






ಪುತ್ತೂರು:ಕೆಲ ವರ್ಷಗಳ ಹಿಂದೆ ನಡೆದಿದೆ ಎನ್ನಲಾದ ಪ್ರಕರಣವೊಂದರ ವಿಚಾರದ ಕುರಿತು ಸಾಮಾಜಿಕ ಜಾಲತಾಣದಲ್ಲಿ ತೀಕ್ಷ್ಣ ವಾಗ್ವಾದ ನಡೆದು ಆಣೆ ಪ್ರಮಾಣದ ಹಂತಕ್ಕೆ ತಲುಪಿ,ಕೊನೆಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸುವ ಮೂಲಕ ವಿವಾದಕ್ಕೆ ತೆರೆ ಎಳೆಯಲಾದ ಘಟನೆ ನಡೆದಿರುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.


ಪುತ್ತಿಲ ಪರಿವಾರದ ಪ್ರಮುಖರು ಹಾಗೂ ಬೆಳ್ಳಾರೆಯ ಶ್ರೀರಾಮ ಸೇನೆ ಮಾಜಿ ಸಂಚಾಲಕರೊಬ್ಬರ ನಡುವೆ ಕೆಲವು ದಿನಗಳ ಹಿಂದೆ ಅರುಣ್ ಕುಮಾರ್ ಪುತ್ತಿಲ ಫ್ಯಾನ್ಸ್ ಕ್ಲಬ್ ಫೆಸ್ಬುಕ್ ಪೇಜ್ನಲ್ಲಿ ಮಾತುಕತೆಗಳು ನಡೆದಿದೆ.ಪುತ್ತಿಲ ಪರಿವಾರದ ಪ್ರಮುಖರೊಬ್ಬರಿಗೆ ಸಂಬಂಧಿಸಿದ ಡಬ್ಬಿ, ರಶೀದಿ ಹಾಗೂ ಹಣದ ವ್ಯವಹಾರದ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ನಡೆದ ಕಾಮೆಂಟ್ಗಳ ಚರ್ಚೆ ಈ ಬೆಳವಣಿಗೆಗೆ ಕಾರಣವಾಗಿದೆ.‘ಅರುಣ್ ಪುತ್ತಿಲ ಫ್ಯಾನ್ಸ್ ಕ್ಲಬ್’ ಎಂಬ ಫೆಸ್ಬುಕ್ ಪುಟದಲ್ಲಿ ಪ್ರಕಟವಾಗಿದ್ದ ಪೋಸ್ಟ್ಗೆ ಪ್ರವೀಣ್ ಆಚಾರ್ಯ ಎಂಬ ಖಾತೆಯಿಂದ ಹಲವು ಆರೋಪಗಳನ್ನು ಮಾಡಲಾಗಿತ್ತು.ಇದೇ ವಿಚಾರದಲ್ಲಿ ವಾಗ್ವಾದ ಮುಂದುವರಿದು ಪುತ್ತಿಲ ಪರಿವಾರದ ಮನೀಷ್ ಕುಲಾಲ್ ಹಾಗೂ ಮಾಜಿ ಸಂಚಾಲಕ ಉದಯ ಪಾಟಾಳಿ ಬೆಳ್ಳಾರೆ ನಡುವೆ ಚರ್ಚೆ ನಡೆದು ಆಣೆ ಪ್ರಮಾಣದ ಹಂತಕ್ಕೆ ತಲುಪಿತ್ತು.ಕೊನೆಗೆ ಎರಡೂ ಕಡೆಯವರು ಆಣೆ ಪ್ರಮಾಣಕ್ಕೆ ಸಿದ್ಧ ಎಂದು ಫೆಸ್ಬುಕ್ ಪೇಜ್ನಲ್ಲಿ ಬರೆದುಕೊಂಡಿದ್ದರಲ್ಲದೆ,ಆ.20ರಂದು ಇದಕ್ಕಾಗಿ ದಿನ ನಿಗದಿ ಮಾಡಿಕೊಂಡಿದ್ದರು.ಅದೇ ಪ್ರಕಾರವಾಗಿ ಬೆಳಿಗ್ಗೆ ಎರಡೂ ಕಡೆಯವರು ದೇವಳಕ್ಕೆ ಬಂದು ಅರ್ಚಕರ ಮೂಲಕ ವಿಶೇಷ ಪ್ರಾರ್ಥನೆ ಮಾಡಿದ್ದಾರೆ.ವಿವಾದವನ್ನು ಇನ್ನಷ್ಟು ವಿಸ್ತರಿಸುವುದು ಬೇಡ,ಯಾರು ತಪ್ಪು ಮಾಡಿದ್ದಾರೆ ಅದು ಕಂಡುಬರಲಿ ಎಂದು ಪ್ರಾರ್ಥಿಸೋಣ ಎಂದು ಅರ್ಚಕರು ತಿಳಿಸಿದ್ದು, ಇದಕ್ಕೆ ಎರಡೂ ಕಡೆಯವರು ಒಪ್ಪಿಗೆ ಸೂಚಿಸಿದ ಬಳಿಕ ಪ್ರಾರ್ಥನೆ ನಡೆಯಿತು.



