







ಪೋಷಕ–ಶಿಕ್ಷಕರ ಸಮನ್ವಯದಿಂದ ವಿದ್ಯಾರ್ಥಿಗಳ ಯಶಸ್ಸು ಸಾಧ್ಯ-ಕೃಷ್ಣಮೋಹನ್ ಪಿ.ಎಸ್
ವಿದ್ಯಾರ್ಥಿಗಳು ಭಾವನೆಗಳನ್ನು ನಿಯಂತ್ರಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು-ಭಾಗ್ಯೇಶ್ ರೈ
ಅಂಕಗಳ ಜೊತೆಗೆ ಪ್ರಾಮಾಣಿಕತೆ, ಶಿಸ್ತು, ಉತ್ತಮ ವ್ಯಕ್ತಿತ್ವವೂ ಮುಖ್ಯ-ಡಾ.ಪೀಟರ್ ವಿಲ್ಸನ್
ಕಾಲೇಜಿನ ಶಿಕ್ಷಣದ ಗುಣಮಟ್ಟ ಶಿಸ್ತು ಶ್ಲಾಘನೀಯ-ಮಹಮದ್ ಯಾಸೀರ್
ಸಮಸ್ಯೆಗಳನ್ನು ಪರಿಹರಿಸುವಲ್ಲಿ ಪೋಷಕರು, ಸಂಸ್ಥೆ ನಡುವೆ ಸಮನ್ವಯತೆಯಿರಲಿ-ಸುಪ್ರೀತ್ ಕೆ.ಸಿ


ಪುತ್ತೂರು: ಸುದಾನ ಪದವಿ ಪೂರ್ವ ಕಾಲೇಜಿನಲ್ಲಿ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗಗಳ ವಿದ್ಯಾರ್ಥಿಗಳ ಪೋಷಕರಿಗಾಗಿ ಪೋಷಕ–ಶಿಕ್ಷಕರ ಸಭೆ ಆ.10ರಂದು ಎರಡು ಅವಧಿಗಳಲ್ಲಿ ನಡೆದಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ, ಶಿಸ್ತು, ಭವಿಷ್ಯದ ಗುರಿ, ತಂತ್ರಜ್ಞಾನದ ಬಳಕೆ ಹಾಗೂ ಪೋಷಕರು–ಶಿಕ್ಷಕರ ಜವಾಬ್ದಾರಿಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.



ಪೋಷಕ–ಶಿಕ್ಷಕರ ಸಮನ್ವಯದಿಂದ ವಿದ್ಯಾರ್ಥಿಗಳ ಯಶಸ್ಸು ಸಾಧ್ಯ-ಕೃಷ್ಣಮೋಹನ್ ಪಿ.ಎಸ್:
ವಿಜ್ಞಾನ ಕೋಚಿಂಗ್ ವಿಭಾಗದ ಸಭೆಯಲ್ಲಿ ಜೆಸಿಐ ಸಂಸ್ಥೆಯ ರಾಷ್ಟ್ರೀಯ ತರಬೇತುದಾರ ಕೃಷ್ಣ ಮೋಹನ್ ಪಿ.ಎಸ್ ಮಾತನಾಡಿ, ವಿದ್ಯಾರ್ಥಿಗಳು ತಾವು ಆಯ್ಕೆ ಮಾಡಿಕೊಂಡ ವಿಷಯಗಳಲ್ಲಿ ಆಸಕ್ತಿ, ಸಾಮರ್ಥ್ಯ, ಕೌಶಲ್ಯವನ್ನು ಬೆಳೆಸಿಕೊಳ್ಳಬೇಕು. ಪೋಷಕರು ತಮ್ಮ ಮಕ್ಕಳ ಸಾಮರ್ಥ್ಯ ಮತ್ತು ಆಸಕ್ತಿಯನ್ನು ಅರಿತು ಸೂಕ್ತ ಮಾರ್ಗದರ್ಶನ ನೀಡಬೇಕು. ಶಿಕ್ಷಕರು ವಿದ್ಯಾರ್ಥಿಗಳಿಗೆ ಅಗತ್ಯವಾದ ಶೈಕ್ಷಣಿಕ ಮಾರ್ಗದರ್ಶನ ನೀಡುವ ಜವಾಬ್ದಾರಿಯನ್ನು ನಿರ್ವಹಿಸಬೇಕು. ವಿದ್ಯಾರ್ಥಿಗಳು, ಪೋಷಕರು, ಆಡಳಿತ ಮಂಡಳಿ, ಶಿಕ್ಷಕರು ಪರಸ್ಪರ ಸಮನ್ವಯದಿಂದ ಕಾರ್ಯ ನಿರ್ವಹಿಸಿದಾಗ ಮಾತ್ರ ವಿದ್ಯಾರ್ಥಿಗಳ ಸಮಗ್ರ ಯಶಸ್ಸು ಸಾಧ್ಯವಾಗುತ್ತದೆ ಎಂದರು.

