾ ಭವನದಲ್ಲಿ ನಡೆಯಿತು.
ಲಯನ್ಸ್ ಕ್ಲಬ್ನ ಹಿರಿಯ ಮುತ್ಸದ್ದಿ ಹಾಗೂ ಪೂರ್ವ ಜಿಲ್ಲಾ ರಾಜ್ಯಪಾಲ ಲ| ಎಂ.ಬಿ. ಸದಾಶಿವ ಅವರು ನೂತನ ಪದಾಧಿಕಾರಿಗಳಿಗೆ ಪದಗ್ರಹಣ ಬೋಧಿಸಿ ಅಧಿಕಾರ ಹಸ್ತಾಂತರ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಲಯನ್ಸ್ ಸಂಸ್ಥೆಯ ಧ್ಯೇಯೋದ್ದೇಶಗಳು, ಸೇವಾ ಮನೋಭಾವ, ನಾಯಕತ್ವದ ಜವಾಬ್ದಾರಿ ಹಾಗೂ ಮಾನವೀಯ ಮೌಲ್ಯಗಳ ಕುರಿತು ಪ್ರೇರಣಾದಾಯಕವಾಗಿ ಮಾತನಾಡಿದರು. ಲಯನ್ಸ್ ಕ್ಲಬ್ ಕಡಬವು ಸಮಾಜಮುಖಿ ಸೇವಾ ಕಾರ್ಯಗಳ ಮೂಲಕ ಇನ್ನಷ್ಟು ಜನಮನ್ನಣೆ ಗಳಿಸಲಿ ಹಾಗೂ ನೂತನ ಪದಾಧಿಕಾರಿಗಳ ನೇತೃತ್ವದಲ್ಲಿ ಕ್ಲಬ್ ಹೊಸ ಮೈಲಿಗಲ್ಲುಗಳನ್ನು ಸಾಧಿಸಿ, ಸೇವಾ ಕ್ಷೇತ್ರದಲ್ಲಿ ಮಾದರಿಯಾಗಲಿ ಎಂದು ಶುಭ ಹಾರೈಸಿದರು.



2026-27ನೇ ಸಾಲಿನ ನೂತನ ಪದಾಧಿಕಾರಿಗಳಾಗಿ ಲ| ನೀಲಾವತಿ ಶಿವರಾಮ್ ಅಧ್ಯಕ್ಷರಾಗಿ, ಲ|ಜಿ.ಎಂ. ಅಭಿಷೇಕ್ ಕಾರ್ಯದರ್ಶಿಯಾಗಿ ಹಾಗೂ ಲ| ನಾರಾಯಣ ಶೆಟ್ಟಿ ಖಜಾಂಚಿಯಾಗಿ ಅಧಿಕಾರ ಸ್ವೀಕರಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಸುರೇಶ್ ಗೌಡ ಬೈಲು ಭಾಗವಹಿಸಿ, ಲಯನ್ಸ್ ಸಂಸ್ಥೆ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಲ್ಲಿಸುತ್ತಿರುವ ಸೇವೆಯನ್ನು ಶ್ಲಾಘಿಸಿದರು. ನೂತನ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿ, ಇನ್ನಷ್ಟು ಅರ್ಥಪೂರ್ಣ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನಸೇವೆಯಲ್ಲಿ ತೊಡಗಿಸಿಕೊಳ್ಳುವಂತೆ ಕರೆ ನೀಡಿದರು. ಪ್ರಾಂತ್ಯ ಅಧ್ಯಕ್ಷ ಲ| ಸಂತೋಷ್ ಜಾಕೆ ಹಾಗೂ ವಲಯ ಅಧ್ಯಕ್ಷ ಲ| ರಾಮಚಂದ್ರ ಪಳ್ಳತ್ತಡ್ಕ ವೇದಿಯಲ್ಲಿ ಉಪಸ್ಥಿತರಿದ್ದು, ನೂತನ ತಂಡಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಸ್ಥಾಪಕಾಧ್ಯಕ್ಷ ಲ| ಮಧುಸೂದನ್ ಕೈಕುರೆ, ಸ್ಥಾಪಕ ಸದಸ್ಯ ಲ| ಡಾ. ಸಿದ್ಧಲಿಂಗ, ನಿರ್ಗಮಿತ ಅಧ್ಯಕ್ಷ ಲ| ಸತ್ಯೇಂದ್ರ ಶೆಣೈ, ತೋಮಸ್ ಸೇರಿದಂತೆ ಹಿರಿಯ ಲಯನ್ಸ್ ಸದಸ್ಯರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ನೂತನ ಸದಸ್ಯರನ್ನು ಅಧಿಕೃತವಾಗಿ ಲಯನ್ಸ್ ಕುಟುಂಬಕ್ಕೆ ಬರಮಾಡಿಕೊಳ್ಳಲಾಯಿತು. ನೂತನ ಪದಾಧಿಕಾರಿಗಳ ನೇತೃತ್ವದಲ್ಲಿ ಶಿಕ್ಷಣ, ಆರೋಗ್ಯ, ಪರಿಸರ ಸಂರಕ್ಷಣೆ, ಮಾನವೀಯ ಸೇವೆ ಸೇರಿದಂತೆ ವಿವಿಧ ಸಮಾಜಮುಖಿ ಯೋಜನೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಸಂಕಲ್ಪವನ್ನು ಮಾಡಲಾಯಿತು. ಲ| ಗಣೇಶ್ ಕೈಕುರೆ, ಲ| ನರೇಶ್, ಲ| ದಿನೇಶ್ ಆಚಾರ್ಯ ಅವರು ಅತಿಥಿಗಳ ಪರಿಚಯ ವಾಚಿಸಿದರು.
ಕಾರ್ಯಕ್ರಮವನ್ನು ಲ| ಸತ್ಯೇಂದ್ರ ಶೆಣೈ ಸ್ವಾಗತಿಸಿ ಲಯನ್ಸ್ ಕ್ಲಬ್ ಕಡಬದ ಕಾರ್ಯದರ್ಶಿ ಲ| ಜಿ.ಎಂ. ಅಭಿಷೇಕ್ ಅವರು ವಂದನಾರ್ಪಣೆ ಸಲ್ಲಿಸಿದರು. ಲ| ಪ್ರಜ್ಞಾ ಅಭಿಷೇಕ್ ಅವರು ನಿರೂಪಿಸಿದರು. ಡಾ. ಕೀರ್ತಿ ಪ್ರಾರ್ಥನೆ ಹಾಡಿದರು.
ಸನ್ಮಾನ:
ಕಾರ್ಯಕ್ರಮದಲ್ಲಿ ಕಡಬ ತಾಲೂಕು ಪಂಚಾಯತ್ ನ ವ್ಯವಸ್ಥಾಪಕರಾಗಿ ನಿವೃತ್ತರಾದ ಭುವನೇಂದ್ರ ಕುಮಾರ್ ಹಾಗೂ ಗ್ರಾಮ ಸಹಾಯಕರಾಗಿ ನಿವೃತ್ತರಾದ ರಮೇಶ್ ರಾವ್ ಹೊಸಮನೆ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಕಡಬ ಲಯನ್ಸ್ ಕ್ಲಬ್ ವತಿಯಿಂದ ಕೊರುಂದೂರು ಅಂಗನವಾಡಿಗೆ ಟೇಬಲ್ನ್ನು ಕೊಡುಗೆಯಾಗಿ ನೀಡಲಾಯಿತು.
