ದಕ್ಷಿಣ ಕನ್ನಡ, ಉಡುಪಿ ನದಿಗಳಿಗೆ ತ್ಯಾಜ್ಯ : ತಪ್ಪಿತಸ್ಥರ ವಿರುದ್ಧ ಸರ್ಕಾರ ನೇರ ಕ್ರಮ ಕೈಗೊಂಡಿಲ್ಲ..? ಎಂಎಲ್‌ಸಿ ಕಿಶೋರ್ ಕುಮಾರ್ ಪುತ್ತೂರು ಆರೋಪ

0

ಪುತ್ತೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಜೀವನಾಡಿಗಳಾದ ನೇತ್ರಾವತಿ, ಕುಮಾರಧಾರ, ಫಲ್ಗುಣಿ, ಸ್ವರ್ಣಾ ಹಾಗೂ ಸೀತಾ ನದಿಗಳಿಗೆ ಅಪಾಯಕಾರಿ ತ್ಯಾಜ್ಯ ಎಸೆಯುತ್ತಿರುವವರ ವಿರುದ್ಧ ರಾಜ್ಯ ಸರ್ಕಾರ ನೇರವಾಗಿ ಯಾವುದೇ ಕಠಿಣ ಕ್ರಮ ಜರುಗಿಸಿಲ್ಲ ಎಂದು ಶಾಸನ ಪರಿಷತ್ ಸದಸ್ಯ (ಎಂಎಲ್‌ಸಿ) ಕಿಶೋರ್ ಕುಮಾರ್ ಪುತ್ತೂರು ಆರೋಪಿಸಿದ್ದಾರೆ. ವಿಧಾನ ಪರಿಷತ್ತಿನಲ್ಲಿ ಸಲ್ಲಿಸಲಾಗಿದ್ದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ (ಸಂಖ್ಯೆ: 46 (64), ದಿನಾಂಕ: 17.08.2026) ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರು ನೀಡಿದ ಉತ್ತರಕ್ಕೆ ಪ್ರತಿಕ್ರಿಯಿಸಿರುವ ಅವರು, ಸರ್ಕಾರದಿಂದ ನದಿ ಮಾಲಿನ್ಯ ತಡೆಯುವಲ್ಲಿ ಸಂಪೂರ್ಣ ಉದಾಸೀನತೆ ವ್ಯಕ್ತವಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ಸರ್ಕಾರ ನೀಡಿರುವ ವಿವರಣೆಗಳಲ್ಲಿ ಮಹಾನಗರ ಪಾಲಿಕೆ ಆಯುಕ್ತರ ವಿರುದ್ಧ ಕ್ರಿಮಿನಲ್ ಕೇಸ್:
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನೇತ್ರಾವತಿ, ಫಲ್ಗುಣಿ (ಗುರುಪುರ) ಹಾಗೂ ನಂದಿನಿ ನದಿಗಳಿಗೆ ಸಂಸ್ಕರಿಸದ ಒಳಚರಂಡಿ ತ್ಯಾಜ್ಯ ಹರಿಸುತ್ತಿರುವ ಹಿನ್ನೆಲೆಯಲ್ಲಿ, ಪಾಲಿಕೆಯ ಪ್ರಸ್ತುತ ಮತ್ತು ಹಿಂದಿನ ಆಯುಕ್ತರ ವಿರುದ್ಧ ಮಂಗಳೂರಿನ ಸಿಜೆಎಂ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ (PRC No. 27/2025) ದಾಖಲಿಸಲಾಗಿದೆ.

ಕೋಟ್ಯಂತರ ರೂಪಾಯಿ ದಂಡ ಶಿಫಾರಸು:
ಸುರತ್ಕಲ್ ರೊಚ್ಚು ನೀರು ಸಂಸ್ಕರಣಾ ಘಟಕದ ನಿಯಮ ಉಲ್ಲಂಘನೆಗಾಗಿ ಮಂಗಳೂರು ಮಹಾನಗರ ಪಾಲಿಕೆಗೆ 1,986.69 ಲಕ್ಷ ಹಾಗೂ ನಿಯಮ ಪಾಲಿಸದ ಶ್ರೀನಿವಾಸ ಕಾಲೇಜಿಗೆ 72.90 ಲಕ್ಷ ಪರಿಸರ ಪರಿಹಾರ (ದಂಡ) ವಿಧಿಸಲು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಶಿಫಾರಸು ಮಾಡಿದೆ.

ಬಂಟ್ವಾಳದಲ್ಲೂ ಕ್ರಿಮಿನಲ್ ಪ್ರಕರಣ:
ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲಿ ನೇತ್ರಾವತಿ ನದಿಗೆ ಸಂಸ್ಕರಿಸದ ತ್ಯಾಜ್ಯ ನೀರು ಬಿಡುತ್ತಿರುವುದಕ್ಕೆ ಜಲ ಕಾಯಿದೆ 1974 ರಡಿ ಕ್ರಿಮಿನಲ್ ಮೊಕದ್ದಮೆ ಮತ್ತು ದಂಡ ವಿಧಿಸಲು ಕ್ರಮ ವಹಿಸಲಾಗಿದೆ.

ಕೈಗಾರಿಕೆಗಳಿಗೆ ಮುಚ್ಚುವ ಆದೇಶ:
ಬೈಕಂಪಾಡಿ ಕೈಗಾರಿಕಾ ಪ್ರದೇಶದ 9 ಮಾಲಿನ್ಯಕಾರಕ ಘಟಕಗಳಿಗೆ ಡಿಮಾಂಡ್ ನೋಟಿಸ್ ನೀಡಲಾಗಿದ್ದು, ನಿಯಮ ಉಲ್ಲಂಘಿಸಿದ 2024-25ರಲ್ಲಿ 6 ಹಾಗೂ 2025-26ರಲ್ಲಿ 7 ಕೈಗಾರಿಕೆಗಳಿಗೆ ಮುಚ್ಚುವ ಆದೇಶ (Closure Order) ನೀಡಲಾಗಿದೆ.

ಸೌಪರ್ಣಿಕ ನದಿ ಮಾಲಿನ್ಯ ಮತ್ತು ಎನ್‌ಜಿಟಿ:
ಕೊಲ್ಲೂರು ಸೌಪರ್ಣಿಕ ನದಿಗೆ ಹೋಟೆಲ್/ವಾಣಿಜ್ಯ ಸಂಕೀರ್ಣಗಳ ಕಲುಷಿತ ನೀರು ಹರಿಯುವ ಬಗ್ಗೆ ರಾಷ್ಟ್ರೀಯ ಹಸಿರು ನ್ಯಾಯಪೀಠದಲ್ಲಿ (ಓಉಖಿ) ದೂರು ದಾಖಲಾಗಿದ್ದು, ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಕ್ರಿಯಾ ಯೋಜನೆ ರೂಪಿಸಲಾಗಿದೆ.

ನೀರಿನ ಗುಣಮಟ್ಟ:
ಪ್ರಸ್ತುತ ನದಿಗಳ ನೀರಿನ ಗುಣಮಟ್ಟ ಪರಿಶೀಲಿಸಲಾಗುತ್ತಿದ್ದು, ಜುಲೈ ತಿಂಗಳ ವರದಿಯನ್ವಯ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ವರ್ಗೀಕರಣದ ಪ್ರಕಾರ ನೀರು ‘ಬಿ’ (Class ‘B’) ಶ್ರೇಣಿಯಲ್ಲಿದೆ.


ಸರ್ಕಾರದ ವಿರುದ್ಧ ಕಿಶೋರ್ ಕುಮಾರ್ ವಾಗ್ದಾಳಿ
ಸರ್ಕಾರ ನೀಡಿರುವ ವಿವರಣೆಯಲ್ಲಿ ಕೇವಲ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಹಸಿರು ನ್ಯಾಯಮಂಡಳಿ (NGT) ಕೈಗೊಂಡಿರುವ ಪ್ರಕ್ರಿಯೆಗಳನ್ನು ಉಲ್ಲೇಖಿಸಲಾಗಿದೆಯೇ ಹೊರತು, ಸರ್ಕಾರ ಅಥವಾ ಸಂಬಂಧಪಟ್ಟ ಇಲಾಖೆಗಳು ನದಿಗಳಿಗೆ ತ್ಯಾಜ್ಯ ಎಸೆಯುವವರ ವಿರುದ್ಧ ಸ್ವತಃ ಯಾವುದೇ ಕಟ್ಟುನಿಟ್ಟಿನ ಕ್ರಮ ಕೈಗೊಂಡಿಲ್ಲ. ನದಿಗಳ ಮಾಲಿನ್ಯ ನಿಯಂತ್ರಣಕ್ಕೆ ಸರ್ಕಾರ ಯಾವುದೇ ಆದ್ಯತೆ ನೀಡುತ್ತಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ ಎಂದು ಅವರು ಟೀಕಿಸಿದ್ದಾರೆ. ನದಿ ಮಾಲಿನ್ಯವು ಅತ್ಯಂತ ಗಂಭೀರ ಸ್ವರೂಪದ ಸಮಸ್ಯೆಯಾಗಿದ್ದು, ಸರ್ಕಾರ ತಕ್ಷಣವೇ ಎಚ್ಚೆತ್ತುಕೊಳ್ಳಬೇಕು. ನದಿಗಳಿಗೆ ತ್ಯಾಜ್ಯ ಚೆಲ್ಲುವವರ ಹಾಗೂ ಮಾಲಿನ್ಯಕಾರಕ ಸಂಸ್ಥೆಗಳ ವಿರುದ್ಧ ಶಿಸ್ತುಕ್ರಮ ಜರುಗಿಸಲು ಸಂಬಂಧಪಟ್ಟ ಎಲ್ಲಾ ಇಲಾಖೆಗಳಿಗೆ ತಕ್ಷಣವೇ ಸೂಕ್ತ ಸುತ್ತೋಲೆ ಹಾಗೂ ಆದೇಶಗಳನ್ನು ಹೊರಡಿಸಬೇಕು ಎಂದು ಕಿಶೋರ್ ಕುಮಾರ್ ಪುತ್ತೂರು ಒತ್ತಾಯಿಸಿದ್ದಾರೆ.

LEAVE A REPLY

Please enter your comment!
Please enter your name here