ವಿದ್ಯಾರ್ಥಿಗಳು ಭಾವನೆಗಳನ್ನು ನಿಯಂತ್ರಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು-ಭಾಗ್ಯೇಶ್ ರೈ:
ವಿಜ್ಞಾನ ನಾನ್ ಕೋಚಿಂಗ್ ಹಾಗೂ ವಾಣಿಜ್ಯ ವಿಭಾಗದ ಸಭೆಯಲ್ಲಿ ವಿದ್ಯಾಮಾತ ಅಕಾಡೆಮಿಯ ಸ್ಥಾಪಕ ಭಾಗ್ಯೇಶ್ ರೈ ಮಾತನಾಡಿ, ಪಿಯುಸಿ ಶಿಕ್ಷಣದ ಹಂತವು ವಿದ್ಯಾರ್ಥಿಗಳು ಹಾಗೂ ಪೋಷಕರ ಪಾಲಿಗೆ ಮಹತ್ವದ ಸಮಯವಾಗಿದೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಭಾವನೆಗಳನ್ನು ನಿಯಂತ್ರಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದ ಅವರು ಇಂದಿನ ದಿನಗಳಲ್ಲಿ ತಂತ್ರಜ್ಞಾನ ಅನಿವಾರ್ಯವಾಗಿದ್ದು, ಅದರ ಬಳಕೆಯನ್ನು ನಿಯಂತ್ರಿಸುವ ಜವಾಬ್ದಾರಿ ಪೋಷಕರ ಮೇಲಿದೆ. ವಿದ್ಯಾರ್ಥಿಗಳ ಪರಿಶ್ರಮ, ಶಿಸ್ತು ಮತ್ತು ಉತ್ತಮ ಜೀವನಶೈಲಿಯೇ ಉಜ್ವಲ ಭವಿಷ್ಯಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಅವರು ಹೇಳಿದರು.
ಅಂಕಗಳ ಜೊತೆಗೆ ಪ್ರಾಮಾಣಿಕತೆ, ಶಿಸ್ತು, ಉತ್ತಮ ವ್ಯಕ್ತಿತ್ವವೂ ಮುಖ್ಯ-ಡಾ.ಪೀಟರ್ ವಿಲ್ಸನ್:
ಸುದಾನ ಪದವಿ ಪೂರ್ವ ಕಾಲೇಜಿನ ಸಂಚಾಲಕ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯ ಸಾಮರ್ಥ್ಯವನ್ನು ಉತ್ಕೃಷ್ಟ ಮಟ್ಟಕ್ಕೆ ಕೊಂಡೊಯ್ಯುವ ಶಿಕ್ಷಣ ವ್ಯವಸ್ಥೆಯನ್ನು ಕಾಲೇಜಿನಲ್ಲಿ ರೂಪಿಸಲಾಗಿದೆ. ಅಂಕಗಳ ಜೊತೆಗೆ ಪ್ರಾಮಾಣಿಕತೆ, ಶಿಸ್ತು ಹಾಗೂ ಉತ್ತಮ ವ್ಯಕ್ತಿತ್ವವೂ ಮುಖ್ಯ. ವಿದ್ಯಾರ್ಥಿಗಳು ತಮ್ಮದೇ ಆದ ಸಾಧನೆಗಳ ಮೂಲಕ ಭವಿಷ್ಯಕ್ಕೆ ಸಹಕಾರಿಯಾಗುವಂತಹ ಸಮಗ್ರ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು. ತಂತ್ರಜ್ಞಾನದ ಬಳಕೆಯನ್ನು ನಿಯಂತ್ರಿಸುವಲ್ಲಿ ಪೋಷಕರ ಪಾತ್ರವೂ ಮಹತ್ವದ್ದಾಗಿದೆ ಎಂದರು.
