ಸರಕಾರಿ ನೌಕರರೊಂದಿಗೆ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ವಿಡಿಯೋ ಸಂವಾದ

0

  • ಭ್ರಷ್ಟಾಚಾರದ ವಿಚಾರದಲ್ಲಿ ನಾನು ನೋ ಕಾಂಪ್ರಮೈಸ್
  • ಡಬಲ್ ಬಿಲ್, ಬೋಗಸ್ ಬಿಲ್ ಮಾಡುವವರನ್ನು ಬಡಿದು ಹಾಕುವೆ

ಪುತ್ತೂರು: ಭ್ರಷ್ಟಾಚಾರ ವಿಚಾರದಲ್ಲಿ ನಾನು ಯಾವುದೇ ರಾಜಿ ಇಲ್ಲ. ಅಧಿಕಾರಿಗಳ ಪ್ರತಿ ಹೆಜ್ಜೆ ಪರಿಶೀಲಿಸುತ್ತೇನೆ. ಪ್ರತಿ ಫಲಾನುಭವಿಗಳ ಮಾಹಿತಿ ಇಟ್ಟುಕೊಳ್ಳಬೇಕು. ಅವರು ಅದನ್ನು ಹೇಗೆ ಬಳಸುತ್ತಿದ್ದಾರೆ ಎಂದು ಪರಿಶೀಲಿಸಬೇಕು. ನಮ್ಮಲ್ಲಿ ಡಬಲ್ ಬಿಲ್ ಮಾಡುವ ಕೆಲಸ ಮಾಡುತ್ತಿದ್ದಾರೆ. ನಾನು ಅಂತಹವರನ್ನು ಬಡಿದು ಹಾಕುತ್ತೇನೆ. ಬೋಗಸ್ ಬಿಲ್‌ಗಳಿಗೆ ಅವಕಾಶ ಇಲ್ಲ. ದಾಖಲೆ ತಿದ್ದುವುದಕ್ಕೆ ಬ್ರೇಕ್ ಹಾಕಲು ಆಸ್ತಿ ದಾಖಲೆ ಡಿಜಿಟಲೀಕರಣ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಎಚ್ಚರಿಕೆ ನೀಡಿದರು.


ಬೆಂಗಳೂರು ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಆ.11ರಂದು ನಡೆದ ತಾಲೂಕು ಮಟ್ಟದ ಸರಕಾರಿ ನೌಕರರೊಂದಿಗಿನ ವಿಡಿಯೋ ಸಂವಾದಲ್ಲಿ ನೌಕರರನ್ನು ಉದ್ದೇಶಿಸಿ ಅವರು ಮಾತನಾಡಿದರು. ಅಧಿಕಾರಿಗಳು ಕಾನೂನು ಚೌಕಟ್ಟಿನಲ್ಲಿ ಜನರ ಸಮಸ್ಯೆಗೆ ಸ್ಪಂದಿಸಬೇಕು. ಪ್ರತಿಯೊಬ್ಬರೂ ಆತ್ಮಸಾಕ್ಷಿಗೆ ಒಪ್ಪುವಂತೆ ಕೆಲಸ ಮಾಡುಬೇಕು. ಪ್ರತಿ ತಾಲೂಕು ಮಟ್ಟದ ಅಧಿಕಾರಿಗಳು ತಮ್ಮ ದಿನದ ಕಾರ್ಯಕ್ರಮದ ವಿವರ ಹಿರಿಯ ಅಧಿಕಾರಿಗಳಿಗೆ ನೀಡಬೇಕು. ಸಹಕಾರ, ಕಂದಾಯ ಅಧಿಕಾರಿಗಳಿಗೆ ನ್ಯಾಯ ನೀಡುವ ಅಧಿಕಾರ ಇರುತ್ತದೆ. ನ್ಯಾಯ ಪೀಠದಿಂದ ಯಾವುದೇ ಅನ್ಯಾಯ ಆಗಬಾರದು. ಅಧಿಕಾರಿಗಳು ಯಾರ ಒತ್ತಡಕ್ಕೂ ಮಣಿಯದೆ ಕೆಲಸ ಮಾಡಬೇಕು. ವಿಧಾನಸಭೆ ಆದ ಮೇಲೆ ನಾನು ಪ್ರತಿ ತಾಲೂಕಿಗೂ ನಾನು ಭೇಟಿ ನೀಡುತ್ತೇನೆ. ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಎಲ್ಲಾ ಖಾಸಗಿ ಶಾಲೆಗಳು ಭಾಗವಹಿಸುವಂತೆ ನೋಡಿಕೊಳ್ಳಬೇಕು ಎಂದು ಡಿಡಿಪಿಐ, ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದರು.


