







ಇಬ್ಬರ ಬಂಧನ : ಮಟ್ಕಾ ಆಡಿದವರಿಗೂ ಬಲೆ ಬೀಸಿದ ಪೊಲೀಸರು


ಉಪ್ಪಿನಂಗಡಿ: ಇಲ್ಲಿನ ಬಸ್ ನಿಲ್ದಾಣದಲ್ಲಿರುವ ಪತ್ರಿಕಾ ಏಜೆಂಟ್ ಓರ್ವರ ಅಂಗಡಿಗೆ ಖಚಿತ ಮಾಹಿತಿ ಪಡೆದು ಜು.30ರಂದು ದಾಳಿ ನಡೆಸಿದ ಉಪ್ಪಿನಂಗಡಿ ಪೊಲೀಸರು ಮಟ್ಕಾ ದಂಧೆಯಲ್ಲಿ ಶಾಮೀಲಾಗಿದ್ದ ಇಬ್ಬರನ್ನು ಬಂಧಿಸಿದ್ದಾರೆ.



ಏನಿದು ಮಟ್ಕಾ (ಓಸಿ) ?:
ಕೇರಳ ರಾಜ್ಯದ ಬಂಪರ್ ಬಹುಮಾನದ ಲಾಟರಿ ಟಿಕೇಟ್ ನ ಕೊನೆಯ ಮೂರು ಮತ್ತು ಎರಡು ಅಂಕೆಗಳಿಗೆ ಗ್ರಾಹಕರಿಂದ ಹಣ ಪಡೆಯಲಾಗುತ್ತೆ. ಮೂರಂಕೆಯ ಆ ನಂಬರ್ ಬಂದರೆ 20 ರೂಪಾಯಿಗೆ 12 ಸಾವಿರ ರೂಪಾಯಿ, ಎರಂಡಕೆಯ ನಂಬರ್ ಬಂದ್ರೆ 1600 ಕೊಡಲಾಗುತ್ತೆ. ಬಾರದಿದ್ರೆ ಏನೂ ಇಲ್ಲ. ಈ ದಂಧೆಯವರು ನಾಗಾಲ್ಯಾಂಡ್ ಲಾಟರಿನ ನಂಬರನ್ನೂ ಹೋಲಿಕೆ ಮಾಡಿ ಅರ್ಧ ಗಂಟೆಗೊಮ್ಮೆ ಡ್ರಾ ಮಾಡುವುದು ಇದೆ. ಕರ್ನಾಟಕದಲ್ಲಿ ಈ ಮೊದಲಿದ್ದು ಈಗ ನಿಷೇಧಗೊಂಡ ಸಿಂಗಲ್ ನಂಬರ್ ತರನೇ ಈ ದಂಧೆ ನಡೆಯುತ್ತೆ. ಈ ದಂಧೆಯಲ್ಲಿ ಎಷ್ಟೋ ಕುಟುಂಬಗಳು ಬೀದಿಗೆ ಬಿದ್ದ ಉದಾಹರಣೆಗಳು ಇವೆ.
ಉಪ್ಪಿನಂಗಡಿಯಲ್ಲಿ ಕೇರಳ ರಾಜ್ಯದ ಬಂಪರ್ ಬಹುಮಾನದ ಲಾಟರಿಯ ಅಂಕೆಗಳ ಆಧಾರದ ಮೇಲೆ ಈ ದಂಧೆ ನಡೆಯುತ್ತಿದ್ದ ಪತ್ರಿಕಾ ಏಜೆಂಟ್ ಒಬ್ಬರ ಅಂಗಡಿಗೆ ಪೊಲೀಸರು ಈ ದಾಳಿ ನಡೆಸಿದ್ದು, ಮಟ್ಕಾ ಚೀಟಿ ಬರೆಯುತ್ತಿದ್ದ ಆರೋಪಿಗಳಾದ ಉರುವಾಲು ಗ್ರಾಮದ ಕಾರ್ಯತಡ್ಕ ನಿವಾಸಿ ಉಮೇಶ್ ಪೂಜಾರಿ (45), ಕೋಡಿಂಬಾಡಿ ಗ್ರಾಮದ ಶಾಂತಿನಗರದ ಕಿನ್ನಿತ್ತಪಲ್ಕೆ ನಿವಾಸಿ ಸತ್ಯನಾರಾಯಣ ಪ್ರಸಾದ್ (49) ಎಂಬಾತನನ್ನು ಬಂಧಿಸಿದ್ದಾರೆ. ಇನ್ನು ತನ್ನ ವಾಟ್ಸಫ್ ಮೊಬೈಲ್ ನಲ್ಲಿ ಗ್ರಾಹಕರು ಕೊಟ್ಟ ನಂಬರನ್ನು ಪಡೆದುಕೊಳ್ಳುತ್ತಿದ್ದ ಮತ್ತು ಹಣವನ್ನು ತನ್ನ ಫೋನ್ ಪೇ ಮೂಲಕ ಪಡೆದುಕೊಳ್ಳುತ್ತಿದ್ದ ಈ ದಂಧೆಯ ಮುಖ್ಯ ರೂವಾರಿ ವೆಳ್ತಂಗಡಿ ತಾಲೂಕಿನ ಪಟ್ರಮೆ ಗ್ರಾಮದ ಬೀಜದಡಿ ಮನೆಯ ಜಯಂತ ಹಾಗೂ ಪತ್ರಿಕಾ ಏಜೆಂಟ್ ಅಂಗಡಿಯ ಮಾಲಕ ಉಪ್ಪಿನಂಗಡಿ ನಿವಾಸಿ ಸತೀಶ್ ಕಾಮತ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಬಂದಿತ ಈರ್ವರು ಈಗಾಗಲೇ ಜಾಮೀನು ಪಡೆದಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಇದರ ಮುಖ್ಯ ರೂವಾರಿ, ಮಟ್ಕಾ ದಂಧೆಯಲ್ಲಿ ನಿರತರಾದವರ ಮಾಹಿತಿ ಕಲೆ ಹಾಕುತ್ತಿದ್ದು, ಎಲ್ಲರ ಮೇಲೆ ಪ್ರಕರಣ ದಾಖಲಿಸಲು ಸಿದ್ಧತೆ ನಡೆಸಿದ್ದಾರೆ. ತನಿಖೆ ಪ್ರಗತಿಯಲ್ಲಿದ್ದು, ಉಪ್ಪಿನಂಗಡಿ ಪೊಲೀಸ್ ಉಪನಿರೀಕ್ಷಕ ಸುತೇಶ್ ಅವರ ನೇತೃತ್ವದಲ್ಲಿ ಈ ದಾಳಿ ನಡೆದಿದೆ. ಸ್ಥಳದಿಂದ 1,130 ರೂ ನಗದು & ಮಟ್ಕಾ ಸಂಖ್ಯೆ ಬರೆದಿಟ್ಟುಕೊಂಡ 5 ಚೀಟಿ, ಒಂದು ಪೆನ್ ವಶಪಡಿಸಿಕೊಳ್ಳಲಾಗಿದೆ










