






ಪುತ್ತೂರು: ಕುಂತೂರಿನಲ್ಲಿ ಅಡಿಕೆ ಮರಬಿದ್ದು ಕೃಷಿ ಕೂಲಿಕಾರ್ಮಿಕ ಮೃತಪಟ್ಟ ಬಗ್ಗೆ ಪುತ್ತೂರು ಸುದ್ದಿ ವೆಬ್ಸೈಟ್ನಲ್ಲಿ ಹಾಗೂ ಬಳ್ಪ ಗ್ರಾಮದ ನೇರ್ಪು ಪರಮೇಶ್ವರ ಗೌಡ ಅವರ ಮನೆ ಮೇಲೆ ಬೃಹತ್ ಮರವೊಂದು ಉರುಳಿ ಬಿದ್ದು ಅವರ ಪತ್ನಿ ಗಂಭೀರ ಗಾಯಗೊಂಡಿರುವ ಬಗ್ಗೆ ಸುಳ್ಯ ಸುದ್ದಿ ವೆಬ್ಸೈಟ್ನಲ್ಲಿ ಜು.31ರಂದು ವರದಿ ಪ್ರಸಾರಗೊಂಡಿತ್ತು. ಇದನ್ನು ಗಮನಿಸಿದ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರು ಘಟನೆ ಕುರಿತು ದು:ಖ ವ್ಯಕ್ತಪಡಿಸಿ ಸುದ್ದಿ ವೆಬ್ಸೈಟ್ನ ವರದಿ ಜೋಡಿಸಿಕೊಂಡು ಸಂಜೆ ತಮ್ಮ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.


ದ.ಕ. ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಗಾಳಿ, ಮಳೆಗೆ ಕಡಬ ತಾಲೂಕಿನ ಕುಂತೂರು ಗ್ರಾಮದಲ್ಲಿ ಅಡಿಕೆ ಮರ ಬಿದ್ದು ಯಾದವ ಗೌಡ ಎಂಬವರು ಮೃತಪಟ್ಟಿದ್ದಾರೆ, ಬಳ್ಪ ಗ್ರಾಮದ ನೇರ್ಪು ಪರಮೇಶ್ವರ ಗೌಡ ಅವರ ಮನೆ ಮೇಲೆ ಬೃಹತ್ ಮರವೊಂದು ಉರುಳಿ ಬಿದ್ದ ಕಾರಣಕ್ಕೆ ಅವರ ಪತ್ನಿ ಗಂಭೀರ ಗಾಯಗೊಂಡಿರುವ ವಿಚಾರ ತಿಳಿದು ಅತೀವ ದುಃಖವಾಯಿತು. ಘಟನೆಯ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿದ್ದು, ನೊಂದ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಸೂಚಿಸಿದ್ದೇನೆ. ಮೃತರ ಆತ್ಮಕ್ಕೆ ಶಾಂತಿಯನ್ನು ಕರುಣಿಸಲಿ ಮತ್ತು ಗಾಯಗೊಂಡವರು ಆದಷ್ಟು ಶೀಘ್ರ ಚೇತರಿಸಿಕೊಳ್ಳಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಮನೆಯ ಸುತ್ತಮುತ್ತ ಬೀಳುವ ಸ್ಥಿತಿಯಲ್ಲಿರುವ ಮರಗಳನ್ನು ಅವು ಬೀಳುವವರೆಗೆ ಕಾಯದೆ ಆದಷ್ಟು ಬೇಗನೆ ತೆರವುಗೊಳಿಸಬೇಕು. ಗಾಳಿ ಜೋರಾಗಿ ಬೀಸುವ ಸಂದರ್ಭದಲ್ಲಿ ಮರದ ಕೆಳಗೆ ನಿಲ್ಲದೆ ಎಚ್ಚರಿಕೆ ವಹಿಸಬೇಕು. ಆಗ ಹೆಚ್ಚಿನ ಅವಘಡಗಳು ಸಂಭವಿಸದಂತೆ ತಡೆಯಲು ಸಾಧ್ಯವಿದೆ. ಬದುಕು ಅಮೂಲ್ಯ. ಜಾಗೃತೆ ವಹಿಸಿ, ಸುರಕ್ಷಿತವಾಗಿರಿ ಎಂದು ಡಿಸಿಎಂ ಪರಮೇಶ್ವರ್ ಅವರು ಘಟನೆ ಕುರಿತು ವಿಷಾದ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.