ಆತ್ಮಸಾಕ್ಷಿಗೆ ಒಪ್ಪುವಂತೆ ಕೆಲಸ ಮಾಡಬೇಕು:
ನಮ್ಮಲ್ಲಿರುವ ಶಿಕ್ಷಣ, ಆರೋಗ್ಯ ಸೌಲಭ್ಯ ಬೇರೆ ಎಲ್ಲೂ ಇಲ್ಲ. ನಾನು ನನ್ನ ಮೇಲೆ ಕಣ್ಣು ಇಟ್ಟುಕೊಂಡಿದ್ದೇನೆ. ತಾಲ್ಲೂಕು ಮಟ್ಟದಲ್ಲಿ ಅಧಿಕಾರಿಗಳು ಹಾಗೂ ಶಾಸಕರು ಯಾವ ರೀತಿ ಕೆಲಸ ಮಾಡುತ್ತಿದ್ದಾರೆ ಎಂದು ಪರಿಶೀಲನೆ ಮಾಡುತ್ತೇವೆ. ನಾವು ಕೆಲಸ ಮಾಡುವುದೇ ಜನರಿಗಾಗಿ. ಬೇರೆಯವರಿಗೆ ಒಪ್ಪಿಸದಿದ್ದರೂ ನಿಮ್ಮ ಆತ್ಮಸಾಕ್ಷಿಗೆ ಒಪ್ಪುವಂತೆ ಕೆಲಸ ಮಾಡಬೇಕು. ಅಧಿಕಾರ ಜವಾಬ್ದಾರಿಯ ಸಂಕೇತ. ಇದು ಸಿಂಹಾಸನ ಅಲ್ಲ, ಅವಕಾಶ. ದೇವರ ಮೂರ್ತಿಗೆ ಬೆಲೆ ಕಟ್ಟಿದರೂ ಭಗವಂತನಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಜನರಲ್ಲೇ ದೇವರನ್ನು ಕಾಣಬಹುದು. ಗ್ಯಾರಂಟಿ ಬಗ್ಗೆ ಶಾಸಕರು, ವಿರೋಧ ಪಕ್ಷದವರು ಟೀಕೆ ಮಾಡುತ್ತಿದ್ದಾರೆ. ಪ್ರಧಾನ ಮಂತ್ರಿಗಳು ಟೀಕಿಸಿದರೂ ನಂತರ ಟೀಕೆ ಮಾಡಿದವರೇ ಪಾಲಿಸುವಂತಾಗಿದೆ. ಕರ್ನಾಟಕ ರಾಜ್ಯದ ಗ್ಯಾರಂಟಿ ಯೋಜನೆ ದೇಶಕ್ಕೆ ಮಾದರಿಯಾಗಿದೆ ಎಂದು ಅವರು ಹೇಳಿದರು.