ಪುತ್ತಿಲ ಪರಿವಾರದ ಸಂಸ್ಥಾಪಕ ಅರುಣ್ ಕುಮಾರ್ ಪುತ್ತಿಲ ಹಾಗೂ ಬೆಳ್ಳಾರೆ ಶ್ರೀರಾಮ ಸೇನೆ ಮಾಜಿ ಸಂಚಾಲಕ ಉದಯ್ ಪಾಟಾಳಿ ಪಿ ಬೆಳ್ಳಾರೆ ನಡುವೆ ಮಹಾಲಿಂಗೇಶ್ವರನ ನಡೆಯಲ್ಲಿ ವಿಶೇಷ ಪ್ರಾರ್ಥನೆ ನಡಿದಿದೆ.ಅರ್ಚಕ ವಿ.ಎಸ್. ಭಟ್ ಪ್ರಾರ್ಥನೆಯನ್ನು ನಡೆಸಿದ್ದಾರೆ.ಈ ಸಂದರ್ಭ ಮನೀಶ್ ಕುಲಾಲ್, ಅನಿಲ್ ತೆಂಕಿಲ, ದೀಕ್ಷಿತ್ ರೈ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.ಪ್ರಾರ್ಥನೆಯ ಬಳಿಕ ಹೊರ ಬಂದ ಇತ್ತಡಗಳ ನಡುವೆ ಅಲ್ಲಿ ಕೆಲವು ಹೊತ್ತು ಮಾತಿನ ಚಕಮಕಿ ನಡೆದಿತ್ತು ಎನ್ನಲಾಗಿದ್ದು ಈ ಕುರಿತ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದೆ.
ಘಟನೆ ಕುರಿತು ಮನೀಷ್ ಕುಲಾಲ್ ಅವರನ್ನು ಸಂಪರ್ಕಿಸಿದಾಗ,‘ ಅದು ನಮ್ಮ ಪರ್ಸನಲ್ ಮ್ಯಾಟರ್,ಅಪಪ್ರಚಾರ ಮಾಡಿದ್ದನ್ನು ಕೇಳಿದ್ದು ಅಷ್ಟೆ.ಪ್ರಾರ್ಥನೆ ಏನೂ ಇಲ್ಲ.ಪೇಸ್ ಬುಕ್ನಲ್ಲಿ ಆದ ಘಟನೆಯನ್ನು ಕ್ಲಿಯರ್ ಮಾಡಿದ್ದು, ಅದನ್ನು ದೊಡ್ಡ ವಿಷಯ ಮಾಡಬೇಡಿ.ನಮ್ಮ ಮನೆಯ ವಿಷಯವನ್ನು ಪಬ್ಲಿಕ್ ಮಾಡುವುದು ಬೇಡ.ಇದು ಪರ್ಸನಲ್.ಇಲ್ಲಾಂದ್ರೆ ಮಾಧ್ಯಮದವರನ್ನು ಕರೆಯುತ್ತಿದ್ದೆವು.ಮಾತನಾಡಿ ಮುಗಿಸಿದ್ದೇವೆ’ ಎಂದು ಪ್ರತಿಕ್ರಿಯಿಸಿದ್ದಾರೆ.ಅದಕ್ಕೂ ಮೊದಲು ಅರುಣ್ ಕುಮಾರ್ ಪುತ್ತಿಲ ಅವರಿಗೆ ಕರೆ ಮಾಡಿದಾಗ ಅವರು ಕರೆ ಸ್ವೀಕರಿಸಲಿಲ್ಲ.ಉದಯ ಪಾಟಾಳಿ ಅವರನ್ನೂ ಸಂಪರ್ಕಿಸಲು ಪ್ರಯತ್ನಿಸಲಾಯಿತಾದರೂ ಅವರು ಸಂಪರ್ಕಕ್ಕೆ ಸಿಕ್ಕಿಲ್ಲ.










