






ಉಪ್ಪಿನಂಗಡಿ: ಪುತ್ತೂರಿನ ಹಾರಾಡಿ ಎಂಬಲ್ಲಿ ರಸ್ತೆ ಕಾಮಗಾರಿ ಸಂಬಂಧಿಸಿ ಬಸ್ ಸಂಚಾರ ಬದಲಿ ಮಾರ್ಗದಲ್ಲಿ ಸಂಚರಿಸುತ್ತಿರುವ ಕಾರಣಕ್ಕೆ ಪುತ್ತೂರಿನ ಬೊಳ್ವಾರಿನಿಂದ ಬಸ್ಸನ್ನೇರಬೇಕಾದ ವಿದ್ಯಾರ್ಥಿಗಳು ಪುತ್ತೂರು ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಕ್ಕೆ ತೆರಳಿ ಬಸ್ಸನ್ನೇರಿದ ಕಾರಣಕ್ಕೆ ರಾಜ್ಯ ಸರಕಾರ ನೀಡಿದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪ್ರಯಾಣದ ಸೌಲಭ್ಯವನ್ನು ಬಸ್ ನಿರ್ವಾಹಕ ನಿರಾಕರಿಸಿದ ಘಟನೆ ಬಗ್ಗೆ ವಿದ್ಯಾರ್ಥಿಯೋರ್ವ ಮುಖ್ಯಮಂತ್ರಿಗೆ ದೂರು ನೀಡಿದ ಘಟನೆ ವರದಿಯಾಗಿದೆ.


