






ರಾಮಕುಂಜ: ಗ್ರಾಮದ ಹಲ್ಯಾರ ಎಂಬಲ್ಲಿ ವಾಸವಿದ್ದ ನೆಲ್ಯೊಟ್ಟು ಯಾಕೂಬ್ ಮೇಸ್ತ್ರಿ (68ವ.) ಆ.12ರಂದು ಸಂಜೆ ಅನಾರೋಗ್ಯದಿಂದ ನಿಧನರಾದರು.


ಹಲವು ವರ್ಷಗಳ ಹಿಂದೆ ಕೊಯಿಲ ಗ್ರಾಮದ ನೆಲ್ಯೊಟ್ಟು ಎಂಬಲ್ಲಿ ವಾಸವಾಗಿದ್ದ ಯಾಕೂಬ್ ಅವರು ಆ ಬಳಿಕ ಹಲ್ಯಾರದಲ್ಲಿ ಕುಟುಂಬ ಸಮೇತ ವಾಸ್ತವ್ಯವಿದ್ದರು. ಇವರು ಕಳೆದ 30ಕ್ಕೂ ಹೆಚ್ಚು ವರ್ಷಗಳಿಂದ ಸುಮಾರು 20ಕ್ಕೂ ಹೆಚ್ಚು ಕಾರ್ಮಿಕರ ತಂಡದೊಂದಿಗೆ ಕೃಷಿ ತೋಟ ಸಹಿತ ಇತರೇ ಕೆಲಸಗಳನ್ನು ಮಾಡಿಸುವ ಮೂಲಕ ಪರಿಸರದಲ್ಲಿ ಯಾಕೂಬ್ ಮೇಸ್ತ್ರಿ ಎಂದೇ ಚಿರಪರಿಚಿತರಾಗಿದ್ದರು. ವರ್ಷದ ಹಿಂದೆ ಅನಾರೋಗ್ಯಕ್ಕೆ ಒಳಗಾಗಿದ್ದ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಆ.12 ರಂದೂ ಮಧ್ಯಾಹ್ನದ ವೇಳೆಗೆ ಆತೂರು ಭೂಮಿಕಾ ಎಂಬಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಿಗೆ ಸಂಬಳ ನೀಡಿ ಮನೆಗೆ ಬಂದಿದ್ದರು. ಸಂಜೆ ವೇಳೆ ಅವರಿಗೆ ಹಠಾತ್ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಅವರ ಪುತ್ರ ತಕ್ಷಣ ಆಲಂಕಾರಿನ ಆಸ್ಪತ್ರೆಯೊಂದಕ್ಕೆ ಚಿಕಿತ್ಸೆಗೆಂದು ಕರೆದೊಯ್ದಿದ್ದರು. ಅಲ್ಲಿ ಪರೀಕ್ಷಿಸಿದ ವೈದ್ಯರು ಯಾಕೂಬ್ ಅವರು ಮೃತಪಟ್ಟಿರುವುದನ್ನು ದೃಢಪಡಿಸಿದ್ದರು ಎಂದು ವರದಿಯಾಗಿದೆ.



ಇವರು ಪ್ರತಿವರ್ಷ ದೀಪಾವಳಿಯಂದು ತನ್ನ ಜೊತೆ ಕೆಲಸ ಮಾಡುತ್ತಿದ್ದ ಕಾರ್ಮಿಕರಿಗೆ ದೀಪಾವಳಿ ಕಿಟ್ ನೀಡುವ ಮೂಲಕ ನೆರವಾಗುತ್ತಿದ್ದರು. ಮೃತರು ಇಬ್ಬರು ಪತ್ನಿಯರು, ನಾಲ್ವರು ಹೆಣ್ಣು ಮಕ್ಕಳು ಹಾಗೂ ಮೂವರು ಗಂಡು ಮಕ್ಕಳನ್ನು ಅಗಲಿದ್ದಾರೆ.