ಕಾಲೇಜಿನ ಶಿಕ್ಷಣದ ಗುಣಮಟ್ಟ ಶಿಸ್ತು ಶ್ಲಾಘನೀಯ-ಮಹಮದ್ ಯಾಸೀರ್:
ಪೋಷಕ–ಶಿಕ್ಷಕರ ಸಂಘದ ಅಧ್ಯಕ್ಷ ಮಹಮ್ಮದ್ ಯಾಸೀರ್ ಮಾತನಾಡಿ, ಸುದಾನ ಕಾಲೇಜಿನ ಶಿಕ್ಷಣದ ಗುಣಮಟ್ಟ ಹಾಗೂ ಕಾಲೇಜಿನ ಶಿಸ್ತನ್ನು ಶ್ಲಾಘಿಸಿದರು. ವಿದ್ಯಾರ್ಥಿಗಳ ಹೆಸರು ಸಾಧಕರ ಪಟ್ಟಿಯಲ್ಲಿ ಮೂಡಿಬರಲು ಶಿಕ್ಷಕರು ಮತ್ತು ಪೋಷಕರು ಒಟ್ಟಾಗಿ ಸೂಕ್ತ ಮಾರ್ಗದರ್ಶನ ಹಾಗೂ ಪ್ರೋತ್ಸಾಹ ನೀಡಬೇಕು ಎಂದರು.
ಸಮಸ್ಯೆಗಳನ್ನು ಪರಿಹರಿಸುವಲ್ಲಿ ಪೋಷಕರು, ಸಂಸ್ಥೆ ನಡುವೆ ಸಮನ್ವಯತೆಯಿರಲಿ-ಸುಪ್ರೀತ್ ಕೆ.ಸಿ:
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಸುಪ್ರೀತ್ ಕೆ.ಸಿ. ಮಾತನಾಡಿ, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಹಾಗೂ ಯಶಸ್ಸಿನಲ್ಲಿ ಪೋಷಕರು ಮತ್ತು ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ವಿದ್ಯಾರ್ಥಿಗಳಲ್ಲಿ ಜವಾಬ್ದಾರಿಯ ಕೊರತೆ ಅಥವಾ ಇತರ ಸಮಸ್ಯೆಗಳು ಕಂಡು ಬಂದಲ್ಲಿ ಪೋಷಕರು ಕಾಲೇಜಿನೊಂದಿಗೆ ಸಮನ್ವಯ ಸಾಧಿಸಿ ಅವುಗಳನ್ನು ಸರಿಪಡಿಸಲು ಸಹಕರಿಸಬೇಕು. ಪೋಷಕರ ಪ್ರೋತ್ಸಾಹ, ಶಿಕ್ಷಕರ ಮಾರ್ಗದರ್ಶನ ಹಾಗೂ ವಿದ್ಯಾರ್ಥಿಗಳ ಪರಿಶ್ರಮ ಒಂದಾದಾಗ ಉತ್ತಮ ಫಲಿತಾಂಶ ಸಾಧ್ಯ ಎಂದರು.
ವಿಜ್ಞಾನ ಕೋಚಿಂಗ್ ವಿಭಾಗದ ಕಾರ್ಯಕ್ರಮವನ್ನು ಉಪನ್ಯಾಸಕಿ ಅಕ್ಷತಾ ಎಂ. ನಿರ್ವಹಿಸಿದರು. ಉಪನ್ಯಾಸಕಿ ನವ್ಯ ಸ್ವಾಗತಿಸಿ, ಉಪನ್ಯಾಸಕಿ ಮೈತ್ರಿ ವಂದಿಸಿದರು. ವಿಜ್ಞಾನ ನಾನ್-ಕೋಚಿಂಗ್ ಹಾಗೂ ವಾಣಿಜ್ಯ ವಿಭಾಗದ ಕಾರ್ಯಕ್ರಮವನ್ನು ಉಪನ್ಯಾಸಕಿ ವಿಶಾಲಾಕ್ಷಿ ನಿರ್ವಹಿಸಿದರು. ಉಪನ್ಯಾಸಕಿ ಶ್ರುತಿ ರೈ ಸ್ವಾಗತಿಸಿ, ಉಪನ್ಯಾಸಕಿ ಅಕ್ಷತಾ ಬಿ. ವಂದಿಸಿದರು.
ಸಭೆಯ ನಂತರ ಪೋಷಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ನಡುವೆ ಸಿಬ್ಬಂದಿ–ವಿದ್ಯಾರ್ಥಿ ಸಂವಾದ ಮತ್ತು ಪರಸ್ಪರ ವಿಚಾರ ವಿನಿಮಯ ನಡೆಯಿತು. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ, ಹಾಜರಾತಿ, ಶಿಸ್ತು ಹಾಗೂ ಭವಿಷ್ಯದ ಗುರಿಗಳ ಕುರಿತು ಪೋಷಕರೊಂದಿಗೆ ಚರ್ಚಿಸಲಾಯಿತು.










