







ಪುತ್ತೂರು: ತೋಟಗಾರಿಕೆ ಬೆಳೆ ಬೆಳೆದ ರೈತರು ಹವಾಮಾನ ವೈಪರೀತ್ಯದಿಂದ ಬೆಳೆ ನಷ್ಟ ಸಂಭವಿಸಿದಲ್ಲಿ ನಷ್ಟ ಪರಿಹಾರವನ್ನು ತುಂಬಿಸಿಕೊಡುವ ನಿಟ್ಟಿನಲ್ಲಿ 2026-27ನೇ ಸಾಲಿನ ಮುಂಗಾರು ಮತ್ತು ಹಿಂಗಾರು ಹಂಗಾಮುಗಳಿಗೆ ಮರುವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯ ನೋಂದಾವಣೆಯ ಅಂತಿಮ ದಿನಾಂಕವನ್ನು ಆ.17ರವರೆಗೆ ವಿಸ್ತರಿಸಲಾಗಿದೆ ಎಂದು ಜಿಲ್ಲಾ ತೋಟಗಾರಿಕಾ ಜಂಟಿ ನಿರ್ದೇಶಕರ ಪ್ರಕಟಣೆ ತಿಳಿಸಿದೆ.


ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಅಡಿಕೆ ಹಾಗೂ ಕಾಳುಮೆಣಸು ಬೆಳೆಗಳನ್ನು ಅಧಿಸೂಚಿಸಲಾಗಿರುತ್ತದೆ. ಸದರಿ ಯೋಜನೆಯಡಿ ಸಾಲ ಪಡೆದ/ಪಡೆಯದ ರೈತರು ನೋಂದಾವಣೆಗೊಳ್ಳಲು ಅಂತಿಮ ದಿನಾಂಕವನ್ನು ವಿಸ್ತರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಈವರೆಗೆ ಯೋಜನೆಯಡಿ ನೋಂದಾವಣೆಗೊಳ್ಳದ ರೈತರು ತುರ್ತಾಗಿ ಸದರಿ ಯೋಜನೆಯಡಿ ನೋಂದಾವಣೆಗೊಂಡು ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕಾಗಿ ತಿಳಿಸಲಾಗಿದೆ.



ಬೆಳೆಸಾಲ ಪಡೆದ ರೈತರು ಬೆಳೆಸಾಲ ಹೊಂದಿರುವ ಬ್ಯಾಂಕ್‌ನಲ್ಲಿ ಹಾಗೂ ಬೆಳೆಸಾಲ ಹೊಂದಿಲ್ಲದ ರೈತರು ತಮ್ಮ ಉಳಿತಾಯ ಖಾತೆ ಹೊಂದಿರುವ ಬ್ಯಾಂಕ್‌ಗಳಲ್ಲಿ ಸದರಿ ಯೋಜನೆಯಡಿ ನೋಂದಾವಣೆಗೊಳ್ಳಬಹುದಾ ಗಿರುತ್ತದೆ ಹಾಗೂ ಸಾಮಾನ್ಯ ಸೇವಾ ಕೇಂದ್ರ ಮತ್ತು ಗ್ರಾಮ ಒನ್‌ಗಳ ಮೂಲಕವೂ ನೋಂದಾವಣೆಗೆ ಅವಕಾಶ ಕಲ್ಪಿಸಲಾಗಿದೆ. ಈ ಯೋಜನೆಯಡಿ ಅಡಿಕೆ ಹಾಗೂ ಕಾಳುಮೆಣಸು ಬೆಳೆಗಳಿಗೆ ರೈತರು ಪಾವತಿಸಬೇಕಾದ ಪ್ರೀಮಿಯಂ ಮೊತ್ತ ಪ್ರತಿ ಹೆಕ್ಟೇರಿಗೆ ಕ್ರಮವಾಗಿ ರೂ.6400 ಹಾಗೂ ರೂ.2350ಗಳಾಗಿರುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸದರಿ ಯೋಜನೆಯ ಅನುಷ್ಟಾನಕ್ಕೆ ಸಂಬಂಧಿಸಿದಂತೆ ವಿಮಾ ಸಂಸ್ಥೆಯಾಗಿ ಪ್ರಸಕ್ತ ಸಾಲಿಗೆ TATA AIG ಸಂಸ್ಥೆಯು ಆಯ್ಕೆಯಾಗಿದ್ದು, ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಪ್ರತಿನಿದಿ (ಸಂಜಯ್ ಪೂಜಾರ್ 8809140983) ಅಥವಾ ತೋಟಗಾರಿಕೆ ಇಲಾಖಾಧಿಕಾರಿ (ರೇಖಾ ಎ., ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು 9731854527) ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.










