






ನಿಡ್ಪಳ್ಳಿ; ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್ ಪುತ್ತೂರು ಬೆಟ್ಟಂಪಾಡಿ ವಲಯ ಪರಮಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆ ಹಾಗೂ ಮಾತೃಶ್ರೀ ಹೇಮಾವತಿ ಅಮ್ಮನವರ ಕೃಪಾಶೀರ್ವಾದಗಳೊಂದಿಗೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ರೆಂಜ, ಚೂರಿಪದವು, ಕಕ್ಕೂರು ಒಕ್ಕೂಟಗಳ ಪದಗ್ರಹಣ ಕಾರ್ಯಕ್ರಮ ಆ.21 ರಂದು ಶ್ರೀ ಮಹಾಲಿಂಗೇಶ್ವರ ದೇವಾಲಯ ಶ್ರೀ ಕ್ಷೇತ್ರ ಬೆಟ್ಟಂಪಾಡಿ ಇಲ್ಲಿಯ ಬಿಲ್ವಶ್ರೀ ಸಭಾಭವನದಲ್ಲಿ ನಡೆಯಿತು.


ಧಾರ್ಮಿಕ ಉಪನ್ಯಾಸ ನೀಡಿದ ಪುರೋಹಿತರಾದ ರಾಧಾಕೃಷ್ಣ ಭಟ್ ಕಕ್ಕೂರು ಮಾತನಾಡಿ ಧರ್ಮೋ ರಕ್ಷತಿ ರಕ್ಷಿತಃ ಅಂದರೆ ಧರ್ಮವನ್ನು ನಾವು ರಕ್ಷಿಸಿದರೆ ಧರ್ಮ ನಮ್ಮನ್ನು ಕಾಪಾಡುತ್ತದೆ. ನಮಗೆ ಕಷ್ಟ ಬಂದಾಗ ಮಾತ್ರ ದೇವರನ್ನು ಪೂಜಿಸುವುದಲ್ಲ.ಸುಖ ಶಾಂತಿಯಿಂದ ಇರಬೇಕಾದರೆ ನಾವು ಪ್ರತಿ ಕ್ಷಣವು ದೇವರ ನಾಮ ಸ್ಮರಣೆ ಮಾಡಬೇಕು.ದೇವರನ್ನು ಸಾಮೂಹಿಕವಾಗಿ ಸೇರಿ ಪ್ರಾರ್ಥಿಸಿದರೆ ಅಲ್ಲಿ ಮತ್ತಷ್ಟು ಶಕ್ತಿ ಬರುತ್ತದೆ.ಅಂತಹ ಪುಣ್ಯದ ಕೆಲಸ ಗ್ರಾಮಾಭಿವೃದ್ದಿ ಯೋಜನೆಯ ಮುಖಾಂತರ ನಡೆಯುತ್ತಿದೆ ಎಂದು ಹೇಳಿದ ಅವರು ಪರೋಪಕಾರ ಮಾಡುವುದರಿಂದ ನಮ್ಮ ಪಾಪ ಕರ್ಮಗಳು ದೂರವಾಗಿ ಪುಣ್ಯಫಲ ನಮಗೆ ದೊರೆಯುತ್ತದೆ ಎಂದು ಹೇಳಿದರು.



