







ಪುತ್ತೂರು:ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳ ಆರೋಗ್ಯ,ಪೌಷ್ಠಿಕಾಂಶ ಮತ್ತು ಪ್ರಾಥಮಿಕ ಶಿಕ್ಷಣಕ್ಕಾಗಿ ಇರುವ ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಯರಿಗೆ ಕಳೆದ ಎರಡು ತಿಂಗಳಿನಿಂದ ಗೌರವಧನ ಬಾರದೇ ಇರುವುದರಿಂದ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಸಂಕಷ್ಟಕ್ಕೀಡಾಗಿದ್ದಾರೆ.


1975ರಲ್ಲಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿಯಲ್ಲಿ ಆರಂಭಗೊಂಡ ಅಂಗನವಾಡಿ ಕೇಂದ್ರಗಳು 0ರಿಂದ 6 ವರ್ಷದ ಮಕ್ಕಳು, ಗರ್ಭಿಣಿಯರು ಹಾಗೂ ಬಾಣಂತಿಯರ ಆರೋಗ್ಯ ಮತ್ತು ಶಿಕ್ಷಣದ ಅಗತ್ಯಗಳನ್ನು ಪೂರೈಸುತ್ತಿದೆ.ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಯೋಜನೆ ಪರಿಣಾಮಕಾರಿಯಾಗಲು ಸಾಕಷ್ಟು ಶ್ರಮವಹಿಸಿ ಕೆಲಸ ನಿರ್ವಹಿಸುತ್ತಿದ್ದಾರೆ.



