ಕೊಯಿಲ ಗ್ರಾಮಸಭೆ

0

ರಾಮಕುಂಜ: ಸಾರ್ವಜನಿಕ ಬಸ್‌ನಿಲ್ದಾಣದ ಬಳಿಯಿರುವ ಗ್ರಾಮ ಪಂಚಾಯಿತಿ ಬಿಲ್ಡಿಂಗ್‌ನಲ್ಲಿ ಹಸಿಮೀನು, ಕೋಳಿ ಮಾರಾಟಕ್ಕೆ ಅಂಗಡಿ ಕೋಣೆ ಬಾಡಿಗೆಗೆ ನೀಡಿರುವುದಕ್ಕೆ ಗ್ರಾಮಸ್ಥರ ಒಂದು ಗುಂಪು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಆಕ್ರೋಶ ವ್ಯಕ್ತಪಡಿಸಿದ ಹಾಗೂ ಗ್ರಾಮಸ್ಥರ ಇನ್ನೊಂದು ಗುಂಪು ಏಲಂನಲ್ಲಿ ಕೊಠಡಿ ಬಾಡಿಗೆಗೆ ಪಡೆದುಕೊಂಡವರಿಗೆ ವ್ಯಾಪರಕ್ಕೆ ಅವಕಾಶ ನೀಡಬೇಕೆಂದು ಒತ್ತಾಯಿಸಿದ ಘಟನೆ ಕೊಯಿಲ ಗ್ರಾಮಸಭೆಯಲ್ಲಿ ನಡೆದಿದೆ. ಈ ಬಗ್ಗೆ ಮೇಲಾಧಿಕಾರಿಗಳ ಹಾಗೂ ಆರೋಗ್ಯ ಇಲಾಖೆ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಳ್ಳುವುದಾಗಿ ಪಿಡಿಒ ಅವರು ಸಭೆಗೆ ಭರವಸೆ ನೀಡಿದ್ದಾರೆ.

ಸಭೆ ಆ.18ರಂದು ಗ್ರಾ.ಪಂ.ಸಭಾಂಗಣದಲ್ಲಿ ಗ್ರಾ.ಪಂ. ಆಡಳಿತಾಧಿಕಾರಿಯೂ ಆಗಿರುವ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಪುತ್ತೂರು ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಭರತ್ ಬಿ.ಎಂ.ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಪುತ್ತೂರು ತಾ.ಪಂ.ಅಕ್ಷರದಾಸೋಹ ಸಹಾಯಕ ನಿರ್ದೇಶಕಿ ಜಲಜಾಕ್ಷಿ ಮಾರ್ಗದರ್ಶಿ ಅಧಿಕಾರಿಯಾಗಿದ್ದರು.


ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ರಿಕ್ಷಾ ಚಾಲಕ ಅಶ್ರಫ್ ಅವರು, ಗ್ರಾ.ಪಂ.ವ್ಯಾಪ್ತಿಯ ಗೋಕುಲನಗರದಲ್ಲಿ ಸಾರ್ವಜನಿಕ ಬಸ್‌ನಿಲ್ದಾಣದ ಪಕ್ಕದಲ್ಲೇ ಇರುವ ಗ್ರಾಮ ಪಂಚಾಯಿತಿ ಬಿಲ್ಡಿಂಗ್‌ನಲ್ಲಿ ಕೋಳಿ, ಹಸಿಮೀನು ಮಾರಾಟಕ್ಕೆ ಅಂಗಡಿ ಕೋಣೆ ಬಾಡಿಗೆಗೆ ನೀಡಲಾಗಿದೆ. ಶಾಲಾ ಮಕ್ಕಳು, ಸಾರ್ವಜನಿಕರು ತಂಗುವ ಬಸ್ ನಿಲ್ದಾಣದ ಪಕ್ಕದಲ್ಲೇ ಕೋಳಿ, ಹಸಿಮೀನು ಮಾರಾಟದ ಅಂಗಡಿ ತೆರೆದಲ್ಲಿ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಆದ್ದರಿಂದ ಇಲ್ಲಿ ಕೋಳಿ, ಹಸಿಮೀನು ಮಾರಾಟಕ್ಕೆ ಅವಕಾಶ ನೀಡಬಾರದು ಎಂದು ಈ ಹಿಂದೆ ಗ್ರಾ.ಪಂ.ಗೆ ಮನವಿ ಸಲ್ಲಿಸಿದ್ದೇವೆ. ಆದರೂ ಕೊಠಡಿ ಬಾಡಿಗೆಗೆ ನೀಡಲಾಗಿದೆ ಎಂದರು. ಇದಕ್ಕೆ ಗ್ರಾಮಸ್ಥರಾದ ಹನೀಫ್, ಜಮಾಲ್ ಮತ್ತಿತರರು ಬೆಂಬಲ ಸೂಚಿಸಿ, ಸಾರ್ವಜನಿಕರ ಆಕ್ಷೇಪಣೆ ಇದ್ದರೂ ಕೋಳಿ, ಹಸಿಮೀನು ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಹಾಗಾದರೆ ಸಾರ್ವಜನಿಕರ ಮನವಿಗೆ ಬೆಲೆ ಇಲ್ಲವೇ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪಿಡಿಒ ಸಂದೇಶ ಕೆ.ಎನ್.ಅವರು, ಗ್ರಾಮಸಭೆಯಲ್ಲಿ ಬಂದ ಬೇಡಿಕೆಯಂತೆ ಈ ಹಿಂದೆ ಅಧಿಕಾರದಲ್ಲಿದ್ದ ಚುನಾಯಿತ ಆಡಳಿತ ಮಂಡಳಿಯ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡು ಕೊಠಡಿ ಏಲಂ ನಡೆದಿದೆ. ಏಲಂನಲ್ಲಿ ಪಡೆದುಕೊಂಡವರು ಠೇವಣಿ ಸಹ ಪಾವತಿಸಿದ್ದಾರೆ ಎಂದರು. ಈ ವೇಳೆ ಮಾತನಾಡಿದ ಗ್ರಾಮಸ್ಥ ಯದುಶ್ರೀ ಆನೆಗುಂಡಿ, ನಗರಗಳಲ್ಲಿ ಅಂಗಡಿಗಳ ಪಕ್ಕವೇ ಹಸಿಮೀನು, ಕೋಳಿ ಮಾರಾಟದ ಅಂಗಡಿಗಳಿವೆ. ಹಸಿಮೀನು ಸಾಗಾಟದ ವಾಹನಗಳಿಂದ ನೀರು ರಸ್ತೆಯಲ್ಲೇ ಹರಿಯುತ್ತಿರುತ್ತದೆ. ಪಂಚಾಯಿತಿ ನಿರ್ಣಯದಂತೆ ಗ್ರಾಮ ಪಂಚಾಯಿತಿಯ ಅಧಿಕೃತ ಕಟ್ಟಡದಲ್ಲೇ ಕೊಠಡಿ ಏಲಂ ಪಡೆದುಕೊಂಡವರಿಗೆ ಕೋಳಿ, ಹಸಿಮೀನು ಮಾರಾಟಕ್ಕೆ ಅವಕಾಶ ನೀಡಿ. ಅವರು ಸ್ವಚ್ಛತೆ ಮಾಡದೇ ಇದ್ದಲ್ಲಿ ಕ್ರಮ ಕೈಗೊಳ್ಳಿ ಎಂದರು. ಚರ್ಚೆ ನಡೆಯುತ್ತಿದ್ದಂತೆ ಮಧ್ಯಪ್ರವೇಶಿಸಿ ಮಾತನಾಡಿದ ಆಡಳಿತಾಧಿಕಾರಿ ಭರತ್, ಹಿಂದಿನ ಗ್ರಾಮಸಭೆಯಲ್ಲಿ ಕೈಗೊಂಡ ನಿರ್ಣಯ ಈಗ ಅನುಷ್ಠಾನ ಆಗುತ್ತಿದೆ ಎಂದರು. ನಿಕಟಪೂರ್ವಾಧ್ಯಕ್ಷೆ ಪುಷ್ಪಾಸುಭಾಷ್ ಶೆಟ್ಟಿ ಮಾತನಾಡಿ, ಕೋಳಿ, ಹಸಿಮೀನು ಮಾರಾಟದ ಅಂಗಡಿಗೆ ಆಕ್ಷೇಪ ಸೂಚಿಸಿ ಗ್ರಾಮಸಭೆಯಲ್ಲಿ ಯಾರೂ ಅರ್ಜಿ ಸಲ್ಲಿಸಿಲ್ಲ. ಸಾಮಾನ್ಯ ಸಭೆಯಲ್ಲೂ ಚುನಾಯಿತ ಸದಸ್ಯರಿಂದ ಆಕ್ಷೇಪ ಬಂದಿರಲಿಲ್ಲ ಎಂದು ಸ್ಪಷ್ಟಪಡಿಸಿದರು. ಗ್ರಾಮಸ್ಥ ಪ್ರಕಾಶ್ ಕೆಮ್ಮಾರ ಮಾತನಾಡಿ, ಸಾಮಾನ್ಯ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಅಂಗಡಿ ಏಲಂ ಆಗಿದೆ. ಯಾರಿಗೆ ಬೇಕಾದರೂ ಪಡೆದುಕೊಳ್ಳಲು ಅವಕಾಶವಿತ್ತು. ಈ ಹಂತದಲ್ಲಿ ವಿವಾದ ಸೃಷ್ಟಿಸುವುದು ಸರಿಯಲ್ಲ. ಹಲವು ಕಡೆಗಳಲ್ಲಿ ಹೆದ್ದಾರಿ ಬದಿಯಲ್ಲಿಯೇ ಹಸಿಮೀನು ಮಾರಾಟ ನಡೆಯುತ್ತಿದೆ. ಅಂಗಡಿಯವರು ಸ್ವಚ್ಛತೇ ಕಾಪಾಡದೇ ಇದ್ದಲ್ಲಿ ಕ್ರಮ ಕೈಗೊಳ್ಳಿ. ಅಧಿಕೃತ ಕಟ್ಟಡದಲ್ಲಿ ಬಾಡಿಗೆಗೆ ಪಡೆದುಕೊಂಡವರಿಗೆ ಅವಕಾಶ ನೀಡುವುದಿಲ್ಲವಾದರೇ ಅನಧಿಕೃತವಾಗಿರುವ ಎಲ್ಲಾ ಅಂಡಿಗಳನ್ನು ತೆರವುಗೊಳಿಸಿ ಎಂದು ಹೇಳಿದರು. ಆದರೂ ಗ್ರಾಮಸ್ಥರಾದ ಅಶ್ರಫ್, ಜಮಾಲ್, ಹನೀಫ್, ಕಲೀಂ ಮತ್ತಿತರರು ಬಸ್‌ನಿಲ್ದಾಣದ ಪಕ್ಕವೇ ಕೋಳಿ, ಮೀನು ಮಾರಾಟಕ್ಕೆ ಅವಕಾಶ ನೀಡಬಾರದು. ಇದು ಜನರ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಆಕ್ಷೇಪ ತಿರಸ್ಕರಿಸಿ ಅವಕಾಶ ನೀಡಿದಲ್ಲಿ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

1 ವರ್ಷದ ಮಟ್ಟಿಗೆ ಏಲಂ;
ಪರ,ವಿರೋಧ ಚರ್ಚೆ ನಡೆಯುತ್ತಿದ್ದಂತೆ ಮಾತನಾಡಿದ ಪಿಡಿಒ ಸಂದೇಶ ಕೆ.ಎನ್.ಅವರು, ಗ್ರಾಮಸ್ಥರಿಂದ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡು ೧ ವರ್ಷದ ಮಟ್ಟಿಗೆ ಮೀನು, ಕೋಳಿ ಮಾರಾಟಕ್ಕೆ ಏಲಂ ಮಾಡಿ ಕೊಠಡಿ ಬಾಡಿಗೆಗೆ ನೀಡಲಾಗಿದೆ. ಇಲ್ಲಿ ಗ್ರಾ.ಪಂ.ಸದಸ್ಯರು, ಅಧಿಕಾರಿಗಳು, ಪೊಲೀಸರು ಇದ್ದೇ ಜಾಗಕ್ಕೆ ಮಾರ್ಕ್ ಸಹ ಮಾಡಲಾಗಿತ್ತು ಎಂದು ಸ್ಪಷ್ಟಪಡಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅಶ್ರಫ್, ಹನೀಫ್, ಜಮಾಲ್, ಕಲೀಂ ಮತ್ತಿತರರು ಬಸ್‌ನಿಲ್ದಾಣದ ಪಕ್ಕವೇ ಕೋಳಿ, ಮೀನು ಮಾರಾಟದ ಅಂಗಡಿಗೆ ಪೊಲೀಸರಿಂದ ಆಕ್ಷೇಪವೂ ಬಂದಿತ್ತು. ಅಲ್ಲದೇ ಮೀನು, ಕೋಳಿ ಮಾರಾಟಕ್ಕೆ ಅವಕಾಶ ನೀಡಬಾರದು ಎಂದು ಗ್ರಾಮಸ್ಥರು, ರಿಕ್ಷಾ ಚಾಲಕರು ಮನವಿ ನೀಡಿದ್ದರೂ ಅವಕಾಶ ನೀಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಸ್ಸು ತಂಗುದಾಣ ತೆರವು ಮಾಡುತ್ತೇವೆ;
ಅಧಿಕೃತ ಬಸ್‌ನಿಲ್ದಾಣ ಇರುವುದರಿಂದ ಮೀನು,ಕೋಳಿ ಮಾರುಕಟ್ಟೆ ಪಕ್ಕದಲ್ಲಿರುವ ಇರುವ ಹಳೆ ತಂಗುದಾಣ ತೆರವುಗೊಳಿಸುತ್ತೇವೆ ಎಂದು ಪಿಡಿಒ ಅವರು ಸಭೆಯಲ್ಲಿ ಹೇಳಿದರು. ಇದಕ್ಕೆ ಜಮಾಲ್, ಹನೀಫ್ ಮತ್ತಿತರರು ಆಕ್ಷೇಪ ವ್ಯಕ್ತಪಡಿಸಿದರು. ಈ ಜಾಗ ದಿನ ನಿತ್ಯ ಜನ, ಶಾಲಾ ಮಕ್ಕಳು ಓಡಾಟ ನಡೆಸುವ ಜಾಗ. ಮುಂದೆ ಅವರ ಆರೋಗ್ಯಕ್ಕೆ ತೊಂದರೆಯಾಗಲಿದೆ. ಆದ್ದರಿಂದ ಇಲ್ಲಿ ಮೀನು,ಕೋಳಿ ಮಾರಾಟಕ್ಕೆ ಅವಕಾಶ ನೀಡಬಾರದು. ಬೇರೆ ಕಡೆಗೆ ಸ್ಥಳಾಂತರ ಮಾಡಿ ಎಂದು ಒತ್ತಾಯಿಸಿದರು. ಆಕ್ಷೇಪದ ನಡುವೆಯೂ ಮೀನು, ಕೋಳಿ ಮಾರಾಟಕ್ಕೆ ಅವಕಾಶ ನೀಡಿದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿಯೂ ಹನೀಫ್ ಎಚ್ಚರಿಕೆ ನೀಡಿದರು. ಗ್ರಾಮಸ್ಥ ಜುನೈದ್ ಕೆಮ್ಮಾರ ಮಾತನಾಡಿ, ಗೋಕುಲನಗರದಲ್ಲಿ ಎರಡು ಬದಿಯಲ್ಲಿ ಒಟ್ಟು ಮೂರು ಬಸ್‌ನಿಲ್ದಾಣಗಳಿವೆ. ಇದರಿಂದಲೇ ಸಮಸ್ಯೆಯಾಗುತ್ತಿದೆ ಎಂದರು. ಪರ,ವಿರೋಧ ಚರ್ಚೆ ನಡೆಯುತ್ತಿದ್ದಂತೆ ಮಾತನಾಡಿದ ಪಿಡಿಒ ಸಂದೇಶ ಅವರು, ಕೋಳಿ,ಮೀನು ಮಾರಾಟದ ಅಂಗಡಿಗೆ ಸಂಬಂಧಿಸಿದಂತೆ ಮೇಲಾಧಿಕಾರಿಗಳ ಹಾಗೂ ಆರೋಗ್ಯ ಇಲಾಖೆಯವರ ನಿರ್ದೇಶನದಂತೆ ಕ್ರಮ ಕೈಗೊಳ್ಳುವುದಾಗಿ ಹೇಳಿದರು. ಇದಕ್ಕೂ ಆಕ್ಷೇಪ ವ್ಯಕ್ತಪಡಿಸಿದ ಅಶ್ರಫ್, ಜಮಾಲ್, ಹನೀಫ್ ಮತ್ತಿತರರು ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಈ ವಿಚಾರವಾಗಿ ಸುಮಾರು 1 ತಾಸಿಗೂ ಹೆಚ್ಚು ಸಮಯ ಪರ, ವಿರೋಧ ಚರ್ಚೆ ನಡೆಯಿತು.

ರಸ್ತೆ ನಾದುರಸ್ತಿ-ಆಕ್ರೋಶ;
ಎಲ್ಯಂಗ, ಪಾಪುದಮಂಡೆ, ಹೇಂತಾರು ರಸ್ತೆ ನಾದುರಸ್ತಿ ವಿಚಾರವೂ ಸಭೆಯಲ್ಲಿ ಪ್ರಸ್ತಾಪಗೊಂಡು ಗದ್ದಲ, ಆಕ್ರೋಶಕ್ಕೂ ಕಾರಣವಾಯಿತು. ಕಲೀಂ ಕಲಾಯಿ, ಸುಲೈಮಾನ್ ಕಲಾಯಿ, ಸಿರಾಜ್ ಕಲಾಯಿ, ನಾಸೀರ್ ಹೇಂತಾರು ಮತ್ತಿತರರು ವಿಚಾರ ಪ್ರಸ್ತಾಪಿಸಿ, ಸದ್ರಿ ರಸ್ತೆಯು ದೇವಸ್ಥಾನ, ಮಸೀದಿಗೆ ಸಂಪರ್ಕ ಕಲ್ಪಿಸುತ್ತದೆ. ಶಾಲಾ ಮಕ್ಕಳು, ಸಾರ್ವಜನಿಕರು ಓಡಾಟ ನಡೆಸುವ ರಸ್ತೆ. ಈಗ ರಸ್ತೆ ಕೆಟ್ಟು ಹೋಗಿರುವುದರಿಂದ ತೀವ್ರ ತೊಂದರೆಯಾಗಿದೆ. ಸದ್ರಿ ರಸ್ತೆಯಲ್ಲಿ ರಿಕ್ಷಾವೊಂದು ಪಲ್ಟಿಯಾಗಿ ಮಗುವೊಂದು ಗಾಯಗೊಂಡಿದೆ. ರಸ್ತೆ ಸಮಸ್ಯೆ ಗಂಭೀರವಾಗಿದ್ದರೂ ಸ್ಪಂದನೆ ಸಿಕ್ಕಿಲ್ಲ. 12 ತಿಂಗಳ ಹಿಂದೆ ಮನವಿ ಕೊಟ್ಟರೂ ದುರಸ್ತಿಗೆ ಮುಂದಾಗಿಲ್ಲ. ನಾವು ಪಂಚಾಯತ್‌ಗೆ ತೆರಿಗೆ ಪಾವತಿಸುತ್ತೇವೆ. ಆದರೆ ನಮಗೆ ಮೂಲಸೌಕರ್ಯ ಕಲ್ಪಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಪಿಡಿಒ ಸಂದೇಶ ಕೆ.ಎನ್.ಅವರು ಪ್ರತಿಕ್ರಿಯಿಸಿ 15ನೇ ಹಣಕಾಸು ಅನುದಾನ ಬಂದಿಲ್ಲ. ಪಂಚಾಯತ್‌ನ ಸ್ವಂತ ನಿಧಿಯಿಂದಲೇ ದುರಸ್ತಿ ಮಾಡಬೇಕಾಗಿದೆ ಎಂದರು. ಮತ್ತೆ ಮಾತನಾಡಿದ ಸಿರಾಜ್, ಕಲೀಂ ಮತ್ತಿತರರು, ಕಳೆದ ಗ್ರಾಮಸಭೆಯಲ್ಲೂ ಈ ವಿಚಾರ ಚರ್ಚೆ ಆಗಿದೆ. ಮಳೆಗಾಲದಲ್ಲಿ ಚರಂಡಿ ದುರಸ್ತಿ ಮಾಡಲೂ ನಾವು ಅರ್ಜಿ ಕೊಡಬೇಕಾ ?. ಇಲ್ಲಿನ ರಸ್ತೆ ಸಮಸ್ಯೆ ಬಗ್ಗೆ ಸ್ಪಂದಿಸದೇ ಇದ್ದಲ್ಲಿ ಮುಂದಿನ ಚುನಾವಣೆ ಬಹಿಷ್ಕಾರ ಮಾಡುತ್ತೇವೆ, ತೆರಿಗೆಯನ್ನೂ ಪಾವತಿಸುವುದಿಲ್ಲ ಎಂದು ಎಚ್ಚರಿಸಿದರು. ಆಡಳಿತಾಧಿಕಾರಿ ಭರತ್ ಬಿ.ಎಂ.ಅವರು ಮಾತನಾಡಿ, ಸದ್ರಿ ರಸ್ತೆ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಇಂದೇ ಗ್ರಾಮಸಭೆ ಮುಗಿದ ಬಳಿಕ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಂದಾಜುಪಟ್ಟ ತಯಾರಿಸಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತೇವೆ. ಅಲ್ಲದೇ ತಾತ್ಕಾಲಿಕವಾಗಿ ರಸ್ತೆ ದುರಸ್ತಿ ಮಾಡುವುದಾಗಿಯೂ ಭರವಸೆ ನೀಡಿದರು. ಬಳಿಕ ಚರ್ಚೆಗೆ ತೆರೆ ಬಿತ್ತು.

