ಕಡಬ ತಾಲೂಕು 5ನೇ ಕನ್ನಡ ಸಾಹಿತ್ಯ ಸಮ್ಮೇಳನ : ಸಮ್ಮೇಳನಾಧ್ಯಕ್ಷರಾಗಿ ಶಕುಂತಲಾ ಟಿ.ಶೆಟ್ಟಿ

0

ರಾಮಕುಂಜ: ಆ.29ರಂದು ರಾಮಕುಂಜ ಶ್ರೀ ವಿಶ್ವೇಶತೀರ್ಥ ಸೌಧ ಸಭಾಂಗಣದಲ್ಲಿ ನಡೆಯಲಿರುವ ಕಡಬ ತಾಲೂಕು 5ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರಾಗಿ ಕಡಬ ತಾಲೂಕು ಕುಂತೂರು ಪದವಿನ ಶಕುಂತಲಾ ಟಿ.ಶೆಟ್ಟಿ ಆಯ್ಕೆಯಾಗಿದ್ದಾರೆ.

1-3-1947ರಲ್ಲಿ ಜನಿಸಿದ ಶಕುಂತಳಾ ಶೆಟ್ಟಿ ಅವರು ದಿ| ಎಣ್ಮಕಜೆ ಪಟೇಲ್ ನಾರಾಯಣ ಅಡ್ಯಂತಾಯ ಹಾಗೂ ದಿ| ಬೋಳ್ಯಗುತ್ತು ಸಂಜೀವಿ ಅಡ್ಯಂತಾಯ ದಂಪತಿಗಳ ಪುತ್ರಿ. ಇವರ ಪತಿ ಕುಂತೂರುಪದವು ನಿವಾಸಿ ದಿ| ತಿಮ್ಮಪ್ಪ ಶೆಟ್ಟಿಯವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ, ಮುಖ್ಯಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಬಿಪಿನ್, ನಿತಿನ್, ಸಚಿನ್ ಇವರ ಪುತ್ರರು.

ಶಕುಂತಲಾ ಟಿ.ಶೆಟ್ಟಿ ಅವರು 1970ರಲ್ಲಿ ಸಾಮಾಜಿಕ ಸೇವೆ ಆರಂಭಿಸಿದ್ದರು. 1978ರಲ್ಲಿ ಕುಂತೂರಿನಲ್ಲಿ ಮಹಿಳಾ ಮಂಡಲ, 1980ರಲ್ಲಿ ಶ್ರೀ ವಿದ್ಯಾಸರಸ್ವತಿ ಯುವತಿ ಮಂಡಲದ ಸ್ಥಾಪಕಾಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ್ದರು. ಇವರು 1980-85ರ ಅವಧಿಯಲ್ಲಿ ತಾಲೂಕು, ಜಿಲ್ಲಾ, ವಿಭಾಗ ಮಟ್ಟದ ಕಿರುಪದ್ಯಗಳು, ಭಾವಗೀತೆ ಸಹಿತ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ 40ಕ್ಕೂ ಹೆಚ್ಚು ಪ್ರಶಸ್ತಿ ಪಡೆದುಕೊಂಡಿದ್ದಾರೆ. 1988-95ರ ತನಕ ಕುಂತೂರುಪದವು ಮಲೆನಾಡು ವಿಕಾಸ ಸಮಿತಿ ನಿರ್ದೇಶಕರಾಗಿ, 1987-1995ರ ತನಕ ತಾಲೂಕು ಮಹಿಳಾ ಮಂಡಲದ ಒಕ್ಕೂಟದ ಅಧ್ಯಕ್ಷರಾಗಿ, 1997-2005ರ ತನಕ ಜಿಲ್ಲಾ ಮಹಿಳಾ ಸಂಘದ ಉಪಾಧ್ಯಕ್ಷೆಯಾಗಿ, 1997-2005ರ ತನಕ ಸಮರ್ಪಣಾ ಮಹಿಳಾ ಸೇವಾ ಟ್ರಸ್ಟ್‌ನ ಅಧ್ಯಕ್ಷರಾಗಿ, 1996-2009ರ ತನಕ ಆಲಂಕಾರು ಶ್ರೀ ಭಾರತಿ ಹಿರಿಯ ಪ್ರಾಥಮಿಕ ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾಗಿ, 1995-1997ರ ತನಕ ಆಕಾಶವಾಣಿ ಕೃಷಿರಂಗದಲ್ಲಿ ಸದಸ್ಯ ಸಲಹೆಗಾರರಾಗಿ 70ಕ್ಕಿಂತಲೂ ಹೆಚ್ಚು ರೇಡಿಯೋ ಕಾರ್ಯಕ್ರಮ ನೀಡಿದ್ದಾರೆ. ಜನರ, ದೀನ ದಲಿತರ ನೋವಿಗೆ ಸದಾ ಸ್ಪಂದಿಸುತ್ತಿರುವ ಇವರು ಅನೇಕ ಜನಪರ ಹೋರಾಟಗಳಲ್ಲೂ ಭಾಗಿಯಾಗಿದ್ದಾರೆ. ಗಣೇಶೋತ್ಸವ, ದೇವಸ್ಥಾನನಗಳ ಜೀರ್ಣೋದ್ಧಾರ ಕೆಲಸಗಳಲ್ಲೂ ಭಾಗಿಯಾಗಿದ್ದಾರೆ. ಯುವಜನ ಮೇಳ, ಪ್ರಬಂಧ, ಕಥೆಗಳು, ಕವನ ರಚನೆ, ಭಾಷಣಗಳಲ್ಲೂ ಭಾಗವಹಿಸಿದ್ದಾರೆ.

