







ಹಿಂದಿನ ಕಾಲದ ಆಟಿ ತಿಂಗಳ ಬದುಕಿನ ಮೌಲ್ಯಗಳನ್ನು ಮರೆಯದಿರೋಣ: ವಿದ್ಯಾ ಶ್ರೀನಿವಾಸ ಗೌಡ ಬೆಳಾಲು


ಕಡಬ: ಹಿಂದಿನ ಕಾಲದಲ್ಲಿ ನಮ್ಮ ಹಿರಿಯರು ಆಟಿ ತಿಂಗಳಿನಲ್ಲಿ ಅನುಸರಿಸಿದ್ದ ಜೀವನಶೈಲಿ, ಆಚಾರ-ವಿಚಾರಗಳು ಹಾಗೂ ಬದುಕಿನ ಮೌಲ್ಯಗಳು ಇಂದಿನ ಪೀಳಿಗೆಗೆ ಪ್ರೇರಣೆಯಾಗಿದ್ದು, ಅವುಗಳನ್ನು ನಾವು ಮರೆಯಬಾರದು ಎಂದು ಬೆಳ್ತಂಗಡಿ ತಾಲೂಕು ಬೆಳಾಲು ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷೆ ವಿದ್ಯಾ ಶ್ರೀನಿವಾಸ ಗೌಡ ಬೆಳಾಲು ಹೇಳಿದರು.



ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಆಶ್ರಯದಲ್ಲಿ ತಾಲೂಕು ಮಹಿಳಾ ಘಟಕದ ನೇತೃತ್ವದಲ್ಲಿ, ಯುವ ಘಟಕ, ಸ್ಪಂದನಾ ಸಮುದಾಯ ಸಹಕಾರ ಸಂಘ ಹಾಗೂ ಒಕ್ಕಲಿಗ ಸ್ಪಂದನಾ ಸ್ವ ಸಹಾಯ ಟ್ರಸ್ಟ್, ಕಡಬ ತಾಲೂಕು ಇವರ ಸಹಯೋಗದಲ್ಲಿ ಹೊಸಮಠದ ಒಕ್ಕಲಿಗ ಸಮುದಾಯ ಭವನದಲ್ಲಿ ನಡೆದ ಆಟಿಡೊಂಜಿ ದಿನ ಕಾರ್ಯಕ್ರಮದ ಸಭೆಯಲ್ಲಿ ಅವರು ಆಟಿ ತಿಂಗಳ ಮಹತ್ವ ಕುರಿತು ಮಾತನಾಡಿದರು.
ಆಟಿ ತಿಂಗಳು ಇಂದಿನ ಜನಜೀವನದ ಮೇಲೆ ಹಿಂದಿನಷ್ಟು ಪರಿಣಾಮ ಬೀರದಿದ್ದರೂ, ಅಂದಿನ ಜನರ ಕಷ್ಟದ ಬದುಕು, ಜೀವನಕ್ರಮ, ಆಚಾರ-ವಿಚಾರಗಳು ಇಂದಿನ ಸಮಾಜಕ್ಕೆ ಬದುಕಿನ ಮೌಲ್ಯಗಳನ್ನು ಕಲಿಸಿಕೊಟ್ಟಿವೆ. ಆಟಿ ತಿಂಗಳ ಸಾಂಪ್ರದಾಯಿಕ ತಿನಿಸುಗಳು, ಜನಪದ ಆಟಗಳು ಹಾಗೂ ಧಾರ್ಮಿಕ ಆಚರಣೆಗಳು ವಿಶೇಷ ಮಹತ್ವ ಹೊಂದಿವೆ. ಇಂದಿನ ಜಂಜಾಟದ ಬದುಕಿನಲ್ಲಿ ಸಂಸ್ಕಾರ ಮತ್ತು ಸಂಪ್ರದಾಯಗಳಿಂದ ದೂರವಾಗುತ್ತಿರುವ ಸಂದರ್ಭದಲ್ಲಿ ಹಿರಿಯರ ಜೀವನಶೈಲಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ಅಗತ್ಯವಾಗಿದೆ ಎಂದು ಹೇಳಿದರು.