ಮನೆ ನಿವೇಶನ ಹಂಚಿಕೆ ಮಾಡಿ;
ನೂಜಿ ಎಂಬಲ್ಲಿ 2.75 ಎಕ್ರೆಯಷ್ಟು ಜಾಗ ಇದ್ದು ಮನೆ ಇಲ್ಲದವರಿಗೆ ಹಂಚಿಕೆ ಮಾಡಬೇಕು. ಹಲವರು ಬಾಡಿಗೆ ಮನೆಯಲ್ಲಿ ಇದ್ದಾರೆ. ಅವರಿಗೆ ಅನುಕೂಲವಾಗಲಿದೆ ಎಂದು ಗ್ರಾಮಸ್ಥ ಜುನೈದ್ ಕೆಮ್ಮಾರ ಒತ್ತಾಯಿಸಿದರು. ಇದಕ್ಕೆ ಪಿಡಿಒ ಸಂದೇಶ ಅವರು ಪ್ರತಿಕ್ರಿಯಿಸಿ, 2021-22ನೇ ಸಾಲಿನಲ್ಲಿ ಸರಕಾರದಿಂದ ಮನೆ ಮಂಜೂರಾತಿ ಆಗಿದೆ. ಹಂಚಿಕೆ ಮಾಡಲು ಸರಕಾರದ ನಿಯಮಗಳಿವೆ. ನಿವೇಶನ, ವಸತಿ ರಹಿತರ ಪಟ್ಟಿ ಮಾಡುತ್ತೇವೆ ಎಂದರು.

ಕಡಿದು ಹಾಕಿದ ಮರ ತೆರವುಗೊಳಿಸಿ:
ಕೊನೆಮಜಲು ಭಾಗದಲ್ಲಿ ಮೂರು ಅಪಾಯಕಾರಿ ಮರ ತೆರವುಗೊಳಿಸಲಾಗಿದೆ. ಆದರೆ ಇವುಗಳನ್ನು ಕಡಿದು ಪಕ್ಕದ ಚರಂಡಿಗೆ ಹಾಕಲಾಗಿದೆ. ಇದರಿಂದ ಈಗ ಸಮಸ್ಯೆ ಆಗಿದೆ ಎಂದು ಪುರುಷೋತ್ತಮ ಅವರು ಅಧಿಕಾರಿಗಳ ಗಮನಕ್ಕೆ ತಂದರು. ತೆರವುಗೊಳಿಸಲು ಕ್ರಮ ಕೈಗೊಳ್ಳುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಭರವಸೆ ನೀಡಿದರು. ಗಂಡಿಬಾಗಿಲು-ಉಪ್ಪಿನಂಗಡಿ ರಸ್ತೆಯ ಅಲ್ಲಲ್ಲಿ ಅಪಾಯಕಾರಿ ಮರಗಳಿರುವುದಾಗಿಯೂ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರು.

ಕೂಸಿನ ಮನೆ ನಿರುಪಯುಕ್ತವಾಗಿದೆ;
ಗ್ರಾಮದಲ್ಲಿ ’ಕೂಸಿನ ಮನೆ’ ಬಿಲ್ಡಿಂಗ್ ಆಗಿದೆ. ಆದರೆ ಅಲ್ಲಿ ಯಾವುದೇ ವ್ಯವಸ್ಥೆ ಮಾಡದೇ ಇರುವುದರಿಂದ ನಿರುಪಯುಕ್ತವಾಗಿದೆ ಎಂದು ಜುನೈದ್ ಕೆಮ್ಮಾರ ಆರೋಪಿಸಿದರು. ಈ ಯೋಜನೆ ಸ್ಥಗಿತಗೊಂಡಿದೆ ಎಂದು ಅಂಗನವಾಡಿ ಮೇಲ್ವಿಚಾರಕಿ ಭವಾನಿ ಉತ್ತರಿಸಿದರು. ಪಿಡಿಒ ಸಂದೇಶ ಕೆ.ಎನ್.ಅವರು ಪ್ರತಿಕ್ರಿಯಿಸಿ, ಅಂಗನವಾಡಿ ಕೇಂದ್ರದ ಹಳೆ ಕಟ್ಟಡ ನವೀಕರಣ ಮಾಡಿ ಕೂಸಿನ ಮನೆ ಮಾಡಲಾಗಿದೆ. ಉದ್ಯೋಗಖಾತ್ರಿ ಯೋಜನೆಯಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಮಕ್ಕಳನ್ನು ಈ ಮನೆಯಲ್ಲಿ ಬಿಡಲು ಅವಕಾಶವಿದೆ. ಈಗ ಅದನ್ನು ವಾತ್ಸಲ್ಯದ ಮನೆ ಅಂತ ಮಾಡಲಾಗಿದೆ. ಸಂಜೀವಿನಿ ಒಕ್ಕೂಟದವರು ನಿರ್ವಹಿಸುತ್ತಿದ್ದಾರೆ ಎಂದರು.

ಸಂಧ್ಯಾ ಸುರಕ್ಷಾ,ವೃದ್ಧಾಪ್ಯ ವೇತನ ಬರುತ್ತಿಲ್ಲ;
ಕಳೆದ ನಾಲ್ಕೈದು ತಿಂಗಳಿನಿಂದ ಸಂಧ್ಯಾ ಸುರಕ್ಷಾ, ವೃದ್ಧಾಪ್ಯ ವೇತನ ಬರುತ್ತಿಲ್ಲ. ಇದಕ್ಕೆ ವ್ಯವಸ್ಥೆ ಮಾಡುವಂತೆಯೂ ಗ್ರಾಮಸ್ಥರು ಹೇಳಿದರು.

ಇಲಾಖೆ ಅಧಿಕಾರಿಗಳ ಗೈರು ಹಾಜರಿಗೆ ಆಕ್ರೋಶ;
ಪೊಲೀಸ್, ಕೃಷಿ, ತೋಟಗಾರಿಕೆ, ಸಹಕಾರ, ಅಲ್ಪಸಂಖ್ಯಾತ ಸಹಿತ ವಿವಿಧ ಇಲಾಖೆ ಅಧಿಕಾರಿಗಳ ಗೈರು ಹಾಜರಿಗೂ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮಸ್ಥೆ ಸೆಲಿಕತ್ ಅವರು ಮಾತನಾಡಿ, ಪೊಲೀಸರು ಸುಖಾಸುಮ್ಮನೆ ನಮ್ಮ ಮೇಲೆ ಆರೋಪ ಹೊರಿಸಿದ್ದಾರೆ. ಅವರು ಯಾಕೆ ಸಭೆಗೆ ಬಂದಿಲ್ಲ ಎಂದು ಪ್ರಶ್ನಿಸಿದರು. ಜಮಾಲ್ ಎಂಬವರು ಮಾತನಾಡಿ, ತಮ್ಮ ತಪ್ಪು ಮಾಡಿರುವುದಕ್ಕೆ ಅಣ್ಣನನ್ನು ಪೊಲೀಸರು ಹಿಡಿದುಕೊಂಡು ಹೋಗಿದ್ದಾರೆ. ಇದು ಯಾವ ನ್ಯಾಯ ಎಂದು ಪ್ರಶ್ನಿಸಿದರು.

ವಿವಿಧ ಬೇಡಿಕೆ ಮಂಡನೆ:
ಆಶಾ ಕಾರ್ಯಕರ್ತೆಯರ ನೇಮಕ ಮಾಡಬೇಕು, ಕೊಯಿಲ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 108 ಆಂಬುಲೆನ್ಸ್ ಬೇಕು, ಕೊಯಿಲ ಪಶುವೈದ್ಯಕೀಯ ಮಹಾವಿದ್ಯಾಲಯ ಹಾಗೂ ಕೊಯಿಲ ಸಬ್‌ಸ್ಟೇಷನ್‌ನಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡಬೇಕು, ಕೊಯಿಲದಲ್ಲಿ ಆಧಾರ್ ಕ್ಯಾಂಪ್ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.

ಕೊಯಿಲ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಮಂಜುನಾಥ್ ಭಟ್, ಕಿರಿಯ ಪಶುವೈದ್ಯಕೀಯ ಪರೀಕ್ಷಕ ರವಿತೇಜ, ಕೊಯಿಲ ಪಶುವೈದ್ಯಕೀಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಮಂಜುನಾಥ ಪಾಟೀಲ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಎ.ಭವಾನಿ, ಅರಣ್ಯ ಇಲಾಖೆಯ ನವೀನ ಎಂ., ಸಾಮಾಜಿಕ ಅರಣ್ಯ ಇಲಾಖೆಯ ಉಪವಲಯ ಅರಣ್ಯಾಧಿಕಾರಿ ಯಶೋಧರ, ಸಿಆರ್‌ಪಿ ಮಹೇಶ್, ಮೆಸ್ಕಾಂ ಪವರ್‌ಮ್ಯಾನ್ ವಿಶ್ವನಾಥ, ಗ್ರಾಮ ಆಡಳಿತಾಧಿಕಾರಿ ಗಾಯತ್ರಿ ಹೆಚ್., ಅವರು ಇಲಾಖೆ ಮಾಹಿತಿ ನೀಡಿದರು. ಪಿಡಿಒ ಸಂದೇಶ್ ಕೆ.ಎನ್.ವರದಿ ಮಂಡಿಸಿದರು. ಕಾರ್ಯದರ್ಶಿ ಶಾರದಾ ಪಿ.ಎ.ಸ್ವಾಗತಿಸಿದರು. ಸಿಬ್ಬಂದಿಗಳು ಸಹಕರಿಸಿದರು.

ಕಂದಾಯ ಅದಾಲತ್, ಪೊಲೀಸ್ ಜನಸಂಪರ್ಕ ಸಭೆಗೆ ಆಗ್ರಹ
9/11ಗೆ ಸಂಬಂಧಿಸಿದಂತೆ ಪುಡಾದ ಅಧಿಕಾರಿಗಳು ವಾರದಲ್ಲಿ 1 ದಿನ ಕಡಬಕ್ಕೆ ಬರುತ್ತಾರೆ. ಗ್ರಾಮಸ್ಥರು ಆ ದಿನ ಕಡಬಕ್ಕೆ ಹೋಗಬೇಕು. ದಾಖಲೆ ಸರಿ ಇಲ್ಲದಿದ್ದರೆ ಸರಿಮಾಡಿಕೊಂಡು ಮುಂದಿನ ವಾರ ಮತ್ತೆ ಹೋಗಬೇಕು. ಇದೊಂದು ದೊಡ್ಡ ಸಮಸ್ಯೆ ಆಗಿದೆ ಎಂದು ಜುನೈದ್ ಕೆಮ್ಮಾರ ಹೇಳಿದರು. ಇದಕ್ಕೆ ಪೂರಕವಾಗಿ ಮಾತನಾಡಿದ ಪ್ರಕಾಶ್ ಕೆಮ್ಮಾರ, ಮೂರ‍್ನಾಲ್ಕು ಗ್ರಾಮಗಳಿಗೆ ಸಂಬಂಧಪಟ್ಟು ಗ್ರಾಮದಲ್ಲಿ ಕಂದಾಯ ಅದಾಲತ್ ನಡೆಸಿ ಗ್ರಾಮಸ್ಥರ ಸಮಸ್ಯೆಗೆ ಅಲ್ಲೇ ಪರಿಹಾರ ಕೊಡಬೇಕೆಂದು ಸಲಹೆ ನೀಡಿದರು. ಅನೈತಿಕ ಚಟುವಟಿಕೆ ತಡೆಯಲು ಪೊಲೀಸ್ ಇಲಾಖೆ ಗಂಭೀರ ಚಿಂತನೆ ನಡೆಸಬೇಕು. ಈ ಸಂಬಂಧ ಪೊಲೀಸ್ ಜನಸಂಪರ್ಕ ಸಭೆ ನಡೆಸಬೇಕೆಂದು ಯದುಶ್ರೀ ಆನೆಗುಂಡಿ ಆಗ್ರಹಿಸಿದರು.

ಪಿಡಿಒ ಬೇಕು;
ಹಾಲಿ ಪಿಡಿಒ ಸಂದೇಶ ಕೆ.ಎನ್.ಅವರಿಗೆ ಕಡಬ ತಾ.ಪಂ.ಗೆ ವರ್ಗಾವಣೆಯಾಗಿದ್ದು ಕಾರ್ಯದರ್ಶಿಯವರಿಗೆ ಪಿಡಿಒ ಜವಾಬ್ದಾರಿ ನೀಡಲಾಗಿದೆ. ಹಾಲಿ ಪಿಡಿಒ ಸಂದೇಶ ಅವರು ವಾರದಲ್ಲಿ 2 ದಿನವಾದರೂ ಕೊಯಿಲ ಗ್ರಾ.ಪಂ.ನಲ್ಲಿ ಇರಬೇಕೆಂದು ಪ್ರಕಾಶ್ ಕೆಮ್ಮಾರ ಹಾಗೂ ಇತರೇ ಗ್ರಾಮಸ್ಥರು ಒತ್ತಾಯಿಸಿದರು.

LEAVE A REPLY

Please enter your comment!
Please enter your name here