ಕ್ವಿಟ್ ಇಂಡಿಯಾ ಚಳವಳಿ (ಆಗಸ್ಟ್ ಕ್ರಾಂತಿ) – ಭಾರತದ ಸ್ವಾತಂತ್ರ್ಯ ಸಂಗ್ರಾಮದ ಐತಿಹಾಸಿಕ ಮೈಲಿಗಲ್ಲು

0

ಆಗಸ್ಟ್ 8, 1942ರಂದು ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಸುವರ್ಣ ಅಕ್ಷರಗಳಲ್ಲಿ ಬರೆದಿಡಬೇಕಾದ ‘ಕ್ವಿಟ್ ಇಂಡಿಯಾ’ (ಭಾರತ ಬಿಟ್ಟು ತೊಲಗಿ) ಚಳವಳಿಗೆ ಚಾಲನೆ ದೊರೆಯಿತು. ಬ್ರಿಟಿಷ್ ಆಡಳಿತದ ವಿರುದ್ಧ ದೇಶಾದ್ಯಂತ ಕ್ರಾಂತಿಯ ಕಿಚ್ಚನ್ನು ಹೊತ್ತಿಸಿದ ಈ ದಿನವನ್ನು ‘ಆಗಸ್ಟ್ ಕ್ರಾಂತಿ ದಿನ’ ಎಂದೂ ಕರೆಯಲಾಗುತ್ತದೆ.

ಚಳವಳಿಯ ಹಿನ್ನೆಲೆ
ಎರಡನೇ ಮಹಾಯುದ್ಧದ ಸಮಯದಲ್ಲಿ (1939-1945) ಬ್ರಿಟಿಷ್ ಸರ್ಕಾರವು ಭಾರತೀಯರ ಅನುಮತಿಯಿಲ್ಲದೆ ಭಾರತವನ್ನು ಯುದ್ಧಕ್ಕೆ ಧುಮುಕಿಸಿತು. ನಂತರ ಭಾರತೀಯರ ಬೆಂಬಲ ಪಡೆಯಲು ಬ್ರಿಟಿಷರು ಕಳುಹಿಸಿದ ಕ್ರಿಪ್ಸ್ ಮಿಷನ್ (Cripps Mission) ಸಂಪೂರ್ಣವಾಗಿ ವಿಫಲವಾಯಿತು. ಬ್ರಿಟಿಷರ ವಂಚನೆಯಿಂದ ಬೇಸತ್ತ ಅಖಿಲ ಭಾರತ ಕಾಂಗ್ರೆಸ್ ಸಮಿತಿಯು ಸಂಪೂರ್ಣ ಸ್ವಾತಂತ್ರ್ಯ ಹೊರತುಪಡಿಸಿ ಬೇರೆ ಯಾವುದಕ್ಕೂ ಒಪ್ಪದಿರಲು ನಿರ್ಧರಿಸಿತು. “ಮಾಡೂ ಇಲ್ಲವೇ ಮಡಿ” ಘೋಷಣೆ 1942ರ ಆಗಸ್ಟ್ 8 ರಂದು ಮುಂಬಯಿಯ ಗೊವಾಳಿಯಾ ಟ್ಯಾಂಕ್ ಮೈದಾನದಲ್ಲಿ (ಇಂದಿನ ‘ಆಗಸ್ಟ್ ಕ್ರಾಂತಿ ಮೈದಾನ’) ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಗಾಂಧೀಜಿಯವರು ಬ್ರಿಟಿಷರಿಗೆ ‘ಭಾರತ ಬಿಟ್ಟು ತೊಲಗಿ’ ಎಂದು ಎಚ್ಚರಿಸಿದರು.
ನಾವು ಭಾರತಕ್ಕೆ ಸಂಪೂರ್ಣ ಸ್ವಾತಂತ್ರ್ಯವನ್ನು ತರುತ್ತೇವೆ ಅಥವಾ ಆ ಪ್ರಯತ್ನದಲ್ಲಿ ಮಡಿಯುತ್ತೇವೆ. ನಮ್ಮ ಗುಲಾಮಗಿರಿಯ ಮುಂದುವರಿಕೆಯನ್ನು ನೋಡಲು ನಾವಜೀವಂತವಾಗಿರುವುದಿಲ್ಲ.”ಮಹಾತ್ಮ ಗಾಂಧಿಯ ಈ ಕರೆ ದೇಶದ ಮೂಲೆ ಮೂಲೆಗೂ ಮಿಂಚಿನಂತೆ ಹರಡಿತು. 