ಗ್ರಾಮಾಭಿವೃದ್ದಿ ಯೋಜನೆಯಿಂದ ಸ್ವಾವಲಂಬಿ ಜೀವನ;
ಮುಖ್ಯ ಅತಿಥಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ದಕ್ಷಿಣ ಕನ್ನಡ ಜಿಲ್ಲಾ ನಿರ್ದೇಶಕ ಬಾಬು ನಾಯ್ಕ ಮಾತನಾಡಿ ಮಧ್ಯಮ ವರ್ಗದ, ಬಡ ಜನರ ಅಭಿವೃದ್ಧಿಗೊಸ್ಕರ ಪೂಜ್ಯ ಖಾವಂದರ ದೂರದೃಷ್ಟಿತ್ವದ ಫಲವಾಗಿ ಗ್ರಾಮಾಭಿವೃದ್ದಿ ಯೋಜನೆ ಹುಟ್ಟಿ ಕೊಂಡಿದೆ.ಪುರುಷರು ಮತ್ತು ಮಹಿಳೆಯರು ಸ್ವಾವಲಂಬಿ ಜೀವನ ನಡೆಸುವಂತಾಗ ಬೇಕು ಎಂಬ ದೊಡ್ಡ ಉದ್ದೇಶ ಇಟ್ಟು ಸ್ವಸಹಾಯ ಸಂಘ ರಚಿಸಿ ಅದರ ಮೂಲಕ ಬ್ಯಾಂಕಿನಿಂದ ಸಾಲ ಕೊಡಿಸಿ ಅಭಿವೃದ್ಧಿ ಪಡಿಸಲು ಗ್ರಾಮಾಭಿವೃದ್ದಿ ಯೋಜನೆ ಕೆಲಸ ಮಾಡುತ್ತಿದೆ ಎಂದು ಹೇಳಿದ ಅವರು ಯೋಜನೆಯ ಮುಖಾಂತರ ನಡೆಯುತ್ತಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಮಾಹಿತಿ ನೀಡುತ್ತಾ ನಿರ್ಗತಿಕರಿಗೆ ಮಾಸಾಶನ, ಆಶಕ್ತರಿಗೆ ವಾಟರ್ ಬೆಡ್, ವೀಲ್ ಚಯರ್, ಮನೆ ಇಲ್ಲದವರಿಗೆ ಆಸರೆ ಯೋಜನೆಯಡಿ ಮನೆ,ವಿದ್ಯಾರ್ಥಿಗಳಿಗೆ ಸುಜ್ಞಾನ ನಿಧಿ,ಶಿಕ್ಷಕರು ಇಲ್ಲದ ಶಾಲೆಗಳಿಗೆ ಜ್ಞಾನ ದೀಪ ಶಿಕ್ಷಕಿ, ಭಜನಾ ಮಂದಿರ ನಿರ್ಮಾಣ, ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಧನಸಹಾಯ,ಜನಜಾಗೃತಿ ವೇದಿಕೆ ಮೂಲಕ ದುಶ್ಚಟಮುಕ್ತ ಸಮಾಜ ನಿರ್ಮಾಣಕ್ಕೆ ಮದ್ಯವರ್ಜನ ಶಿಬಿರ ಇಂತಹ ಸಮಾಜ ಮುಖಿ ಕೆಲಸ ಯೋಜನೆಯ ಮುಖಾಂತರ ನಡೆಯುತ್ತಿದೆ ಎಂದು ಹೇಳಿದರು. ನೂತನ ಒಕ್ಕೂಟದ ಪದಾಧಿಕಾರಿಗಳ ಜವಾಬ್ದಾರಿ ಬಗ್ಗೆ ತಿಳಿಸಿದ ಅವರು ಸಂಘದಲ್ಲಿ ಯಾವುದೇ ಸಮಸ್ಯೆ ಬಾರದ ಹಾಗೆ ನೋಡಿ ಕೊಂಡು ಉತ್ತಮ ರೀತಿಯಲ್ಲಿ ಒಕ್ಕೂಟ ನಡೆಸಿ ಕೊಂಡು ಬಂದು ಸಂಘದಲ್ಲಿ ಕಂತು ಬಾಕಿ ಆಗದ ಹಾಗೆ ಸೇವೆ ಮಾಡಿ ಹಿಂದಿನ ಬೆಟ್ಟಂಪಾಡಿ ವಲಯ ಹೇಗಿತ್ತಾ ಅದೆ ರೀತಿಯ ಉತ್ತಮ ವಲಯ ಎಂಬ ಹೆಸರು ಬರುವಂತೆ ಕೆಲಸ ಮಾಡುವಂತೆ ಅವರು ಮಾರ್ಗದರ್ಶನ ಮಾಡಿ ಶುಭ ಹಾರೈಸಿದರು.

