







ಕಡಬ: ದೇಶದ 80ನೇ ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಬಿಜೆಪಿ ಮಹಾಶಕ್ತಿ ಕೇಂದ್ರದ ವತಿಯಿಂದ ಕಡಬದಲ್ಲಿ ‘ತಿರಂಗ ಯಾತ್ರೆ’ಯನ್ನು ಬುಧವಾರ ಆಯೋಜಿಸಲಾಯಿತು.


ಕಡಬದ ಮಿನಿ ವಿಧಾನಸೌಧದ ಆವರಣದ ಬಳಿ ನಡೆದ ಕಾರ್ಯಕ್ರಮದಲ್ಲಿ ಸುಳ್ಯ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅವರು ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ತಿರಂಗ ಯಾತ್ರೆಗೆ ಚಾಲನೆ ನೀಡಿದರು.




ಬಳಿಕ ಮಿನಿ ವಿಧಾನಸೌಧದಿಂದ ಆರಂಭಗೊಂಡ ತಿರಂಗ ಯಾತ್ರೆಯು ಕಡಬದ ಪ್ರಮುಖ ಬೀದಿಗಳ ಮೂಲಕ ಮುಖ್ಯ ಪೇಟೆಯನ್ನು ಹಾದು ಪಂಜ ರಸ್ತೆಯವರೆಗೆ ಸಾಗಿತು. ಯಾತ್ರೆಯುದ್ದಕ್ಕೂ ಬಿಜೆಪಿ ಕಾರ್ಯಕರ್ತರು ಹಾಗೂ ಪಕ್ಷದ ಪ್ರಮುಖರು ಕೈಯಲ್ಲಿ ತ್ರಿವರ್ಣ ಧ್ವಜವನ್ನು ಹಿಡಿದು ‘ಭಾರತ್ ಮಾತಾ ಕೀ ಜೈ’ ಸೇರಿದಂತೆ ವಿವಿಧ ರಾಷ್ಟ್ರಭಕ್ತಿಯ ಘೋಷಣೆಗಳನ್ನು ಕೂಗುತ್ತಾ ಸಾಗಿದರು.

ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಹಾಗೂ ದೇಶಭಕ್ತಿಯ ವಾತಾವರಣದಲ್ಲಿ ನಡೆದ ತಿರಂಗ ಯಾತ್ರೆ ಸಾರ್ವಜನಿಕರ ಗಮನ ಸೆಳೆಯಿತು.ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ವಿವಿಧ ಘಟಕಗಳ ಪ್ರಮುಖರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.










