







ಪುತ್ತೂರು: 80ನೇ ಸ್ವಾತಂತ್ರ್ಯೋತ್ಸವದ ಶುಭ ಸಂಭ್ರಮದ ಅಂಗವಾಗಿ ದೇಶಪ್ರೇಮದ ಭಾವನೆಯನ್ನು ಸಂಗೀತದ ಮೂಲಕ ವ್ಯಕ್ತಪಡಿಸುವ, ಜಾಗೃತಗೊಳಿಸುವ ಉದ್ದೇಶದಿಂದ ಪುತ್ತೂರು ಕ್ಲಬ್ ʼಮಾ ತುಜೇ ಪ್ರಣಾಂʼ ಎಂಬ ದೇಶಭಕ್ತಿ ಸಂಗೀತ ರಸಮಂಜರಿಯನ್ನು ಆಯೋಜಸಿದೆ.


ಈ ದೇಶದ ಸ್ವಾತಂತ್ರ್ಯಕ್ಕಾಗಿ ಬಲಿದಾನಗೈದ ಮಹಾತ್ಮರನ್ನು ಸ್ಮರಿಸುವುದು ಹಾಗು ಯುವಜನತೆಯ ಹೃದಯದಲ್ಲಿ ರಾಷ್ಟ್ರಪ್ರೇಮದ ಜ್ಯೋತಿಯನ್ನು ಬೆಳಗುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಈ ನಿಟ್ಟಿನಲ್ಲಿ ಸಂಗೀತ ರಸಸಂಜೆ ಮೂಲಕ ದೇಶಕ್ಕೆ ನಮನ ಸಲ್ಲಿಸುವ ಅಪೂರ್ವ ಕಾರ್ಯಕ್ರಮ ಇದಾಗಲಿದೆ. ಆ.14ರಂದು ಸಂಜೆ 5ರಿಂದ ನಗರದ ಮರೀಲ್ ನಲ್ಲಿರುವ ಪುತ್ತೂರು ಕ್ಲಬ್ ನ ದೀಪಂ ಸಭಾಂಗಣದಲ್ಲಿ ಈ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದ್ದು, ಕುಂಬ್ಳೆ ಬ್ರದರ್ಸ್ ಬಳಗದ ಸುಹಾನ ಸಫರ್ ಸೀಸನ್ 11 ತಂಡವು ದೇಶಭಕ್ತಿ ಗೀತೆಗಳ ಲೈವ್ ಆರ್ಕೆಸ್ಟ್ರಾ ನಡೆಸಿಕೊಡಲಿದೆ.



ದೇಶಭಕ್ತಿಗೀತೆಗಳು ಕೇವಲ ಹಾಡಿನ ಸಾಲುಗಳಲ್ಲ ಇದು ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿ ರಾಷ್ಟ್ರಪ್ರೇಮದ ಕಿಡಿಯನ್ನು ಹೊತ್ತಿಸುವ ಶಕ್ತಿಶಾಲಿ ಮಾಧ್ಯಮ. ಭಾಷೆ, ಧರ್ಮ, ಸಂಸ್ಕೃತಿಗಳ ವೈವಿಧ್ಯತೆಗಳನ್ನು ಹೊಂದಿರುವ ನಮ್ಮ ದೇಶವನ್ನು ಭಾರತೀಯರು ಎಂಬ ಒಂದೇ ದಾರದಲ್ಲಿ ಪೋಣಿಸುವುದು ಈ ದೇಶಭಕ್ತಿ ಗೀತೆಗಳು. ಪುತ್ತೂರು, ಸುಳ್ಯ, ಬಂಟ್ವಾಳ ಹಾಗು ಸುತ್ತಮುತ್ತಲಿನ ಭಾಗಗಳ ನೂರಾರು ಸಂಗೀತ ಪ್ರೇಮಿಗಳು, ಉದ್ಯಮಿಗಳು, ವೃತ್ತಿಪರರು ಹಾಗೂ ಕುಟುಂಬಸ್ಥರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಡಾ.ದೀಪಕ್ ರೈ, ಕಾರ್ಯದರ್ಶಿ ವಿಶ್ವಾಸ್ ಶೆಣೈ, ಕೋಶಾಧಿಕಾರಿ ಕೆ.ವಿ ದಿವಾಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.