ಮಕ್ಕಳು ಮತ್ತು ಗರ್ಭಿಣಿಯರಿಗೆ ಪೌಷ್ಠಿಕಾಂಶದ ಆಹಾರ ಮತ್ತು ಮೊಟ್ಟೆಗಳನ್ನು ವಿತರಿಸುವುದು ಹಾಗೂ ಅಪೌಷ್ಠಿಕತೆ ಹೊಂದಿರುವ ಮಕ್ಕಳನ್ನು ಗುರುತಿಸಿ ವಿಶೇಷ ಕಾಳಜಿ ವಹಿಸುವುದು. ಪೂರ್ವ ಪ್ರಾಥಮಿಕ ಶಿಕ್ಷಣದಲ್ಲಿ 3ರಿಂದ 6 ವರ್ಷದ ಮಕ್ಕಳಿಗೆ ಆಟದ ಮೂಲಕ ಮೂಲಭೂತ ಅಕ್ಷರ, ಸಂಖ್ಯೆ ಮತ್ತು ನೈರ್ಮಲ್ಯದ ಬಗ್ಗೆ ಅನೌಪಚಾರಿಕ ಶಿಕ್ಷಣ ನೀಡುವುದು.ಮಕ್ಕಳಿಗೆ ನಿಯಮಿತವಾಗಿ ಲಸಿಕೆ ಹಾಕಿಸುವುದು, ತೂಕ ಪರೀಕ್ಷಿಸುವುದು ಹಾಗೂ ಗರ್ಭಿಣಿಯರಿಗೆ ನಿಯಮಿತ ಆರೋಗ್ಯ ತಪಾಸಣೆ ಮತ್ತು ವಿಟಮಿನ್ ಮಾತ್ರೆಗಳನ್ನು ಒದಗಿಸಲು ನೆರವಾಗುವುದು.ತಮ್ಮ ವ್ಯಾಪ್ತಿಯಲ್ಲಿ ಜನಿಸುವ ಮಕ್ಕಳ ವಿವರ, ತಾಯಿ-ಮಕ್ಕಳ ಮರಣ ಪ್ರಮಾಣ ಹಾಗೂ ಅರ್ಹ -ಲಾನುಭವಿಗಳ ಸಮೀಕ್ಷೆ ನಡೆಸಿ ನಿಖರ ದಾಖಲೆಗಳನ್ನು ನಿರ್ವಹಿಸುವುದು.ತಾಯಂದಿರಿಗೆ ಸ್ತನ್ಯಪಾನ,ಕುಟುಂಬ ಕಲ್ಯಾಣ ಮತ್ತು ಪೌಷ್ಟಿಕ ಆಹಾರದ ಬಗ್ಗೆ ಅರಿವು ಮೂಡಿಸುವುದು ಮುಂತಾದ ಕೆಲಸಗಳನ್ನು ಅಂಗನವಾಡಿ ಕಾರ್ಯಕರ್ತೆಯರು ಮಾಡುತ್ತಾರೆ.
ಅಂಗನವಾಡಿ ಕೆಲಸದ ಜತೆಗೆ ಇತರ ಇಲಾಖೆಗಳ ಕೆಲಸಗಳನ್ನು ಅಂಗನವಾಡಿ ಕಾರ್ಯಕರ್ತೆಯರು ಕಳೆದ 50 ವರ್ಷಗಳಿಂದ ನಿರ್ವಹಿಸಿಕೊಂಡು ಬಂದಿದ್ದಾರೆ.ಇತ್ತೀಚೆಗೆ ನಡೆಯುತ್ತಿರುವ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ(ಎಸ್ಐಆರ್)ಕಾರ್ಯದಲ್ಲಿಯೂ ಬಿಎಲ್ಒಗಳಾಗಿ ಅಂಗನವಾಡಿ ಕಾರ್ಯಕರ್ತೆಯರು ಕೆಲಸ ಮಾಡುತ್ತಿದ್ದಾರೆ.ಇಷ್ಟೆಲ್ಲಾ ಕರ್ತವ್ಯ ನಿರ್ವಹಿಸಿದರೂ ತಮ್ಮನ್ನು ಸರಕಾರ ಕಡೆಗೆಣಿಸುತ್ತದೆ.ಅಂಗನವಾಡಿ ಆರಂಭವಾಗಿ 50 ವರ್ಷವಾದರೂ ನಮ್ಮನ್ನು ಸರಕಾರಿ ನೌಕರರೆಂದು ಪರಿಗಣಿಸಲಿಲ್ಲ.ಅಲ್ಲದೆ ವೇತನವೂ ಸಮಯಕ್ಕೆ ಸರಿಯಾಗಿ ಕೈಸೇರುತ್ತಿಲ್ಲ ಎನ್ನುವುದು ಅಂಗನವಾಡಿ ಕಾರ್ಯಕರ್ತೆಯರು,ಸಹಾಯಕಿಯರ ಅಳಲು.ಇದೀಗ ಕಳೆದ ಜೂನ್ ಮತ್ತು ಜುಲೈ ತಿಂಗಳ ವೇತನ ಕೈಗೆ ಸಿಗದೆ ರಾಜ್ಯದಾದ್ಯಂತ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ತೊಂದರೆಗೊಳಗಾಗಿದ್ದಾರೆ.
ಜೂನ್, ಜುಲೈ ತಿಂಗಳ ವೇತನ ಬಾಕಿ:
ಜೂನ್ ಮತ್ತು ಜುಲೈ ತಿಂಗಳ ವೇತನ ಬಾಕಿ ಇದೆ.ಸರಕಾರದಿಂದ ಅನುದಾನ ಬಂದಿಲ್ಲ ಎಂದು ಶಿಶು ಅಭಿವೃದ್ಧಿ ಇಲಾಖಾ ಅಽಕಾರಿ ಹರೀಶ್ರವರು ಮಾಹಿತಿ ನೀಡಿದ್ದಾರೆ.
ಬಜೆಟ್ ಇಲ್ಲ ಎಂಬ ಉತ್ತರ ಬರುತ್ತದೆ
ರಾಜ್ಯದಾದ್ಯಂತ ಯಾವುದೇ ಅಂಗನವಾಡಿ ಕಾರ್ಯಕರ್ತೆಯರಿಗೆ ಎರಡು ತಿಂಗಳಿನಿಂದ ಸಂಬಳ ಬರಲಿಲ್ಲ.ಅಧಿಕಾರಿಗಳನ್ನು ಕೇಳಿದಾಗ ಬಜೆಟ್ ಇಲ್ಲ ಎಂಬ ಉತ್ತರ ಬರುತ್ತದೆ.ಜೂನ್ ಮತ್ತು ಜುಲೈ ತಿಂಗಳ ಸಂಬಳ ಕೈಸೇರಿಲ್ಲ
-ಕಮಲ ಮಾವಿನಕಟ್ಟೆ, ಅಧ್ಯಕ್ಷರು, ಪುತ್ತೂರು ತಾ|ಅಂಗನವಾಡಿ
ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಂಘ










