ವಂದೇ ಭಾರತ್ ರೈಲಿಗೆ ಕಬಕ-ಪುತ್ತೂರಿನಲ್ಲಿ ನಿಲುಗಡೆಗೆ ಒತ್ತಾಯ : ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ವರ್ತಕರ ನಿಯೋಗದಿಂದ ಮನವಿ

0

ಪುತ್ತೂರು: ಬೆಂಗಳೂರು- ಮಂಗಳೂರು ನಡುವೆ ಸಂಚರಿಸುವ ವಂದೇ ಭಾರತ್ ರೈಲಿಗೆ ಕಬಕ-ಪುತ್ತೂರು ರೈಲು ನಿಲ್ದಾಣದಲ್ಲಿ ನಿಲುಗಡೆ ಕಲ್ಪಿಸುವಂತೆ ಶಿಫಾರಸ್ಸು ಮಾಡಬೇಕೆಂದು ಒತ್ತಾಯಿಸಿ ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ನಿಯೋಗ ಶಾಸಕ ಅಶೋಕ್ ಕುಮಾರ್ ರೈ ಅವರನ್ನು ಆ.16ರಂದು ಬೆಳಗ್ಗೆ ಅವರ ನಿವಾಸದಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿತು.


ಬೆಂಗಳೂರು – ಮಂಗಳೂರು ನಡುವೆ ಸಂಚರಿಸುವ ವಂದೇ ಭಾರತ್ ರೈಲು ಕರಾವಳಿ ಭಾಗದ ಸಾರಿಗೆ ಕ್ಷೇತ್ರಕ್ಕೆ ಮಹತ್ವದ ಕೊಡುಗೆಯಾಗಿದ್ದು, ಪುತ್ತೂರಿನಲ್ಲಿ ನಿಲುಗಡೆ ಇಲ್ಲದಿರುವುದು ಸಾರ್ವಜನಿಕರು ಹಾಗೂ ಉದ್ಯಮಿಗಳಿಗೆ ನಿರಾಶೆ ಮೂಡಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ವಾಣಿಜ್ಯ ನಗರವಾಗಿರುವ ಪುತ್ತೂರು, ಸುಳ್ಯ, ಬೆಳ್ತಂಗಡಿ ಹಾಗೂ ಕಡಬ ಸೇರಿದಂತೆ ಸುತ್ತಮುತ್ತಲಿನ ತಾಲೂಕುಗಳಿಗೆ ಕೇಂದ್ರಬಿಂದುವಾಗಿದೆ. ಕ್ಯಾಂಪ್ಕೊ, ಗೋಡಂಬಿ ಹಾಗೂ ಅಡಿಕೆ ಸಂಸ್ಕರಣಾ ಉದ್ಯಮಗಳು ಸೇರಿದಂತೆ ಹಲವು ಪ್ರಮುಖ ವಾಣಿಜ್ಯ ಚಟುವಟಿಕೆಗಳು ಇಲ್ಲಿ ನಡೆಯುತ್ತಿವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಪ್ರಸ್ತುತ ಸಂಚರಿಸುತ್ತಿರುವ ಪ್ರಯಾಣಿಕ ಹಾಗೂ ಎಕ್ಸ್‌ಪ್ರೆಸ್ ರೈಲುಗಳಿಗೆ ಕಬಕ-ಪುತ್ತೂರು ನಿಲ್ದಾಣದಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಸಂಚರಿಸುತ್ತಿದ್ದು, ರೈಲ್ವೆ ಇಲಾಖೆಗೆ ಈ ನಿಲ್ದಾಣದಿಂದ ಉತ್ತಮ ಆದಾಯವೂ ದೊರೆಯುತ್ತಿದೆ. ಹೀಗಾಗಿ ವಂದೇ ಭಾರತ್ ರೈಲಿಗೂ ಇಲ್ಲಿ ನಿಲುಗಡೆ ಕಲ್ಪಿಸುವುದು ಪ್ರಯಾಣಿಕರ ಹಿತದೃಷ್ಟಿಯಿಂದ ಮಾತ್ರವಲ್ಲದೆ ರೈಲ್ವೆ ಇಲಾಖೆಯ ದೃಷ್ಟಿಯಿಂದಲೂ ಪ್ರಯೋಜನಕಾರಿಯಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಪುತ್ತೂರು ಹಾಗೂ ಸುತ್ತಮುತ್ತಲಿನ ಗ್ರಾಮೀಣ ಭಾಗದ ಸಾವಿರಾರು ಯುವಕ-ಯುವತಿಯರು ಬೆಂಗಳೂರಿನಲ್ಲಿ ಐಟಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗದಲ್ಲಿದ್ದಾರೆ. ಅಸಂಖ್ಯಾತ ವಿದ್ಯಾರ್ಥಿಗಳು ಕೂಡ ಬೆಂಗಳೂರಿಗೆ ನಿಯಮಿತವಾಗಿ ಪ್ರಯಾಣಿಸುತ್ತಿದ್ದಾರೆ. ವಂದೇ ಭಾರತ್ ರೈಲಿಗೆ ಪುತ್ತೂರಿನಲ್ಲಿ ನಿಲುಗಡೆ ಇಲ್ಲದ ಕಾರಣ ಮಂಗಳೂರು ಅಥವಾ ಸುಬ್ರಹ್ಮಣ್ಯಕ್ಕೆ ತೆರಳಿ ರೈಲು ಹತ್ತಬೇಕಾಗುತ್ತಿದ್ದು, ಇದರಿಂದ ಪ್ರಯಾಣಿಕರಿಗೆ ಹೆಚ್ಚುವರಿ ಸಮಯ ಹಾಗೂ ಹಣ ವ್ಯಯವಾಗುತ್ತಿದೆ ಎಂದು ನಿಯೋಗ ತಿಳಿಸಿದೆ. ಆದ್ದರಿಂದ ರೈಲ್ವೆ ಸಚಿವಾಲಯ ಹಾಗೂ ನೈಋತ್ಯ/ದಕ್ಷಿಣ ರೈಲ್ವೆ ಅಧಿಕಾರಿಗಳಿಗೆ ಶಿಫಾರಸ್ಸು ಮಾಡಿ ಬೆಂಗಳೂರು?ಮಂಗಳೂರು ವಂದೇ ಭಾರತ್ ರೈಲಿಗೆ ಕಬಕ-ಪುತ್ತೂರು ನಿಲ್ದಾಣದಲ್ಲಿ ನಿಲುಗಡೆ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಶಾಸಕರಲ್ಲಿ ಮನವಿ ಮಾಡಲಾಯಿತು. ಮುಂದಿನ ಹಂತದಲ್ಲಿ ಇದೇ ಮನವಿಯನ್ನು ಸಂಸದ ಕ್ಯಾ. ಬ್ರಿಜೇಶ್ ಚೌಟ ಹಾಗೂ ಕೇಂದ್ರ ಸಚಿವ ವಿ. ಸೋಮಣ್ಣ ಅವರಿಗೂ ಸಲ್ಲಿಸಲಾಗುವುದು ಎಂದು ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ರವಿಕೃಷ್ಣ ಡಿ. ಕಲ್ಲಾಜೆ ತಿಳಿಸಿದ್ದಾರೆ.

ನಿಯೋಗದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಪಿ. ಉಲ್ಲಾಸ್ ಪೈ, ಉಪಾಧ್ಯಕ್ಷ ಮನೋಜ್ ಟಿ.ವಿ., ಸದಸ್ಯರಾದ ವಿಶ್ವಪ್ರಸಾದ್ ಸೇಡಿಯಾಪು, ಆಸ್ಕರ್ ಆನಂದ್ ಹಾಗೂ ನೌಶಾದ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here