ಸಂಘಟಿತರಾದ ಅಸಂಘಟಿತ ಕಾರ್ಮಿಕರು;
ಮುಖ್ಯ ಅತಿಥಿ ಮುಂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಪ್ರಕಾಶ್ ರೈ ಚೆಲ್ಯಡ್ಕ ಮಾತನಾಡಿ ಬಡವರ,ಕೃಷಿ ಕೂಲಿಕಾರ್ಮಿಕರ ಅಭಿವೃದ್ಧಿಗೋಸ್ಕರ ಹುಟ್ಟಿಕೊಂಡ ಗ್ರಾಮಾಭಿವೃದ್ದಿ ಯೋಜನೆ ಜನರ ಜೀವನದಲ್ಲಿ ಇಂದು ಬಹಳಷ್ಟು ಬದಲಾವಣೆ ಮಾಡಿದೆ.ಇದರ ಮುಖಾಂತರ ಇಂದು ಅಸಂಘಟಿತ ಕಾರ್ಮಿಕರು ಸಂಘಟಿತರಾಗಿ ಸ್ವಸಹಾಯದ ಮೂಲಕ ಅಭಿವೃದ್ಧಿ ಹೊಂದಿದ್ದಾರೆ.ಭೂಮಿ ಇಲ್ಲದವರಿಗೆ ಅರ್.ಟಿ.ಸಿ ಇಲ್ಲದೆ ಗ್ರಾಮಾಭಿವೃದ್ದಿ ಯೋಜನೆ ಮುಖಾಂತರ ಸಾಲ ನೀಡಿದ ಕಾರಣ ಸಹಕಾರಿ ಸಂಘದಲ್ಲಿ ಸಾಲ ಪ್ರಮಾಣ ಕಡಿಮೆಯಾಗಿದೆ. ಧಾರ್ಮಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಅಭಿವೃದ್ಧಿ ಕೆಲಸವನ್ನು ಮಾಡುತ್ತಾ ಯೋಜನೆ ಇಡೀ ಸಮಾಜವನ್ನು ಅಭಿವೃದ್ಧಿ ಪಡಿಸುತ್ತಿರುವುದು ಉತ್ತಮ ಕೆಲಸ.ಇದಕ್ಕೆ ನಾವೆಲ್ಲರೂ ಕೂಡ ಉತ್ತಮ ಸಹಕಾರ ನೀಡುವ ಎಂದು ಹೇಳಿ ಶುಭ ಹಾರೈಸಿದರು.ದೇವಸ್ಥಾನದ ಮೊಕ್ತೇಸರ ವಿನೋದ್ ರೈ ಗುತ್ತು ಅಧ್ಯಕ್ಷತೆ ವಹಿಸಿ ಮಾತನಾಡಿ ಬರುವ ಫೆಬ್ರವರಿ ತಿಂಗಳಲ್ಲಿ ನಡೆಯುವ ಶ್ರೀ ಮಹಾಲಿಂಗೇಶ್ವರ ದೇವರ ಪುನರ್ ಪ್ರತಿಷ್ಟಾ ಬ್ರಹ್ಮಕಲಶ ಕಾರ್ಯಕ್ರಮಕ್ಕೆ ಸರ್ವರ ಸಹಕಾರ ಯಾಚಿಸಿದರು.
ಯೋಜನೆಯ ಬೆಟ್ಟಂಪಾಡಿ ವಲಯಾಧ್ಯಕ್ಷ ಬಾಲಕೃಷ್ಣ ಎನ್.ಎಸ್,ಜಿಲ್ಲಾ ವಿಮಾ ಸಮನ್ವಯಾಧಿಕಾರಿ ಜನಾರ್ದನ, ರೆಂಜ ಒಕ್ಕೂಟದ ಅಧ್ಯಕ್ಷ ಬಾಲಕೃಷ್ಣ. ಡಿ,ಚೂರಿಪದವು ಒಕ್ಕೂಟದ ಅಧ್ಯಕ್ಷೆ ಅನಿತಾ ಕೋನಡ್ಕ, ನೂತನ ಅಧ್ಯಕ್ಷ ಲೋಕೇಶ್ ಗೌಡ ಪಟ್ಟೆ, ಕಕ್ಕೂರು ಒಕ್ಕೂಟದ ನೂತನ ಅಧ್ಯಕ್ಷ ಪುಷ್ಪರಾಜ್ ತಲೆಪ್ಪಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಒಕ್ಕೂಟದ ಪದಗ್ರಹಣ;
