ರೆಖ್ಯ; ಕೂಲಿ ಕಾರ್ಮಿಕ ಬಾಲಕೃಷ್ಣ ಗೌಡ ಮೃತ್ಯು-ಆನೆ ದಾಳಿ ಶಂಕೆ

0

ನೆಲ್ಯಾಡಿ: ಬೆಳ್ತಂಡಿ ತಾಲೂಕಿನ ರೆಖ್ಯ ಗ್ರಾಮದ ನೇಲ್ಯಡ್ಕ ಇಡ್ಮಾಲ್ ನಿವಾಸಿ ಬಾಲಕೃಷ್ಣ ಗೌಡ (55ವ.) ಎಂಬವರ ಮೃತದೇಹ ಅವರ ಮನೆಗೆ ಹೋಗುವ ದಾರಿಮಧ್ಯೆ ಆ.1ರಂದು ರಾತ್ರಿ ಪತ್ತೆಯಾಗಿದ್ದು, ಅವರು ಆನೆ ದಾಳಿಯಿಂದ ಮೃತಪಟ್ಟಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಕೂಲಿ ಕೆಲಸ ಮಾಡುತ್ತಿದ್ದ ಬಾಲಕೃಷ್ಣ ಗೌಡ ಅವರು ಮುಚ್ಚಿರಡ್ಕ ಭಾಗದಲ್ಲಿ ಕೆಲಸಕ್ಕೆ ಹೋದವರು ಸಂಜೆಯಾದರೂ ಮನೆಗೆ ಮರಳದೇ ಇದ್ದ ಹಿನ್ನೆಲೆಯಲ್ಲಿ ಮನೆಯವರು ಹಾಗೂ ನೆರೆಕರೆಯವರು ಹುಡುಕಾಟ ನಡೆಸಿದರು. ಈ ವೇಳೆ ಅವರು ಬಳಸುತ್ತಿದ್ದ ಪ್ಲಾಸ್ಟಿಕ್ ರೈನ್‌ಕೋಟ್ ಕಾಡಿನ ದಾರಿಮಧ್ಯೆ ಸಿಕ್ಕಿದ್ದು ಮತ್ತೆ ಹುಡುಕಾಟ ನಡೆಸಿದಾಗ ಅಲ್ಲೇ ಸಮೀಪ ಮೃತದೇಹ ಪತ್ತೆಯಾಗಿದೆ.

ಮೃತದೇಹ ಪತ್ತೆಯಾದ ಜಾಗದ ಸಮೀಪದಲ್ಲಿ ಕಾಡಾನೆ ಹೆಜ್ಜೆ ಗುರುತು ಪತ್ತೆಯಾಗಿದ್ದು, ಬಾಲಕೃಷ್ಣ ಗೌಡ ಅವರು ಕಾಡಾನೆ ದಾಳಿಯಿಂದಲೇ ಮೃತಪಟ್ಟಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಘಟನಾ ಸ್ಥಳಕ್ಕೆ ಅರಣ್ಯ ಹಾಗೂ ಪೊಲೀಸ್ ಇಲಾಖಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಾಲಕೃಷ್ಣ ಗೌಡ ಅವರು ಆನೆ ದಾಳಿಯಿಂದಲೇ ಮೃತಪಟ್ಟಿದ್ದಾರೆಯಾ ಅಥವಾ ಬೇರೆ ಏನಾದರೂ ಆಗಿದೆಯಾ ಎಂಬ ಬಗ್ಗೆ ಇನ್ನಷ್ಟೇ ಸ್ಪಷ್ಟತೆ ಸಿಗಬೇಕಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here