







ಪುತ್ತೂರು: ರಾಷ್ಟ್ರೀಯ ಹೆದ್ದಾರಿ 75ರ ವಳಾಲು ಸಮೀಪದ ಪಡ್ಪು ಎಂಬಲ್ಲಿ ಗಾಂಜಾ ಮಾರಾಟ ಮಾಡುತ್ತಿರುವುದನ್ನು ಪತ್ತೆ ಮಾಡಿದ ಅಬಕಾರಿ ಪೊಲೀಸರು ಗಾಂಜಾ ವಶಪಡಿಸಿಕೊಂಡ ಆರೋಪಿಯನ್ನು ಬಂಧಿಸಿದ್ದಾರೆ.


ಬೆಳ್ತಂಗಡಿ ತಾಲೂಕಿನ ಕಡವಿನಬಾಗಿಲು ಅಬ್ದುಲ್ ಕುಂಞಿಯವರ ಪುತ್ರ ಮೊಹಮ್ಮದ್ ಜಿಯಾದ್ ಬಂಧಿತ ಆರೋಪಿ. ಖಚಿತ ಮಾಹಿತಿಯಂತೆ ಅಬಕಾರಿ ಇನ್ಸ್ ಪೆಕ್ಟರ್ ಲೋಕೇಶ್ ನೇತೃತ್ವದಲ್ಲಿ ಆ.18ರಂದು ರಾತ್ರಿ 11.30ರ ವೇಳೆಗೆ ಕಾರ್ಯಾಚರಣೆ ನಡೆಸಿದ ಅಬಕಾರಿ ಪೊಲೀಸರು ರಾಷ್ಟ್ರೀಯ ಹೆದ್ದಾರಿಯ ಬಜತ್ತೂರು ಗ್ರಾಮದ ವಳಾಲು ಸಮೀಪ ಪಡ್ಪು ಎಂಬಲ್ಲಿ ಹೆದ್ದಾರಿಯ ಬದಿಯಲ್ಲಿ ನಿಂತಿದ್ದು ಆರೋಪಿಯನ್ನು ವಿಚಾರಿಸಿದಾಗ ಆತನಲ್ಲಿ ಗಾಂಜಾ ಇರುವುದು ಪತ್ತೆಯಾಗಿದೆ. ಆರೋಪಿಯಿಂದ 64ಗ್ರಾಂ ಗಾಂಜಾ ಹಾಗೂ ಆತನ ಮೊಬೈಲ್ ವಶಪಡಿಸಿಕೊಂಡಿದ್ದು ಇವುಗಳ ಒಟ್ಟು ಮೌಲ್ಯ 17,000 ರೂಪಾಯಿ ಎಂದು ಅಂದಾಜಿಸಲಾಗಿದೆ. ಆರೋಪಿಯನ್ನು ಎನ್‌ಡಿಪಿಎಸ್ ಕಾಯ್ದೆಯಡಿ ಬಂಧಿಸಿ ಪ್ರಕರಣ ದಾಖಲಿಸಿ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.



ಮಂಗಳೂರು ವಿಭಾಗದ ಅಬಕಾರಿ ಜಂಟಿ ಆಯುಕ್ತರ ನಿರ್ದೇಶನ ಮತ್ತು ಅಬಕಾರಿ ಉಪ ಆಯುಕ್ತರ ಮಾರ್ಗದರ್ಶನದಂತೆ ಪುತ್ತೂರು ವಲಯದ ನಿರೀಕ್ಷಕ ಲೋಕೇಶ್ ಸಿ. ಸಿಬ್ಬಂದಿಗಳಾದ ಎಲ್ಲಪ್ಪ ಮತ್ತು ವಾಹನ ಚಾಲಕ ಶರತ್ ಕುಮಾರ್ ಕಾರ್ಯಾಚರಣೆಯಲ್ಲಿ ಸಹಕರಿಸಿದ್ದರು.