ಅಧ್ಯಕ್ಷೆ ನೀಲಾವತಿ ಶಿವರಾಮ ಅವರ ಪರಿಚಯ:

ನೀಲಾವತಿ ಶಿವರಾಮ ಎಂ.ಎಸ್. ಅವರು ಪುತ್ತೂರು ತಾಲೂಕು ಹಿರೇಬಂಡಾಡಿ ಗ್ರಾಮದ ದಿ| ವೀರಪ್ಪ ಗೌಡ ಮತ್ತು ಮೋನಮ್ಮ ದಂಪತಿಗಳ ಮಗಳಾಗಿ 1993ರಲ್ಲಿ ರಮ್ಯ ಸ್ಟುಡಿಯೋ ಕಡಬ ಇದರ ಮಾಲಕರಾದ ಪ್ರತಿಷ್ಠಿತ ಮನೆತನ ಮುಂಗ್ಲಿಮನೆ ಶಿವರಾಮ ಎಂ.ಎಸ್ ಇವರ ಧರ್ಮಪತ್ನಿಯಾಗಿ ಕಡಬ ಪರಿಸರದಲ್ಲಿ ಪರಿಚಿತರಾಗಿರುವ ಇವರು ಸಾರ್ವಜನಿಕ ಜೀವನದಲ್ಲಿ ಗ್ರಾಮ ಮಟ್ಟದಿಂದ ರಾಷ್ಟ್ರ, ಅಂತರಾಷ್ಟ್ರೀಯ ಸಂಘ ಸಂಸ್ಥೆಗಳಲ್ಲಿ ಹಲವಾರು ಹುದ್ದೆಗಳ, ಜವಾಬ್ದಾರಿಗಳ ಚುಕ್ಕಾಣಿ ಹಿಡಿದು ಅವುಗಳ ಅನುಭವದೊಂದಿಗೆ, ಕಡಬ ಪ್ರಾಂತ್ಯದಲ್ಲಿ ಗ್ರಾಮ ಪಂಚಾಯತ್, ಜೆಸಿಐ, ಲಯನ್ಸ್, ಧಾರ್ಮಿಕ ಕ್ಷೇತ್ರದಲ್ಲಿ ವಿವಿಧ ಸ್ಥರಗಳಲ್ಲಿ ಸೇವೆಯನ್ನು ನೀಡಿದ್ದಾರೆ.
ಇವರಿಗೆ ಜೇಸಿಐಯಲ್ಲಿ ಉತ್ತಮ ಸಮಾಜ ಸೇವೆಗಾಗಿ ರಾಷ್ಟ್ರಮಟ್ಟದ ಪ್ರಥಮ ಜೇಸಿರೆಟ್ ಪ್ರಶಸ್ತಿ, ಗ್ರಾಮದ ಅಭಿವೃದ್ಧಿಯ ಜೊತೆಗೆ ಸ್ವಚ್ಛತಾ ಮತ್ತು ಆರೋಗ್ಯ ವಿಚಾರಕ್ಕೆ ಗ್ರಾಮ ಪಂಚಾಯತ್ ಸದಸ್ಯರ, ಊರವರ, ಅಧಿಕಾರಿಗಳ, ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಘನ ತ್ಯಾಜ್ಯ ಮತ್ತು ದ್ರವತ್ಯಾಜ್ಯ ವಿಲೇವಾರಿ ಘಟಕ ನಿರ್ವಹಣೆಗೆ ರಾಜ್ಯದಲ್ಲಿಯೇ ಮಾದರಿ ಗ್ರಾಮ ಪಂಚಾಯತ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಘನ ತ್ಯಾಜ್ಯ ಮತ್ತು ದ್ರವತ್ಯಾಜ ವಿಲೇವಾರಿ ಘಟಕಗಳ ಕಾರ್ಯ ವೈಖರಿಯನ್ನು ಅಧ್ಯಯನ ಮಾಡಲು ವಿವಿಧ ತಾಲೂಕು ಜಿಲ್ಲೆ ಮತ್ತು ರಾಜ್ಯಗಳಿಂದ ಜನ ಪ್ರತಿನಿಧಿಗಳ ಹಾಗೂ ಅಧಿಕಾರಿಗಳ ತಂಡ ಭೇಟಿ ನೀಡಿ ಅವರ ಪ್ರಶಂಸೆಗೆ ಪಾತ್ರರಾಗಿದ್ದರು.