ಸಹಕಾರಿ ಕ್ಷೇತ್ರದಲ್ಲೂ ಗುರುತಿಸಿಕೊಂಡಿದ್ದ ಇವರು ಆಲಂಕಾರು ಸಿಎ ಬ್ಯಾಂಕ್‌ನ ನಿರ್ದೇಶಕರಾಗಿ, ಅಧ್ಯಕ್ಷರಾಗಿ, ಪುತ್ತೂರು ಟಿಎಪಿಸಿಎಂಎಸ್, ನಿರ್ದೇಶಕರಾಗಿ ಪುತ್ತೂರು ತಾಲೂಕು ರಬ್ಬರ್ ಬೆಳೆಗಾರರ ಮತ್ತು ಮಾರಾಟಗಾರರ ಸಂಸ್ಕರಣ ಸಹಕಾರ ಸಂಘ, ಜಿಲ್ಲಾ ಮಹಿಳಾ ಕೋ ಆಪರೇಟಿವ್ ಬ್ಯಾಂಕ್‌ನ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಜಿಲ್ಲಾ ಮಹಿಳಾ ಕೋ ಆಪರೇಟಿವ್ ಬ್ಯಾಂಕ್, ಪುತ್ತೂರು ಸ್ವಾಭಿಮಾನಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ನಿರ್ದೇಶಕರಾಗಿ ಹಾಗೂ ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇವರು ಬರೆದಿರುವ ’ ಪೊಸ ಬದಕ್ ’ ನಾಟಕಕ್ಕೆ ಧರ್ಮಸ್ಥಳ ರತ್ನವರ್ಮ ಹೆಗ್ಗಡೆ ಪ್ರಶಸ್ತಿ ಲಭಿಸಿದೆ. ಅಲ್ಲದೇ ಬಂಟ್ಸ್ ಮಹಿಳಾ ಸಮಾಜದಿಂದ ಸೇವಾರತ್ನ ಪುರಸ್ಕಾರ, ಮಣಿಕ್ಕಾರ ಮಹಿಳಾ ಮತ್ತು ಯುವತಿ ಮಂಡಲದಿಂದ ಗೌರವ ಪ್ರಶಸ್ತಿಗಳು, ಡಾ.ಶಿವರಾಮ ಕಾರಂತ ಸದ್ಭಾವನಾ ಪ್ರಶಸ್ತಿ, ಕುಕ್ಕಾಜೆ ಕ್ಷೇತ್ರದಿಂದ ನೀಡುವ ತುಳುನಾಡ ಕಣ್ಮಣಿ ಪ್ರಶಸ್ತಿ, ಪುತ್ತೂರು ಪರ್ಲ್ ಸಿಟಿ ಪ್ರಶಸ್ತಿ, ತುಳು ಸಿನಿಮಾದಲ್ಲಿನ ನಟನೆಗಾಗಿ ಉತ್ತಮ ಪೋಷಕ ನಟಿ ಪ್ರಶಸ್ತಿಯೂ ಲಭಿಸಿದೆ.

LEAVE A REPLY

Please enter your comment!
Please enter your name here