ಬ್ರಿಟಿಷರ ದಮನಕಾರಿ ನೀತಿ ಮತ್ತು ಜನಸಾಮಾನ್ಯರ ಕ್ರಾಂತಿ
ಆಗಸ್ಟ್ 9 ರ ಮುಂಜಾನೆಯೇ ಬ್ರಿಟಿಷ್ ಸರ್ಕಾರವು ಮಹಾತ್ಮ ಗಾಂಧೀಜಿ, ಜವಾಹರಲಾಲ್ ನೆಹರೂ, ವಲ್ಲಭಭಾಯಿ ಪಟೇಲ್ ಸೇರಿದಂತೆ ಪ್ರಮುಖ ನಾಯಕರನ್ನು ಬಂಧಿಸಿತು. ಆದರೆ, ನಾಯಕರ ಬಂಧನದಿಂದ ಚಳವಳಿ ನಿಲ್ಲಲಿಲ್ಲ. ಬದಲಿಗೆ ಅದು ಜನಸಾಮಾನ್ಯರ ಸಶಕ್ತ ಕ್ರಾಂತಿಯಾಗಿ ಮಾರ್ಪಟ್ಟಿತು. 

ಯುವ ನಾಯಕರ ನಾಯಕತ್ವ
ಅರುಣಾ ಅಸಫ್ ಅಲಿ, ಜಯಪ್ರಕಾಶ್ ನಾರಾಯಣ್, ರಾಮ್ ಮನೋಹರ್ ಲೋಹಿಯಾ ಮತ್ತು ಉಷಾ ಮೆಹ್ತಾ ಅವರಂತಹ ಯುವ ನಾಯಕರು ಗುಪ್ತವಾಗಿ ಚಳವಳಿಯನ್ನು ಮುನ್ನಡೆಸಿದರು. 

ಮಹಿಳೆಯರು ಮತ್ತು ವಿದ್ಯಾರ್ಥಿಗಳ ಪಾತ್ರ
ಶಾಲಾ-ಕಾಲೇಜು ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ರೈತರು ಬೃಹತ್ ಪ್ರಮಾಣದಲ್ಲಿ ರಸ್ತೆಗಿಳಿದು ಧರಣಿ, ಸತ್ಯಾಗ್ರಹ ನಡೆಸಿದರು.

ಸಮಾಂತರ ಸರ್ಕಾರಗಳು
ಬಿಹಾರ, ಬಂಗಾಳದ ಮಿಡ್ನಾಪುರ, ಮಹಾರಾಷ್ಟ್ರದ ಸತಾರಾ ಮುಂತಾದ ಕಡೆಗಳಲ್ಲಿ ಬ್ರಿಟಿಷ್ ಆಡಳಿತವನ್ನು ಕಿತ್ತೊಗೆದು ಸ್ಥಳೀಯ ಸ್ವತಂತ್ರ ಸರ್ಕಾರಗಳನ್ನು ಸ್ಥಾಪಿಸಲಾಯಿತು.

