







ಪುತ್ತೂರು: ಒಂದು ವರ್ಷದ ಅವಧಿಗೆ ರಾಜ್ಯದಲ್ಲಿ ತಂಬಾಕು ಮತ್ತು ನಿಕೋಟಿನ್ ಹೊಂದಿರುವ ಗುಟ್ಕಾ ಹಾಗೂ ಪಾನ್ ಮಸಾಲಗಳ ಉತ್ಪಾದನೆ, ಶೇಖರಣೆ, ವಿತರಣೆ, ಸಾಗಣೆ ಹಾಗೂ ಮಾರಾಟವನ್ನು ನಿಷೇಧಿಸಲಾಗಿದೆ. ಸಾರ್ವಜನಿಕರ ಆರೋಗ್ಯ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಅಧಿಸೂಚನೆ ಹೊರಡಿಸಿದ ದಿನದಿಂದಲೇ ಈ ನಿಷೇಧ ಜಾರಿಗೆ ಬಂದಿದೆ.


ಆಹಾರ ಭದ್ರತೆ ಮತ್ತು ಗುಣಮಟ್ಟ ಕಾಯ್ದೆ-2006 ರ ಸೆಕ್ಷನ್ 30(2)(a) ಹಾಗೂ ಆಹಾರ ಭದ್ರತೆ ಮತ್ತು ಗುಣಮಟ್ಟ (ಮಾರಾಟ ನಿಷೇಧ ಮತ್ತು ನಿರ್ಬಂಧಗಳು) ನಿಯಮಾವಳಿಗಳು-2011ರ ನಿಯಮ 2.3.4 ರ ಅಡಿಯಲ್ಲಿ ರಾಜ್ಯ ಆಹಾರ ಸುರಕ್ಷತಾ ಆಯುಕ್ತರು ಈ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದ್ದಾರೆ.



ತಂಬಾಕು ಅಥವಾ ನಿಕೋಟಿನ್ ಅಂಶವನ್ನು ಪ್ರತ್ಯೇಕವಾಗಿ ಪ್ಯಾಕ್ ಮಾಡಿ, ನಂತರ ಗ್ರಾಹಕರು ಸುಲಭವಾಗಿ ಮಿಶ್ರಣ ಮಾಡಿ ಬಳಸುವಂತೆ ಮಾರಾಟ ಮಾಡುವ ಯಾವುದೇ ಉತ್ಪನ್ನಗಳಿಗೂ ಈ ನಿಷೇಧ ಅನ್ವಯವಾಗಲಿದೆ.