ಇವರು ಪ್ರಸ್ತುತ ಒಕ್ಕಲಿಗ ಗೌಡ ಸೇವಾ ಸಂಘ ಕಡಬ ತಾಲೂಕಿನ ನಿರ್ದೇಶಕರಾಗಿ, ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ ಪುತ್ತೂರು ಕಡಬ ಶಾಖೆಯ ಸಲಹಾ ಸಮಿತಿ ಸದಸ್ಯರಾಗಿ, ರಾಜ್ಯ ಒಕ್ಕಲಿಗ ಗೌಡ ಸೇವಾ ಸಂಘದ ಸದಸ್ಯರಾಗಿರುತ್ತಾರೆ. ಈಗ ಪ್ರಸ್ತುತ ಕಡಬ ಪಟ್ಟಣ ಪಂಚಾಯತ್ನ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದು, ಜೊತೆಗೆ ತಮ್ಮ ಸ್ಟುಡಿಯೋವನ್ನು ಕೂಡ ನಡೆಸಿಕೊಂಡು ಬರುತ್ತಿದ್ದಾರೆ.
ಕಾರ್ಯದರ್ಶಿ ಜಿ.ಎಂ. ಅಭಿಷೇಕ್ ಅವರ ಪರಿಚಯ:

ಕಡಬ ಮಾಧವಗೌಡ ಹಾಗೂ ಶ್ರೀಮತಿ ಸುಜಾತ ಅವರ ಪುತ್ರರಾದ ಅಭಿಷೇಕ್ ಜಿ. ಎಂ. ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಡಬದಲ್ಲಿ ಹಾಗೂ ಪ್ರೌಢಶಿಕ್ಷಣ ಮತ್ತು ಪದವಿಪೂರ್ವ ಶಿಕ್ಷಣವನ್ನು ಸರ್ಕಾರಿ ಜೂನಿಯರ್ ಕಾಲೇಜು, ಕಡಬದಲ್ಲಿ ಪೂರ್ಣಗೊಳಿಸಿದರು. ನಂತರ ನಿಂತಿಕಲ್ಲು ಐಟಿಐಯಲ್ಲಿ ತಾಂತ್ರಿಕ ಶಿಕ್ಷಣ ಪಡೆದು, ಮೈಸೂರು ವಿಶ್ವವಿದ್ಯಾಲಯದಿಂದ ಡಿಪ್ಲೊಮಾ ಹಾಗೂ ಬ್ಯಾಚುಲರ್ ಆಫ್ ಸಿವಿಲ್ ಇಂಜಿನಿಯರಿಂಗ್ ಪದವಿಯನ್ನು ಪಡೆದಿದ್ದಾರೆ. ಪ್ರಸ್ತುತ ಅವರು ಪ್ರಜ್ಞಾ ಇನ್ಫ್ರಾಟೆಕ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದು, ನಿರ್ಮಾಣ ಕ್ಷೇತ್ರದಲ್ಲಿ ಯಶಸ್ವಿ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ. ಸಮಾಜಸೇವೆ ಮತ್ತು ನಾಯಕತ್ವ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ಅವರು, ಜೆಸಿಐ ಕಡಬ ಕದಂಬ ಸಂಸ್ಥೆಯ ಅಧ್ಯಕ್ಷರಾಗಿ ಹಾಗೂ ಜೆಸಿಐ ವಲಯ 15ರ ವಲಯ ಉಪಾಧ್ಯಕ್ಷರಾಗಿ ಯಶಸ್ವಿಯಾಗಿ ಸೇವೆ ಸಲ್ಲಿಸಿದ್ದರು. ವಿವಿಧ ಸಾಮಾಜಿಕ, ಶೈಕ್ಷಣಿಕ ಮತ್ತು ಸೇವಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಅವರು,2026-27ನೇ ಸಾಲಿಗೆ ಲಯನ್ಸ್ ಕ್ಲಬ್ ಕಡಬದ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.










