“ಅರಿವೇ ಜೀವ – ಬದುಕು” ಕ್ಯಾನ್ಸರ್ ಮಹಾ ಜಾಗೃತಿ ಅಭಿಯಾನಕ್ಕೆ ಸುಳ್ಯದಲ್ಲಿ ಸಚಿವ ಯು.ಟಿ. ಖಾದರ್ ಚಾಲನೆ

0

ಸುಳ್ಯ: “ಕ್ಯಾನ್ಸರ್ ಬಗ್ಗೆ ಮುಂಚಿತವಾಗಿ ಅರಿವು ಮೂಡಿಸುವುದೇ ಇದನ್ನು ತಡೆಗಟ್ಟುವ ಏಕೈಕ ಮಾರ್ಗ. ಇಂತಹ ಅಭಿಯಾನಗಳು ಪ್ರತಿ ಮನೆಗೂ ತಲುಪಬೇಕು” ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಅವರು ಹೇಳಿದರು.

ಕ್ಯಾನ್ಸರ್ ಮುಕ್ತ ಸಮಾಜ ನಿರ್ಮಾಣದ ಉದ್ದೇಶದಿಂದ ರೋಟರಿ ಕ್ಲಬ್ ಸುಳ್ಯ ಮತ್ತು ಸುಳ್ಯ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಆಯೋಜಿಸಿದ್ದ “ಅರಿವೇ ಜೀವ – ಬದುಕು” ಕ್ಯಾನ್ಸರ್ ಮಹಾ ಜಾಗೃತಿ ಅಭಿಯಾನಕ್ಕೆ ಆ.06 ರಂದು ರೋಟರಿ ಸಮುದಾಯ ಸಭಾಂಗಣದಲ್ಲಿ ಸಚಿವರು ಚಾಲನೆ ನೀಡಿದರು.

ಸಚಿವರ ಮಾತುಗಳು:
ಎಲ್ಲಾ ಸಂಘ ಸಂಸ್ಥೆಗಳನ್ನು ಬಳಸಿಕೊಂಡು ಸಾರ್ವಜನಿಕರಿಗೆ ಕ್ಯಾನ್ಸರ್ ಮಾಹಿತಿ ನೀಡಬೇಕಾದ ಅನಿವಾರ್ಯತೆ ಇದೆ. ರೋಟರಿ ಮತ್ತು ಪತ್ರಕರ್ತರ ಈ ಕೆಲಸ ಶ್ಲಾಘನೀಯ ಎಂದ ಸಚಿವರು, ಆರೋಗ್ಯವಂತ ಸಮಾಜ ನಿರ್ಮಾಣವು ಈಗಿನ ಮಕ್ಕಳಿಂದ ಮಾತ್ರ ಸಾಧ್ಯ. ಅದಕ್ಕಾಗಿಯೇ ಶಾಲಾ ಆವರಣದಲ್ಲಿ ಜಂಕ್ ಫುಡ್ ಮಾರಾಟ ನಿಷೇಧಿಸಲಾಗಿದೆ. ಆಹಾರವೇ ಔಷಧ. ಮಕ್ಕಳಿಗೆ ಯಾವ ರೀತಿಯ ಆಹಾರ ಅಗತ್ಯ ಎನ್ನುವುದನ್ನು ಪೋಷಕರು ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಉಪಸ್ಥಿತರಿದ್ದ ಗಣ್ಯರು:
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಅಧ್ಯಕ್ಷೆ ಲತಾ ಮಧುಸೂದನ್ ವಹಿಸಿದ್ದರು. ಶಾಸಕಿ ಭಾಗೀರಥಿ ಮುರುಳ್ಯ, ಸುಳ್ಯ ಪಟ್ಟಣ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ. ಮುಸ್ತಾಫ, ರಾಜ್ಯ ಕನಿಷ್ಠ ವೇತನ ಮಂಡಳಿ ಅಧ್ಯಕ್ಷ ಟಿ.ಎಂ. ಶಹೀದ್ ಮುಖ್ಯ ಅತಿಥಿಗಳಾಗಿದ್ದರು. ವೇದಿಕೆಯಲ್ಲಿ ರೋಟರಿ ಶಾಲಾ ಸಂಚಾಲಕ ಪ್ರಭಾಕರ ನಾಯರ್, ರೋಟರಿ ಕ್ಲಬ್ ಸದಸ್ಯ ಮಧುಸೂದನ್ ಕುಂಭಕೋಡು ಇದ್ದರು. ಸುಳ್ಯ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಲೋಕೇಶ್ ಪೆರ್ಲಂಪಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಮಕ್ಕಳೊಂದಿಗೆ ಪೋಟೋ ಕ್ಲಿಕ್ಕಿಸಿದ ಸಚಿವರು
ಸಭಾ ಕಾರ್ಯಕ್ರಮದ ಬಳಿಕ ಸಚಿವ ಯು.ಟಿ. ಖಾದರ್ ಅವರು ಅಲ್ಲಿದ್ದ ವಿದ್ಯಾರ್ಥಿಗಳು ಮತ್ತು ಶಿಕ್ಷಕರೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡರು. “ಮಕ್ಕಳೇ ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿದೆ. ಜಂಕ್ ಫುಡ್ ತಿನ್ನಲು ತಂದೆ ತಾಯಿಯೊಂದಿಗೆ ಒತ್ತಾಯ ಮಾಡಬೇಡಿ. ಉತ್ತಮ ಆಹಾರ ಸೇವಿಸಿ, ಯೋಗ-ಪ್ರಾಣಾಯಾಮಗಳನ್ನು ಮಾಡಿ ಆರೋಗ್ಯವಂತರಾಗಿ ಬಾಳಿ” ಎಂದು ಕಿವಿಮಾತು ಹೇಳಿದರು.

LEAVE A REPLY

Please enter your comment!
Please enter your name here