ಮರ್ದಾಳ: ಕುಂಡಡ್ಕ ಪಾಲ್ಸ್‌ನಲ್ಲಿ ಅಪ್ರಾಪ್ತ ಬಾಲಕನ ಮೇಲೆ ಹಲ್ಲೆ ಆರೋಪ: ಐವರ ವಿರುದ್ಧ ಪ್ರಕರಣ ದಾಖಲು

0

ಕಡಬ: ಮರ್ದಾಳ ಸಮೀಪ ಇರುವ ಕುಂಡಡ್ಕ ಪಾಲ್ಸ್‌ಗೆ ತೆರಳಿದ್ದ ಪರಿಶಿಷ್ಟ ಪಂಗಡಕ್ಕೆ ಸೇರಿದ ಅಪ್ರಾಪ್ತ ಬಾಲಕ ಹಾಗೂ ಆತನ ಸಹಪಾಠಿಗಳ ಮೇಲೆ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ ಆರೋಪದ ಮೇರೆಗೆ ಐವರ ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ದೂರುದಾರ ಬಾಲಕನು ತನ್ನ ನಾಲ್ವರು ಸಹಪಾಠಿಗಳೊಂದಿಗೆ ಆ.3ರಂದು ಬೆಳಿಗ್ಗೆ ಕಡಬದ ಕುಂಡಡ್ಕ ಪಾಲ್ಸ್‌ಗೆ ತೆರಳಿ ಆಟವಾಡುತ್ತಿದ್ದ ವೇಳೆ ಆರೋಪಿಗಳಾದ ರೋಹಿತ್, ದೇವಿಪ್ರಸಾದ್, ಚಂದನ್ ಹಾಗೂ ಉಮೇಶ್ ಮತ್ತು ವಿದ್ಯಾರ್ಥಿನಿಯೊಬ್ಬರ ತಂದೆ ಸ್ಥಳಕ್ಕೆ ಬಂದಿದ್ದರು. ಈ ಸಂದರ್ಭದಲ್ಲಿ ಆರೋಪಿಗಳು ಬಾಲಕನಿಗೆ ಅವಾಚ್ಯವಾಗಿ ಬೈದು, ಆತನಿಗೆ ಹಾಗೂ ಇಬ್ಬರು ಸಹಪಾಠಿ ಬಾಲಕರಿಗೆ ಹಲ್ಲೆ ನಡೆಸಿದ್ದಲ್ಲದೆ, ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.


ಈ ಸಂಬಂಧ ಬಾಲಕ ನೀಡಿದ ದೂರಿನ ಮೇರೆಗೆ ಕಡಬ ಪೊಲೀಸ್ ಠಾಣೆಯಲ್ಲಿ ಆ.11ರಂದು ಅ.ಕ್ರ. 97/2026ರಂತೆ ಭಾರತೀಯ ನ್ಯಾಯ ಸಂಹಿತೆ ಯ ವಿವಿಧ ಕಲಂಗಳಡಿ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ ಕಲಂಗಳಡಿ ಪ್ರಕರಣ ದಾಖಲಿಸಲಾಗಿದೆ. ಕಡಬ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

LEAVE A REPLY

Please enter your comment!
Please enter your name here