






ಪುತ್ತೂರು:ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಆ.11ರಂದು ರಾಜ್ಯದ ಸರಕಾರಿ ನೌಕರರೊಂದಿಗೆ ವಿಡಿಯೋ ಸಂವಾದ ನಡೆಸಲಿದ್ದು ಪುತ್ತೂರು ಹೋಬಳಿಗೆ ಸಂಬಂಧಿಸಿ ಪುರಭವನ ಹಾಗೂ ಉಪ್ಪಿನಂಗಡಿ ಹೋಬಳಿಗೆ ಸಂಬಂಧಿಸಿ ಉಪ್ಪಿನಂಗಡಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ವಿಡಿಯೋ ಸಂವಾದ ಕಾರ್ಯಕ್ರಮಗಳಿಗೆ ಸಿದ್ಧತೆ ನಡೆಸಲಾಗಿದೆ ಎಂದು ಪುತ್ತೂರು ಹೋಬಳಿಯ ನೋಡೆಲ್ ಅಧಿಕಾರಿಯಾಗಿರುವ ತಹಶೀಲ್ದಾರ್ ಎಸ್.ಬಿ ಕೂಡಲಗಿ ಹೇಳಿದರು.


ತಾಲೂಕು ಆಡಳಿತ ಸೌಧದಲ್ಲಿರುವ ತಹಶೀಲ್ದಾರ್ ಸಭಾಂಗಣದಲ್ಲಿ ಆ.10ರಂದು ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾಹಿತಿ ನೀಡಿದರು.



ಪೊಲೀಸ್ ಆರೋಗ್ಯ, ಪಶುಸಂಗೋಪನಾ, ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಹೊರತುಪಡಿಸಿ ಉಳಿದಂತೆ ಎಲ್ಲಾ ಇಲಾಖೆಗಳ ಅಧಿಕಾರಿ ಹಾಗೂ ಸಿಬ್ಬಂದಿಗಳು ಸಂವಾದ ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಹಾಜರಾಗಬೇಕು. ಸಂವಾದದಲ್ಲಿ ಭಾಗವಹಿಸುವವರ ಹಾಜರಾತಿ ಪಡೆದುಕೊಳ್ಳಲಾಗುವುದು. ಹೀಗಾಗಿ ಪ್ರತಿ ಇಲಾಖೆಯಿಂದಲೂ ಡಿ ಗ್ರೂಫ್ ನೌಕರರ ಹೊರತು ಪಡಿಸಿ ಉಳಿದ ಎಲ್ಲಾ ಅಧಿಕಾರಿ, ಸಿಬ್ಬಂದಿಗಳು ಸಂವಾದದಲ್ಲಿ ಭಾಗವಹಿಸಬೇಕು. ಬೆಳಿಗ್ಗೆ 11 ಗಂಟೆಗೆ ಸಂವಾದ ಪ್ರಾರಂಭಗೊಳ್ಳಲಿದೆ. 10.30ಕ್ಕೆ ಹಾಜರಾತಿ ಪಡೆದುಕೊಳ್ಳಲಾಗುವುದು. ಒಟ್ಟು ಎರಡು ಗಂಟೆ ಅವಧಿಯ ಸಂವಾದವಾಗಿರುತ್ತದೆ. ಉಪ್ಪಿನಂಗಡಿ ಹೋಬಳಿಯ ಏಳು ಗ್ರಾಮ ಪಂಚಾಯತ್ಗಳು, ಆ ಭಾಗದ ಇಲಾಖೆಗಳು ಉಪ್ಪಿನಂಗಡಿ ಗ್ರಾ.ಪಂನ ಸಂವಾದದಲ್ಲಿ ಭಾಗವಹಿಸುವುದು. ಪುತ್ತೂರು ಹೋಬಳಿಯ ಎಲ್ಲಾ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಪುರಭವನದಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು. ಆಯಾ ಇಲಾಖೆಯವರ ತಮ್ಮ ಇಲಾಖೆಗೆ ಸಂಬಂಧಿಸಿದ ಎಲ್ಲಾ ಸಿದ್ದತೆಗಳೊಂದಿಗೆ ಸಂವಾದದಲ್ಲಿ ಭಾಗವಹಿಸಬೇಕು. ನಮ್ಮ ತಾಲೂಕಿನ ಸರದಿ ಬಂದಾಗ ಪ್ರತಿಯೊಬ್ಬರೂ ಸಿದ್ದರಿರಬೇಕು. ತಮ್ಮ ಇಲಾಖೆಗೆ ಅಧಿಕಾರಿ ಹಾಗೂ ಸಿಬ್ಬಂದಿಗಳು ಕರೆ ತರುವ ಹೊಣೆ ಆಯಾ ಇಲಾಖೆಯ ಮುಖ್ಯಸ್ಥರದ್ದಾಗಿದೆ. ಸಹಾಯಕ ಆಯುಕ್ತ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.
ಪುತ್ತೂರಿನಲ್ಲಿ ದ್ವಿಮುಖ, ಉಪ್ಪಿನಂಗಡಿಯಲ್ಲಿ ಏಕಮುಖ ಸಂವಾದ:
ಪುತ್ತೂರು ಹೋಬಳಿಗೆ ಸಂಬಂಧಿಸಿ ಪುರಭವನದಲ್ಲಿ ನಡೆಯುವ ವಿಡಿಯೋ ಸಂವಾದ ದ್ವಿಮುಖ ಸಂವಾದವಾಗಿದೆ. ಇಲ್ಲಿ ಮುಖ್ಯಮಂತ್ರಿಯವರು ಮಾತನಾಡುವ ಜೊತೆಗೆ ಸಂವಾದಲ್ಲಿ ನಮಗೂ ಮಾತನಾಡಲು ಅವಕಾಶವಿದೆ. ಉಪ್ಪಿನಂಗಡಿಯಲ್ಲಿ ಏಕ ಮುಖ ಸಂವಾದ ನಡೆಯಲಿದ್ದು ಮುಖ್ಯಮಂತ್ರಿಯವರು ಮಾತ್ರ ಮಾತನಾಡಲಿದ್ದಾರೆ ಎಂದು ತಹಶೀಲ್ದಾರ್ ತಿಳಿಸಿದರು.
ಪೌರಾಯಕ್ತೆ ವಿದ್ಯಾ ಎಂ. ಕಾಳೆ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಆಚಾರ್ಯ, ಕಾರ್ಯದರ್ಶಿ ಅಬ್ರಹಾಂ ಎಸ್.ಎ. ಹಾಗೂ ಎಲ್ಲಾ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.