ವಲಯದ ರೆಂಜ, ಚೂರಿಪದವು, ಕಕ್ಕೂರು ಒಕ್ಕೂಟಗಳ ನಿಕಟ ಪೂರ್ವ ಪದಾಧಿಕಾರಿಗಳು ನೂತನ ಒಕ್ಕೂಟದ ಪದಾಧಿಕಾರಿಗಳಿಗೆ ದಾಖಲಾತಿ ಪುಸ್ತಕ ಮತ್ತು ವೀಳ್ಯ ಹಸ್ತಾಂತರಿಸುವ ಮೂಲಕ ಪದಗ್ರಹಣ ಕಾರ್ಯಕ್ರಮ ನಡೆಯಿತು.ರೆಂಜ ಒಕ್ಕೂಟದ ನೂತನ ಅಧ್ಯಕ್ಷ ಸೋಮಶೇಖರ ಉಡ್ಡಂಗಲ ಸಹಕಾರ ಕೋರಿದರು. ಕಕ್ಕೂರು ಒಕ್ಕೂಟದ ಅಧ್ಯಕ್ಷ ಶಂಕರ ಗುಂಡ್ಯಡ್ಕ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ರೆಂಜ ಒಕ್ಕೂಟದ ಸೇವಾ ಪ್ರತಿನಿಧಿ ಜಗನ್ನಾಥ ಪಾಟಾಳಿ ಸ್ವಾಗತಿಸಿ,ಚೂರಿಪದವು ಒಕ್ಕೂಟದ ಸೇವಾ ಪ್ರತಿನಿಧಿ ಕಲಾವತಿ ವರದಿ ವಾಚಿಸಿದರು. ಚೂರಿಪದವು ಒಕ್ಕೂಟದ ಉಪಾಧ್ಯಕ್ಷೆ ಮೋಹಿನಿ. ಕೆ ವಂದಿಸಿದರು. ವಲಯ ಮೆಲ್ವೀಚಾರಕ ಆದರ್ಶ್ ಕಾರ್ಯಕ್ರಮ ನಿರೂಪಿಸಿದರು.ಸೇವಾ ಪ್ರತಿನಿಧಿಗಳು, ಒಕ್ಕೂಟದ ಪದಾಧಿಕಾರಿಗಳು ಹಾಗೂ ಸದಸ್ಯರು ಸಹಕರಿಸಿದರು.ನಂತರ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.
ಗ್ರಾಮಾಭಿವೃದ್ದಿ ಯೋಜನೆಯ ಮೂಲಕ ಪೂಜ್ಯ ಖಾವಂದರು ದೇವಸ್ಥಾನದ ದುಡ್ಡನ್ನು ಬಡ್ಡಿ ವಿಧಿಸಿ ಜನರಿಗೆ ನೀಡುತ್ತಿದ್ದಾರೆ ಎಂಬ ಅಪಪ್ರಚಾರ ಮಾಡಲಾಗಿದೆ. ಕೆಲವೇ ಕೆಲವು ಮಂದಿ ಖಾವಂದರ ಅಭಿವೃದ್ಧಿ ಕೆಲಸವನ್ನು ಸಹಿಸದವರು ಜಾಲತಾಣದಲ್ಲಿ ಅಪಪ್ರಚಾರ ನಡೆಸಿದ್ದನ್ನು ಸತ್ಯ ಎಂದು ನಂಬಿದವರು ಇಲ್ಲಸಲ್ಲದ ಅಪಪ್ರಚಾರ ಮಾಡಿದ ಕಾರಣ ಕೆಲವರು ಯೋಜನೆಯ ಬಗ್ಗೆ ದೂರುತ್ತಿದ್ದಾರೆ.ಧರ್ಮಸ್ಥಳ ದೇವಸ್ಥಾನದ ಒಂದೇ ಒಂದು ರೂಪಾಯಿ ಕೂಡ ಸಾಲ ನೀಡುವುದು ಅಲ್ಲ ಬದಲಾಗಿ ಟ್ರಸ್ಟ್ ನ ಮೂಲಕ ಜನರಿಗೆ ಬ್ಯಾಂಕಿನಿಂದ ಸಾಲ ಕೊಡಿಸುವುದು.ಇಡೀ ದೇಶದಲ್ಲಿ ಕಡಿತ ದರದ ಬಡ್ದಿಯಲ್ಲಿ ಯಾವ ಬ್ಯಾಂಕ್ ಕೂಡ ಸಾಲ ನೀಡುತ್ತಿಲ್ಲ. ಆದರೆ ಯೋಜನೆಯ ಮುಖಾಂತರ ಬ್ಯಾಂಕಿನಿಂದ ಕಡಿಮೆ ದರದಲ್ಲಿ ಸಾಲ ನೀಡಲಾಗುತ್ತಿದೆ. ಯಾರು ಏನೇ ಅಪಪ್ರಚಾರ ಮಾಡಿದರೂ ಇದು ಮಾತ್ರ ಸತ್ಯ.
ಶಶಿಧರ್.ಎಂ,ಯೋಜನಾಧಿಕಾರಿ, ಪುತ್ತೂರು.