ಪುತ್ತೂರಿನಿಂದ ಉಪ್ಪಿನಂಗಡಿಗೆ ಸಂಚರಿಸುವ ಬಸ್ಗಳು ಸಾಮಾನ್ಯವಾಗಿ ಪುತ್ತೂರು- ಬೊಳ್ವಾರ್ – ಮಾರ್ಗವಾಗಿ ಉಪ್ಪಿನಂಗಡಿ ರಸ್ತೆಯಲ್ಲಿ ಸಂಚರಿಸುತ್ತದೆ. ಈ ನಿಟ್ಟಿನಲ್ಲಿ ಪುತ್ತೂರಿನ ವಿವೇಕಾನಂದ ಕಾಲೇಜಿನ ವಿದ್ಯಾರ್ಥಿಗಳು ಉಪ್ಪಿನಂಗಡಿಗೆ ಪ್ರಯಾಣಿಸಲು ಬೊಳ್ವಾರ್ ಜಂಕ್ಷನ್ ನಲ್ಲಿ ಬಸ್ಸನ್ನೇರಬೇಕಾಗುತ್ತದೆ. ಆದರೆ ಬೊಳ್ವಾರ್ ಸಮೀಪದ ಹಾರಾಡಿ ಎಂಬಲ್ಲಿ ರಸ್ತೆ ವಿಸ್ತರಣೆಯ ಕಾಮಗಾರಿ ನಡೆಯುತ್ತಿದ್ದರಿಂದ ಬಸ್ ಸಹಿತ ಘನ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದ್ದು, ಉಪ್ಪಿನಂಗಡಿ ಯತ್ತ ಸಂಚರಿಸುವ ಬಸ್ಸುಗಳು ಬೊಳ್ವಾರ್ ಮಾರ್ಗವನ್ನು ಕೈಬಿಟ್ಟು ಬಸ್ ನಿಲ್ದಾಣದಿಂದ ಬದಲಿ ಮಾರ್ಗವಾದ ಎಪಿಎಂಸಿ ಮಾರ್ಗವಾಗಿ ಕೋಟೇಚಾ ಹಾಲ್ ಬಳಿ ಉಪ್ಪಿನಂಗಡಿ ರಸ್ತೆಯನ್ನು ಸಂಪರ್ಕಿಸುತ್ತದೆ. ಇದರಿಂದಾಗಿ ಬೊಳ್ವಾರ್ ನಿಂದ ಬಸ್ಸನ್ನೇರುವ ಪ್ರಯಾಣಿಕರು ಬಸ್ ನಿಲ್ದಾಣದಿಂದಲೇ ಬಸ್ಸನ್ನೇರುವ ಅನಿವಾರ್ಯತೆ ಪಡೆಯುತ್ತಾರೆ. ಅದರಂತೆ ವಿದ್ಯಾರ್ಥಿಗಳು ಕೂಡಾ ಬಸ್ ನಿಲ್ದಾಣಕ್ಕೆ ಹೋಗಿ ಉಪ್ಪಿನಂಗಡಿಗೆ ಹೋಗುವ ಬಸ್ಸನ್ನೇರಬೇಕಾಗಿದ್ದು, ಆ.12 ರಂದು ಸಂಜೆ 3.30 ರ ಸುಮಾರಿಗೆ ಪುತ್ತೂರಿನಿಂದ ಧರ್ಮಸ್ಥಳಕ್ಕೆ ಹೊರಟ ಬಸ್ಸಿನಲ್ಲಿ ಉಪ್ಪಿನಂಗಡಿಗೆಂದು ಪ್ರಯಾಣಿಸಿದ ವಿವೇಕಾನಂದ ಕಾಲೇಜಿನ ತೃತಿಯ ವರ್ಷದ ಬಿಸಿಎ ವಿದ್ಯಾರ್ಥಿ ಉಪ್ಪಿನಂಗಡಿಯ ದೂಜಮೂಲೆ ನಿವಾಸಿ ಜಿತೇಶ್ ಎನ್. ಮತ್ತಿತರ ನಾಲ್ಕೈದು ವಿದ್ಯಾರ್ಥಿಗಳಿಂದ ” ನಿಮ್ಮ ಬಸ್ ಪಾಸ್ನಲ್ಲಿ ಬೊಳ್ವಾರ್ ನಿಂದ ಪ್ರಯಾಣ ಪ್ರಾರಂಭ ಎಂದು ದಾಖಲಾಗಿದೆ. ನೀವು ಬಸ್ ನಿಲ್ದಾಣದಿಂದ ಪ್ರಯಾಣ ಪ್ರಾರಂಭಿಸಿದ್ದು ನಿಯಮ ಬಾಹಿರ. ಅದಕ್ಕಾಗಿ ಪೂರ್ಣ ಬಸ್ ಟಿಕೇಟ್ ದರವನ್ನು ತೆರಬೇಕೆಂದು ಬಸ್ ನಿರ್ವಾಹಕ ಒತ್ತಾಯಿಸಿದ್ದಾರೆಂದೂ, ಬೊಳ್ವಾರ್ ನಿಂದ್ ಬಸ್ ಸಂಚಾರ ಇಲ್ಲವೆಂದೂ ತಿಳಿಸಿದರೂ, ನೀವು ಬೇಕಾದರೆ ದೂರು ನೀಡಿ. ಈಗ ಬಸ್ ಟಿಕೇಟ್ ದರ ಪಾವತಿಸಿ ಎಂದು ಉದ್ಧಟತನದಿಂದ ತಮ್ಮಿಂದ ಬಸ್ ಟಿಕೇಟ್ ದರ ಪಡೆದುಕೊಂಡಿದ್ದಾರೆಂದು ದೂರಿನಲ್ಲಿ ತಿಳಿಸಿದ್ದಾರೆ.



ವಾಹನ ಸಂಚಾರ ಅಸಾಧ್ಯವೆಂಬ ಕಾರಣಕ್ಕೆ ಬದಲಿ ಮಾರ್ಗವನ್ನು ಆರಿಸಿಕೊಂಡದ್ದು ನಿಗಮ. ಈ ಬದಲಾವಣೆಗೆ ವಿದ್ಯಾರ್ಥಿಗಳಾದ ನಾವು ಅರ್ಹರಲ್ಲವೆಂದು ನಮಗೆ ಸರಕಾರ ನೀಡಿದ ಉಚಿತ ಬಸ್ ಪಾಸ್ ನ್ನು ಅಮಾನ್ಯ ಮಾಡಿರುವುದು ಸರಕಾರದ ಸೌಲಭ್ಯವನ್ನೇ ನಿರ್ವಾಹಕನೋರ್ವ ನಿರಾಕರಿಸಿದಂತಾಗಿದೆ ಎಂದು ಜಿತೇಶ್ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ. ಹಾಗೂ ನ್ಯಾಯ ಬಯಸಿ ರಾಜ್ಯ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೂ ದೂರು ಸಲ್ಲಿಸಿದ್ದಾರೆ.