ಕರ್ನಾಟಕದಲ್ಲಿ ಕ್ವಿಟ್ ಇಂಡಿಯಾ ಚಳವಳಿ
ಕರ್ನಾಟಕದಲ್ಲೂ ಈ ಚಳವಳಿಯ ಕಾವು ಜೋರಾಗಿತ್ತು. ಬೆಂಗಳೂರು, ಮೈಸೂರು, ಧಾರವಾಡ, ಬೆಳಗಾವಿ ಮತ್ತು ಉಡುಪಿ-ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ವ್ಯಾಪಕ ಹರತಾಳಗಳು ನಡೆದವು.

ಈಸೂರು ಗ್ರಾಮದ ಬಲಿದಾನ
ಶಿವಮೊಗ್ಗ ಜಿಲ್ಲೆಯ ಈಸೂರು ಗ್ರಾಮದ ಜನರು ಬ್ರಿಟಿಷ್ ಅಧಿಕಾರವನ್ನುಧಿಕ್ಕರಿಸಿ, ತಮ್ಮದೇ ‘ಪ್ರತಿ ಸರ್ಕಾರ’ವನ್ನು ರಚಿಸಿಕೊಂಡು ‘ಸ್ವತಂತ್ರ ಗ್ರಾಮ’ ಎಂದು ಘೋಷಿಸಿಕೊಂಡರು. ಬ್ರಿಟಿಷರ ವಿರುದ್ಧ ಹೋರಾಡಿದ ಈಸೂರಿನ ಅನೇಕ ವೀರರು ತಮ್ಮ ಪ್ರಾಣತ್ಯಾಗ ಮಾಡಿದರು. ಈಸೂರು ‘ಕರ್ನಾಟಕದ ಜಲಿಯನ್‌ವಾಲಾ ಬಾಗ್’ ಎಂದೇ ಪ್ರಸಿದ್ಧಿಯಾಗಿದೆ.

ಚಳವಳಿಯ ಮಹತ್ವ ಮತ್ತು ಪರಿಣಾಮ
ಕ್ವಿಟ್ ಇಂಡಿಯಾ ಚಳವಳಿಯನ್ನು ಬ್ರಿಟಿಷರು ಸಶಸ್ತ್ರ ಬಲದಿಂದ ಹತ್ತಿಕ್ಕಲು ಯತ್ನಿಸಿದರೂ, ಭಾರತದಲ್ಲಿ ಇನ್ನು ಮುಂದೆ ತಮಗೇನೂ ಭವಿಷ್ಯವಿಲ್ಲ ಎಂಬುದನ್ನು ಅವರು ಸ್ಪಷ್ಟವಾಗಿ ಅರಿತುಕೊಂಡರು. ಭಾರತೀಯರ ಒಗ್ಗಟ್ಟು ಮತ್ತು ಆಕ್ರೋಶ ಬ್ರಿಟಿಷ್ ಸಾಮ್ರಾಜ್ಯದ ಅಡಿಪಾಯವನ್ನೇ ಅಲ್ಲಾಡಿಸಿತು. ಈ ಚಳವಳಿಯು 1947ರ ಆಗಸ್ಟ್ 15ರಂದು ಭಾರತಕ್ಕೆ ಸಿಕ್ಕ ಸ್ವಾತಂತ್ರ್ಯಕ್ಕೆ ಅಂತಿಮ ಹೆಜ್ಜೆಯಾಯಿತು. 
ಆಗಸ್ಟ್ ಕ್ರಾಂತಿ ದಿನದ ಈ ಶುಭ ಸಂದರ್ಭದಲ್ಲಿ, ನಮಗಾಗಿ ತಮ್ಮ ಜೀವವನ್ನು ತೃಣಸಮಾನವಾಗಿ ತ್ಯಾಗ ಮಾಡಿದ ಪ್ರತಿಯೊಬ್ಬ ಸ್ವಾತಂತ್ರ್ಯ ಹೋರಾಟಗಾರರಿಗೂ ಶ್ರದ್ಧಾಂಜಲಿ ಸಲ್ಲಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ.

LEAVE A REPLY

Please enter your comment!
Please enter your name here