ಭತ್ತದ ಕೃಷಿಯಂತಹ ಸಾಂಪ್ರದಾಯಿಕ ಕೃಷಿ ಪದ್ಧತಿಯಿಂದ ಸಮಾಜವು ವಾಣಿಜ್ಯ ಕೃಷಿಯತ್ತ ಸಾಗುತ್ತಿರುವುದರಿಂದ ಧಾರ್ಮಿಕ ಆಚರಣೆಗಳು ಮತ್ತು ನಂಬಿಕೆಗಳಿಂದಲೂ ದೂರವಾಗುತ್ತಿದೆ. ಇಂತಹ ಕಾರ್ಯಕ್ರಮಗಳ ಮೂಲಕ ಹಿಂದಿನ ಕಾಲದ ಜೀವನ ಪದ್ಧತಿ, ಸಂಸ್ಕೃತಿ ಮತ್ತು ಮೌಲ್ಯಗಳನ್ನು ಯುವಜನತೆಗೆ ತಲುಪಿಸುವ ಕಾರ್ಯ ಶ್ಲಾಘನೀಯವಾಗಿದೆ. ಮಕ್ಕಳಿಗೆ ಆಸ್ತಿ ಮಾಡುವುದಕ್ಕಿಂತ ಅವರನ್ನು ಉತ್ತಮ ವ್ಯಕ್ತಿತ್ವ ಹೊಂದಿದ ಆಸ್ತಿಗಳನ್ನಾಗಿ ರೂಪಿಸುವುದು ಮುಖ್ಯ. ಸಮಾಜದ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಉನ್ನತ ಹುದ್ದೆಗಳತ್ತ ಪ್ರೇರೇಪಿಸಬೇಕಾಗಿದೆ ಎಂದು ಅವರು ಕರೆ ನೀಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಂಗಳೂರು ಅಬಕಾರಿ ಉಪ ಆಯುಕ್ತೆ ಶ್ರೀಮತಿ ಬಿಂದುಶ್ರೀ.ಪಿ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಸುರೇಶ್ ಬೈಲು ಮಾತನಾಡಿ, ಮಹಿಳಾ ಘಟಕದ ಯಶಸ್ವಿ ಆಯೋಜನೆಯನ್ನು ಅಭಿನಂದಿಸಿದರು. ಸಮುದಾಯ ಭವನ ನಿರ್ಮಾಣ ಕಾರ್ಯಕ್ಕೆ ಸಮಾಜದ ಬಂಧುಗಳು ಸಹಕಾರ ನೀಡುವಂತೆ ಮನವಿ ಮಾಡಿದರು.
ವೇದಿಕೆಯಲ್ಲಿ ಸಂಘದ ಗೌರವಾಧ್ಯಕ್ಷರಾದ ಗೋಪಾಲಕೃಷ್ಣ ಪುಯಿಲ, ಸಲಹಾ ಸಮಿತಿಯ ಹಿರಿಯರಾದ ಜನಾರ್ಧನ ಗೌಡ ಪಣೆಮಜಲು, ಸ್ಪಂದನಾ ಸಮುದಾಯ ಸಹಕಾರ ಸಂಘದ ಅಧ್ಯಕ್ಷ ಕೇಶವ ಅಮೈ, ಒಕ್ಕಲಿಗ ಸ್ಪಂದನಾ ಸ್ವ ಸಹಾಯ ಟ್ರಸ್ಟ್ ಇದರ ಪ್ರಧಾನ ಸಂಚಾಲಕರಾದ ಬಾಲಕೃಷ್ಣ ಡಿ. ಕೋಲ್ಪೆ, ಮಹಿಳಾ ಘಟಕದ ಸಂಘಟನಾ ಕಾರ್ಯದರ್ಶಿ ಶ್ರೀಮತಿ ಶಾರದಾ ಕೇಶವ ಪುತ್ತಿಲ, ಯುವ ಘಟಕದ ಅಧ್ಯಕ್ಷರಾದ ಪೂರ್ಣೇಶ್ ಗೌಡ ಬಾಬ್ಲುಬೆಟ್ಟು ಬಲ್ಯ ಹಾಗೂ ಕಾರ್ಯಕ್ರಮದ ಸಂಚಾಲಕಿ ಶ್ರೀಮತಿ ಗಾಯತ್ರಿ ಸುರೇಶ್ ಕುಂಡಡ್ಕ ಉಪಸ್ಥಿತರಿದ್ದರು.
ಮಹಿಳಾ ಘಟಕದ ಕೋಶಾಧಿಕಾರಿ ವಿನಯಾ ಚಂದ್ರಶೇಖರ ಬಳಕ್ಕ ಅವರು ಸಹಕರಿಸಿದವರ ಹೆಸರುಗಳನ್ನು ವಾಚಿಸಿ ವೇದಿಕೆಗೆ ಆಹ್ವಾನಿಸಿ, ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಕುಸುಮಾಧರ ಗೌಡ ಸುರತ್ಕಲ್ ಹಾಗೂ ಮಂಗಳೂರು ಅಬಕಾರಿ ಉಪ ಆಯುಕ್ತೆ ಬಿಂದುಶ್ರೀ ಪಿ. ಅವರು ಸಮುದಾಯ ಭವನ ನಿರ್ಮಾಣಕ್ಕಾಗಿ ದೇಣಿಗೆ ನೀಡಿದರು.
ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ವೀಣಾ ರಮೇಶ್ ಗೌಡ ಕೊಲ್ಲೆಸಾಗು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕಾರ್ಯದರ್ಶಿ ಲಾವಣ್ಯ ಹೇಮಂತ್ ಮಂಡೆಕರ ವಂದಿಸಿದರು. ಶ್ರೀಮತಿ ಪ್ರೇಮಲತಾ ವಾಸುದೇವ ಕೇಪುಂಜ, ಶ್ರೀ ಚೇತನ್ ಆನೆಗುಂಡಿ ಕಾರ್ಯಕ್ರಮ ನಿರೂಪಿಸಿದರು, ಸಂಘದ ವ್ಯವಸ್ಥಾಕರಾದ ಅಶೋಕ್ ಶೇಡಿ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ, ಪುತ್ತೂರು ತಾಲೂಕು, ಮಂಗಳೂರು ತಾಲೂಕು ಗೌಡ ಸಂಘದ ಪದಾಧಿಕಾರಿಗಳು, ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಅಧೀನದಲ್ಲಿ ಕಾರ್ಯನಿರ್ವಹಿಸುವ ವಿವಿಧ ಸಮಿತಿಗಳ ನಿರ್ದೇಶಕರು, ಪದಾಧಿಕಾರಿಗಳು, ಸ್ಥಾಪಕ ಸದಸ್ಯರುಗಳು, ಊರ ಗೌಡರುಗಳು, ಸಮುದಾಯ ಭಾಂದವರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಸನ್ಮಾನ
ವಿಶೇಷ ಸಾಧನೆಗಾಗಿ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪಡೆದ ಸ್ಪಂದನಾ ಸಮುದಾಯ ಸಹಕಾರ ಸಂಘದ ಅಧ್ಯಕ್ಷ ಕೇಶವ ಅಮೈ ಹಾಗೂ ಸಂಘದ ಚಟುವಟಿಕೆಗಳಿಗೆ ಸಹಕಾರ ನೀಡುತ್ತಿರುವ ಕುಟ್ರುಪಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆನಂದ ಗೌಡ ಎ. ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ಇಬ್ಬರೂ ಕೃತಜ್ಞತೆ ಸಲ್ಲಿಸಿದರು. ಸನ್ಮಾನ ಪತ್ರವನ್ನು ಸಲಹಾ ಸಮಿತಿಯ ಸದಸ್ಯರಾದ ಡಾ.ಶಿವಕುಮಾರ್ ಹೊಸೊಳಿಕೆ ಮತ್ತು ಸಂಘಟನಾ ಕಾರ್ಯದರ್ಶಿಗಳಾದ ಶಿವರಾಮ ಗೌಡ ಏನೆಕಲ್ಲು ವಾಚಿಸಿದರು.
ವಿವಿಧ ಸ್ಪರ್ಧೆಗಳು
ಕಾರ್ಯಕ್ರಮದ ಅಂಗವಾಗಿ ಸಾಂಪ್ರದಾಯಿಕ ತಿನಿಸುಗಳ ಸ್ಪರ್ಧೆ, ಶೋಭಾನೆ ಹಾಡುಗಾರಿಕೆ, ಚೆನ್ನೆಮಣೆ ಆಟ ಹಾಗೂ ಪುರುಷರಿಗಾಗಿ ತೆಂಗಿನಕಾಯಿ ಉರುಳಿಸುವ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಪೂರ್ವಾಹ್ನ ನಡೆದ ಆಟೋಟ ಸ್ಪರ್ಧೆಗಳನ್ನು ಶ್ರೀಮತಿ ಕಮಲ ಕೇಶವ ಗೌಡ ಪಣೆಮಜಲು ಉದ್ಘಾಟಿಸಿದರು. ವಿವಿಧ ಸ್ಪರ್ಧೆಗಳ ವಿಜೇತರಿಗೆ ಸಭಾ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಯಿತು. ಮಧ್ಯಾಹ್ನ ನಂತರ ಮಹಿಷಮರ್ಧಿನಿ ಯಕ್ಷಗಾನ ಕಲಾ ಕೇಂದ್ರ ಕೇರ್ಪಡ ಇಲ್ಲಿಯ ಮಕ್ಕಳಿಂದ ‘ಶಶಿಪ್ರಭೆ ಪರಿಣಯ’ ಪ್ರಸಂಗದ ಯಕ್ಷಗಾನ ನಡೆಯಿತು.