ಕಾನೂನು ಚೌಕಟ್ಟಿನಲ್ಲಿ ಜನರ ಸಮಸ್ಯೆಗೆ ಸ್ಪಂದಿಸಿ:
ಸರ್ಕಾರ ನೌಕರರ ಸಂಘದವರು ಗ್ಯಾರಂಟಿ ಯೋಜನೆ ತ್ಯಜಿಸುವ ನಿರ್ಧಾರಕ್ಕೆ ಬಂದಿದ್ದಾರೆ. ಅವರಿಗೆ ಅಭಿನಂದನೆಗಳು. ಕೇಂದ್ರ ಕಚೇರಿಯಲ್ಲಿ ಇದ್ದು ಕೆಲಸ ಮಾಡದಿದ್ದರೆ ಮತ್ತೆ ನಿಮಗೆ ಈ ಜವಾಬ್ದಾರಿ ಯಾಕೆ? ಪ್ರತಿ ತಾಲ್ಲೂಕಿನಲ್ಲಿ ಎಲ್ಲಾ ಅಧಿಕಾರಿಗಳು ಅಲ್ಲೇ ವಾಸ ಇರಬೇಕು. ಇಂದು 750 ಕಡೆ ಸಭೆ ಈ ಕಾರ್ಯಕ್ರಮ ನಡೆಯುತ್ತಿದೆ. ರಾಜ್ಯದ ಪ್ರಮುಖ ನೌಕರನಾಗಿ ಸರ್ಕಾರದ ಚಿಂತನೆ, ಮುಂದಿನ ದಿನಗಳಲ್ಲಿ ಸಾಗಬೇಕಾದ ದಾರಿ ಬಗ್ಗೆ ಮಾರ್ಗದರ್ಶನ ನೀಡಲು ಬಂದಿರುವೆ. ಮನಸ್ಸು ಶುದ್ಧವಾಗಿ, ಪಾರದರ್ಶಕವಾಗಿ ಕೆಲಸ ಮಾಡಿದರೆ ಸಮಸ್ಯೆಗೆ ಪರಿಹಾರ ನೀಡಬಹುದು ಎಂದು ಕಿವಿಮಾತು ಹೇಳಿದರು.


75೦ಕೇಂದ್ರಗಳಲ್ಲಿ, 5.50ಲಕ್ಷ ಸಿಬ್ಬಂದಿಗಳು ಭಾಗಿ;
ರಾಜ್ಯದ 750 ಕೇಂದ್ರಗಳಲ್ಲಿ ಮುಖ್ಯಮಂತ್ರಿಗಳು ಏಕಕಾಲದಲ್ಲಿ ನಡೆಸಿದ ವಿಡಿಯೋ ಸಂವಾದದಲ್ಲಿ ರಾಜ್ಯ5.50ಲಕ್ಷ ಅಧಿಕಾರಿಗಳು ಹಾಗೂ ನೌಕರರು ವಿಡಿಯೋ ಸಂವಾದದಲ್ಲಿ ಭಾಗವಹಿಸಿದ್ದರು. ಪುತ್ತೂರು ಹೋಬಳಿಗೆ ಸಂಬಂಧಿಸಿದಂತೆ ಪುರಭವನದಲ್ಲಿ ದ್ವಿಮುಖ ವಿಡಿಯೋ ಸಂವಾದ ನಡೆಯಿತು. ತಹಶೀಲ್ದಾರ್ ಎಸ್.ಬಿ ಕೂಡಲಗಿ ಕಂದಾಯ ಇಲಾಖೆಯ ಕಾರ್ಯಕ್ರಮಗಳು ಮಳೆಹಾನಿ, ಪರಿಹಾರಗಳ ಕುರಿತು ಮಾಹಿತಿ ನೀಡಿದರು. ಉಡುಪಿ, ದ.ಕ ಜಿಲ್ಲೆಗೆ ಸಂಬಂಧಿಸಿ ಪುತ್ತೂರು ತಾಲೂಕಿನಿಂದ ಮಾತ್ರ ಮಾಹಿತಿ ಪಡೆದುಕೊಳ್ಳಲಾಗಿತ್ತು. ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗಿಸ್, ಡಿವೈಎಸ್‌ಪಿ ಪ್ರಮೋದ್, ನಗರ ಸಭಾ ಪೌರಾಯುಕ್ತೆ ವಿದ್ಯಾ ಎಂ. ಕಾಳೆ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಸಹಿತ ಎಲ್ಲಾ ಇಲಾಖೆಗಳ ಅಧಿಕಾರಿ ಹಾಗೂ ಸಿಬ್ಬಂದಿಗಳು ವಿಡಿಯೋ ಸಂವಾದದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here